ಎಪ್ಪತ್ತುಗಿರಿಗಿಂತ ಕಪ್ಪತಗಿರಿ ಮೇಲು

ಎಪ್ಪತ್ತುಗಿರಿಗಿಂತ ಕಪ್ಪತಗಿರಿ ಮೇಲು

© ಅಶ್ವಥ  ಕೆ. ಎನ್.

ಮುಂಗಾರು ಮಳೆ ಚಾಲು ಆಯಿತೆಂದರೆ ಬಾಡಿಹೋದ ಗಿಡಮರಗಳೆಲ್ಲವೂ ಮೈನೆರೆತು ಹಸಿರ ಸಿಂಗರಿಸಿ ತನ್ನ ಒಡಲೊಳಗೆ ಸಂಪತ್ತನ್ನು ಬಚ್ಚಿಟ್ಟುಕೊಂಡು, ನೋಡುಗರ ಕಣ್ಣುಗಳಿಗೆ ಸೊಬಗನ್ನು ಉಣಬಡಿಸುವ ಕಾನನ, ಬಯಲು ಸೀಮೆಯ ಅರೆ ಮಲೆನಾಡು ಕಪ್ಪತಗುಡ್ಡ. ಈ ಕಪ್ಪತಗುಡ್ಡಕ್ಕೆ ಹೋಗಿ ಅದರ ಸೊಬಗನ್ನು ಸವಿಯಬೇಕೆಂದು ಸುಮಾರು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಚಾರಣಕ್ಕೆ ರಾತ್ರೊ ರಾತ್ರಿ ಹೋಗಲೇಬೇಕೆಂದು ಠರಾವು ಮಾಡಿಕೊಂಡು ಬೆಳಗ್ಗೆ ಊರಿಂದ ಗದಗಿಗೆ ಬಂದು, ಅಲ್ಲಿಂದ ಬಸ್ ಮೂಲಕ ಕಪ್ಪತಗುಡ್ಡಕ್ಕೆ ಪಯಣ ಸಾಗಿತು.

© ಅಶ್ವಥ  ಕೆ. ಎನ್.

          ಬಸ್ ಪಾಪನಾಸಿ ದಾಟಿ ಡೋಣಿ ಕಡೆಗೆ ಸಾಗಿದಂತೆಲ್ಲಾ ಕಪ್ಪತಗುಡ್ಡ ಆರಂಭವಾದಂತೆ ಕಾಣುವ ದ್ವೀಪದ ಗುಡ್ಡಗಳಲ್ಲಿ ರೈತರು ಬೆಳೆದ ಬೆಳೆಗಳು ಇಳಿಜಾರಿಗೆ ಇಳಿಯುವಂತೆ ಕಾಣುತ್ತಿದ್ದವು. ಮುಂದೆ ಹಾಗೆ ಹೋದಂತೆಲ್ಲ ಸಾಲು ಸಾಲು ಬೆಟ್ಟಗಳ ಮಧ್ಯೆ ಇರುವೆ ಸಾಲಿನ ಹಾಗೆ ಇದ್ದ ಇಕ್ಕಟ್ಟಿನ ರಸ್ತೆಯಲ್ಲಿ ಬಸ್ ಒಳ ಹೊರಟಾಗ ಪಶ್ಚಿಮ ಘಟ್ಟದ ಪರ್ವತದೊಳಗೆ ಪ್ರವೇಶಿಸಿದಂತಹಾ ಅನುಭವ. ಬಸ್ಸಿನ ಕಿಡಕಿಯಿಂದ ಕಣ್ಣನ್ನು ಹರಿಯ ಬಿಟ್ಟಾಗ ಕಣ್ಣುಗಳಿಗೆ ಅಚ್ಚರಿಯ ಉಡುಗೊರೆ ಕಾದಿತ್ತು. ಗುಡ್ಡದ ತುಂಬೆಲ್ಲಾ ಬೆಳೆದ ಗಿಡ ಮರಗಳೆಲ್ಲವು ಗುಡ್ಡದ ತುದಿಯವರೆಗೂ ಹರಡಿಕೊಂಡು, ಆಗಸದಲ್ಲಿ ತೇಲುವ ಮೋಡಗಳಿಗೆ ಚುಂಬಿಸಿದಹಾಗೆ ಕಾಣುತ್ತಿದ್ದವು. ಸಾಲು ಸಾಲು ಬೆಟ್ಟಗಳು ಜೊತೆ ಜೊತೆಯಾಗಿ ಒಂದಕ್ಕೊಂದು ಬೆಸೆದು ಕಣ್ಣುಗಳಿಗೆ ಎದುರಾಗಿ ಮುಂದೆ ಹೋಗಲು ಅನುವು ಮಾಡಿಕೊಡುತ್ತಿದ್ದವು.

 ಬಸ್ಸು ತಳಕು ಬಳುಕಿನ ದಾರಿಯಲ್ಲಿ ಹೊರಳಾಡುತ್ತಾ ಸಾಗಿ ಕಪ್ಪತಗುಡ್ಡ ತಲುಪಿದಾಗ ಸುಮಾರು ಒಂಬತ್ತು ಒಂಬತ್ತುವರೆ ಆಗಿತ್ತು. ಬಸ್ಸ್ ಇಳಿದು ಹೊರಗೆ ಬಂದಾಗ ಕಪ್ಪತ ಗುಡ್ಡದ ನಿಸರ್ಗವನ್ನು ಸವಿಯಲು ಬಂದ ಜನರ ಮುಖಗಳಲ್ಲಿ ಅರೆಮಲೆನಾಡಿನ ನಿಸರ್ಗದ ಸವಿಯನ್ನು ಅನುಭವಿಸಿದ ಭಾವ, ಹಾಗೆ ಅನುಭವಿಸಲು ತವಕಿಸುವ ಹಂಬಲದ ಖುಷಿ ಎರಡು ಕಾಣುತ್ತಿದ್ದವು. ಯಾವ ಕಡೆಗೆ ಹೋಗಬೇಕೆಂದು ಕೇಳಬೇಕೆನ್ನುವಷ್ಟರಲ್ಲಿ, ರಸ್ತೆಯ ಅಂಚಿನಲ್ಲಿ “ಕಪ್ಪತ ಮಲ್ಲಯ್ಯನ” ದರ್ಶನಕ್ಕೆ ಹೋಗುವ ಮಾರ್ಗ ಕಾಣಿಸಿದ್ದರಿಂದ ಆ ಕಡೆಗೆ ಕಾಲು ಹಾಕಿದೆ. ದಾರಿಯ ಬದಿಯಲ್ಲಿ ಕುಂಕುಮ, ಬಂಡಾರ ವಿಭೂತಿ…… ಹಣ್ಣು ಹಂಪಲು ಇತ್ಯಾದಿಯನ್ನು  ಇಟ್ಟುಕೊಂಡು ಮಾರುತ್ತಿರುವವರು ಕಾಣಸಿಗುತ್ತಾರೆ. ಇವರುಗಳನ್ನೆಲ್ಲ ದಾಟಿ ಮುಂದೆ ಹೋದ ಹಾಗೆ ಬಲಬದಿಯ ಕಣ್ಣು ಹಾಯಿಸಿ ನೋಡಿದರೆ ದೊಡ್ಡದಾದ ಬಂಡೆ ಶಿಥಿಲಗೊಂಡು ತಂತಾನೆ ಉದುರಿದ ಪದರುಗಳ ಕಲಾಕೃತಿ ನೋಡುಗರ ಕಣ್ಣು ಸೆಳೆಯುತ್ತದೆ. ಅಷ್ಟೇ ಅಲ್ಲ ಆ ಬಂಡೆಯ ಮೇಲೆ ಬೆಳೆದ ಬಳ್ಳಿ ಜೋತು ಜೋಕಾಲಿಯ ಹಾಗೆ ತೂಗಾಡುವುದನ್ನು ನೋಡಿ ಕಣ್ಣು ತುಂಬಿಕೊಳ್ಳುವುದೇ ಆನಂದ…. ರಸ್ತೆಯುದ್ದಕ್ಕೂ ಒಮ್ಮೆ ಕಣ್ಣು ಹಾಯಿಸಿ ಮೇಲುಗಡೆ ನೋಡಿದರೆ ಹಸಿರು ತುಂಬಿದ ಅರೆಕಾಡಿನೊಳಗೆ ಮೇಲೇರುವವರು, ಕೆಳಗಿಳಿಯುವವರು ಗಿಜಿಗುಟ್ಟುವ ಜನರು ಇರುವೆಯ ಸಾಲಿನ ಹಾಗೆ ಕಾಣುವುದನ್ನು ನೋಡಬಹುದು.

© ಅಶ್ವಥ  ಕೆ. ಎನ್.

  ಡಾಂಬರ್ ರಸ್ತೆ ಮುಕ್ತಾಯವಾಗಿ ಅಲ್ಲಿಂದ ಗುಡ್ಡ ಹತ್ತುವುದು ಆರಂಭವಾಗುತ್ತದೆ. ಅಲ್ಲಲ್ಲಿ ಮನುಷ್ಯರು ಮಾಡಿದ ಮೆಟ್ಟಿಲುಗಳನ್ನು ಏರಿದಾಗ ಅಲ್ಲಿ ಕಪ್ಪತ ಮಲ್ಲಯ್ಯ ದೇವಸ್ಥಾನಕ್ಕೇಕೆ ಭೇಟಿ ನೀಡಿ ಅಲ್ಲಿಂದ ಮತ್ತೆ ಏರುವುದಿದೆಯಲ್ಲ ಅದು ಬಲು ಮಜಾ ಇರುತ್ತೆ. ಇಕ್ಕಟ್ಟಾದ ದಾರಿಯೊಳಗೆ ಎದುರು ಬರುವ ಜನರ ಮಧ್ಯದಲ್ಲಿ ನಾವು ಸರ್ಕಸ್ ಮಾಡುತ್ತಾ, ಎಡವುತ್ತಾ ಏರುತ್ತಾ, ಏದುಸಿರು ಬಿಡುತ್ತಾ ಸುಸ್ತಾಗಿ ಅಲ್ಲೆ ಯಾವುದೋ ಕಲ್ಲಮೇಲೆ ಕುಳಿತು ಉಸ್ಸಪ್ಪ ಅಂತ ದಣಿವಾರಿಸಿಕೊಂಡು ಮೇಲೋಗುವ ಉತ್ಸಾಹದಿಂದ ಮತ್ತೆ ಏರುತ್ತಾ ಹೋಗಿ ತಣ್ಣನೆಯ ಗಾಳಿಗೆ ಎದೆಯೊಡ್ಡಿ ನಿಂತರೆ ಎಲ್ಲಾ ಆಯಾಸವು ಕ್ಷಣಮಾತ್ರದಲ್ಲಿ ಮರೆಯಾಗಿ ಉಲ್ಲಾಸ ತುಂಬುತ್ತದೆ.

© ಅಶ್ವಥ  ಕೆ. ಎನ್.

ಸಾಲು ಸಾಲು ಬೆಟ್ಟಗಳು, ಬೆಟ್ಟ ಬೆಟ್ಟಗಳ ತುದಿಯಲ್ಲಿ ಗಾಳಿ ಫ್ಯಾನ್ಗಳು ಕಪ್ಪತಗುಡ್ಡಕ್ಕೆ ಕಳೆ ತರುವಂತೆ ಕಾಣುತ್ತಿದ್ದವು. ಬಿಸುವ ಗಾಳಿಗೆ ಗಿಡ ಮರಗಳೆಲ್ಲವು ಒಂದಾಗಿ ಸಾತ್ ನೀಡಿದ ಹಾಗೆ ಹೊರಳಾಡುತ್ತಿದ್ದರೆ, ನೆಲಕಚ್ಚಿ ಬೆಳೆದ ಹುಲ್ಲು ನೃತ್ಯವನ್ನೇ ಆರಂಭಿಸಿತ್ತು. ದೂರ ದೂರ ಅಲ್ಲೊಂದು ಇಲ್ಲೊಂದು ಕಾಣುತ್ತಿದ್ದ ಊರುಗಳು ತಮ್ಮ ಚಹರೆಗಳನ್ನು ಉಳಿಸಿಕೊಂಡಿದ್ದವುಗಳು ಇದ್ದಲ್ಲಿಯೇ… ಗುಡ್ಡಗಳ ಮರೆಯಲ್ಲಿದ್ದ ಕೆಲವೊಂದು ಊರುಗಳು ಇಣುಕಿದಂತೆ ಗೋಚರಿಸುತ್ತಿದ್ದವು. ಗುಡ್ಡದ ಹಿಂಭಾಗಕ್ಕೆ ತಿರುಗಿದರೆ ಬಟ್ಟ ಬಯಲು ಹರವಿಕೊಂಡು ಬಯಲನ್ನೆ ಬಯಲಾಗಿಸಿ, ಬಯಲು ತುಂಬಾ ಬೆಳೆಯ ಹರವಿಕೊಂಡು ಮುದುಕಿ ಹೊಲಿದ ಕೌದಿಯ ಹಾಗೆ ಹರವಿಕೊಂಡಿತ್ತು. ಈ ಬಯಲ ಜೊತೆ ಜೊತೆಗೆ ಮೋಡಗಳ ನೆರಳಿನಾಟವನ್ನು ನೋಡುವಷ್ಟರಲ್ಲಿ ಸಮಯ ಒಂದು ಗಂಟೆಗೆ ಜಾರಿತ್ತು. ಹೊಟ್ಟೆಯೊಳಗೂ ಹಸಿವಿನ ಆಟ ಚಾಲು ಆಗಿದ್ದರಿಂದ ಸಾಗಿ ಬಂದ ದಾರಿ ಕಡಗೆ ಚಾರಣ ಮತ್ತೆ ಮರಳಿತು.

© ಅಶ್ವಥ  ಕೆ. ಎನ್.

ಕೆಳಗೆ ಇಳಿಯುವಾಗ ಒಬ್ಬಾಕಿ ಅಕ್ಕ ಕೈಗೆ ಸಿಕ್ಕ ಸಿಕ್ಕ ಗಿಡಗಳ ಎಲೆಗಳನ್ನು ಹರಿದುಕೊಂಡು ಕಿತ್ತುಕೊಂಡು ಉಡಿಯೊಳಗೆ ಇಟ್ಟುಕೊಳ್ಳುತ್ತಿದ್ದನ್ನು ನೋಡಿದಾಗ ನಮ್ಮಮ್ಮ ಹೇಳಿದ ಮಾತು,  “ಎರು ಎಲೆ, ಇಳಿ ಎಲೆ”. ಅದನ್ನು ಕಿತ್ತುಕೊಂಡು ಬಂದು ಅರೆದು ಗಾಯಕ್ಕೆ ಹಚ್ಚಿದರೆ, ಪಾನಕದಲ್ಲಿ ಹಾಕಿಕೊಂಡು ಕುಡಿದರೆ ರೋಗ ರುಜಿನಗಳು ಮಾಯವಾಗ್ತಾವೆ” ಅಂತ ಹೇಳಿದ್ದು ನೆನಪಾಯಿತು. ಇಲ್ಲಿರುವ ಪ್ರತಿಯೊಂದು ಗಿಡ ಮರ ಸಸ್ಯ ಸಂಕುಲಗಳೆಲ್ಲವೂ ಔಷಧಿಯ ಗುಣಗಳನ್ನು ಹೊಂದಿದ್ದರಿಂದಲೇ “ಎಪ್ಪತ್ತುಗಿರಿಗಿಂತ ಕಪ್ಪತಗಿರಿ ಮೇಲು” ಎಂಬ ಮಾತು ನಿಜವೆನಿಸುತ್ತದೆ.

          ಕಪ್ಪತಗುಡ್ಡದ ಕೆಳಗೆ ಇಳಿದು ಬರುವಷ್ಟರಲ್ಲಿ ಮೋಡ ಕವಿದು ಮಳೆ ಆರಂಭವಾಗಿತ್ತು. ಅದೇ ಹೊತ್ತಿಗೆ ಬಸ್ಸು ಕೂಡ ಬಂದು ಹೊರಡುತ್ತಿದ್ದರಿಂದ ಬಸ್ಸು ಹತ್ತಿ ಮರಳಿ ಗದಗಿನ ಕಡೆಗೆ ಸಾಗಿದಂತೆಲ್ಲಾ ಕಪ್ಪತಗುಡ್ಡದ ಅನುಭವಗಳು ಎದೆಯಾಳದಲ್ಲಿ ಹಚ್ಚ ಹಸಿರಾಗಿ ಉಳಿದಿದ್ದವು.

© ಅಶ್ವಥ  ಕೆ. ಎನ್.

ಲೇಖನ : ಶರಣಪ್ಪ ಎಚ್. ಎಸ್.
ಗದಗ ಜಿಲ್ಲೆ

Print Friendly, PDF & Email
Spread the love
error: Content is protected.