ಪ್ರಕೃತಿ ಬಿಂಬ
© ಸೇಪುರಿ ಸಾಯಿ ಅಖಿಲ್ ತೇಜ , ಫ್ಲೆಮಿಂಗೋ
ಫ್ಲೆಮಿಂಗೋಗಳು ಸಾಮಾನ್ಯವಾಗಿ ಒಂದು ಕಾಲಿನ ಮೇಲೆ ನಿಲ್ಲುತ್ತವೆ, ಇನ್ನೊಂದು ಕಾಲನ್ನು ದೇಹದ ಕೆಳಗೆ ಸಿಕ್ಕಿಸಿಕೊಳ್ಳುತ್ತವೆ. ಈ ನಡವಳಿಕೆಯ ಕಾರಣವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲಾಗಿಲ್ಲ. ಒಂದು ಸಿದ್ಧಾಂತವೆಂದರೆ, ತಣ್ಣನೆಯ ನೀರಿನಲ್ಲಿ ನಿಲ್ಲುವುದರಿಂದ ದೇಹದ ಉಷ್ಣಾಂಶವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ ಎನ್ನುವುದು, ಆದರೆ ಫ್ಲೆಮಿಂಗೋಗಳ ಈ ನಡವಳಿಕೆಗೆ ಸೂಕ್ತ ಕಾರಣವನ್ನು ಇನ್ನೂ ಹುಡುಕಲಾಗಿಲ್ಲ. ಆಹಾರವನ್ನಾಗಿ ಇವುಗಳು ನೀರಿನಲ್ಲಿ ಸಿಗುವ ಕೀಟಗಳ ಲಾರ್ವಗಳು, ಮೀನುಗಳು, ಸೀಗಡಿಗಳು ಮತ್ತು ಪಾಚಿಯನ್ನು ಸೇವಿಸುತ್ತವೆ. ಇವುಗಳಿಗೆ ಆಹಾರ ಪದಾರ್ಥಗಳನ್ನು ವಿಂಗಡಿಸಲು ಲ್ಯಾಮೆಲ್ಲೆ ಎಂಬ ಕೂದಲುಳ್ಳ ರಚನೆಯು ಸಹಾಯ ಮಾಡುತ್ತವೆ. ಫ್ಲೆಮಿಂಗೊಗಳಲ್ಲಿ ಗಂಡು ಮತ್ತು ಹೆಣ್ಣು ಎರಡೂ ಸಹ ಗೂಡುಕಟ್ಟುವಲ್ಲಿ, ಮೊಟ್ಟೆ ಹಾಗು ಗೂಡನ್ನು ಸಂರಕ್ಷಿಸುವುದರಲ್ಲಿ ಜೊತೆಯಾಗಿರುತ್ತವೆ.
© ಸೇಪುರಿ ಸಾಯಿ ಅಖಿಲ್ ತೇಜ, ನೀಲಕಂಠ
ನೀಲಕಂಠ ಪಕ್ಷಿಯು ಕರ್ನಾಟಕ, ಆಂಧ್ರಪ್ರದೇಶ, ಬಿಹಾರ ಮತ್ತು ಓಡಿಶಾ ರಾಜ್ಯದ ರಾಜ್ಯ ಪಕ್ಷಿಯಾಗಿರುತ್ತದೆ. ಇದು ಪಾರಿವಾಳಕ್ಕಿಂತ ಸಣ್ಣದಾದ ಪಕ್ಷಿಯಾಗಿದೆ ತಲೆ, ರೆಕ್ಕೆಯು ತಿಳಿ ನೀಲಿಯಾಗಿದ್ದು ಕತ್ತು ಮತ್ತು ಎದೆ ಕಂದು ಬಣ್ಣವಿದೆ. ನೀಲಕಂಠ ಪಕ್ಷಿಯು ಕೃಷಿಭೂಮಿ, ಕುರುಚಲು ಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ವಿದ್ಯುತ್ ತಂತಿಗಳು, ಮರಗಳು, ಬಂಡೆಗಳು ಹಾಗೂ ಕಂಬಗಳಲ್ಲಿ ಕುಳಿತಿರುವುದನ್ನು ನಾವು ಸಾಮಾನ್ಯವಾಗಿ ಕಾಣಬಹುದು. ವರ್ಷದ ಮಾರ್ಚಿಯಿಂದ ಜುಲೈ ತಿಂಗಳವರೆಗೂ ಇದರ ಸಂತಾನೋತ್ಪತ್ತಿ ಸಮಯವಾಗಿದ್ದು; ಮರದ ಪೊಟರೆಯಲ್ಲಿ ಮೃದುವಾದ ವಸ್ತುಗಳನ್ನು ಸಂಗ್ರಹಿಸಿ 4-5 ಮೊಟ್ಟೆಗಳನ್ನಿಟ್ಟು 15-18 ದಿನಗಳ ಕಾಲ ಕಾವು ಕೊಟ್ಟು ಮರಿ ಮಾಡುತ್ತವೆ. ಹಿಂದೂ ದಂತಕಥೆಗಳಿಗೆ ಸಂಬಂಧಿಸಿದಂತೆ ಇದು ವಿಷ್ಣುವಿಗೆ ಪವಿತ್ರವಾದುದು ಎಂದು ಹೇಳಲಾಗುತ್ತದೆ, ಅಲ್ಲದೇ ದಸರಾ ಅಥವಾ ದುರ್ಗಾ ಪೂಜೆಯ ಹಬ್ಬದ ಕೊನೆಯ ದಿನದಲ್ಲಿ ಇದನ್ನು ಹಿಡಿದು ಬಿಡುಗಡೆ ಮಾಡಲಾಗುತ್ತಿತ್ತು.
© ಸೇಪುರಿ ಸಾಯಿ ಅಖಿಲ್ ತೇಜ ,ಹೂಗುಬ್ಬಿ
ಹೂಗುಬ್ಬಿಯು ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶದಲ್ಲಿ ಕಂಡುಬರುವ ಅತೀ ಪುಟ್ಟ ಪಕ್ಷಿಯಾಗಿದ್ದು ಇದು ಸುಮಾರು 8 ಸೆಂ.ಮೀ. ಇರುತ್ತದೆ. ಇವುಗಳು ಹೂವಿನ ಮಕರಂದ ಹಾಗು ಹಣ್ಣುಗಳನ್ನು ಆಹಾರವನ್ನಾಗಿ ಅವಲಂಬಿಸಿವೆ. ಇವುಗಳು ಹೆಚ್ಚಾಗಿ ಲೊರಾಂತಸ್ ಎಂಬ ಅರೆ ಪರಾವಲಂಬಿ ಸಸ್ಯದ ಹಣ್ಣನ್ನು ತಿನ್ನುತ್ತವೆ, ಲೊರಾಂತಸ್ ಸಸ್ಯದ ಬೀಜ ಪ್ರಸರಣೆಯನ್ನು ಇವುಗಳು ಬಿಟ್ಟರೆ ಇನ್ನು ಯಾವುದೇ ಪಕ್ಷಿಗಳು ಮಾಡುವುದಿಲ್ಲ. ಕಾರಣ ಈ ಸಸ್ಯದ ಹಣ್ಣು ಅಂಟಂಟು ಇರುವುದರಿಂದ ಬೇರೆ ಯಾವ ಪಕ್ಷಿಯು ತಿನ್ನಲು ಇಚ್ಛಿಸುವುದಿಲ್ಲ. ಈ ಲೊರಾಂತಸ್ ಸಸ್ಯವನ್ನು ಕಾಡು ತ್ರಿವರ್ಣೆ ಚಿಟ್ಟೆಯು ಅತಿಥೇಯ ಸಸ್ಯವನ್ನಾಗಿಸಿದೆ. ಒಂದು ಪುಟ್ಟ ಪಕ್ಷಿಯು ಒಂದು ಪ್ರಭೇದದ ಸುಂದರ ಚಿಟ್ಟೆಯ ಜೀವನಕ್ಕೆ ಕಾರಣವಾಗಿದೆ ಎಂಬುದು ಎಷ್ಟು ಸಂತೋಷದ ವಿಷಯವಲ್ಲವೆ. ಬದನಿಕೆ ಹಕ್ಕಿಯು ವರ್ಷದ ಫೆಬ್ರವರಿ ಇಂದ ಜೂನ್ ವರೆಗೆ ಸುಮಾರು 3 ಮೊಟ್ಟೆಗಳನ್ನಿಟ್ಟು ಮರಿಮಾಡುತ್ತವೆ.
©ಸೇಪುರಿ ಸಾಯಿ ಅಖಿಲ್ ತೇಜ , ಹಳದಿ ಕೊಕ್ಕಿನ ಹರಟೇಮಲ್ಲ
ಹಳದಿ ಕೊಕ್ಕಿನ ಹರಟೇಮಲ್ಲ, ಹೆಸರೇ ಹೇಳುವಂತೆ ಇವುಗಳು ಸಾಮಾನ್ಯವಾಗಿ ಗುಂಪುಗಳಲ್ಲಿ ಗದ್ದಲ ಮಾಡುತ್ತಾ ಪೊದೆಗಳಿಂದ ಪೊದೆಗಳಿಗೆ ಹಾರಾಡುವುದನ್ನು ನಾವು ಕಾಣಬಹುದು. ಇವುಗಳು ಮೂಲತಃ ದಕ್ಷಿಣ ಭಾರತ ಮತ್ತು ಶ್ರೀಲಂಕಾದಲ್ಲಿ ಕಂಡು ಬರುತ್ತವೆ. ಈ ಪಕ್ಷಿಗಳ ಮೇಲ್ಭಾಗವು ಕಂಡು ಬಣ್ಣದ್ದಾಗಿದ್ದು, ಕೊರಳು ಮತ್ತು ಎದೆ ಬೂದು ಬಣ್ಣದ್ದಾಗಿರುತ್ತದೆ ಹಾಗು ಕಾಲು ಮತ್ತು ಕೊಕ್ಕುಗಳು ಹಳದಿ ಬಣ್ಣದಲ್ಲಿರುತ್ತವೆ. ಇವುಗಳು ಸಾಮಾನ್ಯವಾಗಿ ಕೀಟಗಳನ್ನು ತಿನ್ನುತ್ತವಾದರೂ ಹಣ್ಣು, ಜೇನುತುಪ್ಪ ಮತ್ತು ಮನುಷ್ಯರು ಬಿಸಾಡಿದ ಆಹಾರ ಪದಾರ್ಥಗಳನ್ನು ಇವು ಸೇವಿಸುತ್ತವೆ. ಈ ಹಳದಿ ಕೊಕ್ಕಿನ ಹರಟೇಮಲ್ಲ ಹಕ್ಕಿಗಳು ಸುಮಾರು 4 ತಿಳಿ ಹಳದಿ ಮೊಟ್ಟೆಗಳನ್ನು ಇತ್ತು 14 ರಿಂದ 16 ದಿನಗಳ ಕಾಲ ಕಾವು ಕೊಟ್ಟು ಮರಿ ಮಾಡುತ್ತವೆ.
ಚಿತ್ರಗಳು:ಸೇಪುರಿ ಸಾಯಿ ಅಖಿಲ್ ತೇಜ
ವಿವರಣೆ: ಧನರಾಜ್ ಎಂ