ಪ್ರಕೃತಿ ಬಿಂಬ
© ಅಭಿನಂದನ್ ಬಿ. ಎ. , ದೊಡ್ಡ ನೀರುಕಾಗೆ
ದೊಡ್ಡ ನೀರುಕಾಗೆ ಪಕ್ಷಿಯನ್ನು ನದಿಯ ದಡ ಹಾಗು ಸಿಹಿ ನೀರಿನ ಸರೋವರಗಳಲ್ಲಿ ಹೆಚ್ಚಾಗಿ ಕಾಣಬಹುದು. ಇವುಗಳು ಚಳಿಗಾಲದಲ್ಲಿ ಆಹಾರಕ್ಕಾಗಿ ಕರಾವಳಿಯುದ್ದಕ್ಕೂ ವಲಸೆ ಹೋಗುತ್ತವೆ. ಇವುಗಳ ಮುಖ್ಯ ಆಹಾರ ಮೀನುಗಳು, ಇದು ನೀರಿನಲ್ಲಿ ಮುಳುಗಿ ಮೀನು ಹಿಡಿಯುವುದರಲ್ಲಿ ನಿಷ್ಣಾತ ಪಕ್ಷಿ. ಇವು ಜಲಚರ ಹಕ್ಕಿಗಳಾದರೂ ಕೂಡ ಇದರ ಪುಕ್ಕಗಳಿಗೆ ಜಲನಿರೋಧಕ ಶಕ್ತಿ ಇಲ್ಲ. ಇವುಗಳ ವಿಶೇಷತೆ ಎಂದರೆ ಆಳದಲ್ಲಿರುವ ಮೀನನ್ನು ಹಿಡಿಯಲು ತಮ್ಮ ಪುಕ್ಕಗಳಿಂದ ಗಾಳಿಯನ್ನು ಹೊರಹಾಕಿ ದೇಹದ ತೂಕವನ್ನು ಅಧಿಕಗೊಳಿಸಿ ನೀರಿನೊಳಗೆ ನುಗ್ಗಿ ಬೇಟೆಯಾಡುತ್ತವೆ. ಇವು ನೀರಿನ ಮೂಲಗಳಾದ ಕೆರೆ, ನದಿಗಳ ಸಮೀಪವಿರುವ ಮರಗಳ ಮೇಲೆ ಕಡ್ಡಿ ಮತ್ತು ಎಲೆಗಳನ್ನು ಬಳಸಿ ಗೂಡು ಕಟ್ಟಿ ಮರಿ ಮಾಡುತ್ತವೆ.c
© ಅಭಿನಂದನ್ ಬಿ. ಎ., ಜುಟ್ಟು ಗಿಡುಗವು
ಜುಟ್ಟು ಗಿಡುಗವು ಬೇಟೆಯ ಹಕ್ಕಿಯಾಗಿದ್ದು, ಅಕ್ಸಿಪಟ್ರಿಡೇ ಕುಟುಂಬಕ್ಕೆ ಸೇರಿದೆ. ಇವುಗಳನ್ನು ಹೆಚ್ಚಾಗಿ ಭಾರತ ಉಪಖಂಡ, ದಕ್ಷಿಣ ಭಾರತ ಮತ್ತು ಶ್ರೀಲಂಕಾದಲ್ಲಿ ಕಾಣಬಹುದು. ಸಣ್ಣ ಪ್ರಾಣಿಗಳು, ಪಕ್ಷಿಗಳು ಹಾಗು ಸರೀಸೃಪಗಳು ಇವುಗಳ ಮುಖ್ಯ ಆಹಾರವಾಗಿದೆ. ಇದರ ವಿಶೇಷತೆ ಕೆಲವೊಮ್ಮೆ ತನಗಿಂತ ದೊಡ್ಡದಾದ, ಭಾರವಾದ ಬೇಟೆಯನ್ನು ಹೊತ್ತೊಯ್ಯುವುದು. ಇವುಗಳು ಗುಡ್ಡಗಾಡು – ಕುರುಚಲು ಕಾಡು ಪ್ರದೇಶಗಳಲ್ಲಿ ಕಡ್ಡಿಗಳನ್ನು ಬಳಸಿ ಗೂಡು ಕಟ್ಟುತ್ತವೆ.
© ಅಭಿನಂದನ್ ಬಿ. ಎ., ಹಾವು ಗಿಡುಗ
ಹಾವು ಗಿಡುಗವು ಮಧ್ಯಮ ಗಾತ್ರದ ಬೇಟೆಯ ಹಕ್ಕಿಯಾಗಿದ್ದು, ಏಷ್ಯಾದ ಉಷ್ಣವಲಯದ ಅರಣ್ಯಗಳು ಇವುಗಳ ಆವಾಸಸ್ಥಾನ. ಸಣ್ಣ ಪಕ್ಷಿ, ಇಲಿ, ಅಳಿಲು ಮತ್ತು ಹಾವು ಇದರ ಆಹಾರ. ಈ ಹಾವು ಗಿಡುಗದ ವಿಶೇಷತೆ ಕುಳಿತಾಕ್ಷಣ ಅಥವಾ ಕೂಗುವಾಗ ನೆತ್ತಿಯ ಜುಟ್ಟು ಸೆಟೆದು ನಿಲ್ಲುತ್ತದೆ. ಹೆಚ್ಚಾಗಿ ಇವು ಚಳಿಗಾಲದ ಕೊನೆಯಲ್ಲಿ ಸಂತಾನೋತ್ಪತ್ತಿ ಕ್ರಿಯೆಯನ್ನು ನಡೆಸಿ ಬೇಸಿಗೆಯ ಆರಂಭದಲ್ಲಿ ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತವೆ.
© ಸೌಮ್ಯ ಅಭಿನಂದನ್., ಚಿಟ್ಟು ಗೂಬೆ
ಚಿಟ್ಟು ಗೂಬೆಯು ದಕ್ಷಿಣ ಏಷ್ಯಾಕ್ಕೆ ಸೇರಿದ ನಿವಾಸಿ ಪಕ್ಷಿಯಾಗಿದೆ. ಇದನ್ನು IUCN ವರದಿಯ ಪ್ರಕಾರ Least Concern ಎಂದು ಪರಿಗಣಿಸಲಾಗಿದೆ. ಇದು ನಿಶಾಚರಿಯಾಗಿದ್ದು, ಮರೆಮಾಚುವ ಬಣ್ಣವನ್ನು ಹೊಂದಿದೆ. ಆದ್ದರಿಂದ ಇದನ್ನು ಹಗಲಿನಲ್ಲಿ ಹುಡುಕುವುದು ತುಂಬಾ ಕಷ್ಟಸಾಧ್ಯ. ಮರದ ಪೊಟರೆಗಳಲ್ಲಿ ಗೂಡು ಮಾಡುತ್ತವೆ. ಇವು ಜನವರಿ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ಮೂರರಿಂದ ಐದು ಮೊಟ್ಟೆಗಳಿಗೆ ಸುಮಾರು 26 ದಿನಗಳವರೆಗೆ ಕಾವು ಕೊಟ್ಟು ಮರಿಮಾಡುತ್ತವೆ.
ಚಿತ್ರಗಳು : ಅಭಿನಂದನ್ ಬಿ. ಎ.
ಲೇಖನ: ಸೌಮ್ಯ ಅಭಿನಂದನ್
ನಾನು ಪಶ್ಚಿಮ ಘಟ್ಟಗಳ ಹೃದಯ ಭಾಗದಲ್ಲಿ ವಾಸಿಸಿರುವ ಹವ್ಯಾಸಿ ಛಾಯಾಗ್ರಾಹಕಿ, ಮೂಲತಃ ಕೃಷಿಕರ ಹಿನ್ನಲೆಯಿಂದ ಬಂದಿದ್ದರಿಂದಲೇನೊ ಕಾಡು, ಪಕ್ಷಿ, ಕೀಟಗಳ ಕಡೆಗೆ ಹೆಚ್ಚು ಆಸಕ್ತಿ. ಅಲ್ಲದೆ ವನ್ಯಜೀವಿ ಮತ್ತು ನಿರ್ವಹಣೆ ಎಂಬ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರಿಂದ ಜೀವಜಗತ್ತಿನ ಬಗ್ಗೆ ಅನೇಕ ವಿಷಯಗಳನ್ನು ತಿಳಿದುಕೊಳ್ಳಲು ಸಹಾಯಕವಾಯಿತು. ಜೀವಸಂಕುಲದ ಬಗ್ಗೆ ನನಗೆ ತಿಳಿದ ಕೆಲವು ವಿಷಯಗಳನ್ನು ಬರಹದ ಮೂಲಕ ಓದುಗರಿಗೆ ತಲುಪಿಸಬೇಕೆಂಬುದು ನನ್ನ ಉದ್ದೇಶ.