ಮುನಿಯನ ಮಾದರಿ

ಮುನಿಯನ ಮಾದರಿ

© ಶ್ರೀಕಾಂತ್ ಎ. ವಿ.

“ಮನೆ ಕಟ್ಟಿ ನೋಡು…. ಮದುವೆ ಮಾಡಿ ನೋಡು” ಎಂಬ ಎರಡು ವಿಚಾರಗಳು ಅದೆಷ್ಟು ತ್ರಾಸದಾಯಕವೆಂಬುದು ಅನುಭವಿಸಿದವರಿಗೇ ಗೊತ್ತು. ಈ ಮಾತನ್ನು ಕೇಳಿದ ಕೂಡಲೇ ಪ್ರತಿಯೊಬ್ಬರಿಗೂ ಅನಿಸುವುದು ‘ಉಸ್ಸಪ್ಪಾ…… ಅದೊಂದು ಜೀವಮಾನದ ಸಾಧನೆಯೇ ಸರಿ’ ಎಂದು. ಮನೆ ಕಟ್ಟುವುದು ಸುಲಭದ ಮಾತಲ್ಲ. ಸೂಕ್ತವಾದ ಜಾಗ ಹಾಗೂ ಸಮಯ ಅದೃಷ್ಟವಿದ್ದರೆ ಮಾತ್ರ ನಮ್ಮ ಪಾಲಾಗುವುದು. ಇವೆರಡರ ಜೊತೆಗೆ ಮುಖ್ಯವಾಗಿ ಬೇಕಾದ್ದು ನಮ್ಮ ಬ್ಯಾಂಕ್ ನ ಉಳಿತಾಯ ಅಥವಾ ಹೆಣ್ಣು ಕೊಟ್ಟ ಮಾವನ ಬ್ಯಾಂಕ್ ಉಳಿತಾಯ.ಇವೆರಡೂ ಬಹಳ ಜನಕ್ಕೆ ಸಿಗೋದಿಲ್ಲ ಬಿಡಿ. ಇವೆಲ್ಲವನ್ನೂ ಹೇಗೋ ಸಂಬಾಳಿಸಿಕೊಂಡು ಮನೆ ಕಟ್ಟಲು ಪ್ರಾರಂಭಿಸಿದರೂ ಎಲ್ಲರನ್ನೂ ಮೆಚ್ಚಿಸುವಂತಹ ಮನೆಯನ್ನೇ ಕಟ್ಟಬೇಕೆಂಬ ಹಂಬಲಕ್ಕೆ ಬಿದ್ದುಬಿಟ್ಟರೆ ಅವರನ್ನು ಆ ದೇವರೇ ಕಾಪಾಡಬೇಕು. ಇಂತಹ ಗೊಂದಲ ಗೋಜಲುಗಳು ಇತರೆ ಜೀವಿಗಳಲ್ಲಿಯೂ ಇವೆಯೇ?? ಬನ್ನಿ ಓದಿ ನಿರ್ಧರಿಸುವಿರಂತೆ.

ವಿಶಿಷ್ಟವಾದ ಸೂರು ಕಟ್ಟಿಕೊಳ್ಳುವಂತಹ ಅಪಾರ ಚಾಣಾಕ್ಷತೆಯನ್ನು ಪ್ರಕೃತಿಯಿಂದ ವರ ಪಡೆದಿರುವ ಜೀವಿಗಳೆಂದರೆ ಹಕ್ಕಿಗಳು ಎಂಬುದು ಅತಿಶಯೋಕ್ತಿಯಲ್ಲ. ಪ್ರತಿ ಹಕ್ಕಿಯ ಗೂಡು ಕೂಡ ಯಾವುದೇ ಸಿವಿಲ್ ಇಂಜಿನಿಯರ್ ಕಟ್ಟುವ ಮನೆಗಿಂತ ಕಡಿಮೆಯೇನಲ್ಲ. ಒಂದೊಂದು ಹಕ್ಕಿಯ ಗೂಡು ಕೂಡ ವಿಭಿನ್ನ ಹಾಗೂ ವಿಶಿಷ್ಟ. ಅದರಲ್ಲೂ ಅತ್ಯಂತ ಸಾಮಾನ್ಯವಾಗಿ ಕಂಡು ಬರುವ ಗೀಜಗ ಹಕ್ಕಿಯ ಗೂಡು ಆಧುನಿಕ ನಿರ್ಮಾಣ ತಂತ್ರಜ್ಞಾನಕ್ಕೂ ಸವಾಲೊಡ್ಡುವಂತಿರುತ್ತದೆ. ಕೇವಲ ಹುಲ್ಲು ಕಡ್ಡಿಗಳನ್ನು ಸಂಗ್ರಹಿಸಿ ಗೂಡು ಕಟ್ಟಲು ಆ ಹಕ್ಕಿಗಳು ಪಡುವ ಪರಿಶ್ರಮ ಅಷ್ಟಿಷ್ಟಲ್ಲ. ಒಂದು ಸಣ್ಣಗಾತ್ರದ ಗೂಡು ಕಟ್ಟಲು ಈ ಹಕ್ಕಿಗಳು ನೂರಾರು ಬಾರಿ ಸಂಚರಿಸಿ ಹುಲ್ಲು ಸಂಗ್ರಹಿಸಬೇಕು. ಕೇವಲ ತಮ್ಮ ಮೊನಚಾದ ಕೊಕ್ಕನ್ನು ಬಳಸಿ ಅದನ್ನು ಬಿಗಿಯಾಗಿ ನೇಯಬೇಕು. ಗೂಡು ನಿರ್ಮಿಸಲು ಜಾಗದ ಆಯ್ಕೆ, ಇರಬೇಕಾದ ದಿಕ್ಕು, ನಿರ್ಮಾಣದಲ್ಲಿ ಹಕ್ಕಿಗಳು ತೋರುವ ಕೌಶಲ್ಯ ವಾಸ್ತುಶಾಸ್ತ್ರಜ್ಞರನ್ನೂ ನಾಚಿಸುತ್ತದೆ. ಸೂರ್ಯನ ಬೆಳಕು, ಬೀಸುವ ಗಾಳಿ, ಸುರಿಯುವ ಮಳೆ, ಇತ್ಯಾದಿ ಅಂಶಗಳನ್ನೆಲ್ಲ ಲೆಕ್ಕ ಹಾಕಿ ಇವು ಗೂಡು ಕಟ್ಟುತ್ತವೆಂದರೆ ಅದೊಂದು ವಿಸ್ಮಯವಲ್ಲವೇ?. ಹಕ್ಕಿಯು ತನ್ನ ಪೀಳಿಗೆಯನ್ನು ಮುಂದುವರಿಸಬೇಕೆಂದರೆ ಈ ಲೆಕ್ಕಾಚಾರಗಳೆಲ್ಲ ಪಕ್ಕಾ ಇರಬೇಕು. ಗೂಡು ಕಟ್ಟಲು ಗುದ್ದಲಿ ಪೂಜೆ ಆರಂಭವಾಗುವುದೇ ಮುಂಗಾರಿನಲ್ಲಿ. ಮಳೆಯಲ್ಲಿ ಮಿಂದ ನೆಲ ಹಚ್ಚ ಹಸಿರನ್ನು ಹೊದ್ದು ಗೂಡಿನ ನಿರ್ಮಾಣಕ್ಕೆ ಬೇಕಾದ ಕಚ್ಚಾ ವಸ್ತುವನ್ನು ಕೊರತೆಯೇ ಆಗದಂತೆ ಪೂರೈಸುತ್ತದೆ. ಅಷ್ಟೇ ಅಲ್ಲದೆ ಮುಂಗಾರು ಮುಗಿಯುವ ವೇಳೆಗೆ ಹುಲ್ಲಿನ ಗಿಡಗಳಲ್ಲೆಲ್ಲಾ ಕಾಳು ಮೂಡಿರುತ್ತದೆ. ಅದೇ ವೇಳೆಗೆ ಗೀಜಗದ ಮರಿಗಳೂ ಸಹ ಗೂಡಿನೊಳಗೆ ಕುಳಿತು ಚುಂಯ್ ಗುಟ್ಟುತ್ತ ತುತ್ತಿಗಾಗಿ ಕಾಯುತ್ತಿರುತ್ತವೆ. ಮರಿಗಳಿಗೆ ಆಹಾರದ ಸಮಸ್ಯೆಯೇ ಉದ್ಭವಿಸದಂತೆ ರೇಷನ್ ಸಿಗುವುದರಿಂದ ಸ್ವಚ್ಛಂದವಾಗಿ ಕಾಳುಗಳನ್ನು ಹೆಕ್ಕಿತಂದು ಉಣಬಡಿಸುತ್ತವೆ.

© ಶ್ರೀಕಾಂತ್ ಎ. ವಿ.

ಮಳೆಗಾಲ ಆರಂಭವಾದ ಕೂಡಲೆ ಗಂಡು ಗೀಜಗ ಹಕ್ಕಿಗಳು ಸೂರು ಕಟ್ಟಲು ನಿವೇಶನ ಹುಡುಕಲು ಪ್ರಾರಂಭಿಸುತ್ತವೆ. ಜಾಗದ ಆಯ್ಕೆಯಿಂದ ಹಿಡಿದು ಮನೆ ಆರ್.ಸಿ.ಸಿ ಹಂತಕ್ಕೆ ಬರುವವರೆಗೂ ಗಂಡಿನದ್ದೇ ಜವಾಬ್ದಾರಿ. ಈ ಹುಡುಕಾಟದಲ್ಲಿ ಸೂಕ್ತ ಜಾಗದ ಆಯ್ಕೆ ಸರಿಹೋದಲ್ಲಿ ಆ ಹಕ್ಕಿಯ ಪೀಳಿಗೆ ಮುಂದುವರೆಯುವುದಕ್ಕೆ ಅರ್ಧದಾರಿ ಸುಗಮವಾದಂತೆ. ಜಾಗದ ಆಯ್ಕೆ ಮಾಡುವಾಗ ಅದು ಗಮನಿಸುವ ಬಹು ಮುಖ್ಯ ಅಂಶವೆಂದರೆ ‘ರಕ್ಷಣೆ’. ಶತ್ರುಗಳಿಂದ ಗೂಡನ್ನು ರಕ್ಷಿಸಿಕೊಳ್ಳುವುದು ಸವಾಲಿನ ಕೆಲಸ. ಹಾಗಾಗಿಯೇ ಈ ಹಕ್ಕಿಗಳು ನೀರಿರುವ ಜಾಗವನ್ನು ಹುಡುಕಿ ಅದರ ಮೇಲ್ಭಾಗಕ್ಕೆ ಹರಡಿದ ಮರದ ಟೊಂಗೆಗಳನ್ನು ಆಯ್ಕೆ ಮಾಡುತ್ತವೆ. ಇದರಿಂದಾಗಿ ನೆಲದಿಂದ ಬಂದು ತೊಂದರೆ ಕೊಡಬಹುದಾದ ಬಹುತೇಕ ಶತ್ರುಗಳನ್ನು ದೂರವಿಡಬಹುದು. ಅಲ್ಲದೇ ಬೆಕ್ಕಿನಂತಹ ಸಣ್ಣ ಪುಟ್ಟ ಪ್ರಾಣಿಗಳು ನೀರಿನಲ್ಲಿ ಬಿದ್ದು ಬಿಡುವೆನೆಂಬ ಭಯದಿಂದ ಈ ಗೂಡುಗಳ ಹತ್ತಿರ ಸುಳಿಯುವುದಿಲ್ಲ. ಇನ್ನು ಗೂಡು ಕಟ್ಟಲು ಯಾವ ರೀತಿಯ ಗಿಡಮರ ಸೂಕ್ತವೆಂಬ ಪ್ರಶ್ನೆ ಬಂದಾಗ ಇವುಗಳ ಆಯ್ಕೆ ಮುಳ್ಳಿನ ಗಿಡಗಳಾಗಿರುತ್ತವೆ. ಮೊಟ್ಟೆಗಳನ್ನು ಕಬಳಿಸಲು ಬರುವ ಹಾವು ಇನ್ನಿತರ ಜೀವಿಗಳು ಮುಳ್ಳಿನ ಗಿಡದ ಮೇಲೆ ಸುಳಿದಾಡುವುದು ಕೊಂಚ ಕಡಿಮೆ. ಎಷ್ಟು ದಪ್ಪನೆಯ ಮರದ ಟೊಂಗೆಯ ತುದಿಯಲ್ಲಿ ಗೂಡು ಕಟ್ಟಬಹುದು ಎಂಬ ಆಯ್ಕೆಯೂ ಬಹುಮುಖ್ಯ. ತುಂಬಾ ತೆಳುವಾದ ಕಡ್ಡಿಯಾದರೆ ಮುಂಗಾರು ಮಾರುತಗಳ ಹೊಡೆತಕ್ಕೆ ತುಂಡರಿಸಬಹುದು, ತುಂಬಾ ದಪ್ಪನೆಯ ಟೊಂಗೆಯಾದರೆ ಗೂಡನ್ನು ನಾಶಗೊಳಿಸಬಲ್ಲ ಜೀವಿಗಳ ಸಂಚಾರಕ್ಕೆ ಭದ್ರ ದಾರಿಯನ್ನು ಒದಗಿಸುವಂತಾಗುತ್ತದೆ. ಈ ಎರಡೂ ಸಮಸ್ಯೆಗಳನ್ನು ಸರಿದೂಗಿಸುವಂತಹ ಟೊಂಗೆಯನ್ನು ಆಯ್ಕೆ ಮಾಡುವ ಚಾಣಾಕ್ಷತೆಯನ್ನು ಆ ಗಂಡು ಹಕ್ಕಿ ಹೊಂದಿರಲೇಬೇಕು.

© ಶ್ರೀಕಾಂತ್ ಎ. ವಿ.

 ಟಿ.ವಿ ಯಲ್ಲಿ ಬರುವ “ಸುಭದ್ರ ನಿರ್ಮಾಣಕ್ಕೆ ಗುಣ ಮಟ್ಟದ ಸಿಮೆಂಟನ್ನೇ ಬಳಸಿ” ಎಂಬ ಜಾಹೀರಾತಿನಂತೆ ಗೂಡು ಕಟ್ಟಲು ಸೂಕ್ತ ಕಚ್ಚಾವಸ್ತುವಿನ ಆಯ್ಕೆ ಬಹಳ ಮುಖ್ಯ. ಒಣಗಿದ ಹುಲ್ಲು ನೇಯ್ಗೆಗೆ ಸೂಕ್ತವಲ್ಲ. ಹೆಚ್ಚು ನಾರಿರುವ ಹಸಿರು ಹುಲ್ಲನ್ನು ಹುಡುಕಿ, ಪರಿಶೀಲಿಸಿ ಹೊತ್ತು ತಂದು ಕೇವಲ ತಮ್ಮ ಕೊಕ್ಕಿನಿಂದಲೇ ನೇಯುತ್ತವೆ. ನಂತರ ಒಣಗುವ ಹುಲ್ಲು ಕಟ್ಟಿದಂತೆಯೇ ಬಿಗಿಯಾಗುತ್ತಾ ಹೋಗುತ್ತದೆ. ಈ ಕೆಲಸವನ್ನು ಅವಿರತವಾಗಿ ಮಾಡಿ ಹದಿನೈದರಿಂದ ಇಪ್ಪತ್ತು ದಿನಗಳಲ್ಲಿ ಗೂಡು ಕಟ್ಟುವ ಕೆಲಸ ಮುಗಿಸುತ್ತವೆ. ಗೂಡಿನ ನಿರ್ಮಾಣ ಅರ್ಧ ಮುಗಿದಾಗ ಗೀಜಗ ಹಕ್ಕಿಯ ಜೀವನಕ್ರಮದ ರೋಚಕತೆ ಆರಂಭವಾಗುತ್ತದೆ. ಗಂಡು ಈಗ ಮನೆ ಕಟ್ಟುವುದರ ಜೊತೆಗೆ ಮಡದಿಯನ್ನೂ ಹುಡುಕಬೇಕು. ಅರ್ಧಂಬರ್ಧ ಕಟ್ಟಿದ ಗೂಡಿನ ಮೇಲೆ ಗಂಡು ಕುಳಿತು ತನ್ನ ರೆಕ್ಕೆ ಬಡಿಯುತ್ತಾ ಚಿರ್ರ್… ಚಿರ್ರ್ ….. ಎಂದು ಚೀರುತ್ತಾ ಹೆಣ್ಣನ್ನು ಕರೆಯುತ್ತದೆ. ಸಾಮಾನ್ಯವಾಗಿ ಗೀಜಗ ಹಕ್ಕಿಗಳು ಒಂದೇ ಕಡೆ ಹತ್ತಾರು ಗೂಡುಗಳನ್ನು ಕಟ್ಟುವುದರಿಂದ ಎಲ್ಲಾ ಗೂಡುಗಳ ನಿರ್ಮಾತೃಗಳು ಒಮ್ಮೆಯೇ ಹೀಗೆ ಮಾಡುವುದರಿಂದ ಆ ದೃಶ್ಯ ನೋಡುವುದೇ ಅಮೋಘ. ಬೆಂಗಳೂರಿನ ಚಿಕ್ಕಪೇಟೆಯ ಸೀರೆ ಅಂಗಡಿಯವರು ಹೊರಗೆ ನಿಂತು ಮಹಿಳಾಮಣಿಯರನ್ನು ನಮ್ಮ ಅಂಗಡಿಗೆ ಬನ್ನಿ ಎಂದು ಕರೆಯುವ ದೃಶ್ಯ ನೆನಪಾಗುತ್ತದೆ. ಹೆಣ್ಣಿಗೆ ಮಾತ್ರ ಸ್ವಯಂವರದ ಉತ್ಸವ ಆರಂಭವಾಗುತ್ತದೆ. ಹಲವಾರು ಗೂಡುಗಳಿಗೆ ಭೇಟಿ ನೀಡುವ ಹೆಣ್ಣು ಗೂಡನ್ನು ಹಲವಾರು ಆಯಾಮಗಳಲ್ಲಿ ಪರಿಶೀಲಿಸುತ್ತದೆ. ಗೂಡಿನ ಜಾಗ, ಟೊಂಗೆಯ ಆಯ್ಕೆ, ನೇಯ್ಗೆಯ ಕೌಶಲ್ಯ, ಗಾತ್ರ, ಗೂಡೊಳಗಿನ ಬಾಣಂತಿ ಕೋಣೆ (ಮೊಟ್ಟೆಯಿಟ್ಟು ಕಾವಿಗೆ ಕೂರುವ ಜಾಗ), ಕೊಳವೆಯಂತಹ ಬಾಗಿಲಿನ ಉದ್ದ, ರಕ್ಷಣಾ ಕ್ರಮಗಳು, ಹೀಗೆ ಎಲ್ಲದಕ್ಕೂ ಅಂಕಗಳಿರುತ್ತವೆ. ಹೆಚ್ಚು ಅಂಕ ಪಡೆಯುವ ಗೂಡಿನ ಮಾಲೀಕನೇ ಹೆಣ್ಣಿನ ಆಯ್ಕೆ. ಈ ಆಯ್ಕೆಯು ಮುಂದಿನ ಪೀಳಿಗೆಯ ಯಶಸ್ಸಿಗೆ ಅಡಿಪಾಯವಾಗುತ್ತದೆ. ಹೆಣ್ಣಿನ ಪರಿಶೀಲನಾ ಭೇಟಿಯಲ್ಲಿ ಆಕೆಗೆ ತನ್ನ ಗೂಡು ಇಷ್ಟವಾಗದಿದ್ದರೆ ಮುಂದೇನು ಗತಿ ಎಂಬ ಆತಂಕದಿಂದ ಕೆಲವು ಗಂಡುಗಳು ಎರಡು ಮೂರು ಗೂಡುಗಳನ್ನೂ ಸಹ ಒಂದಲ್ಲದಿದ್ದರೆ ಮತ್ತೊಂದು ಎಂಬಂತೆ ನಿರ್ಮಿಸಿರುತ್ತವೆ. ಇನ್ನು ಕೆಲವು ಪ್ರಳಯಾಂತಕ ಗಂಡು ಹಕ್ಕಿ ಬೇರೆ ಗಂಡು ಹಕ್ಕಿ ಕಟ್ಟಿರುವ ಗೂಡು,  ತನ್ನ ಗೂಡಿಗಿಂತ ಚಂದ ಇದೆ ಅನ್ನಿಸಿದರೆ ಅದರೊಡನೆ ಜಗಳವಾಡಿ, ಬೆದರಿಸಿ, ಗೂಡನ್ನು ಕಬಳಿಸಿಕೊಂಡು ಹೆಣ್ಣಿನ ಮುಂದೆ ತಾನೇ ಕಟ್ಟಿದ ಗೂಡು ಎಂಬಂತೆ ಪೋಸು ನೀಡುವುದೂ ಇದೆ. ಮನುಷ್ಯ ಮಾತ್ರರಲ್ಲಿ ಕಂಡು ಬರುವ ಕೆಲವು ದುಷ್ಟ ಗುಣಗಳು ಒಮ್ಮೊಮ್ಮೆ ಇನ್ಯಾವುದೋ ಜೀವಿಯಲ್ಲಿ ಕಂಡಬಂದು ಅಚ್ಚರಿ ಮೂಡಿಸುತ್ತದೆ.

© ಶ್ರೀಕಾಂತ್ ಎ. ವಿ.

ಗೂಡಿನ ಆಯ್ಕೆಯ ಬಳಿಕ ಗಂಡು ಹೆಣ್ಣು ಒಂದಾಗಿ ದಾಂಪತ್ಯ ಆರಂಭಿಸುತ್ತವೆ. ಈಗ ಗೂಡನ್ನು ಪೂರ್ಣಗೊಳಿಸಲು ಹೆಣ್ಣು ಗಂಡಿಗೆ ಜೊತೆಯಾಗುತ್ತದೆ. ಇಬ್ಬರೂ ಸೇರಿ ಗೂಡನ್ನು ಪೂರ್ಣಗೊಳಿಸುವ ವೇಳೆಗೆ ಪ್ರಣಯಕಾಲ ಸನ್ನಿಹಿತವಾಗುತ್ತದೆ. ಮನೆ ನಿರ್ಮಾಣ ಮುಗಿದ ಕೂಡಲೇ ಮನೆಯ ಒಳಾಂಗಣ ವಿನ್ಯಾಸ (interior designing) ಪೂರ್ತಿಯಾಗಿ ನನ್ನದೇ ಆಯ್ಕೆ ಎಂದು ಹೇಳುತ್ತಾ ನಾಲ್ಕೈದು ಲಕ್ಷ ಹೆಚ್ಚುವರಿ ಹೊರೆ ಹೊರೆಸುವ ಹೆಂಡತಿಯರಂತೆ, ಗೂಡನ್ನು ಕಟ್ಟಿ ಮುಗಿಸಿದ ಮೇಲೆ ಒಳಗಿನ ಅಲಂಕಾರವೆಲ್ಲವನ್ನು ಮಾಡುತ್ತ ಹೆಣ್ಣು ಹಕ್ಕಿಯು ಗೂಡಿಗೆ ಒಂದು ಅಂತಿಮ ಸ್ಪರ್ಶ (finishing touch) ಕೊಡುತ್ತದೆ. ಎರಡರಿಂದ ನಾಲ್ಕು ಮೊಟ್ಟೆಗಳನ್ನಿಡುವ ಹೆಣ್ಣು ಎರಡು ವಾರಗಳವರೆಗೆ ಕಾವು ಕೊಡುತ್ತದೆ. ಮೊಟ್ಟೆಯೊಡೆದು ಹೊರಬರುವ ಮರಿಗಳನ್ನು ಸುಮಾರು ಮೂರು ವಾರಗಳವರೆಗೆ ಗಂಡು ಹೆಣ್ಣು ಇಬ್ಬರೂ ಕಾಳುಣಿಸಿ ಪೋಷಿಸುತ್ತವೆ. ಮೊದಲು ಜೋಡಿಯಾದ ಹೆಣ್ಣು ಕಾವಿಗೆ ಕುಳಿತ ಅವಧಿಯಲ್ಲಿ ಗಂಡು ಸುಮ್ಮನೆ ಕೂರದೆ ಇನ್ನೊಂದಷ್ಟು ಗೂಡುಗಳನ್ನು ಕಟ್ಟಿ ಕೈಲಾದಷ್ಟು ಹೆಣ್ಣನ್ನು ಆಕರ್ಷಿಸಿ ಎರಡು ಮೂರು ಶಾಖೆಗಳನ್ನು ತೆಗೆದಿರುತ್ತದೆ. ಅಂದರೆ ಇಲ್ಲಿ ಗಂಡು ಗೀಜಗ ಹಕ್ಕಿಯು ಏಕಪತ್ನಿ ವ್ರತಸ್ಥನಲ್ಲವೆಂಬುದು ತಿಳಿಯುತ್ತದೆ. ಶತಾಯಗತಾಯ ತನ್ನ ಸಂತತಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ವೃದ್ಧಿಸಬೇಕೆಂಬುದು ಹಕ್ಕಿಯ ಪರಮ ಧ್ಯೇಯ. ಇದನ್ನೇ ಚಾರ್ಲ್ಸ್ ಡಾರ್ವಿನ್ ವಿಕಾಸವಾದದ ಸಿದ್ಧಾಂತದಲ್ಲಿ Prodigality of reproduction ಎಂದು ಕರೆದಿರುವುದು. ಅಂದರೆ ವಿಕಸನದ ಹಾದಿಯಲ್ಲಿ ಜೀವಿಯ ಬಲಿಷ್ಠತೆ ಅದರ ಸಂತಾನ ಸಾಮರ್ಥ್ಯದ ಪ್ರತೀಕವಾಗಿರುತ್ತದೆ.

© ಶ್ರೀಕಾಂತ್ ಎ. ವಿ.

ಒಂದು ಪುಟ್ಟ ಗೂಡು ಹಕ್ಕಿಯ ಬದುಕನ್ನು ಸಾರ್ಥಕಗೊಳಿಸಿ ಸಂತತಿಯ ನಿರಂತರತೆಗೆ ಸಹಾಯಕಾರಿಯಾಗುತ್ತದೆ. ಆದರೆ ಎಲ್ಲವೂ ನಾವಂದುಕೊಂಡಂತೆ ನಡೆಯುವುದಿಲ್ಲ ಎಂಬ ಮಾತು ಸಕಲ ಜೀವರಾಶಿಗೂ ಅನ್ವಯಿಸುತ್ತದೆ. ಒಂದೊಮ್ಮೆ ಆ ಗೀಜಗ ಹಕ್ಕಿಯ ಗ್ರಹಚಾರ ನೆಟ್ಟಗಿಲ್ಲದಿದ್ದರೆ ಅವು ಬೆವರು ಸುರಿಸಿ (ಉತ್ಪ್ರೇಕ್ಷೆಗಾಗಿ ಮಾತ್ರ!!!) ಕಟ್ಟಿದ ಗೂಡನ್ನು ಇನ್ನಾವುದೋ ಹಕ್ಕಿ ಬಂದು ಕಬ್ಜ ಮಾಡಬಹುದು. ತಮ್ಮ ಪುಟ್ಟ ಕುಟುಂಬಕ್ಕಾಗಿ ಸೂರೊಂದು ನಿರ್ಮಿಸಲು ಗಂಡು ಗೀಜಗ ಹಕ್ಕಿಗಳು ಎಡಬಿಡದೆ ಓಡಾಡಿ ಪಟ್ಟ ಪರಿಶ್ರಮವನ್ನು ಚಿತ್ರಗಳಲ್ಲಿ ಕಾಣಬಹುದು. ಮತ್ತೊಂದು ಚಿತ್ರದಲ್ಲಿ, ತನ್ನ ಒಂದು ಕೂದಲೆಳೆಯಷ್ಟು ಪರಿಶ್ರಮವನ್ನೂ ಹಾಕದೆ ಮನೆಯೊಂದನ್ನು ಕೇವಲ ತನ್ನ ಚಾಕಚಕ್ಯತೆಯಿಂದ ಬಿಳಿಪೃಷ್ಠದ ರಾಟವಾಳ (White rumped munia) ವೊಂದು ಅನಾಯಾಸವಾಗಿ ಆಕ್ರಮಿಸುತ್ತಿರುವುದನ್ನು ಕಾಣಬಹುದು. ಇದನ್ನು ಜೀವವಿಜ್ಞಾನದಲ್ಲಿ Brood mobbing ಎನ್ನುತ್ತಾರೆ. (ಹೆಚ್ಚಿನ ಮಾಹಿತಿಗಾಗಿ- Dhindsa, M. S.; Sandhu, P. S. (1988). “Response of the Baya Weaverbird (Ploceus philippinus) to eggs of the White-throated Munia (Lonchura malabarica): relation to possible incipient brood parasitism”. Zool. Anz. 220: 216–222.) ಖ್ಯಾತ ಪಕ್ಷಿತಜ್ಞ ಸಲೀಂ ಅಲಿಯವರು ಈ ರಾಟವಾಳದ ಗೂಡು ಆಕ್ರಮಿಸುವ ಗುಣವನ್ನು ವಿವರಿಸಿದ್ದಾರೆ. (ಹೆಚ್ಚಿನ ಮಾಹಿತಿಗಾಗಿ – Ali Salim; Ambedkar, Vijaykumar C. (1956). “Notes on the Baya Weaver Bird, Ploceus philippinus Linn”. J. Bombay Nat. Hist. Soc. 53 (3): 381–389.) ಇದನ್ನು ಒಂದು ಪ್ರಾಕೃತಿಕ ನಿಯಮವೆಂದೇ ಒಪ್ಪೋಣ. ಮುನಿಯ ಹಕ್ಕಿಯ ಈ ಅಪರೂಪದ ನಡವಳಿಕೆಯ ಹಿಂದೆ ನಿಸರ್ಗದ ಅದ್ಯಾವ ಪ್ರಕ್ರಿಯೆ ಅಡಗಿದೆಯೋ ಯಾರಿಗೆ ಗೊತ್ತು!!!!

ಆದರೆ ಇಂತಹ ಪರಾವಲಂಬಿ ಗುಣವನ್ನು ನಮ್ಮ ಸುತ್ತಮುತ್ತ ಒಂದಷ್ಟು ಜನರು ಅನುಸರಿಸುತ್ತಿರುವುದನ್ನು ಇತ್ತೀಚಿನ ದಿನಗಳಲ್ಲಿ ಕಾಣುತ್ತಿದ್ದೇವೆ. ಸಾಲಸೋಲ ಮಾಡಿ, ಇದ್ದ ಒಡವೆ ಆಭರಣಗಳನ್ನೆಲ್ಲಾ ಗಿರವಿ ಇಟ್ಟು, ಆಪ್ತರ ಬಳಿ ಕೈ ಸಾಲ ಮಾಡಿ, ಹಗಲು-ರಾತ್ರಿ, ಬಿಸಿಲು-ಮಳೆ ಎನ್ನದೇ, ಆರೋಗ್ಯದ ಕಾಳಜಿಯನ್ನೂ ಮರೆತು ಜನರು ಮನೆ ಕಟ್ಟುತ್ತಾರೆ. ತಮ್ಮ ಜೀವಮಾನದ ಕೂಡಿಟ್ಟ ಹಣವನ್ನೆಲ್ಲಾ ಇದಕ್ಕೆ ತಂದು ಸುರಿಯುತ್ತಾರೆ. ಆದರೆ ನಮ್ಮ ನಡುವೆಯೂ ಈ ಮುನಿಯ ಹಕ್ಕಿಯಂತವರು ಇರುತ್ತಾರೆ ಎಂಬುದು ಕಹಿ ಸತ್ಯ. ತಮ್ಮ ಕುತಂತ್ರದಿಂದ, ತೋಳ್ಬಲದಿಂದ, ಬಲವಂತದಿಂದ ಯಾರೋ ಕಟ್ಟಿದಮನೆಯನ್ನು ರಿಯಲ್ ಎಸ್ಟೇಟ್ ಮಾಫಿಯಾದ ಹೆಸರಲ್ಲಿ ಆಕ್ರಮಿಸಿಕೊಂಡು ಅವರನ್ನು ಬೀದಿಗೆ ತಳ್ಳಿದಂತಹ ಅನೇಕ ಉದಾಹರಣೆಗಳನ್ನು ಆಗೀಗ ಕೇಳುತ್ತಿರುತ್ತೇವೆ, ಕಾಣುತ್ತಿರುತ್ತೇವೆ. ಇಂತಹ “ಮುನಿಯನ ಮಾದರಿ” ಯನ್ನು ಅನುಸರಿಸಿ ಬದುಕುವವರ ನಡುವೆ ನಾವು ಎಚ್ಚರಿಕೆಯಿಂದಲೇ ಬದುಕಬೇಕು.

(ಅಂದ ಹಾಗೆ ಎಲ್ಲಾ ರಾಟವಾಳ ಹಕ್ಕಿಗಳೂ ಹೀಗೆಯೇ ಬದುಕುವುದಿಲ್ಲ, ಬಹುತೇಕ ಅವು ಕೂಡ ತಮ್ಮ ಸ್ವಂತಗೂಡನ್ನು ತಾವೇ ನಿರ್ಮಿಸುತ್ತವೆ)

© ಶ್ರೀಕಾಂತ್ ಎ. ವಿ.


ಲೇಖನ: ಶ್ರೀಕಾಂತ್ ಎ. ವಿ.
             ಶಿವಮೊಗ್ಗ ಜಿಲ್ಲೆ

Print Friendly, PDF & Email
Spread the love
error: Content is protected.