ಮಾಸ ವಿಶೇಷ – ಬೇವು
© ರಾಕೇಶ್ ಆರ್. ವಿ., ಬೇವು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
ಸಾಮಾನ್ಯ ಹೆಸರು: Neem
ವೈಜ್ಞಾನಿಕ ಹೆಸರು : Azadirachta indica
ಬೇವಿನ ಮರವು ಭಾರತದ ಉಪಖಂಡ ಮೂಲವಾದರೂ ಕೂಡ ಪಾಕಿಸ್ತಾನ, ಶ್ರೀಲಂಕಾ, ಥೈಲ್ಯಾಂಡ್, ಮಲೇಷ್ಯಾ ಮತ್ತು ಇಂಡೋನೇಷ್ಯಾ ದೇಶಗಳ ಒಣಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಸುಮಾರು 30 ಮೀಟರ್ ಗಳಷ್ಟು ಎತ್ತರ ಬೆಳೆಯಬಲ್ಲ ಇದರ ಕಾಂಡವು ಸುಮಾರು 1.8 ರಿಂದ 2.4 ಮೀಟರ್ ಸುತ್ತಳತೆ ಹೊಂದಿದ್ದು, ಕಂದು ಅಥವಾ ಕಡು ಕೆಂಪು ಬಣ್ಣದ ಒರಟು ತೊಗಟೆ ಹೊಂದಿರುತ್ತದೆ. ಎಲೆಗಳು ಸಣ್ಣ ಕೊಂಬೆಯಲ್ಲಿ ಒಂದಕ್ಕೊಂದು ವಿರುದ್ಧವಾಗಿ ಜೋಡಣೆಗೊಂಡಿರುವ ಸಂಯುಕ್ತ ಎಲೆಗಳನ್ನು ಹೊಂದಿದ್ದು, ಸುಮಾರು 20-30 ಸೆಂಟಿಮೀಟರ್ ಉದ್ದವಿರುತ್ತವೆ. ಬಿಳಿ ಅಥವಾ ಮಸುಕು ಹಳದಿ ಬಣ್ಣದ ಸಣ್ಣ ಹೂಗಳು ಸಣ್ಣಕೊಂಬೆಯಲ್ಲಿ ಸಮೂಹಗೊಂಡಿದ್ದು, ಏಪ್ರಿಲ್ ನಿಂದ ಮಾರ್ಚ್ ತಿಂಗಳಲ್ಲಿ ಹೂ ಬಿಡುತ್ತವೆ. ಇದರ ಹಣ್ಣು ಅಂಡಾಕಾರದ ಹಸಿರು ಅಥವಾ ಹಳದಿ ಬಣ್ಣವಿದ್ದು, ನಯವಾಗಿರುತ್ತದೆ. ಕಹಿ ಗುಣ ಹೊಂದಿರುವ ಬೇವಿನ ಮರದ ಎಲ್ಲಾ ಭಾಗಗಳು ಮನುಷ್ಯನ ದೇಹದ ಹಲವಾರು ಖಾಯಿಲೆಗಳಿಗೆ ಔಷಧಿಯಾಗಿ ಬಳಕೆಯಾಗುತ್ತದೆ.