ಮಾಲಿನ್ಯದಲ್ಲಿ ಮರೆಯಾದ ಸುಗಂಧ, ಅಸುನೀಗಿದ ಮಾನವತ್ವ !

ಮಾಲಿನ್ಯದಲ್ಲಿ ಮರೆಯಾದ ಸುಗಂಧ, ಅಸುನೀಗಿದ  ಮಾನವತ್ವ !

ಸಸ್ಯಗಳು ಕರೆಯುತ್ತಿವೆ! ಹೌದು, ಸಸ್ಯಗಳು ನಿಜವಾಗಿಯೂ ಕರೆಯುತ್ತಿವೆ. ಆದರೆ ಎಲ್ಲಿಗೆ? ಯಾರನ್ನ? ಹೇಗೆ? ಎಂಬ ಪ್ರಶ್ನೆಗಳು ಬರಲೇ ಬೇಕು, ನಾನೂ ಉತ್ತರಿಸಲೇಬೇಕು. ಈ ಪ್ರಶ್ನೆಗಳಿಗೆ ಹಿಂದಿನಿಂದ ಉತ್ತರಿಸುತ್ತಾ ಹೋದರೆ…

ಸಸ್ಯಗಳು ಹೇಗೆ ಕರೆಯುತ್ತಿವೆ? ಅವು ಮಾತನಾಡಬಲ್ಲವೇ?

ಉತ್ತರ… ಹೌದು ಸಸ್ಯಗಳು ಮಾತನಾಡುತ್ತವೆ. ನಮ್ಮ ನಿಮ್ಮ ಹಾಗೆ ಕನ್ನಡದಲ್ಲೋ, ಇಂಗ್ಲೀಷ್ನಲ್ಲೋ ಅಲ್ಲ. ಬದಲಿಗೆ ತಮ್ಮದೇ ಆದ ರಾಸಾಯನಿಕ ಭಾಷೆಯಲ್ಲಿ. ಇನ್ನೂ ನಿಖರವಾಗಿ ಹೇಳುವುದಾದರೆ ಕೆಲವು ರಾಸಾಯನಿಕಗಳನ್ನು ಸ್ರವಿಸಿ ಗಾಳಿಯಲ್ಲಿ ತೇಲಿಬಿಡುತ್ತವೆ. ಇಂತಹ ವಿವಿಧ ರಾಸಾಯನಿಕದ ವಿವಿಧ ವಾಸನೆಗಳಿಗೆ ಒಂದೊಂದು ಅರ್ಥವಿರುತ್ತದೆ.

ಯಾರನ್ನು ಕರೆಯುತ್ತಿವೆ?

ಸಸ್ಯಗಳ ಕೂಗನ್ನು ಕೀಟಗಳು ಅರ್ಥಮಾಡಿಕೊಳ್ಳಬಲ್ಲವು. ಹೆಚ್ಚಾಗಿ ಕೀಟಗಳನ್ನೇ ಅವು ಆಹ್ವಾನಿಸುವುದು. ಜೊತೆಗೆ ತನ್ನ ಪಕ್ಕದ ಸಸ್ಯಗಳಿಗೆ ಎಚ್ಚರಿಕೆ ನೀಡಲೂ ಸಹ ಹೀಗೆ ಮಾಡುವುದುಂಟು.

ಎಲ್ಲಿಗೆ ಮತ್ತು ಕಾರಣವೇನು?

ಕೀಟಗಳು ಕರೆಗೆ ಓಗೊಟ್ಟು ಸಸ್ಯಗಳ ಬಳಿಗೇ ಬರುತ್ತವೆ. ಏಕೆಂದರೆ ಸಸ್ಯಗಳು ಹೀಗೆ ರಾಸಾಯನಿಕಗಳನ್ನು ಗಾಳಿಯಲ್ಲಿ ಬಿಟ್ಟು ವಾಸನೆಯ ಮೂಲಕ ಕರೆಯುವುದು, ತನಗೆ ಯಾವುದಾದರು ಆಕ್ರಮಣಕಾರಿ ಕೀಟದಿಂದ ಅಥವಾ ಯಾವುದೇ ಪ್ರಾಣಿಯಿಂದ ತೊಡಕಾದಾಗ. ತನಗೆ ತೊಂದರೆ ಮಾಡುವ ಕೀಟ ಬಂದು ದಾಳಿ ಮಾಡಿದರೆ, ದಾಳಿ ಮಾಡುತ್ತಿರುವ ಕೀಟವನ್ನು ತಿನ್ನುವ ಕೀಟಕ್ಕೆ ಈ ರಾಸಾಯನಿಕ ಸಂದೇಶವನ್ನು ವಾಸನೆಯ ಮೂಲಕ ಕಳಿಸಿ ತನ್ನ ಬಳಿಗೆ ಆಹ್ವಾನಿಸುತ್ತದೆ. ಅದು ಬಂದು ತನ್ನನ್ನು ಹಾಳು ಮಾಡುತ್ತಿರುವ ಕೀಟವನ್ನು ತಿನ್ನುವುದರಿಂದ ತನಗಾಗುವ ಹಾನಿಯನ್ನು ಸಸ್ಯಗಳು ತಡೆಯುತ್ತವೆ. ನೀವೂ ಗಮನಿಸಿರಬಹುದು ಹೊಲದಲ್ಲಿನ ಕಳೆಯನ್ನು ಕಿತ್ತರೆ ಒಂದು ವಿಧದ ವಾಸನೆ ಬರುತ್ತದೆ, ಟೊಮ್ಯಾಟೋ ಗಿಡದ ಎಲೆಯನ್ನು ಮುರಿದರೆ ಬೇರೆ ವಿಧದ ವಾಸನೆ ಬರುತ್ತದೆ. ಹೀಗೆ ನಮಗೆ ತಿಳಿಯದ ಹಾಗೇ ಸಸ್ಯಗಳು ತಮ್ಮ ಜೀವರಕ್ಷಣೆಗಾಗಿ ಇಂತಹ ರಹಸ್ಯ ದಾರಿಗಳನ್ನು ಕಂಡುಕೊಂಡಿವೆ. ಅಷ್ಟೇ ಅಲ್ಲದೆ ತನ್ನ ಹತ್ತಿರದ ಸಸ್ಯಗಳಿಗೆ ತನಗೆ ತಗುಲಿದ ರೋಗ ಬರಬಹುದಾದ ಹಾನಿಯನ್ನು ಎಚ್ಚರಿಸಲು ಹೀಗೆ ಮಾಡುವುದುಂಟು. ಹಾಗಾದರೆ ಹೂ ಬಿಡುವ ಸಸ್ಯಗಳ ಹೂವಿನ ಸುಗಂಧಕ್ಕೂ ಇದೇ ತರಹ ಕಾರಣವಿರಬಹುದೇ? ಎಂಬ ಪ್ರಶ್ನೆ ಮೂಡಿದ್ದಲ್ಲಿ ನನ್ನೊಂದಿಗೇ ಇದ್ದೀರೆಂದರ್ಥ.  ಗುಡ್… ಹೌದು ನಿಮ್ಮ ಆಲೋಚನೆ ಉತ್ತಮವಾಗಿದೆ. ಹೂಗಳು ಸೂಸುವ ಸುಗಂಧಕ್ಕೆ ಮುಖ್ಯ ಕಾರಣ ತಮ್ಮ ಪರಾಗಸ್ಪರ್ಶಕ ಕೀಟಗಳನ್ನು ಆಹ್ವಾನಿಸಲು. ಸುಗಂಧವನ್ನು ಗಾಳಿಯಲ್ಲಿ ತೇಲಿ ಬಿಡುವುದರಿಂದ ಅದನ್ನು ಗ್ರಹಿಸಿದ ದುಂಬಿಗಳು, ಪತಂಗಗಳಂತಹ ವಿವಿಧ ಪರಾಗಸ್ಪರ್ಶಕ ಕೀಟಗಳನ್ನು ಗಂಧ ಬೀಸಿ ಕರೆಯುತ್ತವೆ. ಮಕರಂದಕ್ಕಾಗಿ ಬರುವ ಅವುಗಳು ತಮಗೆ ತಿಳಿಯದ ಹಾಗೇ ಸಸ್ಯಗಳ ವಂಶಾಭಿವೃದ್ಧಿಯಲ್ಲಿ ಮಹಾ ಪಾತ್ರ ನಿರ್ವಹಿಸಿ ನಿರ್ಗಮಿಸಿಬಿಡುತ್ತವೆ. (ಇಂತಹ ಹತ್ತು ಹಲವು ಅಚ್ಚರಿಗಳನ್ನು ಸಸ್ಯಗಳು ತಮ್ಮಲ್ಲಿ ಅಡಗಿಸಿಕೊಂಡಿವೆ. ಸಸ್ಯದ ನಿಗೂಢ ಅಚ್ಚರಿಯ ವಿಷಯಗಳ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳಲು ‘what plants talk about’ ಎಂಬ ಸಾಕ್ಷ್ಯಚಿತ್ರವನ್ನು ನೋಡಿ, ಯೂಟ್ಯೂಬ್ ನಲ್ಲಿದೆ).

Blooming Canola Rape Agriculture Field

ಎಷ್ಟು ಚಂದದ ವ್ಯವಸ್ಥೆ ಅಲ್ಲವೇ… ಕೆಲವೊಮ್ಮೆ ಇಂತಹ ವಿಷಯಗಳನ್ನು ತಿಳಿದರೆ ಅಥವಾ ನೆನೆಸಿಕೊಂಡರೆ ನಾವು ನಿರ್ಲಕ್ಷ್ಯವಾಗಿ ನೋಡುವ ಒಂದು ಸಾಮಾನ್ಯ ಗಿಡ ಇಷ್ಟೆಲ್ಲಾ ಮಾಡುತ್ತದೆಯೇ ಎಂದು ಅಚ್ಚರಿಯಾಗುತ್ತದೆ. ಆದರೆ ಇಂತಹ ಸಸ್ಯಗಳ ಅಚ್ಚರಿಯ ಜೀವನದಲ್ಲಿ ನಮ್ಮ ಪಾತ್ರ ಏನೆಂದು ಗೊತ್ತೇನು? ಅವುಗಳಿಗೆ ಜೀವನವೇ ಇಲ್ಲದ ಹಾಗೆ ಮಾಡುವುದು! ಹೌದು, ನಾವು ಬಳಸುವ ವಸ್ತುಗಳನ್ನು ತಯಾರಿಸುವ ಕಾರ್ಖಾನೆಗಳು, ಸಂಚಾರಕ್ಕೆ ಬಳಸುವ ಮೋಟಾರ್ ವಾಹನಗಳು ಹಾಗೂ ಇನ್ನಿತರ ವಸ್ತುಗಳು ಉಗುಳುವ ಅನಿಲಗಳು ವಾಯು ಮಾಲಿನ್ಯಕ್ಕೆ ನೇರ ಕಾರಕಗಳಾಗಿವೆ. ಅಷ್ಟೇ ಅಲ್ಲದೇ ಹೂವುಗಳು ಸೂಸುವ ಸುಗಂಧಗಳನ್ನೇ ನಕ್ಷೆಯಾಗಿಸಿಕೊಂಡು, ಆಹಾರವನ್ನರಸಿ (ಮಕರಂದ) ಬರುವ ಕೀಟಗಳ ಹೊಟ್ಟೆಯ ಮೇಲೆ ಹೊಡೆಯುತ್ತಾ ಹಾಗೂ ಆಹಾರ ನೀಡಿ ತನ್ನ ಸಂತಾನದ ಉತ್ಪತ್ತಿಗೆ ಜರುಗಬೇಕಾದ ಪರಾಗಸ್ಪರ್ಶ ಕ್ರಿಯೆಯನ್ನು ನೆರೆವೇರಿಸಿಕೊಳ್ಳುತ್ತಿದ್ದ ಆ ಹೂವಿನ ಸಸ್ಯಗಳ ಸಂತಾನ ನಿಲ್ಲಿಸಿ, ಈ ಎರಡೂ ಜೀವಗಳಿಗೆ ಮತ್ತು ಅವುಗಳ ನಡುವಿನ ಅವಿನಾಭಾವ ಸಂಬಂಧಕ್ಕೆ ಮಾರಕವಾಗಿ ಪರಿಣಮಿಸಿದೆ.

ಸರಿ! ತಿಳಿಯಿತು, ಸ್ವಲ್ಪ ಬಿಡಿಸಿಯೇ ಹೇಳುತ್ತೇನೆ. ಚಿಟ್ಟೆ, ದುಂಬಿಗಳಂತಹ ಕೀಟಗಳಿಗೆ ನಮ್ಮ ನಿಮ್ಮ ಹಾಗೆ ಮೂಗು ಇಲ್ಲ. ಅವುಗಳು ವಾಸನೆಯನ್ನು ಗ್ರಹಿಸುವುದು ತಮ್ಮ ಸ್ಪರ್ಶತಂತುಗಳಿಂದ (ಆಂಟೆನಾ). ಅದರ ಆಧಾರದ ಮೇಲೆಯೇ ಅವುಗಳು ಹೂವನ್ನು ಹುಡುಕಿಕೊಂಡು ಹೋಗಿ ಮಕರಂದ ಹೀರಿ ಜೀವನ ಸಾಗಿಸುತ್ತಿರುವುದು. ಆದರೆ ವಾಯುಮಾಲಿನ್ಯದ ಪರಿಣಾಮದಿಂದಾಗಿ ಹೂವುಗಳು ಹೊರಬಿಡುವ ಸುಗಂಧವನ್ನು ಕೀಟಗಳು ಗ್ರಹಿಸಲಾಗುತ್ತಿಲ್ಲ. ಇದರಿಂದಾಗಿ ಸಸ್ಯಗಳ ಪರ ಕೀಟಗಳು ಸುಳಿಯದೇ ಪರಾಗಸ್ಪರ್ಶ ಮತ್ತು ಕೀಟಗಳ ಆಹಾರ, ಇವೆರಡಕ್ಕೂ ಕುತ್ತು ಬಂದಿದೆ ಎನ್ನುತ್ತಿದೆ ಹೊಸ ಸಂಶೋಧನೆಯೊಂದು. ಇಂತಹ ಸಂಶೋಧನೆಗಳು ಮುಂಚೆಯೇ ಬಂದಿವೆಯಾದರೂ ಅವುಗಳನ್ನು ಕೇವಲ ಕಂಪ್ಯೂಟರ್ ಮಾದರಿಗಳ ಆಧಾರದ ಮೇಲೆ ಊಹಿಸಿದ್ದರು. ಇದು ವಾಸ್ತವದಲ್ಲಿ ಜರುಗುತ್ತದಯೇ? ಇಲ್ಲವೇ? ಎಂಬ ಪ್ರಶ್ನೆಗಳಿಗೆ ಪುರಾವೆ ಸಹಿತ ಉತ್ತರವಿರಲಿಲ್ಲ. ಅದಕ್ಕೆ ಉತ್ತರವನ್ನು ಈ ಹೊಸ ಸಂಶೋಧನೆ ಮಾಡಿದ ಜೇಮ್ಸ್ ರ್ಯಾಲ್ಸ್ ಕಂಡುಹಿಡಿದಿದ್ದಾರೆ.

©  NEIL MULLINGER

ಜೇಮ್ಸ್ ಇಂಗ್ಲೆಂಡಿನ ರೀಡಿಂಗ್ ವಿಶ್ವವಿದ್ಯಾಲಯದ ಜೀವಶಾಸ್ತ್ರಜ್ಞ. ಕಪ್ಪು ಸಾಸಿವೆ ಗಿಡದ ಮೇಲೆ ಸಂಶೋಧನೆ ಮಾಡಲು ಅವರು ಒಂದು ಕಪ್ಪು ಸಾಸಿವೆ ಬೆಳೆಯುವ ಹೊಲದಲ್ಲಿ 8 ಮೀಟರ್ ವ್ಯಾಸದ ಕಪ್ಪು ಕೊಳವೆಯ ವೃತ್ತಾಕಾರವನ್ನು ಚಿತ್ರದಲ್ಲಿ ತೋರಿಸಿರುವ ಹಾಗೆ ಉಂಗುರಗಳನ್ನು ರಚಿಸಲಾಯಿತು. ಕೀಟಗಳು ಒಳಗೆ ಹೊರಗೆ ಸಂಚರಿಸಲು ಸುಲಭವಾಗಲೆಂದು ಮಾದರಿಯನ್ನು ತೆರೆದ ಹಾಗೆ ಇಡಲಾಯಿತು. 8 ಈ ತರಹದ ಮಾದರಿಗಳನ್ನು ರಚಿಸಿ 2 ಉಂಗುರಗಳಲ್ಲಿ ಡೀಸೆಲ್ ಹೊಗೆಯನ್ನೂ, ಇನ್ನೆರೆಡು ಉಂಗುರಗಳಲ್ಲಿ ಓಝೋನ್ ಅನ್ನೂ, ಮತ್ತೆರೆಡು ಉಂಗುರಗಳಲ್ಲಿ ಇವೆರಡೂ ಹೊಗೆಯನ್ನು ಬಿಟ್ಟು, ಉಳಿದೆರೆಡು ಉಂಗುರಗಳಲ್ಲಿ ಏನನ್ನೂ ಬಿಡದೆ ಹಾಗೆ ಇಡಲಾಯಿತು. ಇಲ್ಲಿ ಬಳಸಿದ ಮಾಲಿನ್ಯ ಕಾರಕ ಹೊಗೆಗಳ ಪ್ರಮಾಣ ಇಂಗ್ಲೆಂಡಿನ ಒಂದು ಸಾಮಾನ್ಯ ವಾಹನ ಸಂಚಾರ ಮಾಡುವ ಪ್ರದೇಶದಲ್ಲಿ ದೊರೆಯುವ ಪ್ರಮಾಣದ್ದೇ ಆಗಿತ್ತು. ಸಾಸಿವೆ ಗಿಡಗಳು ಹೂಬಿಡುವ ಕಾಲದಲ್ಲಿ ಪ್ರತೀ ದಿನ ಎಲ್ಲಾ ಉಂಗುರಗಳಿಗೆ ಎಷ್ಟೆಷ್ಟು ಕೀಟಗಳು ಬರುತ್ತವೆ? ಎಷ್ಟು ಬಾರಿ ಬರುತ್ತವೆ? ಎಂದು ಸತತ ಎರಡು ವರ್ಷಗಳ ಕಾಲ ದಾಖಲಿಸಿಕೊಳ್ಳಲಾಯಿತು. ‘ಫಲಿತಾಂಶವು ನಾವು ಊಹಿಸಿದ್ದಕ್ಕಿಂತ ತೀವ್ರವಾಗೇ ಇತ್ತು’ ಎನ್ನುತ್ತಾರೆ ಜೇಮ್ಸ್. ಯಾವುದೇ ಹೊಗೆ (ಮಾಲಿನ್ಯಕಾರಕ ಅನಿಲ) ಯನ್ನು ಬಿಡದ ಉಂಗುರಕ್ಕೆ ಹೋಲಿಸಿದರೆ ಡೀಸೆಲ್ ಮತ್ತು ಓಝೋನ್ ಎರಡೂ ಬಿಟ್ಟ ಉಂಗುರದ ಒಳಗೆ 90% ಕಡಿಮೆ ಕೀಟಗಳು ತನ್ನ ಆಹಾರ ನೀಡುವ ಹೂಗಳಲ್ಲಿಗೆ ಬರುತ್ತಿದ್ದವು. ಕೆಲವು ಬಾರಿ ಕೇವಲ 30% ಕ್ಕಿಂತ ಕಡಿಮೆ ಕೀಟಗಳು ಮಾಲಿನ್ಯ ಹೊಗೆ ಬಿಡುತ್ತಿದ್ದ ಉಂಗುರದ ಒಳಗೆ ಬರುತ್ತಿದ್ದುದು. ಇದು ವಿಜ್ಞಾನಿಗಳಿಗೆ ಅಚ್ಚರಿಯನ್ನುಂಟುಮಾಡಿತು. ಏಕೆಂದರೆ ಈ ಪ್ರಯೋಗದಲ್ಲಿ ಪ್ರಯೋಗಿಸಿದ ಅನಿಲಗಳು ಇಂಗ್ಲೆಂಡ್ ಸರ್ಕಾರ ವಿಧಿಸಿದ್ದ ಮಾಲಿನ್ಯ ಹೊಗೆಯ ಮಾನದಂಡಕ್ಕಿಂತ ಕಡಿಮೆಯೇ ಇತ್ತು. ಆದರೂ ಹೆಚ್ಚಿನ ಸಂಖ್ಯೆಯಲ್ಲಿ ಕೀಟಗಳು ಹೂವನ್ನು ಅರಸಿ ಬರಲು ಸುಗಂಧ ದೊರಕದೇ ಆಗಿದೆ.

©  PHILIP STEWART_ISTOCK_GETTY IMAGES PLUS

ಆದರೆ ಈ ಫಲಿತಾಂಶಗಳು ಬೆಂಗಳೂರಿನ NCBSನ ನಗರ ಪರಿಸರಶಾಸ್ತ್ರಜ್ಞೆ ಗೀತಾ ತಿಮ್ಮೇಗೌಡರಿಗೆ ಅಚ್ಚರಿಯಾಗುವುದಿಲ್ಲ. ಏಕೆಂದರೆ ವಾಯು ಮಾಲಿನ್ಯ  ಜೇನುಹುಳುಗಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ  ಎಂದು ಅವರು ಮುಂಚೆಯೇ ಒಂದು ಸಂಶೋಧನೆಯನ್ನು  ಮಾಡಿರುವುದರಿಂದ ಅವರಿಗೆ ಈ ಫಲಿತಾಂಶ ಸ್ವಲ್ಪ ಮಟ್ಟಿಗೆ ತಿಳಿದಿತ್ತು. ಮನುಷ್ಯ ಮತ್ತು ಕೀಟಗಳ ಈಗಿನ ಜೀವನ ಮತ್ತು ಅವುಗಳ ಭವಿಷ್ಯ ವಾಯು ಮಾಲಿನ್ಯ ಎಷ್ಟರ ಮಟ್ಟಿಗೆ ಇದೆ ಎಂಬುದರ ಮೇಲೆಯೇ ನಿರ್ಧರಿಸಿದೆ ಎಂದು ಅಭಿಪ್ರಾಯಪಡುತ್ತಾರೆ. ಅವರ ಈ ಮಾತುಗಳು ಅಕ್ಷರಶಃ ಸರಿಯಾಗಿದೆ. ಏಕೆಂದರೆ ಈಗಾಗಲೇ ಹವಾಮಾನ ಬದಲಾವಣೆ, ಕಳೆ-ಕೀಟನಾಶಕಗಳಂತಹ ರಾಸಾಯನಿಕ ವಸ್ತುಗಳ ಸಿಂಪಡಿಕೆಗಳಂತಹ ನಮ್ಮ ಮಹತ್ಕಾರ್ಯಗಳಿಂದ ಅವುಗಳ ಮತ್ತು ನಮಗೇ ತಿಳಿಯದ ಹಾಗೆ ನಮ್ಮ ಅವನತಿಗೆ ನಾವೆ ನಾಂದಿ ಹಾಡಿಯಾಗಿದೆ.

ಹೇಗೆಂದು ಯೋಚಿಸುತ್ತಿದ್ದೀರಾ, ನಾವು ದಿನನಿತ್ಯದಲ್ಲಿ ತಿನ್ನಲು ಬಳಸುವ 10 ಆಹಾರ ಪದಾರ್ಥಗಳಲ್ಲಿ 7 ಆಹಾರ ಪದಾರ್ಥಗಳು ನಮ್ಮ ತಟ್ಟೆಗೆ ಬರುವುದು ಈವರೆಗೆ ಹೇಳಿದ ಕೀಟ ಮಹಾಶಯರ ಪರಾಗಸ್ಪರ್ಶದಿಂದಲೇ. ಹಾಗಿದ್ದರೆ ನೀವೇ ಹೇಳಿ, ಯಾರ ಅವನತಿಗೆ ನಾಂದಿಯಿದು?

© fn_WhiteMustard

ಮೇಲೆ ಹೇಳಿದ ಸಂಶೋಧನೆಯ ವಿಷಯ ವಸ್ತು ಹೂವಿನ ಪರಾಗಸ್ಪರ್ಶ ಮತ್ತು ಕೀಟಗಳ ಆಹಾರವೇ ಆದರೂ ವಾಯು ಮಾಲಿನ್ಯದ ಪರಿಣಾಮ ಇಷ್ಟೇ ಎಂದುಕೊಂಡರೆ, ಅದು ನಮ್ಮ ಮೂರ್ಖತನವಲ್ಲದೆ ಬೇರೇನೂ ಅಲ್ಲ. ಏಕೆಂದರೆ ಇದೇ ವಾಯು ಮಾಲಿನ್ಯದ ಪ್ರಭಾವ ಕೀಟಗಳ ಮೇಲೆ ಬೇರೆ ಕೋನದಿಂದಲೂ ಇದೆ. ತನ್ನ ಸಂತಾನವನ್ನು ಕೋಟ್ಯಾಂತರ ವರ್ಷಗಳಿಂದ ಮುಂದುವರೆಸಿಕೊಂಡು ಬಂದಿರುವ ಕೀಟಗಳು ತನ್ನ ಸಂಗಾತಿಯನ್ನು ಹುಡುಕುವುದೂ ಸಹ ವಾಸನೆಯಿಂದಲೇ. ನೋಡಿ ಕೇವಲ ವಾಯು ಮಾಲಿನ್ಯವೇ ಕೀಟಗಳ ಉಳಿವಿನ ಮೇಲೆ ಒಂದಕ್ಕಿಂತ ಹೆಚ್ಚು ದಿಕ್ಕುಗಳಿಂದ ಆಕ್ರಮಣ ಮಾಡುತ್ತಿದೆ. ಸಮಸ್ಯೆ ಏನೆಂದು ಅರಿವಾಯಿತು. ಮುಂದಿನ ಹೆಜ್ಜೆ ಪರಿಹಾರದ ಕಡೆಗೆ ಇಡಬೇಕು. ಅರೇ ನಾವು ನಗರವಾಸಿಗಳು, ನಮ್ಮಿಂದೇನಾದೀತು, ನಮಗೆ ಸಮಯವಿಲ್ಲ. ನಮಗೇನೂ ತಿಳಿದಿಲ್ಲ, ನಮ್ಮ ಪಾಡಿಗೆ ನಮ್ಮ ಜೀವನ ನಡೆಸಿಕೊಂಡು ಹೋಗುತ್ತಿದ್ದೇವೆಂಬ ಹುರುಳಿಲ್ಲದ ಸಬೂಬುಗಳನ್ನು ಬದಿಗಿಟ್ಟರೆ, ಪರಹಾರ ಅಪಾರ. ಕೆಲವು ಉದಾಹರಣೆಗಳನ್ನು ನೀಡುವುದಾದರೆ,

  1.  ಸರ್ವೇ ಸಾಮಾನ್ಯನೂ ಸಹ ತನ್ನ ದಿನನಿತ್ಯದಲ್ಲಿ ಎಷ್ಟೋ ಪ್ಲಾಸ್ಟಿಕ್ಕನ್ನು ಬಳಸುತ್ತಾನೆ. ಹೀಗೆ ಬಳಸಿ ಸುಡುವ ಪ್ಲಾಸ್ಟಿಕ್ನಿಂದಲೂ ಎಷ್ಟೋ ವಾಯು ಮಾಲಿನ್ಯವಾಗುತ್ತದೆ. ಸುಡದೇ ಬಿಸಾಡಿದ ಅಥವಾ ತ್ಯಾಜ್ಯ ಸಂಗ್ರಹಿಸುವ ವಾಹನಗಳಿಗೆ ಹಾಕಿದ ಎಲ್ಲಾ ಪ್ಲಾಸ್ಟಿಕ್ ಗಳೂ ಮರುಬಳಕೆ ಮಾಡಲಾಗುವುದಿಲ್ಲ. ಕೇವಲ 5% ಮಾತ್ರ ಹಾಗೆ ಮರುಬಳಕೆ ಮಾಡಲಾಗುತ್ತಿದೆ. ಹಾಗಾಗಿ ‘ಪ್ಲಾಸ್ಟಿಕ್ ಜಾಗೃತ’ವಾಗಿ ವಸ್ತುಗಳನ್ನು ಕೊಳ್ಳುವುದು ನಮ್ಮ ಮುಖ್ಯ ಜವಾಬ್ದಾರಿಯಾಗಿದೆ.
  2. ಮನೆಯ ಮುಂದೆ ಖರ್ಚು ಮಾಡಿ ಹಾಕುವ ಹುಲ್ಲಿನ ಹಾಸಿಗೆಯಿಂದ ಮನೆಯ ಚಂದ ಹೆಚ್ಚುವುದೇ ವಿನಃ ಅದನ್ನು ಹಸಿರಾಗಿಡಲು ಇನ್ನೂ ಹೆಚ್ಚು ಖರ್ಚಾಗುತ್ತದೆ. ಹಾಗಾಗಿ ಅಂತಹ ಹುಲ್ಲಿನ ಹಾಸಿಗೆಯ ಬದಲು ದೇಶೀಯ/ಸ್ಥಳೀಯ ಹೂ ಬಿಡುವ ಸಸ್ಯಗಳನ್ನು ಹೆಚ್ಚೆಚ್ಚು ಹಾಕುವುದರಿಂದ ಕೀಟಗಳ ಬದುಕಿಗೆ ಹೆಚ್ಚು ಅವಕಾಶ ನೀಡಿದಂತಾಗುತ್ತದೆ.
  3.  ಇವುಗಳ ಜೊತೆಗೆ ಸಂಚರಿಸಲು ಸಾರ್ವಜನಿಕ ವಾಹನ ವ್ಯವಸ್ಥೆ ಬಳಸುವುದು, ವಿದ್ಯುತ್ ಚಾಲಿತ ವಾಹನಗಳ ಅಥವಾ ಕಡಿಮೆ ದೂರವಾದರೆ ವಿದ್ಯುತ್ತೇ ಬಳಸದ ಸೈಕಲ್ ನಂತಹ ವಾಹನಗಳನ್ನು ಬಳಸುವುದು ಇತ್ಯಾದಿ.
©  JASON T TRBOVICH

ಮೂಲ ಲೇಖನ: ScienceNewsforStudents

ಲೇಖನ: ಜೈಕುಮಾರ್ ಆರ್.
    ಡಬ್ಲ್ಯೂ
.ಸಿ.ಜಿ, ಬೆಂಗಳೂರು

Print Friendly, PDF & Email
Spread the love
error: Content is protected.