ಬುಲ್ ಬುಲ್ !.

ಬುಲ್ ಬುಲ್ !.

©ವಿನೋದ್ ಕುಮಾರ್ ವಿ. ಕೆ.

ಜೂನ್, ಜುಲೈ ಬಂತೆಂದರೆ ಬರಿ ಶಾಲಾ ಮಕ್ಕಳದಷ್ಟೇ ಅಲ್ಲ ಕಲರವ, ಪಕ್ಷಿಗಳ ಕಲರವ ಕೂಡ ಕೊಂಚ ಹತ್ತಿರದಲ್ಲಿಯೇ ಕೇಳುತ್ತದೆ. ಏಕೆಂದರೆ ಇದು ಹಕ್ಕಿಗಳ ಸಂತಾನೋತ್ಪತ್ತಿಯ ಪರ್ವಕಾಲವೂ ಹೌದು! ಮಗನಿಗೆ ಬೇಗ ಶಾಲೆಗೆ ಕಳುಹಿಸಲೆಂದು ಫ್ರಿಡ್ಜ್ ನಲ್ಲಿದ್ದ ಹಾಲಿನ ಪಾತ್ರೆ ತೆಗೆಯಲು ಹೋದ ನನಗೆ ಫ್ರಿಡ್ಜ್ ಬಾಗಿಲಿನ ಮೇಲೆ ಅಂಟಿಸಿದ್ದ ಅಂಟು ನೋಟ್ ನನ್ನ ಗಮನ ಸೆಳೆಯಿತು.

ಬುಲ್ ಬುಲ್ ಪಕ್ಷಿ ನೋಟ
ಮೊಟ್ಟೆ ಇಟ್ಟಿದ್ದು: 22-12-2014
ಮರಿ ಬಂದಿದ್ದು: 1-1-2015
ಕತ್ತು ಮೇಲೆ ಎತ್ತಿದ್ದು: 6-1-2015
ಪುಕ್ಕ ಬಿಚ್ಚಿದ್ದು: 12-1-2015
ಹಾರಿ ಹೋಗಿದ್ದು: 13-1-2015

ಹೌದಲ್ಲವೇ? ಆ ದಿನಗಳು ಎಷ್ಟೊಂದು ಅದ್ಭುತವಾಗಿದ್ದವು. ಪಶ್ಚಿಮ ಘಟ್ಟಗಳ ಹತ್ತಿರದಲ್ಲಿದ್ದ ನಮ್ಮ ಮನೆಯಲ್ಲಿ ಕೆಂಪು ಕಪಾಲದ ಚೊಟ್ಟಿ ಇರುವ ಪಿಕಳಾರ ಒಂದು ಸಂಸಾರ ಹೂಡಿತ್ತು. ನಮ್ಮ ಸಂಸಾರವೂ ಹೊಸತು. ಅವುಗಳದೂ ಹೊಸದೇ ಆಗಿರಬಹುದೆಂದುಕೊಂಡೆ. ಮನೆ ಕಟ್ಟುವ ಮೊದಲು, ಮನುಷ್ಯರು ಹೇಗೆ ಜಾಗ, ವಾಸ್ತು, ದಿಕ್ಕು ಎಂದೆಲ್ಲ ನೋಡುವುದಿಲ್ಲವೇ ಹಾಗೆ ಈ ಪಿಕಳಾರ ದಂಪತಿಗಳೂ ಕೂಡ ನಮ್ಮ ಮನೆಯೆಲ್ಲಾ ಹಾರಾಡಿ ನೋಡಿ, ಮನೆಯ ಭದ್ರತೆ, ವಾಸವಿರುವ ನರಜಂತುಗಳು ಕ್ರೂರಿಗಳೇ ಅಥವಾ ತಮ್ಮ ಪಾಡಿಗೆ ತಾವಿರುವವರೇ? ಬೆಳಕು-ಗಾಳಿ, ಮನೆ ಒಳ-ಹೊರ ಬಂದು ಹೋಗಲು ಎಷ್ಟು ದಾರಿಗಳು ಉಂಟು (ಕಿಟಕಿ/ಬಾಗಿಲುಗಳ ಸಂಖ್ಯೆ), ಅವು ಯಾವಾಗಲೂ ತೆರೆದೇ ಇರುತ್ತವೆಯೇ ಎಂದೆಲ್ಲ ಲೆಕ್ಕ ಹಾಕಿದವು. ಒಂದು ವಾರದ ಬಳಿಕ ನಮ್ಮ ಮನೆಯ ಇನ್ನೊಂದು ಬೆಡ್ ರೂಮಿನ ಕಿಟಕಿಯಲ್ಲಿ ಸ್ಥಳ ನಿಗದಿಪಡಿಸಿ ಕಡ್ಡಿಗಳನ್ನು ತಂದು ಕಿಟಕಿಯ ಸರಳುಗಳ ಮಧ್ಯೆ ಸಿಕ್ಕಿಸಲಾರಂಭಿಸಿ ಗೂಡಿನ ಅಡಿಪಾಯ ಹಾಕಿಯೇಬಿಟ್ಟವು. ನಾವಿರುವ ಬೆಡ್ರೂಮ್ ಅವಕ್ಕೆ ಬೇಡದೆ ಇನ್ನೊಂದು ಬೆಡ್ ರೂಮನ್ನು ತಮ್ಮ ಖಾಸಗಿತನಕ್ಕೆ ಅಡ್ಡಿ ಬಾರದಂತೆ ಆಯ್ದುಕೊಂಡಿದ್ದವು. ಇಡೀ ಮನೆಯಲ್ಲಿ ಭೂತದಂತೆ ನಾನೊಬ್ಬಳೇ ದಿನವಿಡೀ ಕಾಲಕಳೆಯುತ್ತಿದ್ದ ನನಗೆ, ಈ ಪಿಕಳಾರ ಜೋಡಿ ಒಂದು ಹೊಸ ಹುಮ್ಮಸ್ಸನ್ನೇ ತಂದುಕೊಟ್ಟಿತು. ಆಗಿನ್ನೂ ಈ ಮೊಬೈಲು, ವಾಟ್ಸಪ್ಪ್ ನ ಗೀಳು ಅಷ್ಟೊಂದು ಇರಲಿಲ್ಲವಾದ್ದರಿಂದ ಹಾಗು ನನ್ನ ಬಹುದಿನದ ಕನಸಾಗಿದ್ದ ಈ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಇರಬೇಕೆಂಬ ತುಡಿತ ಅತಿಯಾದ್ದರಿಂದ ಮನೆಗೆ ಟಿವಿ ಕೂಡ ಪ್ರವೇಶ ಮಾಡಲು ಬಿಟ್ಟಿರಲಿಲ್ಲ. ಇಡೀ ದಿನ ನಾನು, ಮನೆ, ಪುಸ್ತಕ, ಹೊಸದಾಗಿ ಕಾಣುವ ಹುಳ ಹುಪ್ಪಟೆ, ತೋಟ ಎಂದಷ್ಟೇ ನಿರತವಾಗಿದ್ದೆ. ಈ ಪಿಕಳಾರ ಜೋಡಿ ಬಂದಾಗಿನಿಂದ ನನ್ನ ದಿನಚರಿಯೂ ಬದಲಾಗಿತ್ತು. ಅವುಗಳು ಕಡ್ಡಿ ಸಿಕ್ಕಿಸಿ ಹೊರಹೋದ ಕೂಡಲೇ ಅಲ್ಲಿಗೆ ಹೋಗಿ ಅವು ಯಾವ ಕಡ್ಡಿ ತಂದವು, ಹೇಗೆ ಸಿಕ್ಕಿಸಿದವು ಎಂದೆಲ್ಲ ನೋಡಿ ಬಂದು ಮತ್ತೆ ಪಡಸಾಲೆಯಲ್ಲಿ ಕೂರುವುದು. ಹಾಗೆಯೇ ಅವುಗಳ ಆಗಮನದಿಂದಾಗಿ ನನ್ನ ಪತಿಗೂ ಕೂಡ ಮಧ್ಯಾಹ್ನದ ಮನೆಯೂಟ ಇಲ್ಲವಾಯಿತು! ಏಕೆಂದರೆ ಅವರ ಗಾಡಿ ತುಂಬ ಶಬ್ದ ಮಾಡುತ್ತಿದ್ದರಿಂದ ಕೊನೆ ಪಕ್ಷ ಪಕ್ಷಿಗಳು ಕಾರ್ಯನಿರತವಾದಾಗ ಶಬ್ಧಮಾಲಿನ್ಯ ಬೇಡವೆಂದೂ ಆಫೀಸಿನಲ್ಲೇ ಊಟ ಮಾಡಿ ಎಂದೂ ಹೇಳಿಬಿಟ್ಟೆ!

© ಅನುಪಮಾ ಕೆ ಬೆಣಚಿನಮರ್ಡಿ

ಒಂದೆರಡು ದಿನಗಳಲ್ಲೇ ಹೆಣ್ಣು ಪಿಕಳಾರ ಮೊಟ್ಟೆ ಇಟ್ಟು ಕಾವು ಕೊಡಲು ಕೂತು ಬಿಟ್ಟಿತು. ಕೆಲವೊಂದು ಬಾರಿ ಗಂಡು ಪಿಕಳಾರ ಬಂದು ಎರಡೂ ಏನೇನೋ ಮಾತಾಡುತ್ತಿದ್ದವು. ನಾನಂತೂ ಅತೀ ಉತ್ಸಾಹದಿಂದ ನನ್ನೆಲ್ಲ ಬಂಧು ಬಳಗಕ್ಕೂ ಪಿಕಳಾರದ ಸಂಸಾರದ ಬಗ್ಗೆ ಹೇಳಿ ಆಗಿತ್ತು. ಚಿಕ್ಕಂದಿನಲ್ಲಿಯೂ ಪಿಕಳಾರದ ಗೂಡನ್ನು ನೋಡಿದ್ದರೂ ಇಷ್ಟು ಹತ್ತಿರದಿಂದ ನೋಡಿರಲಿಲ್ಲ. ಅದೂ ಅಲ್ಲದೆ ನಮ್ಮ ತಂಟೆಯಿಂದ ಅವುಗಳ ಸಂಸಾರಕ್ಕೆ ಧಕ್ಕೆಯಾಗಬಾರದೆಂದು ನಮ್ಮ ತಂದೆ-ತಾಯಿ ಅವುಗಳ ಹತ್ತಿರ ಹೋಗಲು ಬಿಡುತ್ತಿರಲಿಲ್ಲ. ಮೊಟ್ಟೆಯೊಡೆದು ಮರಿಯಾದರಂತೂ ಅಮ್ಮನಿಗೆ ನಮ್ಮನ್ನು ಕಾಯುವುದರ ಜೊತೆಗೆ ಅವುಗಳನ್ನು ಕಾಯುವುದು ಮತ್ತೊಂದು ಹೆಚ್ಚಿನ ಕೆಲಸ! ಪಿಕಳಾರಗಳು ಒಂದೇ ಸಮನೆ ಗಡಿಯಾರದ ಅಲಾರಾಂ ತರಹ ಹೊಡೆದುಕೊಳ್ಳಲಾರಂಭಿಸಿದರೆ ಹಾವೊ ಅಥವಾ ಬೆಕ್ಕೋ ಬಂದಿರಬಹುದೆಂದು ಅಮ್ಮನಿಗೆ ಗೊತ್ತಾಗಿಬಿಡುತ್ತಿತ್ತು. ಒಲೆ ಮೇಲೆ ಅಡುಗೆ ಮಾಡುತ್ತಿದ್ದವಳು ನಮ್ಮನ್ನು ಕರೆದು ಗೂಡಿನತ್ತ ಕಣ್ಣು ಹಾಯಿಸಲು ಹೇಳುತ್ತಿದ್ದಳು. ನಂತರ ಅವಶ್ಯವಿದ್ದರೆ ಧಾವಿಸುತ್ತಿದ್ದರು. ಇದನ್ನೆಲ್ಲಾ ಗಮನಿಸುತ್ತಿದ್ದ ನಾವು ಅತೀ ಜವಾಬ್ದಾರಿ ಉಳ್ಳ ಹಿರಿಯರಂತೆ ವರ್ತಿಸುತ್ತಾ ಶಾಲೆಯ ಬಗ್ಗೆ ಯೋಚಿಸುತ್ತಲೇ ಇರಲಿಲ್ಲ!

ಜೂನ್ ಶುರುವಾದರೆ “ಅಮ್ಮ ನಾನು ಶಾಲೆಗೆ ಹೋದರೆ ಪಿಕಳಾರದ ಗೂಡಿನ ಗತಿಯೇನು” ಎಂದು ಕೇಳುತ್ತಿದ್ದೆ ಎಂದು ಅಮ್ಮ ಈಗಲೂ ನೆನಪಿಸಿಕೊಳ್ಳುತ್ತಾರೆ. ಇವುಗಳ ಜೊತೆಗೆ ಚಿಕ್ಕ ಚುಕ್ಕಿ ಮುನಿಯಾ (spotted Munia) ಪಕ್ಷಿ ಕೂಡ ನೆನಪಿಗೆ ಬರುತ್ತದೆ. ಅದು ಸಿಂಪಿಗ ಹಕ್ಕಿಯಷ್ಟು ಚಿಕ್ಕದಿದ್ದರೂ ಕೂಡ ಅದರ ಮನೆ ಬಹು ಮಹಡಿ ಕಟ್ಟಡದಂತೆ ಭಾಸವಾಗುತ್ತಿತ್ತು. ಮಳೆಗಾಲದ ಆರಂಭದಲ್ಲಿ ಹಸಿರು ಹುಲ್ಲುಗಾವಲಿನಲ್ಲಿ ಆಚೀಚೆ ನೆಗೆದು ಅತೀ ಉತ್ಕೃಷ್ಟವಾದ ಹುಲ್ಲಿನ ಗರಿಯನ್ನು ಹುಡುಕಿ ತೆಗೆದು ಅದನ್ನು ತನ್ನ ಚೂಪಾದ ಕೊಕ್ಕಿನಿಂದ ಕತ್ತರಿಸಿಕೊಂಡು ತಂದು ಗಿಡದ ಪೊದೆಯಲ್ಲಿ ಹೆಣೆದು ಗೂಡು ಕಟ್ಟುತ್ತಿದ್ದ ದೃಶ್ಯವನ್ನು ವರಾಂಡದ ಕಿಟಕಿಯಿಂದ ನೋಡುತ್ತಿದ್ದ ಪರಿಯು ಇನ್ನೂ ಸ್ಮೃತಿಪಟಲದಲ್ಲಿ ಅಚ್ಚಳಿಯದಂತೆ ಇದೆ. ಹಕ್ಕಿಗಳು ಮನುಷ್ಯರನ್ನು ನೋಡಿದರೆ ಹಾರಿ ಹೋಗುತ್ತವೆ ಎಂದು ನಿಮಿಷಕ್ಕೊಮ್ಮೆ ಎಚ್ಚರಿಸುತ್ತಿದ್ದ ಅಕ್ಕ-ಅಣ್ಣಂದಿರೇ ನನಗೆ ಮಾರ್ಗದರ್ಶಕರಾಗಿದ್ದರು. ಇದೆಲ್ಲವನ್ನು ಗಮನಿಸಿದ ನಮ್ಮ ತಂದೆ, ಪೂರ್ಣಚಂದ್ರ ತೇಜಸ್ವಿ ಹಾಗು ಸಲೀಂ ಅಲಿಯ ಪುಸ್ತಕಗಳನ್ನು ತಂದು ಕೊಟ್ಟಿದ್ದ ನೆನಪು.

© ಅನುಪಮಾ ಕೆ ಬೆಣಚಿನಮರ್ಡಿ

ಒಂದು ಸಲ ತೇಜಸ್ವಿ ಅವರ ಅನುಭವದ ತರಹವೇ ನಮ್ಮ ಮೂರೂ ಜನಕ್ಕೆ ಅನುಭವವಾಗಿತ್ತು. ಮುನಿಯಾ ಹಕ್ಕಿಯ ಗೂಡು ಇನ್ನೂ ಹಚ್ಚ ಹಸಿರಾಗೇ ಇತ್ತು. ಆಗ ತಾನೇ ಮೊಟ್ಟೆ ಇಟ್ಟಿತ್ತು. ನನ್ನ ತರಹವೇ ಮತ್ತೊಂದು ಜೀವಿಯೊಂದು ಮುನಿಯಾದ ಚಲನವಲನಗಳನ್ನು ಗಮನಿಸಿದ್ದಿರಬೇಕು. ತಾಯಿ ಹಕ್ಕಿ ಮೊಟ್ಟೆಗೆ ಕಾವು ಕುಳಿತೊಡನೆಯೇ ಈ ಕರಿಯ ಬೆಕ್ಕು ಗೂಡಿಗೆ ಹಲ್ಲೆ ಮಾಡಿತ್ತು. ನಾವು ಶಾಲೆಯಿಂದ ಬರುವುದರಲ್ಲೇ ಗೂಡು ಮುರಿದು ಕೆಳಗೆ ಬಿದ್ದಿತ್ತು. ಅದರಲ್ಲಿದ್ದ ಹಲ್ಲಿಯ ಮೊಟ್ಟೆಗಳಂತಿದ್ದ ತಣ್ಣಗಾದ ಮುನಿಯಾ ಮೊಟ್ಟೆಗಳನ್ನು ಮನೆಯಲ್ಲಿಟ್ಟು ಅಕ್ಕ-ಅಣ್ಣನಿಗೆ ವಿಷಯ ತಿಳಿಸಿದರೆ, ಅವರು ನನ್ನ ಮೇಲೆ ಕುಪಿತಗೊಂಡು, ಒಂದು ವೇಳೆ ತಾಯಿ ಮುನಿಯಾ ವಾಪಸ್ಸಾದರೂ ಕೂಡ ಮನುಷ್ಯ ಮುಟ್ಟಿದ್ದ ಮೊಟ್ಟೆಗಳನ್ನು ಮುಟ್ಟುವುದಿಲ್ಲ ಎಂದು ಬಯ್ಯುತ್ತಿದ್ದರೂ, ಇವರಿಬ್ಬರೂ ನನ್ನನ್ನು ಮನುಷ್ಯಳೆಂದು ಒಪ್ಪಿಕೊಂಡರಲ್ಲವೇ? ಹಾಗಾದರೆ ಇಷ್ಟು ದಿನ ಸುಮ್ಮನೆ ‘ನಿನ್ನನ್ನು ಒಂದು ಸೇರು ತೌಡು ಕೊಟ್ಟು ತಂದದ್ದು! ನೀನು ಮನುಷ್ಯಳೇ ಅಲ್ಲ. ಮಂಗ್ಯಾನ ಜಾತಿ…” ಎಂದಿದ್ದು ಸುಳ್ಳು ಎಂದು ನಾನು ಖುಷಿ ಪಡುತ್ತಿರಬೇಕಾದರೆ, ನಿನ್ನಿಂದಾಗಿ ಮೊಟ್ಟೆ ಅನಾಥವಾಗುತ್ತವೆ ಎಂದು ಕೇಳಿದ ಮೇಲೆ ಸ್ವಲ್ಪ ವಿವೇಕೋದಯವಾದಂತಾಗಿ ದುಃಖವಾಯಿತು. ತೇಜಸ್ವಿ ಪುಸ್ತಕ ಓದಿದ್ದ ಅಣ್ಣ, ಇನ್ನು ಹೇಗಾದರೂ ಮೊಟ್ಟೆ ಹಾಳಾಗುವುದು ಖಚಿತವೇ. ನಾವ್ಯಾಕೆ ಕೃತಕ ಕಾವು ಕೊಡಲು ಪ್ರಯತ್ನಿಸಬಾರದು ಎಂದು ಯೋಚಿಸಿ, ಪ್ರಯತ್ನ ಮಾಡುವ ಮೊದಲು ಪ್ರೌಢಶಾಲೆಯ ಗುರುಗಳಾದ ತಿಮ್ಮಾಪುರ ಸರ್ ಗೆ ಫೋನ್ ಮಾಡಿ ಸಲಹೆ ಪಡೆದು ಮುಂದುವರಿಯೋಣ ಎಂದು ಫೋನಾಯಿಸಿದ. ಅವರು “ನೀವ್ ತೇಜಸ್ವಿ ಪುಸ್ತಕ ಓದಿಲ್ಲೇನು? ಮೊಟ್ಟೆಗೆ ಕೃತಕ ಕಾವು ಕೊಡೋದು ಅಷ್ಟ ಹಗರ ಕೆಲಸ ಅಲ್ಲಾ! ಎಷ್ಟ್ ಉಷ್ಣತೆ ಬೇಕ ಅಂತ ನಿಮಗೇನರೇ ಗೊತ್ತದ ಏನು? ಅಕಸ್ಮಾತಾಗಿ ತತ್ತಿ ಒಡದ ಮರಿ ಹೊರಗ ಬಂತು ಅಂದ್ರ ನೀವೇನ್ ತಿನ್ನಸ್ತೀರಿ ಅವಕ್ಕ? ಅದರ ವಿಚಾರ ಬಿಟ್ಟ ಬಿಡ್ರಿ ನೀವು!” ಅಂದು ಬಿಟ್ರು. ಅಣ್ಣ ವಿಧಿ ಇಲ್ಲದೆ ಆ ಮೊಟ್ಟೆಗಳನ್ನು ಗೂಡಲ್ಲಿಯೇ ಇಟ್ಟು ಬಂದ.

© ಅನುಪಮಾ ಕೆ ಬೆಣಚಿನಮರ್ಡಿ

ಇದು ಸ್ವಲ್ಪ ಹಳೇ ಕಥೆ ಆದ್ರೆ, ಈಗ ನಮ್ಮ ಮನೆಯಲ್ಲಿ ಕಟ್ಟಿದ್ದ ಪಿಕಳಾರದ್ದು ನವ್ಯ ಕಾಲದ್ದು. ಇದರ ಗೂಡಿಗೇನೂ ಕಂಟಕ ಬರದೇ ಇದ್ದಿದ್ದು ನನ್ನ ಕಾವಲುಗಾರಿಕೆಯ ಕರ್ತವ್ಯ ನಿಷ್ಠೆ ಎಂದೇ ಹೇಳಬೇಕು. ಆದರೆ ತೇಜಸ್ವಿ ಪುಸ್ತಕ ಪ್ರಭಾವ ನನ್ನನ್ನು ಬಿಟ್ಟಿರಲಿಲ್ಲ. ಹಕ್ಕಿ ತಾನಾಗಿಯೇ ನಮ್ಮ ಮನೆಯಲ್ಲಿ ಗೂಡು ಕಟ್ಟಿದ್ದರೆ ಅದರ ಫೋಟೋ ತೆಗೆಯದೆ ಇರಲು ಸಾಧ್ಯವೇ? ತೇಜಸ್ವಿ ಅವರು ಫೋಟೋ ತೆಗೆಯುತ್ತಿದ್ದ ರೀತಿ, ಅವರು ಕಾಡನ್ನು ವರ್ಣಿಸುವ ಬಗೆ, ಅದರ ಪ್ರಶಾಂತತೆಯಲ್ಲಿ ಒಂದಾಗುವುದನ್ನು ವಿವರಿಸಿದ ಬಗೆ ಎಲ್ಲವನ್ನೂ ನನ್ನೊಳಗೆ ಆಹ್ವಾನಿಸಿಕೊಂಡು ನಾನೇ ತೇಜಸ್ವಿ ಅನ್ನುವ ತರಹ ನನ್ನ ಕ್ಯಾನನ್ ಡಿ ಎಸ್ ಎಲ್ ಆರ್ ಕ್ಯಾಮೆರಾ ಹೆಗಲಿಗೇರಿಸಿಯೇ ಬಿಟ್ಟೆ. ಇದಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡುವಂತೆ ಆ ಕೆಂಪು ಕಪಾಲದ ಪಿಕಳಾರ ದಂಪತಿಗಳು ತನ್ನೆರಡು ಮರಿಗಳಿಗೆ ಚಿತ್ರ ವಿಚಿತ್ರವಾದ ಹುಳುಗಳನ್ನು ಹೆಕ್ಕಿ ತರುತ್ತಿದ್ದವು. ಮೊದಮೊದಲು ಮೆತ್ತಗಿನ ಕಂಬಳಿ ಹುಳುಗಳು, ಹಸಿರು ಕೀಡಿಗಳಂತಹ ಹುಳುಗಳನ್ನೇ ತರುತ್ತಿದ್ದವು. ಮರಿಗಳು ಸ್ವಲ್ಪ ದೊಡ್ಡವಾದೊಡನೆ (2 ದಿನ ಆದ ಮೇಲೆ!) ದೊಡ್ಡ ದೊಡ್ಡ ಮಿಡತೆ, ಜೇಡಗಳನ್ನು ತರತೊಡಗಿದವು. ಇನ್ನು ಕೆಲವು ಹುಳುಗಳನ್ನು ನನಗೆ ಗುರುತಿಸುವುದೇ ಅಸಾಧ್ಯವಾಯಿತು. ಕೆಲವೊಂದು ಬಾರಿ ಹುಳುಗಳ ಕಾಲೋ ಅಥವಾ ಮೀಸೆಯೋ ತಾಯಿ ಪಿಕಳಾರದ ಕೊಕ್ಕಿನ ಹೊರಗೆ ಚಾಚಿರುವುದನ್ನು ನೆನೆಸಿಕೊಂಡರೇ ಭಯವಾಗುತ್ತದೆ. ನಿಜವಾಗಿಯೂ ಮಾಂಸದ ಮುದ್ದೆಯಂತಿರುವ ಮರಿಗಳು ಇಂತ ರೌದ್ರಾವತಾರದ ಕೀಟಗಳನ್ನು ತಿನ್ನಬಲ್ಲವೇ? ಕೀಟಗಳೇ ಮರಿಗಳನ್ನು ತಿಂದು ಹಾಕಿದರೆ ಎಂಬ ಯೋಚನೆಗಳು ನನ್ನ ತಲೆಯಲ್ಲಿ! ಆದರೆ ಜಾಣ ಪಿಕಳಾರಗಳು ಕೀಟವನ್ನು ಕುಕ್ಕಿ ಅದರ ಒಂದೊಂದೇ ದೇಹ ಭಾಗಗಳನ್ನು ಕಿತ್ತು ಮರಿಗಳಿಗೆ ತಿನ್ನಿಸುತ್ತಿದ್ದನ್ನು, ಅವುಗಳಿಗೆ ದೃಷ್ಟಿ ತಾಗಿದರೂ ಚಿಂತೆಯಿಲ್ಲ ಎಂದು ಬಾಗಿಲಿನ ಹಿಂದಿನಿಂದ ನಿಂತು ನೋಡಿದಾಗಲೇ ಗೊತ್ತಾಗಿದ್ದು. ಆಗ ಕೆಲವೊಂದು ಬಾರಿ ಕೀಟದ ಕಾಲೋ ಮತ್ತಿನ್ನೇನೋ ಕೆಳಕ್ಕೆ ಬೀಳುತ್ತಿದ್ದವು. ಅವುಗಳನ್ನು ತಿನ್ನಲು ವಿವಿಧ ರೀತಿಯ ಇರುವೆಗಳ ಸಾಲು. ಇರುವೆಗಳನ್ನು ಕಬಳಿಸಲು ಹಲ್ಲಿ. ಹೀಗೆ ನನ್ನ ಮನೆ ಸಕಲ ಜೀವ ಜಂತುಗಳಿಂದ ತುಂಬಿ ತುಳುಕುತ್ತಿತ್ತು. ಮನೆಯಲ್ಲಿ ಯಾರಾದರೂ ಹಿರಿಯರಿದ್ದಿದ್ದರೆ ಇದೊಂದು ಸಂಸಾರಸ್ಥ ಮನೆಯೇ ಎಂದು ಜಿಗುಪ್ಸೆ ಹೊಂದುತ್ತಿದ್ದರು. ಏಕೆಂದರೆ ಆ ಬಾಣಂತಿ ಕೋಣೆಯನ್ನು ಕಸಗುಡಿಸುತ್ತಿದ್ದುದು ಎರಡು ದಿನಕ್ಕೊಮ್ಮೆ!  ಪೋಷಕ ಪಿಕಳಾರಗಳು ಒಂದಾದ

© ಅನುಪಮ ಹೆಚ್. ಎಂ.

ಮೇಲೊಂದರಂತೆ ಕೀಟಗಳನ್ನು ತರುತ್ತಿದ್ದವು. ನಾನು ಕಸಗುಡಿಸುವುದರಲ್ಲಿಯೇ ಎರಡೂ ಹಕ್ಕಿಗಳು ಬಂದು ಬಂದು ಹಿಂದಿರುಗುತ್ತಿದ್ದವು. ಒಂದೊಂದು ಸಲ ಇವುಗಳ ಬಾಯಿಂದ ತಪ್ಪಿಸಿಕೊಂಡ ಕಂಬಳಿ ಹುಳುಗಳು ತೆವಳುತ್ತ ದೇವರ ಮನೆಯಲ್ಲೋ, ಅಡುಗೆ ಮನೆಯಲ್ಲೋ ಪ್ರತ್ಯಕ್ಷವಾಗಿದ್ದೂ ಇದೆ! ಪಿಕಳಾರ ತಿನ್ನುವ ಆಹಾರದ ಬಗ್ಗೆಯೇ ಒಂದು ಸಂಶೋಧನಾತ್ಮಕ ಪ್ರಬಂಧ ಬರೆಯಬಹುದು ಎಂದು ಯೋಚಿಸುತ್ತ ಆ ಹುಳುಗಳನ್ನು ಮತ್ತೆ ಅದೇ ಕೋಣೆಗೆ ಬಿಟ್ಟು ಬಂದರೂ, ಹಕ್ಕಿಗಳು ಆ ಹುಳುವನ್ನು ತನ್ನ ಮಕ್ಕಳಿಗೆ ಕೊಡುತ್ತಿರಲಿಲ್ಲ. ವಿಧಿಯಿಲ್ಲದೇ ನಾನೇ ಆ ಹುಳುಗಳನ್ನು ಸೋಲಾರ್ ಫ್ರೈ ಗೆ ಕಾಂಪೌಂಡಿನ ಮೇಲೆ ಇಡುತ್ತಿದ್ದೆ! ಈ ಸಂಶೋಧನೆ ಹೀಗೆ ಮುಂದುವರೆದಿತ್ತು. ಒಂದು ದಿನ ಪ್ರೌಢ ಹಕ್ಕಿಗಳು ಹೊರಗಡೆ ಹೋಗಿದ್ದಾಗ, ಮರಿಗಳ ಫೋಟೋ ಹತ್ತಿರದಿಂದ ತೆಗೆಯೋಣವೆಂದು ಫೋಟೋ ಕ್ಲಿಕ್ಕಿಸಿದ್ದೇ ಒಂದು ದೊಡ್ಡ ಪ್ರಮಾದವಾಗಿ ಹೋಯಿತು. ಹಿಂದಿನ ದಿನ ರಾತ್ರಿ ಕ್ಯಾಮೆರಾದ ಅನೇಕ ಕಾರ್ಯ ವಿಧಾನಗಳನ್ನು ಅಭ್ಯಾಸ ಮಾಡುತ್ತಿದ್ದ ನಾನು, ಷಟ್ಟರ್ ಶಬ್ಧವನ್ನು ಮ್ಯೂಟ್ ಮಾಡುವುದನ್ನು ಮರೆತಿದ್ದೆ. ಶಬ್ಧದಿಂದ ಮರಿಹಕ್ಕಿಗಳು ಸ್ವಲ್ಪ ಬೆಚ್ಚಿದವಲ್ಲದೇ ಅದೇ ಸಮಯಕ್ಕೆ ಸರಿಯಾಗಿ ತಾಯಿ ಹಕ್ಕಿ ಕೂಡ ಮರಳಿ ಬಂದು ಇನ್ನೊಂದು ಕಿಟಕಿ ಮೇಲೆ ಕೂತಿತ್ತು. ಇಷ್ಟು ದಿನ ಶಾಂತತೆಯನ್ನು ಹಾಗು ಹಕ್ಕಿ ಸಂಸಾರವನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದ ನನ್ನ ನಿಜ ಸ್ವರೂಪವನ್ನು ಮರೆತು ನಾನೊಂದು ಅಪಾಯ ಎಂಬಂತೆ ‘ಅಪಾಯ ಕೂಗನ್ನು’ ಕೂಗುತ್ತ ಮೇಲೆ ಹಾರಾಡತೊಡಗಿದವು. ಏನು ಮಾಡುವುದೆಂದು ತಿಳಿಯದೆ ಅಲ್ಲಿಂದ ಪಲಾಯನ ಮಾಡಿ, ಅನಂತರ ದಿನವಿಡೀ ಕ್ಯಾಮೆರಾ, ಹಕ್ಕಿಗಳ ಉಸಾಬರಿಗೆ ಹೋಗಲಿಲ್ಲ.

© ಅನುಪಮ ಹೆಚ್. ಎಂ.

ಸಂಜೆ, ಪಡಸಾಲೆಯಲ್ಲಿರುವ ಸಿಂಕ್ ನಲ್ಲಿ ಮುಖ ತೊಳೆಯುತ್ತಿದ್ದ ನನ್ನನ್ನು ನೋಡಿದ ಪಿಕಳಾರ ಹಕ್ಕಿ, ಹಾರಿ ಬಂದು ನನ್ನ ತಲೆಗೆ ಕುಕ್ಕಲು ಪ್ರಯತ್ನಿಸಿತು! ನಾನು ಹಿಂದೆ ತಿರುಗಿ ನಿಂತರೂ ಹೆದರದೆ ನನ್ನ ತಲೆಗೆ ಧಾಳಿ ಮಾಡಲು ಪ್ರಯತ್ನಿಸಿತು. ಅಯ್ಯೋ ಇದಿನ್ನೂ ಬೆಳಿಗ್ಗೆಯ ಪ್ರಸಂಗವನ್ನು ಮರೆತಿಲ್ಲವೇ? ಹಾವಿನ ದ್ವೇಷ ಹನ್ನೆರಡು ವರ್ಷ ಎಂಬ ವಾಕ್ಯ ಹಾವಿನ ನೆನಪಿನ ಶಕ್ತಿ ಬಗ್ಗೆ ಚಾಲ್ತಿಯಲ್ಲಿದ್ದರೂ ಪಕ್ಷಿಗಳ ಸ್ಮರಣ ಶಕ್ತಿ ಬಗ್ಗೆ ಏನೂ ಸುಳಿವಿಲ್ಲವೇ? ಏನು ಮಾಡುವುದೀಗ? ತೇಜಸ್ವಿ ಅವರು ಎಲ್ಲಿಯೂ ಈ ತರಹದ ಅನುಭವವನ್ನು ಉಲ್ಲೇಖಿಸಿಯೇ ಇಲ್ಲವಲ್ಲ! ನನ್ನ ಆತ್ಮರಕ್ಷಣೆಗೋಸ್ಕರ ಅದನ್ನು ಹೊರಗೋಡಿಸಿದರೆ ಅದು ಹೆದರಿ ಮತ್ತೆ ಹಿಂದಿರುಗದಿದ್ದರೆ ಆ ಮರಿಗಳ ಗತಿಯೇನು?  ದಿನ ದಿನಕ್ಕೂ ಬೇರೆ ಬೇರೆ ರೀತಿಯ ಕೀಟ, ಹಣ್ಣುಗಳನ್ನು ತಂದುಕೊಡುವ ಅವುಗಳಿಗೆ ನಾಳಿನ ಡಯಟ್ ಚಾರ್ಟ್ ಏನಿದೆಯೋ ಯಾರಿಗ್ಗೊತ್ತು? ನಾನೆಲ್ಲಿಂದ ಆ ಕೀಟಗಳನ್ನು ಹೆಕ್ಕಿ ತರಲಿ? ಸಲೀಂ ಅಲಿಯ ಪುಸ್ತಕ ಇಂಗ್ಲಿಷಲ್ಲಿದ್ದರೂ ಅದನ್ನು ಓದಬೇಕಿತ್ತೇ? ಓದಿದ್ದರೂ ಅದರಲ್ಲಿ ಇಂತಹ ಪ್ರಸಂಗಗಳು ಉಲ್ಲೇಖಿತವಾಗಿವೆಯೇ? ಹೋಗಲಿ ತಿಮ್ಮಾಪುರ ಗುರುಗಳಿಗಾದರೂ ಫೋನ್ ಮಾಡೋಣವೆಂದರೆ ಈ ‘ಆಂಗ್ರಿ ಬರ್ಡ್’ ನನ್ನ ಮೊಬೈಲು ಹುಡುಕಿ ತರಲು ಸಮಯ ಕೊಡುವುದೇ? ಮೊಬೈಲ್ ಸಿಕ್ಕರೂ ನೆಟವರ್ಕ್ ಬರುವುದು ಹೊರಗೆ ತಾನೇ? ಹೊರಗೋಡಿ ಹೋಗಬೇಕೆಂದರೆ ಬಾಗಿಲ ಚಿಲಕ ಹಾಕಿದೆ. ಇಲ್ಲಿನ ತೇವಾಂಶಕ್ಕೆ ಉಬ್ಬಿಕೊಂಡ ಬಾಗಿಲನ್ನು ತೆಗೆಯಲು ಕನಿಷ್ಠ ಪಕ್ಷ ಒಂದು ನಿಮಿಷವಾದರೂ ಹರಸಾಹಸ ಮಾಡಬೇಕು. ಅಷ್ಟರಲ್ಲಿ ಈ ಹಕ್ಕಿ ನನ್ನನ್ನು ಎಷ್ಟು ಬಾರಿ ಕುಕ್ಕಬಹುದು? ಈಗಾಗಲೇ ಮಂಗ ಕಚ್ಚಿದ್ದಕ್ಕೆ ಆರೇಳು ಲಸಿಕೆ ಆಗಿದೆ. ಇನ್ನು ಇದರ ಪರಿಣಾಮವೇನೋ? ನನ್ನ ವಿಚಾರ ಸರಣಿ ಇನ್ನೂ ಮುಗಿದಿರಲಿಲ್ಲ.

© ಸನತ್ ಶಾನುಭೋಗ

ಆಗ ಹಕ್ಕಿ ಮುಂದಿನ ಯೋಜನೆಯನ್ನು ಜಾರಿಗೊಳಿಸಿ ನನ್ನ ಎದುರಿಗೆ ನೆಲದ ಮೇಲೆ ಕುಳಿತು ತನ್ನ ಪುಕ್ಕಗಳನ್ನೆಲ್ಲ ನಿಗರಿಸಿಕೊಂಡು ಎದೆಯುಬ್ಬಿಸಿ ಕುಳಿತಿತು. ತನ್ನ ಎರಡೂ ಬದಿಯ ರೆಕ್ಕೆಗಳನ್ನು ಚಾಚಿ ಹಿಡಿದು ಹಿಂದಿನ ಬಾಲವನ್ನು ಬೀಸಣಿಗೆಯಂತೆ ಮಾಡಿ ಬಾಯಿಯನ್ನು ಅಗಲವಾಗಿ ತೆಗೆದು ವಿಚಿತ್ರ ರೀತಿಯಲ್ಲಿ ನಿರಂತರವಾಗಿ ಕೂಗಲಾರಂಭಿಸಿತು! ‘ಅಯ್ಯೋ ದೇವರೇ ಇದೇನು ಫಜೀತಿ? ಇನ್ನು ಏನೇನು ಮಾಡುತ್ತದೆ ಈ ಹಕ್ಕಿ?’ ಬ್ರೆಜಿಲ್ ನ ಮಳೆಕಾಡುಗಳಲ್ಲಿ ಕೆಲ ಪಕ್ಷಿಗಳು ಈ ತರಹ ಹೆಣ್ಣು ಪಕ್ಷಿಯನ್ನು ಆಕರ್ಷಿಸಲು ಮಾಡುವುದನ್ನು ಡಿಸ್ಕವರಿ ಚಾನೆಲ್ ನಲ್ಲಿ ಬಿಟ್ಟ ಕಣ್ಣು ಬಿಟ್ಟಂತೆ ನೋಡಿದ್ದೆ. ಆದರೆ ಇಲ್ಲಿನ ಪ್ರಸಂಗ ಅಸಂಭದ್ದವಾಗಿದೆ. ಇನ್ನು ಕೆಲ ಹಕ್ಕಿಗಳು ಆತ್ಮಸಂರಕ್ಷಣೆಗೋಸ್ಕರ ಈ ತಂತ್ರ ಉಪಯೋಗಿಸುವುದನ್ನು ಓದಿದ್ದೆ. ಆದರೆ ಮನುಷ್ಯರಿಗೂ ಇದನ್ನೇ ಅಳವಡಿಸುತ್ತವೆ ಎಂದು ಗೊತ್ತಿರಲಿಲ್ಲ! ಏನು ಮಾಡಲು ತೋಚದೆ ಪಕ್ಕದಲ್ಲಿದ್ದ ನನ್ನ ಬೆಡ್ ರೂಮಿಗೆ ಓಡಿ ಹೋಗಿ ಬಾಗಿಲು ಹಾಕಿಕೊಂಡೆ. ಅಷ್ಟೇ, ಮರುದಿನ ಮಧ್ಯಾಹ್ನ ನೋಡಿದರೆ ಹಕ್ಕಿಗಳು ಒಂದು ಮರಿಯನ್ನು ಹಾರಿಸಿಕೊಂಡು ಹೊರ ಕಿಟಕಿಯ ಸರಳಿನ ಮೇಲೆ ಕೂರಿಸಿದ್ದವು. ಇನ್ನೊಂದು ಮರಿಹಕ್ಕಿ ಬಟ್ಟೆ ಒಣಹಾಕುವ ತಂತಿಯ ಮೇಲೆ ಕೂತಿದ್ದು, ಹೊರಗೆ ಹಾರಿ ಹೋಗಲು ಸನ್ನದ್ಧವಾಗಿತ್ತು. ಹನ್ನೆರಡೇ ದಿನಕ್ಕೆ ಬಾಣಂತನ ಮುಗಿಯಿತೇ?! ಕೋಳಿಯಾದರೆ 21 ದಿನ ಕಾವು ಕುಳಿತು 3-4 ತಿಂಗಳು ಮರಿಗಳಿಗೆ ತರಬೇತು ನೀಡುವುದರಲ್ಲಿ ಕಳೆಯುತ್ತದೆ. ನಿರ್ಲಿಪ್ತವಾಗಿ ಹಾರಿಹೋಗುತ್ತಿದ್ದ ಪಿಕಳಾರ ಸಂಸಾರ ಮತ್ತೆ ತಾನು ಹುಟ್ಟಿ ಬೆಳೆದ ಮನೆ ಕಡೆ ಬರುವುವೇ? ಎಂದು ನೋಡುತ್ತಾ ನಿಂತು ಬಿಟ್ಟೆ. “ಅಮ್ಮಾ ಬುಬ್ಬುಲ್… ಬುಬ್ಬುಲ್… ಅಪ್ಪಾಜಿ-ಅಜ್ಜಿ ಮನಿ?” ಅಂತ ಮಗ ನನ್ನ ಅಂಗಿಯನ್ನು ಹಿಡಿದು ಎಳೆದಾಗಲೇ ನಾನು ವಾಸ್ತವಲೋಕಕ್ಕೆ ಮರಳಿದ್ದು. ಶಾಲೆಯ ಧಾವಂತ ನೆನಪಾಗಿ ಅವನಿಗೆ ಅದರ ಬಗ್ಗೆ ಹೇಳಲೂ ಪುರುಸೊತ್ತಿಲ್ಲದೆ ಶಾಲೆಗೆ ಕಳಿಸಿ ಅಮ್ಮನಿಗೆ ಫೋನಾಯಿಸಿ “ಅಮ್ಮಾ, ನಮ್ಮನೆ ಕೈತೋಟಕ್ಕೆ ಈಗಲೂ ಬುಲ್ಬುಲ್ ಬರುತ್ತವೆಯೇ? ಅಲ್ಲದೆ ಗುಬ್ಬಿಗಳಿಗೆಂದು ಕಟ್ಟಿಗೆಯ ಗೂಡು (ಗುಬ್ಬಿಗಳ ಸಂಖ್ಯೆ ಇಳಿಮುಖವಾಗಿದ್ದರಿಂದ ಅವುಗಳ ಸಂತತಿ ಹೆಚ್ಚಿಸಲು ಇಂತಹ ಗೂಡುಗಳನ್ನು ಬೆಳಗಾವಿಯ ಹಿಂಡಲಗಾ ಜೈಲಿನ ಖೈದಿಗಳ ಮನಃಪರಿವರ್ತನ ಕೇಂದ್ರದಲ್ಲಿ ತಯಾರಿಸಲಾಗಿದ್ದನ್ನು ತಂದಿದ್ದು. ನಾಲ್ಕು ತವರುಮನೆಯಲ್ಲಿ. ಎರಡು ಗೂಡು ಗಂಡನ ಮನೆಯಲ್ಲಿ. ಬೆಂಗಳೂರಿಗೆ ತರುವ ಉತ್ಸಾಹವಿದ್ದರೂ ಬಾಡಿಗೆ ಮನೆಯ ಗೋಡೆಗೆ ಮೊಳೆ ಹೊಡೆಯಲು ಮನೆ ಮಾಲೀಕನ ಅನುಮತಿ ಬಗ್ಗೆ ನೆನಪಾಗಿ ಉತ್ಸಾಹ ಇಳಿದು ಹೋಗಿತ್ತು!)

ತಂದಿದ್ದೆನೆಲ್ಲ? ಅದನ್ನು ಗೋಡೆಗೆ ಹಾಕಿದಿರೇ?” ಎಂದು ಕೇಳಿದ್ದಕ್ಕೆ ಅಮ್ಮ “ಓ ಬರದ ಇರ್ತಾವ ಏನು? ಗೂಡ ಗ್ವಾಡಿಗಿ ಹಾಕೇವಿ ಆದ್ರ ಗುಬ್ಬಿಗಳಿಗೂ ಗೊರವಂಕಗಳಿಗೂ ಜಗಳ. ಆ ಒಂದ್ ಇಂಚ್ ತೂತ ಒಳಗ ಈ ಗೊರವಂಕ ಹೆಂಗ ಹೋಗ್ತವೋ ಏನೋ? ಅವುತರ ಜಗಳ ಮುಗದ ಮ್ಯಾಲ್ ನಿಂಗ ಫೋನ್ ಮಾಡಿ ಏನಾತ್ ಅಂತ ಹೇಳ್ತೇನಿ. ಅಂದಂಗ ನಮ್ಮ ಮನಿ ಗೇಟಿನ ಮನಿಪ್ಲಾಂಟ್ ಬಳ್ಳಿ ಹಬ್ಬೇತ್ ಅಲಾ ಅದ್ರೊಳಗ ಬುಲ್ಬುಲ್ ಗೂಡ ಕಟ್ಟೇತಿ. ಕಾವಿಗಿ ಕುಂತ ಎಂಟ್ ದಿನಾ ಆಗೇತಿ. ಇನ್ನೇನ್ ಮರಿ ಬಂದಾವು. ಇದ ಈ ವರ್ಷದ ಮೂರನೇ ಬಾಣಂತನ ನೋಡ ನಮ್ಮನ್ಯಾಗ!” ಎಂದು ಖುಷಿಯಿಂದ ಹೇಳುತ್ತಿದ್ದರೆ, ನನ್ನ ಮನಸ್ಸು ಆಗಲೇ ಕ್ಯಾಲೆಂಡರ್ ನತ್ತ ತಿರುಗಿ ರಜೆಗಳನ್ನು ಹುಡುಕತೊಡಗಿತ್ತು!

© ಅನುಪಮ ಹೆಚ್. ಎಂ.


ಲೇಖನ: ಅನುಪಮಾ ಕೆ. ಬೆಣಚಿನಮರ್ಡಿ .
         ಬೆಂಗಳೂರು ಜಿಲ್ಲೆ
.

Spread the love
error: Content is protected.