ಗದ್ದೆ ಮಿಂಚುಳ್ಳಿಯ ಪ್ರಣಯದಾಟ
© ಡಾ. ಎಸ್. ಶಿಶುಪಾಲ
ಮಿಂಚುಳ್ಳಿಗಳು ಅಪ್ರತಿಮ ಬೇಟೆಗಾರ ಹಕ್ಕಿಗಳು. ನೋಡಲು ಸುಂದರ ಮತ್ತು ಬೇಟೆಯಾಡುವಾಗ ಬಲು ಚತುರ. ಮಿಂಚುಳ್ಳಿಗಳಲ್ಲಿ ಹಲವಾರು ಪ್ರಭೇದಗಳಿದ್ದರೂ ಸಾಮಾನ್ಯವಾಗಿ ನಮಗೆ ಕಾಣ ಸಿಗುವುದು ಗದ್ದೆ ಮಿಂಚುಳ್ಳಿ (White-throated kingfisher; Halcyon capensis). ಅಚ್ಚ ನೀಲಿ ಬಣ್ಣದ ಬೆನ್ನು ಮತ್ತು ಬಾಲದ ರೆಕ್ಕೆ. ಕಡು-ಕಂದು ಬಣ್ಣದ ತಲೆ, ಕುತ್ತಿಗೆಯ ಹಿಂಭಾಗ ಮತ್ತು ಕೆಳಮೈ. ಗಂಟಲು ಮತ್ತು ಎದೆಯ ಭಾಗ ಅಚ್ಚ ಬಿಳಿ. ಗಟ್ಟಿಮುಟ್ಟಾದ ಉದ್ದ, ದಪ್ಪ ಮತ್ತು ಚೂಪಾದ ಕೆಂಪು ಕೊಕ್ಕಿರುವ ಚೆಂದದ ಹಕ್ಕಿ. ಗಂಡು ಹೆಣ್ಣುಗಳಲ್ಲಿ ನೋಡಲು ವ್ಯತ್ಯಾಸವಿಲ್ಲ. ಹರಟೆಯಂತೆ ಚೆಕ್-ಎಕ್-ಎಕ್-ಎಕ್—- ನಿರಂತರ ಕೂಗು. ಹಾರುವಾಗಲೂ ಇದೇ ಕೂಗು. ಮೀನು-ಶಿಕಾರಿ ಎಂದು ಹೆಸರಿದ್ದರೂ ಚೇಳು, ಹಲ್ಲಿ, ಹಾವುರಾಣಿ, ಓತಿಕ್ಯಾತ, ಏಡಿ, ಮಿಡತೆ ಮುಂತಾದವುಗಳನ್ನು ತಿನ್ನುತ್ತದೆ.
ಸಂತಾನಾಭಿವೃದ್ಧಿಯ ಸಮಯ ಮಾರ್ಚ್ ನಿಂದ ಜುಲೈವರೆಗೆ. ಹೆಣ್ಣು ಗಂಡನ್ನು ಆಯ್ಕೆ ಮಾಡುವ ಸಮಯ. ಮೊನ್ನೆ ಮಾರ್ಚ್ ತಿಂಗಳ ಎರಡನೇ ವಾರದಲ್ಲಿ ದಾವಣಗೆರೆಯಲ್ಲಿ ಪಕ್ಷಿ ವೀಕ್ಷಣೆಯಲ್ಲಿ ತೊಡಗಿದ್ದ ನಮಗೆ ಉದ್ದ ಗೂಟದ ಮೇಲೆ ಕುಳಿತು ಜೋರಾಗಿ ಕೂಗುತ್ತಿದ್ದ ಗದ್ದೆ ಮಿಂಚುಳ್ಳಿ ಕಣ್ಣಿಗೆ ಬಿತ್ತು. ಅದರ ಸಡಗರ ನೋಡಿದಾಗ ಸುತ್ತಲೂ ಏನೋ ವಿಸ್ಮಯ ನಡೆಯುತ್ತಿದೆ ಎಂದು ಅರಿತ ನಾವು ಅಲ್ಲೇ ಬದಿಯಲ್ಲಿ ನಿಂತೆವು. ಉತ್ತೇಜಿತ ಹಕ್ಕಿ ತನ್ನ ಬಾಲವನ್ನು ಸ್ವಲ್ಪವೇ ಕುಣಿಸಿ ಅಗಾಗ್ಗೆ ರೆಕ್ಕೆಯನ್ನು ಅಗಲಿಸಿ ತನ್ನ ಸೌಂದರ್ಯ ಪ್ರದರ್ಶಿಸುತ್ತಿತ್ತು. ಮೂರ್ನಾಲ್ಕು ಹಕ್ಕಿಗಳು ದೊಡ್ಡದಾಗಿ ಅರಚುತ್ತಾ ಆಚೀಚೆ ಹಾರುತ್ತಿದ್ದವು. ಮಧ್ಯದಲ್ಲಿ ಒಂದು ಹಕ್ಕಿಯಿಂದ ಸಣ್ಣ ಕೂಗು ಆಹ್ವಾನದಂತಿತ್ತು. ಅಲ್ಲಲ್ಲಿ ಇದ್ದ ಬೇರೆ ಮಿಂಚುಳ್ಳಿಗಳು ಗಳಿಗೆಗೊಂದು ಬಾರಿ ತಮ್ಮ ರೆಕ್ಕೆ ತೋರಿಸುತ್ತಿದ್ದುದ್ದನ್ನು ಕಂಡಾಗ ದೇಹಧಾಡ್ರ್ಯ ಸ್ಪರ್ಧೆಯ ಯುವಕರು ನೆನಪಾಗುತ್ತಿದ್ದರು. ನೋಡಿದರೆ ಒಟ್ಟು ಆರು ಮಿಂಚುಳ್ಳಿಗಳಿದ್ದವು. ಯಾರು ಗಂಡು ಯಾರು ಹೆಣ್ಣು ಎಂದು ತಿಳಿಯಲಾಗದಿದ್ದರೂ ಹೆಣ್ಣನ್ನು ಮೆಚ್ಚಿಸಲು ಗಂಡು ಮಾಡುವ ಪ್ರಣಯದ ಮುಂಚಿನಾಟ ನನ್ನ ಕ್ಯಾಮೆರಾದಲ್ಲಿ ಸೆರೆಯಾಯಿತು. ಗಂಡು ತನ್ನ ರೆಕ್ಕೆಗಳನ್ನು ಅಗಲಿಸಿ ಬಿಳಿಯ ಮಚ್ಚೆಯನ್ನು ತೋರಿಸುತ್ತಾ ತನ್ನ ಬಾಹುಬಲದ ಶಕ್ತಿ ಪ್ರದರ್ಶನ ಮಾಡುತ್ತಾನೆ. ಹೆಣ್ಣನ್ನು ಓಲೈಸಲು ಗಂಡು ತೋರುವ ಉತ್ಸಾಹ/ಉಮೇದು ಮತ್ತು ರೋಚಕತೆಯನ್ನು ವರ್ಣಿಸಲು ಪದಗಳೆ ಸಾಲದು. ಯಾರು ಎಲ್ಲಿದ್ದಾರೆ, ಏನು ಮಾಡುತ್ತಾರೆ ಮತ್ತು ಯಾವ ಕಡೆ ಹಾರುತ್ತಾರೆ ಎಂಬುದೇ ತಿಳಿಯುತ್ತಿರಲಿಲ್ಲ. ಅದರ ದೃಶ್ಯಾವಳಿಗಳು ತಮ್ಮ ಮುಂದಿವೆ.
ತನ್ನ ಮೈಮಾಟ ಪ್ರದರ್ಶಿಸುವ ಗಂಡು ತಾನು ಈಗಾಗಲೇ ಕೆರೆ, ನದಿ ಅಥವಾ ಗದ್ದೆ ಬದಿಯ ಮಣ್ಣಿನ ಗೋಡೆಯಂತಿರುವ ಜಾಗದಲ್ಲಿ ಸುರಂಗ ಮಾಡಿ ಹೆಣ್ಣಿಗೆ ತಾನು ನಿನ್ನ ಮಕ್ಕಳ ತಂದೆಯಾಗಲು ಯೋಗ್ಯವೆಂದು ಸಾಬೀತು ಮಾಡಬೇಕು. ಆ ಸುರಂಗದ ಗೂಡನ್ನು ಹೆಣ್ಣು ಪರೀಕ್ಷಿಸಿ ಯೋಗ್ಯ ಗಂಡನ್ನು ಆಯ್ಕೆ ಮಾಡಬೇಕು. ಇಷ್ಟಕ್ಕೆ ವರ ಪರೀಕ್ಷೆ ಮುಗಿಯುವುದಿಲ್ಲ. ಗಂಡು ತನ್ನನ್ನು ಆಯ್ಕೆ ಮಾಡಬೇಕಾದ ಹೆಣ್ಣಿಗೆ ರುಚಿಯಾದ ತಿನಿಸುಗಳನ್ನು ಕೊಡಬೇಕು. ಯಾವ ಗಂಡು ಒಳ್ಳೆಯ ದೇಹ, ಗೂಡು ಮಾಡುವ ತಾಕತ್ತು ಮತ್ತು ಶಿಕಾರಿ ಮಾಡಿ ಒಳ್ಳೆಯ ಆಹಾರವನ್ನು ತಂದು ಕೊಡುವಲ್ಲಿ ಯಶಸ್ವಿಯಾಗುತ್ತದೋ ಅಂತವನನ್ನು ಮೆಚ್ಚಿ ಹೆಣ್ಣು ತನ್ನನ್ನು ಅವನಿಗೆ ಸಮರ್ಪಿಸಿಕೊಳ್ಳುತ್ತಾಳೆ. ತನಗಿಷ್ಟವಾಗದವರು ಹತ್ತಿರ ಬಂದರೆ ಕೋಪಿಸಿಕೊಳ್ಳುತ್ತಾಳೆ. ಅಂತಹವರಿಂದ ದೂರ ಹೋಗುತ್ತಾಳೆ. ಇಲ್ಲಿದ್ದ ಹೆಣ್ಣು ಯಾರಿಗೆ ಒಲಿದಳು ಎಂಬುದು ಮಾತ್ರ ತಿಳಿಯಲಿಲ್ಲ. ಆಯ್ಕೆಯಾದ ಗಂಡಿನೊಡನೆ ಉದ್ದದ ಸುರಂಗ ಗೂಡನ್ನು ಪೂರ್ತಿ ಮಾಡಿ ಅವನೊಂದಿಗೆ ಕೂಡಿದ ನಂತರ ಹೆಣ್ಣು ನಾಲ್ಕರಿಂದ ಏಳು ಮೊಟ್ಟೆಗಳನ್ನಿಡುತ್ತಾಳೆ. ಮೊಟ್ಟೆಗಳಿಗೆ ಕಾವು ಕೊಡುವುದರಲ್ಲಿ ಮತ್ತು ಮರಿಗಳ ಪೋಷಣೆಯಲ್ಲಿ ತಂದೆ-ತಾಯಿಯರಿಬ್ಬರೂ ಸಮಭಾಗಿಗಳು. ಈ ವಿಸ್ಮಯ ಲೋಕದ ಮಿಂಚುಳ್ಳಿಗಳ ಪ್ರಣಯದಾಟ ನೋಡಿದ ಸಂತೋಷದಲ್ಲಿ ನಾವು ಭಾಗಿಗಳಾದೆವು.
ಲೇಖನ : ಡಾ. ಎಸ್. ಶಿಶುಪಾಲ
ದಾವಣಗೆರೆ ಜಿಲ್ಲೆ
ಪ್ರಾಧ್ಯಾಪಕರು
ಸೂಕ್ಷ್ಮಜೀವಿಶಾಸ್ತ್ರ ವಿಭಾಗ
ದಾವಣಗೆರೆ ವಿಶ್ವವಿದ್ಯಾನಿಲಯ
ಶಿವಗಂಗೋತ್ರಿ, ದಾವಣಗೆರೆ