ಹಗಲಲ್ಲಿ ಹಸಿರು – ಇರುಳಲ್ಲಿ ನೀಲಿ! ಇದೇನಾಯಿತು ನಮ್ಮ ಕಡಲಿಗೆ?

ಹಗಲಲ್ಲಿ ಹಸಿರು – ಇರುಳಲ್ಲಿ ನೀಲಿ! ಇದೇನಾಯಿತು ನಮ್ಮ ಕಡಲಿಗೆ?

© ಮೋಹಿತ್. ಕೆ. ಶೆಣೈ

2020ರ ಕೊರೊನಾ ಹಾಗೂ ಇನ್ನಿತ್ಯಾದಿ ಅವಾಂತರಗಳ ಜೊತೆಗೆ ಹಿಂಗಾರು ಮುಗಿದಾಕ್ಷಣ ಪಶ್ಚಿಮ ಕರಾವಳಿಗೆ ಇನ್ನೊಂದು ಆತಂಕ ಆವರಿಸಿತ್ತು. ಉಡುಪಿಯ ಕರಾವಳಿಯಲ್ಲಿ ವಾಸಿಸುತ್ತಿದ್ದ ನನಗೆ, ಗೆಳೆಯರೊಬ್ಬರು ‘ಆಚೆ ಸಮುದ್ರದ ನೀರು ಹಸಿರಾಗುತ್ತಿದೆ ಅಂತೆ ಅಹುದೇ?’ ಎಂಬ ಪ್ರಶ್ನೆಯನ್ನಿತ್ತರು. ವಾರದ ಹಿಂದಷ್ಟೇ ಅಳಿವೆಯ ನೀಲಿ ಕಣ್ತುಂಬಿಕೊಂಡು ಬಂದಿದ್ದ ನಾನು ‘ಹಾಗೇನೂ ಇಲ್ಲವಲ್ಲಾ!’ ಎಂಬ ಉತ್ತರ ನೀಡಿದ್ದೆ.

‘ಈ ಸರ್ತಿ ಮೀನ್ ಕಡ್ಮಿ ಆಯ್ತ್ ಮರ್ರೆ… ಸಮೂದ್ರದಲ್ಲ್ ತೊರೆ ಬಂದಿತ್ತ್ ಅಂಬ್ರ್…!’ ನಮಗೆ ಮೀನು ಮಾರಲು ಬರುವ ವ್ಯಾಪಾರಿಯೊಬ್ಬರು ಹೀಗೆಂದಾಗ ಆಶ್ಚರ್ಯವಾಯಿತು! ನನ್ನ ತಂದೆಯ ಬಳಿ ಈ ‘ತೊರೆ’ಯ ಬಗ್ಗೆ ವಿಚಾರಿಸಿದಾಗ ಅವರು, ಹಸಿರು ಬಣ್ಣದ ಲೋಳೆಯಂತಹ ಪಾಚಿ ಸಮುದ್ರದಲ್ಲಿ ಕಂಡುಬಂದಾಗ ಮೀನು ಕಡಿಮೆಯಾಗುವುದೆಂದೂ, ಅದು ಮನುಷ್ಯರ ಚರ್ಮಕ್ಕೆ ತಾಕಿದಾಗ ಕೆಲವರಲ್ಲಿ ತುರಿಕೆ ಆರಂಭವಾಗುವ ಕಾರಣಕ್ಕೆ ‘ತೊರೆ’ ಎನ್ನುತ್ತಾರೆ ಎಂದರು.

ಇಷ್ಟೆಲ್ಲಾ ಗೊಂದಲದ ನಡುವೆ ಇಂಸ್ಟೇಗ್ರಾಮ್, ವಾಟ್ಸ್ಆಪ್ ಅಂತಹ ಸಾಮಾಜಿಕ ಜಾಲತಾಣ ಹಾಗೇ ವಾರ್ತೆಗಳಲ್ಲಿ ನಮ್ಮ ಕಡಲಿನ ಅಲೆಗಳು ಕತ್ತಲಲ್ಲಿ ನೀಲಿಯಾಗಿ ಹೊಳೆಯುತ್ತಿರುವ ಚಿತ್ರ – ದೃಶ್ಯಗಳು ಸದ್ದು ಮಾಡತೊಡಗಿದ್ದವು. ಈ ಅಪರೂಪದ ದೃಶ್ಯವನ್ನ ಸೆರೆಹಿಡಿಯಲು ಪ್ರವಾಸಿಗರ ದಂಡೇ ಕರಾವಳಿಗೆ ಬಂದಿಳಿದಿತ್ತು.

ಕತ್ತಲಲ್ಲಿ ಕಡಲಿಗೆ ನೀಲಿ ಬಣ್ಣ ತುಂಬುತ್ತಿದ್ದ ಆ ಜೀವಿಯ ಹೆಸರು ಆಂಗ್ಲ ಭಾಷೆಯಲ್ಲಿ “ಸಿ ಸ್ಪಾರ್ಕಲ್”, ವೈಜ್ಞಾನಿಕ ಹೆಸರು ” ನೋಕ್ಟಿಲುಕಾ ಸಿಂಟಿಲಾನ್ಸ್ “. ಈ ಜೀವಿಗಳು ಒಂದು ವಿಧದ ಪಾಚಿ. ಕೊಳಚೆ ನೀರು ಹಾಗೂ ಇನ್ನಿತರೇ ಮಲಿನ ವಸ್ತುಗಳು ಸಮುದ್ರ ಸೇರುತ್ತಿರುವ ಪರಿಣಾಮ ಈ ಪಾಚಿಗಳು ಕಂಡುಬರುತ್ತಿದ್ದವು. ನನ್ನ ಮಿತ್ರರು ಕೇಳಿದಂತೆ ನಿಜವಾಗಿಯೂ ಸಮುದ್ರದ ನೀರು ಹಗಲಲ್ಲಿ ಹಸಿರಾಗಿತ್ತು. ಅಲೆಗಳಿಂದ ವಿಚಲಿತಗೊಂಡಾಗ ರಾತ್ರಿಯಲ್ಲಿ ಇವುಗಳಿಂದ ಹೊಮ್ಮವ ನೀಲಿ ಬಣ್ಣ ಸಮುದ್ರದ ಅಲೆಗಳನ್ನು ನೀಲಿಯಾಗಿಸುತ್ತಿತ್ತು. ಈ ಕ್ರಿಯೆಗೆ ಜೈವಿಕದೀಪ್ತಿ ಅಥವಾ ಬಯೋಲ್ಯುಮಿನೆಸೆನ್ಸ್ ಎನ್ನುತ್ತಾರೆ.

© ಮೋಹಿತ್. ಕೆ. ಶೆಣೈ

’ಹೊಳೆಯುವುದೆಲ್ಲಾ ಚಿನ್ನವಲ್ಲ, ಬೆಳ್ಳಗಿರುವುದೆಲ್ಲಾ ಹಾಲಲ್ಲ’ ಎನ್ನುವ ಮಾತಿನಂತೆ, ಈ ಏಕಕೋಶಿಯ ಜೀವಿಗಳ ಬೆಳವಣಿಗೆ ಹೆಚ್ಚಾಗುತ್ತಿರುವುದು ಮಾಲಿನ್ಯ ತೀವ್ರವಾಗುವ ಸಂಕೇತವಾಗಿದೆ. ಜಾಗತಿಕ ತಾಪಮಾನದ ಬೆಳವಣಿಗೆಗೂ ಇವುಗಳ ಬೆಳವಣಿಗೆಯೂ ನೇರಾನುಪಾತದಲ್ಲಿ ಇರುತ್ತವೆ. ಹೀಗಾಗಿ ವಾಯು ಮಾಲಿನ್ಯ, ಜಲ ಮಾಲಿನ್ಯ ಹಾಗೆಯೇ  ಹೆಚ್ಚಾದ  ರಾಸಾಯನಿಕ ಗೊಬ್ಬರದ ಬಳಕೆ ಇವೆಲ್ಲವೂ ಇಂತಹ ಸಮಸ್ಯೆಗೆ ಕಾರಣವಾಗಿದೆ.ಇವುಗಳು ನೀರಿನಲ್ಲಿರುವ ಆಮ್ಲಜನಕ ತೀವ್ರವಾಗಿ ಉಪಯೋಗಿಸಿಕೊಳ್ಳುವುದರಿಂದ ಜಲಚರಗಳಿಗೂ ಮಾರಕವಾಗಿದೆ. ಮುಂಬೈ ಸಮುದ್ರ ತೀರದಲ್ಲಿ ಹೆಚ್ಚಾದ ಮಾಲಿನ್ಯದಿಂದ ಸಾಮಾನ್ಯವಾಗಿ ಕಾಣುತ್ತಿದ್ದ  ಜೈವಿಕದೀಪ್ತಿ ಇದೀಗ ನಮ್ಮ ಕರ್ನಾಟಕ ಸೇರಿ ಪಶ್ಚಿಮ ಕರಾವಳಿಯ ಅನೇಕ ಕಡಲ ತೀರದಲ್ಲಿ ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿರುವುದು ಉತ್ತಮ ಚಿಹ್ನೆಯಲ್ಲ ಎಂದು ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ.

 ಪ್ರಕೃತಿಯಲ್ಲಿ ಎಲ್ಲವೂ ಒಂದಕ್ಕೊಂದು ಹೆಣೆದುಕೊಂಡಿದೆ. ಯಾವುದೇ ಒಂದು ಮೂಲೆಯನ್ನು ಮುಟ್ಟಿದರೂ ಪೂರ್ಣ ಜೀವಜಾಲ ಅಲುಗುತ್ತದೆ. ನಮ್ಮಿಂದಾಗುವ ಪ್ರತಿಯೊಂದು ಮಾಲಿನ್ಯವೂ ಈ ಜೈವಿಕದೀಪ್ತಿಯಂತಹ ಅನೇಕ ಸಮಸ್ಯೆಗಳನ್ನು ತಂದೊಡ್ದುತ್ತಿದೆ. ಇನ್ನಾದರೂ ಸರಳತೆ ಮೈಗೂಡಿಸಿಕೊಂಡು ಮಾಲಿನ್ಯವನ್ನು ಕಡಿಮೆಮಾಡಿದ್ದಲ್ಲಿ ಅಳಿದುಳಿದ ನಿಸರ್ಗವನ್ನು ಒಂದಿಷ್ಟು ರಕ್ಷಿಸಲು ಸಾಧ್ಯ.

ಲೇಖನ: ರಕ್ಷಾ
ಉಡುಪಿ ಜಿಲ್ಲೆ

Print Friendly, PDF & Email
Spread the love

One thought on “ಹಗಲಲ್ಲಿ ಹಸಿರು – ಇರುಳಲ್ಲಿ ನೀಲಿ! ಇದೇನಾಯಿತು ನಮ್ಮ ಕಡಲಿಗೆ?

Comments are closed.

error: Content is protected.