ಪಾರದರ್ಶಕ ಪಾತರಗಿತ್ತಿ!
© A.POMERANTZ
ದಿನ, ದಿನಾಂಕ, ಗಳಿಗೆಗಳು ನೆನಪಿಲ್ಲ. ಅಂದು ನಾನು ಮತ್ತು ಅಕ್ಕ, ಅಣ್ಣನ ಜೊತೆಗೆ ಹೊಗೇನಕಲ್ ಜಲಪಾತಕ್ಕೆ ಹೊರಟಿದ್ದೆವು. ನಮ್ಮೂರಿನಿಂದ ಸುಮಾರು 100 ಕಿ.ಮೀ ದೂರವಿರುವ ಕಾವೇರಿಯ ಕುಣಿತವನ್ನು ನೋಡಲು ತಮಿಳುನಾಡಿನ ಹಳ್ಳಿಗಾಡುಗಳನ್ನೂ, ಅರಣ್ಯ ಪ್ರದೇಶಗಳನ್ನು ಸಾಗಿ ಹೋಗಬೇಕಿತ್ತು. ಬಸ್ಸಿನಲ್ಲಿ ಕೆಲವೇ ಕೆಲವು ಕಿ. ಮೀ. ಗಳಷ್ಟು ದೂರ ಹೋದರೆಯೇ ಪ್ರವಾಸದಂತೆ ಅನಿಸುತ್ತಿದ್ದ ದಿನಗಳವು. ಅಂತದುದರಲ್ಲಿ ಕಾರಿನಲ್ಲಿ ನಿಜವಾಗಲೂ ಹೀಗೆ ಪ್ರವಾಸ ಹೋಗುವುದೆಂದರೆ, ಕನಸು ನನಸಾಗುವ ಪೂರ್ಣ ಅನುಭವದಂತೆ ಅಂದು ನನಗೆ ಅನಿಸಿತ್ತು. ಯಾರಿಗಾದರೂ ಅದನ್ನು ಹೇಳೋಣವೆಂದರೆ, ದೊಡ್ಡವರು ಮಕ್ಕಳ ಮಾತನ್ನು ಗಂಭೀರವಾಗಿ ಎಲ್ಲಿ ತೆಗೆದುಕೊಳ್ಳುತ್ತಾರೆ ಎಂದುಕೊಂಡು ಖುಷಿಯನ್ನು ಒಳಗೇ ಅನುಭವಿಸಿಕೊಂಡೆ. ಪ್ರವಾಸ ಶುರುವಾಯಿತು, ದೂರವಾದಂತೆ ಮನೆಯ ಗಾತ್ರ ಸಣ್ಣದಾಗುತ್ತಿತ್ತು. ಖುಷಿ ಹೆಚ್ಚಾಗುತ್ತಿತ್ತು. ಬೇರೆಲ್ಲಾ ಸಮಯದಲ್ಲಿ ನಡೆದು ಹೋಗುವಾಗ ನೋಡುತ್ತಿದ್ದ ಅದೇ ಬೆಟ್ಟ, ಗುಡ್ಡ, ಮರಗಳು ಅಂದೇಕೋ ಭಿನ್ನವಾಗಿ ಕಾಣುತ್ತಿತ್ತು. ಬಹುಶಃ ನೀವೆಲ್ಲಾ ಇಲ್ಲೇ ಇದ್ದೀರಿ ಆದರೆ ನಾನು ಇಂದು ಪ್ರವಾಸ ಹೋಗುತ್ತಿದ್ದೇನೆ, ಅದೂ ಕಾರಿನಲ್ಲಿ ಎಂಬ ಜಂಬದಿಂದ ಎಂದು ಅನಿಸುತ್ತದೆ. ದಾರಿಯಲ್ಲಿ ಕಂಡ ಪ್ರತೀ ಹೊಸ ಜಾಗವೂ ಹೊಸ ಅನುಭವವನ್ನು ಕೊಡುತ್ತಿತ್ತು. ಅಂತಹುದರಲ್ಲಿ ಅಣ್ಣ ನಮಗೆ ಪಕ್ಷಿ ವೀಕ್ಷಣೆಯ ರುಚಿಯನ್ನು ತುಟಿಯ ಮೇಲೆ ಸ್ವಲ್ಪ ಸವರಿದ್ದರಿಂದ ಅದು ಸಹಜವಾಗಿಯೇ ನಡೆದಿತ್ತು. ನಮ್ಮ ದೃಷ್ಟಿಯಲ್ಲಿ ಪಕ್ಷಿ ವೀಕ್ಷಣೆ ಎಂದರೆ ಪಕ್ಷಿಯನ್ನು ಕಂಡೊಡನೆ ಫೋಟೋ ಕ್ಲಿಕ್ಕಿಸಿ ಅದರ ಹೆಸರನ್ನು ಗುರುತಿಸಿ ನಮ್ಮ ಪಕ್ಷಿವೀಕ್ಷಣೆಯ ಪಟ್ಟಿಯಲ್ಲಿ ಸೇರಿಸಿ ಪಟ್ಟಿಯ ಉದ್ದ ಹೆಚ್ಚಿಸುವುದಲ್ಲ. ಬದಲಿಗೆ ಅವುಗಳ ವೀಕ್ಷಣೆ, ನಡವಳಿಕೆ ಮತ್ತು ಬೆರಗಾಗಿಸುವಂತಹ ಜೀವನಶೈಲಿಯನ್ನು ಅನುಭವಿಸುವುದೇ ಮುಖ್ಯವಾಗಿತ್ತು. ಇನ್ನೂ ನನಗೆ ನೆನಪಿದೆ, ನಮ್ಮ ಸುತ್ತ ಮುತ್ತಲೂ ನೀಲಿ, ಕಾಫಿ, ಬಿಳಿ ಬಣ್ಣಗಳಲ್ಲಿರುವ ಮಿಂಚುಳ್ಳಿಗಳನ್ನು ನೋಡುತ್ತಿದ್ದ ನನಗೆ, ಕಪ್ಪು-ಬಿಳಿ ಮಿಂಚುಳ್ಳಿಯನ್ನು ಕಂಡಾಗ ಅದನ್ನು ಮಿಂಚುಳ್ಳಿಯೇ ಎಂದು ನಂಬಲು ಸಾಧ್ಯವೇ ಆಗಿರಲಿಲ್ಲ. ನಂತರದ ಪ್ರತೀ ನಿಮಿಷವೂ ಹೊಸದಂತೆ ಕಾಣುತ್ತಿತ್ತು. ಹೀಗೆ ಸಾಗುತ್ತಿದ್ದಾಗ ಮಧ್ಯದಲ್ಲಿ ಕಾರು ನಿಂತಿತು.
ಕಾರು ನಿಂತ ಸೂಚನೆ ಅಲ್ಲಿ ಯಾವುದೋ ಹೊಸ ಪಕ್ಷಿಯೋ ಪ್ರಾಣಿಯೋ ಕಂಡಿತೆಂದು ಅರ್ಥ. ಅದಕ್ಕೇ ಅಣ್ಣನನ್ನು ಕೇಳದೆಯೇ ಏನಿರಬಹುದೆಂದು ಕಣ್ಣುಗಳು ಎಲ್ಲಾ ದಿಕ್ಕುಗಳಲ್ಲೂ ನೋಡತೊಡಗಿದವು. ಅಂಥದ್ದೇನೂ ಕಾಣಲಿಲ್ಲ. ಆದರೆ ಅಣ್ಣನ ಮುಖದಲ್ಲಿ ಮಾತ್ರ ಮಂದಹಾಸವಿದೆ. ಹಾಗಾದರೆ ಖಂಡಿತವಾಗಿಯೂ ಇಲ್ಲೇ ಎಲ್ಲೋ ಏನೋ ಇದೆ, ಎಂದು ಖಚಿತವಾಯ್ತು. ಆದರೆ ನಮ್ಮ ಕಣ್ಣುಗಳಿಗೆ ಏನೂ ಸಿಗಲಿಲ್ಲ. ನಂತರ ಅಣ್ಣನ ಕೈಯನ್ನು ಅನುಸರಿಸಿ ಆ ದಿಕ್ಕಿನಲ್ಲಿ ನೋಡಿದೆವು, ಒಂದೆರೆಡು ನೀಲಿ ಬಣ್ಣ ಮತ್ತು ಕಪ್ಪು ಪಟ್ಟಿಗಳ ಚಿಟ್ಟೆಗಳು ಹಾರುತ್ತಿದ್ದವು. ಓಹ್ ಈ ಚಿಟ್ಟೆಗಳು ನಮ್ಮ ಜಾಗದಲ್ಲೂ ಇವೆಯಲ್ಲಾ, ನಾವೂ ನೋಡಿದ್ದೇವೆ ಎಂದುಕೊಳ್ಳುತ್ತಿದ್ದೆ. ಕೆಲವು ಸೆಕೆಂಡುಗಳನ್ನು ಗಮನಿಸಿದಾಗಲೇ ತಿಳಿದದ್ದು ಹಾರಿ ಕೂರುತ್ತಿದ್ದ ಗಿಡದಲ್ಲಿ ಎಲೆಗಳೇ ಕಾಣುತ್ತಿರಲಿಲ್ಲ. ಬದಲಿಗೆ ಎಲ್ಲಾ ಎಲೆಗಳ ಜಾಗದಲ್ಲಿ ಬರೀ ಚಿಟ್ಟೆಗಳೇ ಇದ್ದವು. ಅಂತಹ ಗಿಡಗಳೂ ಸಾವಿರದಲ್ಲಿದ್ದವು. ಅಂದರೇ ಚಿಟ್ಟೆಗಳು… ತಾಳಲಾರದೇ ಇಳಿದು ಆ ಚಿಟ್ಟೆ ಸಮುದ್ರಕ್ಕೇ ಇಳಿದುಬಿಟ್ಟೆವು. ನಮ್ಮ ಆಗಮನದ ಅರಿವಾದ ಚಿಟ್ಟೆಗಳು ಮೇಲೆ ಎದ್ದವು. ಅಷ್ಟು ಚಿಟ್ಟೆಗಳು ಮೇಲೆದ್ದು ಹಾರುತ್ತಾ ಇರುವುದನ್ನು ನೋಡಲು ನಮಗೆ ಎರಡು ಕಣ್ಣು ಸಾಲುತ್ತಿಲ್ಲ ಎನಿಸಿತು. ಅಷ್ಟು ಚಿಟ್ಟೆಗಳನ್ನು ಅಷ್ಟು ಸುಂದರವಾಗಿ ನೋಡಿದ ಮಧುರ ಕ್ಷಣ ಅದು. ಅನುಭವಿಸಿದರೇನೆ ಅರಿವಾಗುವುದು.
ಚಿಟ್ಟೆಗಳೇ ಹಾಗೆ, ಬಣ್ಣದ ಅಂಗಡಿಗೆ ಹೋಗಿ ಬಣ್ಣಗಳಲ್ಲಿ ಬಿದ್ದು ಬಚಾವಾಗಿ ಬಂದಂತಿರುವ ಅವುಗಳು ಹಾರುವುದನ್ನು ಕಂಡರೆ ಎಂಥವರಿಗೂ ಏನೋ ಒಂಥರಾ ಖುಷಿಯಾಗುತ್ತದೆ. ಆದರೆ ಇಲ್ಲೊಂದು ಬಗೆಯ ಚಿಟ್ಟೆ ತನ್ನ ರೆಕ್ಕೆಗಳನ್ನು ಪಾರದರ್ಶಕವಾಗಿ ಮಾಡಿಕೊಂಡಿದೆ. ಅಂದರೆ ಚಿಟ್ಟೆ ರೆಕ್ಕೆಯ ಹೆಚ್ಚಿನ ಭಾಗದಲ್ಲಿ ಬಣ್ಣಗಳೇ ಇಲ್ಲ. ಏಕೆ ಹೀಗೆ? ಎನ್ನುವ ಪ್ರಶ್ನೆಯ ಬದಲಿಗೆ ಹೇಗೆ ಹೀಗೆ? ಎಂಬ ಪ್ರಶ್ನೆಯ ಉತ್ತರವನ್ನು ಮೊದಲು ನೋಡೋಣ. ‘ಗಾಜಿನ ರೆಕ್ಕೆಯ ಚಿಟ್ಟೆಗಳು’ ಎಂದು ಕರೆಯಲ್ಪಡುವ ಇವುಗಳ ರೆಕ್ಕೆಯನ್ನು ಸೂಕ್ಷ್ಮದರ್ಶಕದಲ್ಲಿ ನೋಡಿದಾಗ ಪಾರದರ್ಶಕ ರೆಕ್ಕೆಯ ಮೇಲೆ ಸೂಕ್ಷ್ಮ ಗಾತ್ರದ ಹುರುಪುಗಳು ಇದ್ದದನ್ನು ಗಮಸಿದರು ಕ್ಯಾಲಿಫೊರ್ನಿಯಾ ವಿಶ್ವವಿದ್ಯಾಲಯದ ಆರನ್ ಪೋಮೇರಾಂಟ್ಸ್. ಈ ಪಾರದರ್ಶಕ ರೆಕ್ಕೆಗಳ ಚಿಟ್ಟೆಗಳು ಇವರನ್ನು ಯಾವಾಗಲೂ ಚಕಿತಗೊಳಿಸುತ್ತಿದ್ದವು. ಆದ್ದರಿಂದ ಇವುಗಳನ್ನು “ನಿತ್ಯ ಹರಿದ್ವರ್ಣದಲ್ಲಿ ಹಾರಾಡುವ ಕಾಣದ ವಿಮಾನಗಳಿವು” ಎಂದು ಕರೆಯುತ್ತಿದ್ದರು.
ಕಾನ್ಫೋಕಲ್ ಮತ್ತು ಎಲೆಕ್ಟ್ರಾನ್ ಸೂಕ್ಷ್ಮದರ್ಶಕದಲ್ಲಿ ಇದರ ರೆಕ್ಕೆಗಳನ್ನು ವೀಕ್ಷಿಸಲಾಯಿತು. ಕಪ್ಪು ಪಟ್ಟಿಗಳಿರುವ ಜಾಗದಲ್ಲಿ ಎಲೆಗಳ ಆಕಾರದ ಸೂಕ್ಷ್ಮ ಹುರುಪುಗಳು ಹೆಚ್ಚಾಗಿದ್ದವು. ಈ ಜಾಗದಲ್ಲಿ ಕೇವಲ 2% ಮಾತ್ರ ಪಾರದರ್ಶಕವಾಗಿತ್ತು. ಪಾರದರ್ಶಕ ರೆಕ್ಕೆಯ ಭಾಗದಲ್ಲಿ ಕೇವಲ ಕೂದಲಿನಾಕಾರದ ಎಳೆಗಳಿದ್ದವು. ಇಲ್ಲಿ ಸುಮಾರು 80% ಪಾರದರ್ಶಕವಾಗಿತ್ತು. ಇದನ್ನೆಲ್ಲಾ ಗಮನಿಸಿದರೆ, ಅರೇ ಇಷ್ಟೆಲ್ಲಾ ಯಾಕೆ, ರೆಕ್ಕೆಯ ಎಲ್ಲಾ ಭಾಗವನ್ನು ಪಾರದರ್ಶಕವಾಗಿಸಿಬಿಟ್ಟಿದ್ದರೆ ಆಯಿತಲ್ಲ. ಚಿಟ್ಟೆ ಮಾಯಾ ಚಿಟ್ಟೆಯಾಗಿ ಹಾರಾಡುತ್ತಾ ಬದುಕಬಹುದಿತ್ತು ಎಂದು. ಅದರೆ ಅದು ನಾವೆಂದುಕೊಂಡಷ್ಟು ಸುಲಭವಲ್ಲ. ಜೊತೆಗೆ ಹಾಗೆ ಇದೆಯೆಂದರೆ ಯಾವುದೋ ಮುಖ್ಯ ಕಾರಣದಿಂದಾಗಿಯೇ ಹಾಗಿರುತ್ತದೆ. ಕಪ್ಪು ಭಾಗ ಅಥವಾ ಬಣ್ಣ ಇರುವ ಭಾಗದಲ್ಲಿದ್ದ ಈ ಎಲೆಯಾಕಾರದ ಹುರುಪುಗಳು ನೀರಿನ ಹನಿಯಿಂದ ರೆಕ್ಕೆಯನ್ನು ಒದ್ದೆ ಮಾಡಲು ಬಿಡದೆ ರಕ್ಷಿಸುತ್ತವೆ.
ಹೀಗೆ ರೆಕ್ಕೆಯನ್ನು ಪರೀಕ್ಷಿಸುತ್ತಿದ್ದ ವಿಜ್ಞಾನಿಗಳಿಗೆ ಮತ್ತೊಂದು ಪ್ರಶ್ನೆ ಎದುರಾಯ್ತು. ಅದೇನೆಂದರೆ ಪಾರದರ್ಶಕವಾಗಿದ್ದ ರೆಕ್ಕೆಯ ಮೇಲ್ಮೈಯಲ್ಲಿ ಉದ್ದನೆಯ ಉಬ್ಬುಗಳಿದ್ದವು. ಅದನ್ನು ತಿಳಿಯಲು ರೆಕ್ಕೆಯ ಆ ಉಬ್ಬಿನ ಆಕಾರಗಳನ್ನು ಅಳಿಸಿದರು. ಅವರ ಆಶ್ಚರ್ಯಕ್ಕೆ ಹಾಗೆ ಉಜ್ಜಿದ ಭಾಗದ ರೆಕ್ಕೆಯು ಬೆಳಕಿಗೆ ಚೆನ್ನಾಗಿ ಕಾಣುತ್ತಿತ್ತು. ಅಂದರೆ ಬೆಳಕನ್ನು ಹೆಚ್ಚು ಪ್ರತಿಫಲಿಸುತ್ತಿತ್ತು, ಅಲ್ಲಿ ರೆಕ್ಕೆ ಇದೆಯೆಂದು ಸ್ಪಷ್ಟವಾಗಿ ಗುರುತಿಸುವ ಹಾಗೆ. ಸಹಜವಾಗಿದ್ದ ರೆಕ್ಕೆಗಳು ಉಬ್ಬುಗಳು ಉಜ್ಜಿದ ಭಾಗಕ್ಕಿಂದ 3ರಷ್ಟು ಹೆಚ್ಚು ಬೆಳಕನ್ನು ಪ್ರತಿಫಲಿಸದೇ ತನ್ನ ಮೂಲಕ ಹಾದು ಹೋಗಲು ಬಿಡುತ್ತಿದ್ದವು, ಅಂದರೆ ಹೆಚ್ಚು ಪಾರದರ್ಶಕಗಳಾಗಿದ್ದವು. ಅದೆಲ್ಲಾ ಸರಿ ಆದರೆ ಈ ರೆಕ್ಕೆಗಳು ಏಕೆ ಹೀಗೆ ಪಾರದರ್ಶಕಗಳಾಗಿರಬೇಕು? ಎಂಬ ಪ್ರಶ್ನೆಗೆ ಉತ್ತರವೇ ಸಿಗಲಿಲ್ಲವಲ್ಲ. ಹೌದು ಅದನ್ನೇ ಹೇಳಲು ಹೊರಟಿದ್ದೆ. ಪ್ರಕೃತಿಯಲ್ಲಿ ಜೀವಂತವಾಗಿರುವುದಕ್ಕೆ ಪಾರದರ್ಶಕತೆ ಬಹಳ ಶ್ರೇಷ್ಠ ಉಪಾಯ. ಚಿಟ್ಟೆಯ ರೆಕ್ಕೆಗಳು ಹೀಗೆ ಪಾರದರ್ಶಕವಾಗಿರುವುದರಿಂದ ತನ್ನ ಹಿಂದಿನ ಪರಿಸರಕ್ಕೆ ಸುಲಭವಾಗಿ ಹೊಂದಿಕೊಂಡು ತನ್ನನ್ನು ಬೇಟೆಯಾಡಬಹುದಾದಂತ ಜೀವಿಗಳಿಂದ ತಪ್ಪಿಸಿಕೊಳ್ಳಲು ಸಹಾಯಕಾರಿಯಾಗಿದೆ. ಅಂದರೆ ಇದರಿಂದ ಅವುಗಳ ಜೀವರಕ್ಷಣೆ ಹೆಚ್ಚು ಬಲವಾದಂತೆ. ಅಷ್ಟೇ ಅಲ್ಲ ಈ ಸಂಶೋಧನೆಯ ಫಲವಾಗಿ ಪ್ರಕೃತಿಯ ಸಣ್ಣ ರಹಸ್ಯವ ಬೇಧಿಸುವ ಆನಂದದ ಜೊತೆಗೆ ನಮಗೂ ಉಪಯೋಗವಿದೆ. ಅದೆಂದರೆ ಛಾಯಾಚಿತ್ರಗಳನ್ನು ತೆಗೆಯುವ ಕ್ಯಾಮೆರಾ ಲೆನ್ಸ್ ಗಳನ್ನು ಬೆಳಕು ಹೆಚ್ಚು ಪ್ರತಿಫಲಿಸದ ಉತ್ತಮ ಗುಣಮಟ್ಟದ ಲೆನ್ಸ್ ಗಳನ್ನು ತಯಾರಿಸುವಲ್ಲಿ, ಉತ್ತಮ ಗುಣಮಟ್ಟದ ಸೋಲಾರ್ ವಿದ್ಯುತ್ ತಯಾರಿಸುವ ಸೋಲಾರ್ ಪ್ಯಾನೆಲ್ ಗಳನ್ನು ತಯಾರಿಸುವ ಮುಂತಾದವುಗಳನ್ನು ಅಭಿವೃದ್ಧಿಪಡಿಸುವಲ್ಲಿ ಈ ಜ್ಞಾನ ನೆರವಾಗಬಲ್ಲದು.
ಯಾವುದು ಏನೇ ಆದರೂ ಪ್ರಕೃತಿಯೊಡನೆಯ ನಮ್ಮ ಒಡನಾಟದ ಬಗೆ ಮತ್ತು ವಿಧಾನಗಳನ್ನು ಪಾರದರ್ಶಕವಾಗಿ ನೋಡಿ ನಮ್ಮ ವಿಧಾನಗಳನ್ನು ಬದಲಿಸದೇ ಹೋದರೆ, ದಿನಗಳುರುಳಿದಂತೆ ವಿನಾಶವ ತಪ್ಪಿಸಲು ಮಾರ್ಗಗಳು ಮುಚ್ಚಿ ಹೋದಾವು. ಅಷ್ಟರಲ್ಲಿ ಏಳುವ, ಅದಕ್ಕೆ ತಕ್ಕಂತೆ ಬದಲಾಗುವ ಜವಾಬ್ದಾರಿ ನಮ್ಮದು.
ಮೂಲ ಲೇಖನ: ScienceNewsforStudents
ಲೇಖನ: ಜೈಕುಮಾರ್ ಆರ್.
ಡಬ್ಲ್ಯೂ.ಸಿ.ಜಿ, ಬೆಂಗಳೂರು
ನನ್ನ ಇಂಜಿನಿಯರಿಂಗ್ ಅನ್ನು ಮೆಕಾನಿಕಲ್ ಆಗಿ ಮುಗಿಸಿ, ಈಗ ರಾಮಕೃಷ್ಣ ಮಿಷನ್ ಶಿವನಹಳ್ಳಿಯ ವಿವಿಧ ಯೋಜನೆಗಳಲ್ಲಿ ಭಾಗಹಿಸುತ್ತಾ, ನನ್ನ ಪ್ರಕೃತಿಯ ಬಗೆಗಿನ ಒಲವನ್ನು ಅನುಭವಿಸಲು ಡಬ್ಲ್ಯೂ . ಸಿ .ಜಿ. ಮತ್ತು ಕಾನನದ ಬೆನ್ನೇರಿದ್ದೇನೆ.