ಗಾಳಿಯಿಂದ ಜೆಟ್ ಫ್ಯುಯಲ್

ಗಾಳಿಯಿಂದ ಜೆಟ್ ಫ್ಯುಯಲ್

© ಜೈಕುಮಾರ್ ಆರ್.

ಮನೆ ಬಿಟ್ಟು ಸ್ವತಂತ್ರವಾಗಿ ಬಾಡಿಗೆ ರೂಮಿನಲ್ಲಿದ್ದು ನಾಲ್ಕು ವರ್ಷ ಕಳೆದ ಇಂಜಿನಿಯರಿಂಗ್ ದಿನಗಳ ನೆನಪುಗಳವು. ರಾಮನಗರ ಟೌನ್ ನಿಂದ ಸುಮಾರು ನಾಲ್ಕು ಕಿ. ಮೀ. ಮೈಸೂರಿನ ಕಡೆಗೆ ಹೊರಟರೆ ಬಲಕ್ಕೆ ಸಿಗುವ ‘ಜನಪದ ಲೋಕ’ದ ಪಕ್ಕಕ್ಕಿರುವ ಮಣ್ಣಿನ ಗುಡ್ಡೆಯ ಮೇಲಿನ ಕಟ್ಟಡವೇ “ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ರಾಮನಗರ”. ಅದುವರೆಗೆ ಯಾವುದೇ ಬಸ್ ಪಾಸ್ ಮಾಡಿಸಿರದ ನಾನು ಇಂಜಿನಿಯರಿಂಗ್ ನ ಮೊದಲ ವರ್ಷವೂ ಸಹ ಬಸ್ ಪಾಸ್ ಮಾಡಿಸಲಿಲ್ಲ. ಹಾಗಾದರೆ ದಿನಾ ಕಾಲೇಜಿಗೆ ಹೋಗಿ ಬರುವುದೇಗೆ? ಶೇರ್ ಆಟೋ ಇದೆಯಾದರೂ ಅದಕ್ಕೆ ಕೊಡುವ ದುಡ್ಡಿನ ಬದಲಿಗೆ ಬಸ್ ಪಾಸ್ ಕೊಳ್ಳುವುದೇ‌ ಉತ್ತಮ. ಆದರೆ ನನ್ನ ಮೆದುಳಿನಲ್ಲಿನ ಲೆಕ್ಕಾಚಾರವೇ‌ ಬೇರೆಯಾಗಿತ್ತು. ಡಬ್ಲ್ಯೂ. ಸಿ. ಜಿ. ಯಲ್ಲಿನ ಕಾರ್ಯುಗಳಿಗೆ ಅಂದಿಗಾಗಲೇ ‌ತೊಡಗಿಕೊಂಡಿದ್ದರಿಂದ ಮತ್ತು ನಾನು ಬೆಳೆದ ವಾತವರಣದಲ್ಲಿನವರ ಒಡನಾಟದಿಂದ, ಪ್ರಪಂಚದಲ್ಲಿನ ಎಲ್ಲರೂ ಸೇರಿ ಹೆಚ್ಚಿಸುತ್ತಿರುವ ಜಾಗತಿಕ ತಾಪಮಾನವೇ ಸಾಕು. ನನ್ನಿಂದ ಆದಷ್ಟು ಕಡಿಮೆ ಮಾಡೋಣವೆಂಬ ನಿರ್ಧಾರದ ನಿಟ್ಟಿನಲ್ಲಿ ಯೋಚಿಸಿ, ಅಪ್ಪನಲ್ಲಿ ನಿವೇದಿಸಿ, ದುಡ್ಡು ಸಾಲದೆ ನಾನೂ ಸ್ವಲ್ಪ ಹೊಂದಿಸಿ ಒಂದು ಸೈಕಲ್ ಅನ್ನು ಕೊಂಡುಕೊಂಡೆ. ಹೊಸ ಬ್ಯಾಗ್ ಹೆಗಲಿಗೇರಿಸಿ, ಅಮೆರಿಕಾ ಸ್ನೇಹಿತ ಕೊಡಿಸಿದ್ದ ಶೂ ಧರಿಸಿ, ಕಿವಿಗೆ ಹೆಡ್ ಫೋನ್ ತಗುಲಿಸಿ ಇಷ್ಟವಾದ ಸಂಗೀತವ ಆಲಿಸುತ್ತ ಕಾಲೇಜಿಗೆ ಹೊರಟ ‘ಆ ಮೊದಲ ದಿನ’ ಇನ್ನೂ ನೆನಪಿದೆ. ಹೊರಗಿನಿಂದ ನೋಡಲು ಕೊಂಚ ವಿಚಿತ್ರವೆನಿಸಿದರೂ, ದಾರಿಯಲ್ಲಿ ನೋಡುತ್ತಿದ್ದ ಜನರ ಮುಖಭಾವಕ್ಕೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ, ಬದಲಿಗೆ ನನ್ನ ಆ ಅವತಾರದ ಹಿಂದಿನ ಉದ್ದೇಶ ಒಮ್ಮೆ ನೆನೆಸಿಕೊಂಡಾಗ ಆಗುತ್ತಿದ್ದ ಹೆಮ್ಮೆಗೆ, ಮೈಯಲ್ಲಿನ ಕೆಲವು ಮಾತು ಕೇಳದ ರೋಮಗಳು ಎದ್ದು ನಿಲ್ಲುತ್ತಿದ್ದವು. ಆದರೆ ಅಂತಹ ದಿನಗಳು ಬೇಗ ಮುಗಿದವು. ಕಾರಣ ಹಲವಿದ್ದರೂ ಮುಖ್ಯ ಕಾರಣ ಸೂರ್ಯ. ಹೌದು ರಾಮನಗರದ ಬಿಸಿಲು ಎಷ್ಟಿತ್ತೆಂದರೆ, ಸದಾ ಬೇಸಿಗೆಯ ರಜೆಯಲ್ಲಿ ಕಾಲೇಜಿಗೆ ಹೋಗುತ್ತಿದ್ದೇವೇನೋ ಎಂಬ ಅನುಭವವಾಗುತ್ತಿತ್ತು. ಅಷ್ಟೇ ಅಲ್ಲ, ಟೌನ್ ನಿಂದ ನಾಲ್ಕು ಕಿ. ಮೀ. ಹೇಗಾದರೂ ಮಾಡಿ ಸೈಕಲ್ ತುಳಿದು ಬಂದುಬಿಡಬಹುದಿತ್ತು, ಆದರೆ ಮುಖ್ಯ ರಸ್ತೆಯಿಂದ ಕಾಲೇಜಿಗಿದ್ದ ಮಣ್ಣಿನ ರಸ್ತೆಯಲ್ಲಿ ಸಿಗುವ ಗುಡ್ಡವನ್ನು ಹತ್ತಿಸುವಷ್ಟರಲ್ಲಿ ತಿಂದದ್ದೆಲ್ಲಾ ಕರಗಿ ನೀರಾವಿಯಾಗುತ್ತಿತ್ತು. ನಂತರದ ದಿನಗಳಲ್ಲಿ ನಮಗೆ ತಕ್ಕಂತೆ ಒಂದು ಸೆಕೆಂಡ್ ಹ್ಯಾಂಡ್ ಬೈಕ್ ಕೊಳ್ಳಬೇಕೆಂಬ ಅನಿವಾರ್ಯತೆ, ಆಸೆ ಇತ್ತಾದರೂ ಆರ್ಥಿಕತೆ ಇರಲಿಲ್ಲವಾದ್ದರಿಂದ ಕೊಳ್ಳಲಾಗಲಿಲ್ಲ. ಹಾಗೋ ಹೀಗೋ ಮಾಡಿ ಆ ವರ್ಷ ಕಳೆದು, ಆಸೆಯ ಗಂಟು ಕಟ್ಟಿ ಪಕ್ಕಕ್ಕಿಟ್ಟು, ಸಾರ್ವಜನಿಕ ಸಾರಿಗೆಯ ಕಡೆ ಮುಖ ಮಾಡಿದೆ. ಆಗಿನ ಆ ಆಸೆ ಮತ್ತು ಅನಿವಾರ್ಯತೆಯ ಗಂಟು ಬಿಚ್ಚಿದ್ದು ಕಳೆದ ವರ್ಷದ ‘ಅಂತರಾಷ್ಟ್ರೀಯ ಹಾವುಗಳ ದಿನದಂದು (16th July)’ ನನ್ನ ‘ಕೋಬ್ರಾ (Xpulse 200)’ ನನ್ನ ತೆಕ್ಕೆಗೆ ಬಂದು ಸೇರಿದಾಗಲೇ. ನನ್ನ ಸಂಪಾದನೆಯ ಜೀವನದ ಮೊದಲ ಮತ್ತು ಏಕೈಕ ಬೈಕ್! ಇದು ಕೇವಲ ಬೈಕ್ ಆಗದೇ ಭಾವನೆಯ ಭಾಗವಾಗಿತ್ತು.

ಆದರೆ ಅದು ಏನೇ ಆಗಲಿ ಅದರಿಂದ ಹೊರ ಬರುತ್ತಿದ್ದ ಹೊಗೆಯ ಪರಿಣಾಮ ಎಲ್ಲರ ಮೇಲೆ ಹೇರುವಂತದ್ದು. ಎಷ್ಟೇ ನನ್ನೊಳಗೆ ಸಮರ್ಥಿಸಿಕೊಂಡರೂ, ನಾನೂ ಸಹ ಭೂಮಿಯ ಮಾಲಿನ್ಯಕ್ಕೆ ನನ್ನ ಹಸ್ತವನ್ನು ಸೇರಿಸುತ್ತಿದ್ದೇನಲ್ಲ ಎಂಬ ಅಳುಕು ಇದ್ದೇ ಇತ್ತು. ಬಹುಶಃ ನಮ್ಮಂತವರ ನಿಶ್ಯಬ್ಧ ಅಳಲನ್ನು ಅರ್ಥಮಾಡಿಕೊಂಡ ಕೆಲವು ವಿಜ್ಞಾನಿಗಳು ಅದೇ ಮಾಲಿನ್ಯವಾದ ಗಾಳಿಯಿಂದ ಇಂಧನವನ್ನು ತಯಾರಿಸುವ ಹೊಸ ವಿಧಾನವನ್ನು ಸಂಶೋಧಿಸಿದ್ದಾರೆ. ಹೌದು, ವಾತಾವರಣದಲ್ಲಿ ಉಚಿತವಾಗಿ ಸಿಗುವ ಗಾಳಿ, ಸೂರ್ಯನ ಶಕ್ತಿ ಮತ್ತು ನೀರಾವಿಯನ್ನು ಬಳಸಿ ವಿಮಾನದಲ್ಲಿ ಬಳಸುವ ಇಂಧನವಾದ ‘ಕೆರೋಸಿನ್’ ಅನ್ನು ತಯಾರಿಸುವಲ್ಲಿ ಸ್ಪೇನ್ ನ ಕೆಲವು ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ‘ಹೀಗೆ ಗಾಳಿಯಲ್ಲಿನ ಮಾಲಿನ್ಯಕ್ಕೆ ಕಾರಣವಾದ ಇಂಗಾಲದ ಡೈ ಆಕ್ಸೈಡ್ ಅನ್ನು ಬಳಸಿ ಇಂಧನವನ್ನು ತಯಾರಿಸಿದ್ದೇ‌ ಆದರೆ, ಅದನ್ನು ಬಳಸಿದ ನಂತರ ಹೊರ ಬರುವ ಮಾಲಿನ್ಯಕ್ಕೆ ಸಮವಾಗಿರುವುದರಿಂದ, ನಾವು ಮಾಲಿನ್ಯದ ಹೆಚ್ಚಳಕ್ಕೆ ಪಾಲುದಾರರಾಗಿಲ್ಲ ಎಂದೇ ಅರ್ಥ’ ಎನ್ನುತ್ತಾರೆ ಝೂರಿಚ್ ನ ಇನ್ನೊಬ್ಬ ತಂತ್ರಜ್ಞ.

© cc_Jet

ಇದರಲ್ಲಿ ಅಡಗಿರುವ ಅಪಾರ ಶಕ್ತಿಯ ಕಾರಣದಿಂದಾಗಿ, ದೂರ ಪ್ರಯಾಣ ಮಾಡುವ ವಿಮಾನಗಳ ಇಂಧನವಾಗಿ ಬಳಸುವ ಈ ಕೆರೋಸಿನ್ ಗೆ ಪರ್ಯಾಯವನ್ನು ಹುಡುಕಲು ಇದುವರೆಗೆ ಸಾಧ್ಯವಗಲಿಲ್ಲ. ಹಾಗೆಯೇ‌ ಭೂಮಿಯ ಮೇಲಿನ ಮಾನವ ಉತ್ಪಾದಿತ ಗ್ರೀನ್ ಹೌಸ್ ಗ್ಯಾಸ್ ಗಳಲ್ಲಿ ಶೇ.5 ರಷ್ಟು ಈ ವಿಮಾನ ಇಂಧನ ಅಥವಾ ಜೆಟ್ ಫ್ಯುಯಲ್ ನಿಂದಲೇ‌ ಬರುತ್ತಿದೆ. ಇದರ ಪರ್ಯಾಯವಾಗಿ ಈಗ ಸ್ಟೀನ್ ಫೆಲ್ಡ್‌ ಕಂಡುಹಿಡಿದಿರುವ ಈ ವಿಧಾನದಿಂದ ಗಾಳಿ, ಸೂರ್ಯ ಮತ್ತು ನೀರಾವಿಯಿಂದಲೇ‌ ಜೇಟ್ ಫ್ಯುಯಲ್ ಆದ ಕೆರೋಸಿನ್ ಅನ್ನು ತಯಾರಿಸಬಹುದಾಗಿದೆ. ಅದು ಹೇಗೆ? ಎಂದಲ್ಲವೇ ಪ್ರಶ್ನೆ… ಹೇಳೋಣವಂತೆ. ಸ್ಟೀನ್ ಫೆಲ್ಡ್ ಮತ್ತು ತಂಡದವರು 2500ಸೂರ್ಯರಿಗೆ ಸರಿಹೊಂದುವ ಪ್ರಕಾಶವನ್ನು ಹೊರಸೂಸವಂತೆ, 169 ಸೂರ್ಯನ ಚಲನೆಗೆ ಅನುಗುಣವಾಗಿ ತಿರುಗುವ ಕನ್ನಡಿಗಳನ್ನು ಅಳವಡಿಸಿ 15ಮೀ. ಎತ್ತರದ ಸೋಲಾರ್ ಟವರ್ ನ ತುದಿಗೆ ಪ್ರತಿಫಲಿಸುವಂತೆ ಮಾಡಿದರು. ಅಲ್ಲಿಗೇ ಸೂರ್ಯನ ಪ್ರಕಾಶ ಬೀರುತ್ತಿದ್ದ ಆ ರಿಯಾಕ್ಟರ್ ಗೆ ಇಂಗಾಲದ ಡೈ ಆಕ್ಸೈಡ್, ನೀರಾವಿ ಮತ್ತು ಇವುಗಳ ರಾಸಾಯನಿಕ ಕ್ರಿಯೆಯ ವೇಗವರ್ಧಕವಾಗಿ ಪೋರಸ್ ಸೆರಿಯಾ ಎಂಬ ವಸ್ತುವನ್ನೂ ಸೇರಿಸಿದರು.

© IMDEA ENERGY

ಸೂರ್ಯನ ಆ ಶಾಖಕ್ಕೆ ಇವೆಲ್ಲವೂ ರಾಸಾಯನಿಕವಾಗಿ ಬೆರೆತು ‘ಸಿಂಗ್ಯಾಸ್’ ಎಂಬ ಜಲಜನಕ (ಹೈಡ್ರೋಜನ್) ಮತ್ತು ಕಾರ್ಬನ್ ಮೋನಾಕ್ಸೈಡ್ ನ ಮಿಶ್ರಣ ಉತ್ಪತ್ತಿಯಾಗುತ್ತಿತ್ತು. ಇದೇ ಸಿಂಗ್ಯಾಸ್ ಅನ್ನು ಬಳಸಿ ಕೆರೋಸಿನ್ ಅನ್ನು ತಯಾರಿಸಲಾಗುತ್ತಿತ್ತು. ಈ ವಿಧಾನದಲ್ಲಿ ಸುಮಾರು 9 ದಿನಗಳ ಕಾಲಾವಧಿಯಲ್ಲಿ 5,191 ಲೀ. ನಷ್ಟು ಸಿಂಗ್ಯಾಸ್ ಅನ್ನು ಉತ್ಪಾದಿಸಲಾಗಿತ್ತು. ಇದೇ ಸಿಂಗ್ಯಾಸ್ ಅನ್ನು ಬಳಸಿ ‘ಕೆರೋಸಿನ್’ ಮತ್ತು ‘ಡೀಸಲ್’ ಅನ್ನು ತಯಾರಿಸಲಾಗುತ್ತಿತ್ತು. ದಿನಕ್ಕೆ ಸುಮಾರು ಒಂದು ಲೀಟರ್ ನಷ್ಟು ಕೆರೋಸಿನ್ ಉತ್ಪಾದನೆಯಾಗುತ್ತಿತ್ತು. ಇದೊಂದು ಒಳ್ಳೆಯ ಸಾಧನೆಯೇ ಎನ್ನುತ್ತಾರೆ ಇತರ ವಿಜ್ಞಾನಿಗಳು. ಏಕೆಂದರೆ, ಬೋಯಿಂಗ್ 747 ಎಂಬೊಂದು ವಿಮಾನವು ಹಾರಿ ತನ್ನ ಪ್ರಯಾಣ ಶುರು ಮಾಡಲು ಸುಮಾರು 19,000 ಲೀ. ಇಂಧನವನ್ನು ಖರ್ಚು ಮಾಡುತ್ತದೆ. ಇದಕ್ಕೆ ಹೋಲಿಸಿದರೆ ಇಲ್ಲಿ ಉತ್ಪಾದನೆ ಆಗುತ್ತಿರುವ ಇಂಧನದ ಪ್ರಮಾಣ ಕಡಿಮೆಯೇ. ಆದರೆ, ಕೆಲವು ವಿಜ್ಞಾನಿಗಳು ಹೇಳುವಂತೆ ಪೋರಸ್ ಸೆರಿಯಾ ವೇಗವರ್ಧಕದ ದಕ್ಷತೆಯನ್ನು ಹೆಚ್ಚಿಸಿದ್ದೇ ಆದರೆ ಈ ಸಂಶೋಧನೆಯಿಂದ ಇಂಧನವನ್ನು ವಾಣಿಜ್ಯ ಮಟ್ಟದಲ್ಲಿ ತಯಾರಿಸಿ ಯಶಸ್ಸು ಕಾಣುವುದರಲ್ಲಿ ಸಂಶಯವೇ‌ ಇಲ್ಲ, ಎಂಬುದು ಇವರ ವಾದ.

© ETH ZURICH

ಈ ಸಂಶೋಧನೆ ಫಲಕಾರಿಯಾಗಲಿ ಅಥವಾ ಬಿಡಲಿ, ಇಂತಹುದೊಂದು ಸಾಧ್ಯವಿದೆ ಎಂದು ತೋರಿಸಿಕೊಡುವಲ್ಲಿ ಆ ವಿಜ್ಞಾನಿಗಳು ಗೆದ್ದಿದ್ದಾರೆ. ಕೇವಲ ಸ್ವಾರ್ಥದ ಈ ಯುಗದಲ್ಲಿ ಇತರರಿಗಾಗಿ ಆಲೋಚಿಸಿ, ತಮ್ಮ ತಪ್ಪನ್ನು ಅರಿತು ಸರಿ ಪಡಿಸಿಕೊಳ್ಳುವ ಪ್ರಯತ್ನದಲ್ಲಿ ಕಂಡ ಈ ಯಶಸ್ಸು ಬೇರೆಯ ಸ್ವಾರ್ಥಾಲೋಚನೆಗಳಿಗಿಂತ ಸಾವಿರ ಪಾಲು ಉತ್ತಮ ಮತ್ತು ಪ್ರೇರಣಕಾರಿ.

ಮೂಲ ಲೇಖನ: ScienceNewsforStudents

ಲೇಖನ: ಜೈಕುಮಾರ್ ಆರ್.
    ಡಬ್ಲ್ಯೂ
.ಸಿ.ಜಿ, ಬೆಂಗಳೂರು

Print Friendly, PDF & Email
Spread the love
error: Content is protected.