ಎಲ್ಲಾದರು ಇರು, ಎಂತಾದರು ಇರು, ಎಂದೆದಿಗೂ ನೀ ಹಳ್ಳಿಗನಾಗಿರು!

ಎಲ್ಲಾದರು ಇರು, ಎಂತಾದರು ಇರು, ಎಂದೆದಿಗೂ ನೀ ಹಳ್ಳಿಗನಾಗಿರು!

ನನಗಿನ್ನೂ ನೆನಪಿದೆ. ನಾನು ಮತ್ತು ನನ್ನ ಸ್ನೇಹಿತರು ಶಾಲೆ ಮುಗಿದ ಮೇಲೆ ಮನೆಗೆ ಹೋಗುವ ದಾರಿಯಲ್ಲಿ ಸಿಗುತ್ತಿದ್ದ ಕಾಡು ಕರಿಬೇವಿನ ಹಣ್ಣು ಹುಡುಕಿ ಹೋದದ್ದು. ಮನೆಯಿಂದ ನಮ್ಮ ಪ್ರಾಥಮಿಕ ಶಾಲೆ ಇದ್ದದ್ದು 2 ಕಿ.ಮೀ ದೂರದಲ್ಲಿ. ಅಲ್ಲದೇ ಪಕ್ಕದಲ್ಲಿಯೇ ಬನ್ನೇರುಘಟ್ಟದ ರಾಷ್ಟ್ರೀಯ ಉದ್ಯಾನವನ. ಇಷ್ಟು ಸಾಲದೇ ನಮ್ಮ ಬಾಲ್ಯ ಎಷ್ಟು ಸ್ವಾರಸ್ಯಕರವಾಗಿರಬಹುದು ಎಂದು ಊಹಿಸಲು? ಹೆಚ್ಚಾಗಿ ನಾವು ಮನೆಗೆ ತೆರಳುವ ಸಮಯದಲ್ಲಿ ನೇರಳೆ ಹಣ್ಣು ಕೀಳುವ, ಕಾರೆ ಹಣ್ಣು ಹುಡುಕುವ ರಹಸ್ಯ ಕಾರ್ಯಾಚರಣೆಗಳನ್ನು ಮಾಡುತಿದ್ದುದು. ಆಗೇನಾದರು ಮಳೆ ಬಂದುಬಿಟ್ಟಿತು ಎಂದಿಟ್ಟುಕೊಳ್ಳಿ, ನಮ್ಮ ಖುಷಿಗೆ ಪಾರವೇ ಇರುತ್ತಿರಲಿಲ್ಲ. ಒಳಗೆ ಏನೋ ಖುಷಿ, ಮಳೆಯಲ್ಲಿ ನೆನೆಯುತ್ತಾ ಕರಿಬೇವು ಹಣ್ಣುಗಳ ತಿನ್ನಲು ಮುರಿದಿದ್ದ ಗಿಡದ ರೆಂಬೆಯನ್ನು ಹಿಡಿದು, ಒಂದೊಂದೇ ಹಣ್ಣುಗಳನ್ನು ಬಾಯಿಗೆ ಎಸೆದು ಸವಿಯುತ್ತಾ ಮನೆ ಸೇರುತ್ತಿದ್ದೆವು. ಆ ದಿನಗಳನ್ನು ನೆನೆದರೆ ಸಾಕು ಮೊಗ ಅರಳಿ ಮಂದಹಾಸ ಮೂಡುತ್ತದೆ.  ಆದರೆ ಕಾಲ ಸರಿದಂತೆ ಬೆಳೆಯುವ ನಾವು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ನಗರ ಸೇರುತ್ತೇವೆ. ನಮ್ಮ ಜೀವನ ಶೈಲಿ ಬದಲಾಗುತ್ತಾ ಹೋಗುತ್ತದೆ. ವಿದ್ಯಾಭ್ಯಾಸ ಮುಗಿಯುತ್ತದೆ. ಆದರೆ ನಾವು ಮಾತ್ರ ಅಲ್ಲಿನ ಜೀವನ ಶೈಲಿಗೆ ಮಾರುಹೋಗಿ ಅಲ್ಲೇ ಉಳಿದುಬಿಡುತ್ತೇವೆ. ಕೇವಲ ವೀಕೆಂಡ್ ಕಳೆಯಲು ಮಾತ್ರ ಅದೂ ವರುಷಕ್ಕೆ ಒಮ್ಮೆಯೋ, ಎರಡು ಬಾರಿಯೋ ಹಳ್ಳಿಯ ಕಡೆಗೆ ಮುಖ ಮಾಡಿದರೆ ಹೆಚ್ಚು. ಆದರೆ ನನ್ನ ವಿಷಯದಲ್ಲಿ ಹಾಗಾಗಲಿಲ್ಲ, ಸ್ವಲ್ಪ ಸಮಯ ಓದಲು ಹೊರಗೆ ಹೋಗಿ ಮತ್ತೆ ವಾಪಸ್ ಬಂದು ಹಳ್ಳಿಯಲ್ಲೇ ಇರುವುದು, ನನ್ನ ಭಾಗ್ಯವೆಂದು ನನಗನ್ನಿಸುತ್ತದೆ.

ಎಷ್ಟೋ ಬಾರಿ ಅನಿವಾರ್ಯ ಕಾರಣಗಳಿಂದ ನಮ್ಮ ಹಳ್ಳಿಯ ಜೀವನಕ್ಕೆ  ಮರುಕಳಿಸಲು ಸಾಧ್ಯವಾಗದೇ ಇರಬಹುದು. ಆದರೆ ನಾವು ಹಳ್ಳಿಯವರು, ಅಲ್ಲೇ ಹುಟ್ಟಿದೆವು, ಜೀವನದಲ್ಲಿ ಮರೆಯದ ಎಷ್ಟೋ ಮಧುರ ನೆನಪುಗಳ ಕಟ್ಟಿಕೊಂಡ ಜಾಗವದು ಎಂಬುದನ್ನು ಮರೆತುಬಿಡುತ್ತೇವೆ. ಎಷ್ಟರ ಮಟ್ಟಿಗೆ ಕೆಲವರು ನಗರ ಜೇವನಕ್ಕೆ ಮಾರುಹೋಗಿರುತ್ತಾರೆಂದರೆ, ನಾವು ಹಳ್ಳಿಯವರು ಎಂದು ಹೇಳಿಕೊಳ್ಳಲು ಸಹ ಅವಮಾನವೆಂದು ಭಾವಿಸುತ್ತಾರೆ. ಅವರ ಜೀವನ ಶೈಲಿ ಅವರನ್ನು ಅಷ್ಟರಮಟ್ಟಿಗೆ ಬದಲಾಯಿಸಿರುತ್ತದೆ. ಆದರೆ ಬಾಲ್ಯದ ಆ ಸಣ್ಣ ಸಣ್ಣ ಅನ್ವೇಷಣೆಗಳು, ಸಾಹಸಗಳು, ಕುಚೇಷ್ಟೆಗಳ ನೆನೆದರೆ ಸಾಕು ನಿಮ್ಮ ಆ ಅವಮಾನದ ಭಾವ ಮೂಲೆ ಸೇರಿ, ನೀವು ಹಳ್ಳಿಗರೆಂಬ ಹೆಮ್ಮೆಯ ಭಾವ ನಿಮ್ಮನ್ನೆಲ್ಲಾ ಆವರಿಸುತ್ತದೆ. ನಾನೊಬ್ಬ ಹಳ್ಳಿಯವ ಎಂಬ ಆ ಹೆಮ್ಮೆ ಈಗಲೂ ನನ್ನಲ್ಲಿದೆ. ನಿಮ್ಮಲ್ಲಿ…?

ನಾವು ಮನುಷ್ಯರು. ನಮಗೆ ನಾವಿರುವ ಸ್ಥಳಕ್ಕೆ  ತಕ್ಕಂತೆ ನಮ್ಮ ಜೀವನವಿರುತ್ತದೆ. ನಗರದಲ್ಲಾದರೆ ನಗರ ವಾಸಿಗಳು. ಇಲ್ಲವಾದರೆ ಹಳ್ಳಿಗರು. ಅದಕ್ಕೆ ತಕ್ಕಂತೆಯೇ ನಮ್ಮ ಜೀವನ ಶೈಲಿಯೂ ಕೂಡ, ಅಲ್ಲವೇ? ಹೀಗೆ ಮರಗಳಿಗೂ ಸಹ ಕಾಡು ವಾಸಿಗಳು ಹಾಗೂ ನಗರವಾಸಿಗಳು ಎಂದು ಕರೆಯಬಹುದೇ? ಅವುಗಳ ಜೀವನ ಶೈಲಿ ಬೇರೆ ಬೇರೆ ಇರುತ್ತದೆಯೇ? ಅದು ಹೇಗೆ ಸಾಧ್ಯ? ಮರಗಳೆಂದರೆ ಎಲ್ಲಾ ಕಡೆ ಮರಗಳೇ ಅಲ್ಲವೆ? ಕಾಡಲ್ಲಿದ್ದರೆ ಏನು? ನಗರದಲ್ಲಿದ್ದರೆ ಏನು? ಎಲ್ಲವೂ ತಮಗೆ ದೊರಕುವ ನೀರು-ಲವಣ, ಗಾಳಿ-ಬೆಳಕಿನಿಂದ ಆಹಾರ ತಯಾರಿಸಿ ಬೆಳೆಯುತ್ತವೆ ಅಲ್ಲವೇ? ಹೌದು ನನ್ನ ವಾದವೂ ಅದೇ. ಆದರೆ ಹೊಸ ಸಂಶೋಧನೆಯೊಂದು ನಮ್ಮ ಈ ವಾದವನ್ನು ಸುಳ್ಳು ಎಂದು ನಿರೂಪಿಸಲು ಹೊರಟಹಾಗಿದೆ. ಅದೇನೆಂದು ನೋಡಿಯೇ ಬಿಡೋಣ ಬನ್ನಿ.

ನನ್ನ ಜೊತೆಯಲ್ಲಿಯೇ ಇದ್ದೀರಿ ತಾನೆ? ಬನ್ನಿ ಮತ್ತೆ…

ಮರಗಳು ಎಲ್ಲಿದ್ದರೂ ಮರಗಳೇ. ಆದರೆ ನಗರ ಪ್ರದೇಶಗಳಲ್ಲಿ ಬೆಳೆಯುವ ಮರಗಳು ಹೆಚ್ಚು ವೇಗವಾಗಿ ಬೆಳೆದು ಬೇಗ ಸಾಯುತ್ತವೆ ಎನ್ನುತ್ತಿದೆ ಲೂಸಿ ಹುಟೈರಾ ಅವರ ಹೊಸ ಸಂಶೋಧನೆ. ಲೂಸಿ ಹುಟೈರಾ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಕೇವಲ ಇಂಗಾಲದ ಡೈ ಆಕ್ಸೈಡ್ ನ ಬಗ್ಗೆ ಅಧ್ಯಯನ ಮಾಡುವ ಪರಿಸರ ವಿಜ್ಞಾನಿ. ಇವರ ಸಂಶೋಧನೆ  ಹೇಳುತ್ತದೆ, ನಗರದ ಮರಗಳು, ಕಾಡಿನ ಅಥವಾ ಹಳ್ಳಿಯಲ್ಲಿ ಬೆಳೆಯುವ ಮರಗಳಿಗಿಂತ ಹೆಚ್ಚು ವೇಗವಾಗಿ ಬೆಳೆಯುತ್ತದೆ ಮತ್ತು ಬೇಗ ಸಾಯುತ್ತದೆ ಎಂದು. ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್ ನ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ. ಇದರಿಂದಾಗಿ ಭೂಮಿಯ ಮೇಲ್ಮೈ ತಾಪಮಾನ ಹೆಚ್ಚುತ್ತದೆ. ಕಾರಣ ಈ ಹಸಿರು ಮನೆ ಅನಿಲಗಳು ಸೂರ್ಯನ ಬೆಳಕನ್ನು ಹಿಡಿದಿಟ್ಟುಕೊಂಡು ಉಷ್ಣಾಂಶವನ್ನು ಹೆಚ್ಚಿಸುತ್ತವೆ. ಆದರೆ ಮರಗಳು ವಾತಾವರಣದಲ್ಲಿನ ಹಸಿರುಮನೆ ಅನಿಲವಾದ ಇಂಗಾಲದ ಡೈ ಆಕ್ಸೈಡ್ ನ ಪ್ರಮಾಣವನ್ನು ಕಡಿಮೆ ಮಾಡುತ್ತವೆ. ಹೇಗೆಂದರೆ, ಮರಗಳು ಆಹಾರ ತಯಾರಿಸಿ ಬೆಳೆಯಲು ಇಂಗಾಲದ ಡೈ ಆಕ್ಸೈಡ್ ಅನ್ನು ಬಳಸಿಕೊಳ್ಳುತ್ತವೆ. ಹಾಗೆ ಸಸ್ಯದ ಒಳಗೆ ಹೋದ ಅನಿಲವು ಇಂಗಾಲದ ರೂಪದಲ್ಲಿ ಮರದ ಭಾಗವಾಗಿ ಸೇರಿಬಿಡುತ್ತದೆ. ಆದ್ದರಿಂದಲೇ ಮರದ ಒಟ್ಟು ತೂಕದಲ್ಲಿ ಅರ್ಧದಷ್ಟು ತೂಕ ಇಂಗಾಲವೇ ಇರುತ್ತದೆ.

ನಮ್ಮ ಹಲವಾರು ಕಾರ್ಯಗಳಿಂದ ಹೆಚ್ಚೆಚ್ಚು ಇಂಗಾಲದ ಡೈ ಆಕ್ಸೈಡ್ ಅನ್ನು ವಾತಾವರಣಕ್ಕೆ ಬಿಡುತ್ತಿದ್ದೇವೆ. ಇದನ್ನು ತಡೆಯಲು ಎಷ್ಟೋ ನಗರಗಳಲ್ಲಿ ಗಿಡ ನೆಡುವ ಕಾರ್ಯಕ್ರಮಗಳು ಜೋರಾಗಿಯೇ ನಡೆಯುತ್ತಿವೆ. ಆದರೆ ದುರಾದೃಷ್ಟವಶಾತ್ ಅಂತಹ ಮರಗಳು ಬೇಗ ಬೆಳೆದು ಬೇಗ ಸಾಯುತ್ತಿವೆ. ಇದರಿಂದಾಗಿ ಆ ಮರಗಳ ಇಂಗಾಲದ ಡೈ ಆಕ್ಸೈಡ್ ಅನ್ನು ತೆಗೆದುಕೊಳ್ಳುವ ಪ್ರಮಾಣ ಕಡಿಮೆಯಾಗಿರುತ್ತದೆ. ಎನ್ನುತ್ತಾರೆ ಹುಟೈರಾ. ಮರಗಳು ಎಷ್ಟು ವೇಗವಾಗಿ ಬೆಳೆಯುತ್ತವೆ ಎಂದು ತಿಳಿಯಲು ಅವರು ಬೋಸ್ಟನ್ ನಗರದ ಕೆಂಪು ಓಕ್ ಮತ್ತು ಕೆಂಪು ಮೇಪಲ್ ಮರಗಳ ಕಾಂಡದ ಸುತ್ತಳತೆಗಳನ್ನು 2005 ರಿಂದ 2014 ರ ವರೆಗೆ ಅಳೆಯುತ್ತಿದ್ದರು. ಹಾಗೆಯೇ ಇವೆರೆಡು ಪ್ರಭೇದದ ಕಾಡಿನ ಮರಗಳ ಸುತ್ತಳತೆಗಳನ್ನೂ ಸಹ ಅಳೆದುಕೊಂಡರು. ಇವರ ಈ 9 ವರುಷಗಳ ಸಂಶೋಧನೆಯಲ್ಲಿ ಹೊರಬಂದ ಅಂಕಿ ಅಂಶ ಹೀಗಿದೆ: ನಗರದಲ್ಲಿ ಬೆಳೆದ ಮರಗಳು ಕಾಡಿನಲ್ಲಿ ಬೆಳೆಯುತ್ತಿದ್ದ ಅದೇ ಪ್ರಭೇದದ ಮರಗಳಿಗಿಂತ 4 ಪಟ್ಟು ಹೆಚ್ಚು ಇಂಗಾಲದ ಡೈ ಆಕ್ಸೈಡ್ ಅನ್ನು ಒಳ ತೆಗೆದುಕೊಳ್ಳುತಿದ್ದವಂತೆ. ಹಾಗೆಯೇ ನಗರದ ಮರಗಳು ಸಾಯುವ ಸಾಧ್ಯತೆ ಕಾಡಿನ ಮರಗಳಿಗಿಂತ 2 ರಷ್ಟು ಇತ್ತಂತೆ. ಅಂದರೆ ಕಾಡಿನ ಮರದ ಆಯಸ್ಸಿನಲ್ಲಿ ಕೇವಲ ಅರ್ಧದಷ್ಟನ್ನು ಮಾತ್ರ ನಗರದ ಮರಗಳು ಹೊಂದುತ್ತಿದ್ದವು.

ಇದರಿಂದಾಗಿ ನಗರದ ಮರಗಳು ತಮ್ಮ ಜೀವಿತಾವಧಿಯಲ್ಲಿ ಕಾಡಿನ ಮರಗಳಿಗಿಂತ ಕಡಿಮೆ ಪ್ರಮಾಣದಲ್ಲಿ ಇಂಗಾಲದ ಡೈ ಆಕ್ಸೈಡ್ ಅನ್ನು ಹೀರಿಕೊಳ್ಳುತ್ತಿದ್ದವು. ಅಂದರೆ ನಗರದಲ್ಲಿ ಬೆಳೆಯುವ ಮರಗಳಿಂದ, ವಾತಾವರಣದಲ್ಲಿನ ಹಸಿರುಮನೆ ಅನಿಲದ ಪ್ರಮಾಣ ಹೆಚ್ಚಾಗಿ ಕಡಿಮೆಯಾಗುವುದಿಲ್ಲ.  ನಗರದ ಮರಗಳ ಆಯಸ್ಸು ಕ್ಷೀಣಿಸಲು ಮುಖ್ಯ ಕಾರಣಗಳೆಂದರೆ, ನಗರದಲ್ಲಿ ಹಾಕುವ ರಸ್ತೆಯಿಂದಾಗಿ ಮರಗಳ ಬೇರುಗಳು ಹೆಚ್ಚಾಗಿ ಹರಡಲು ಜಾಗ ಇರುವುದಿಲ್ಲ. ಹಾಗೆಯೇ ಸುತ್ತ ಮುತ್ತಲಿನ ಜನರ ಅವಶ್ಯಕತೆ ಹಾಗೂ ತೊಂದರೆಗಳಿಂದಾಗಿ ಅವನ್ನು ಕಡಿಯಲು ಮುಂದಾಗುವರು. ಹೀಗಾಗುವುದಾದರೆ ಎಷ್ಟೋ ದುಡ್ಡು ಸಮಯ ಖರ್ಚು ಮಾಡಿ ಗಿಡಗಳ ನೆಡುವುದಾದರು ಏಕೆ? ಅಲ್ಲವೆ?

ಏನೇ ಆಗಲಿ ನಗರವಾಸದಿಂದ ಕೇವಲ ಮನುಷ್ಯರು ಮಾತ್ರವಲ್ಲದೆ, ಮರಗಳೂ ಸಹ ಬದುಕಲು ತಡಕಾಡುವಂತಾಗಿದೆ. ಹಾಗೆಯೇ ಅವುಗಳ ಸ್ವಾಭಾವಿಕ ಬೆಳವಣಿಗೆಯನ್ನು ಬದಲಾಯಿಸುವಲ್ಲಿ ನಾವುಗಳು ಯಶಸ್ವಿಯಾಗಿದ್ದೇವೆ. ಇದರಿಂದಾಗುವ ಅನಾಹುತಗಳ ಊಹಿಸುವುದಾದರೂ ಹೇಗೆ? ಕಾದು ಅನುಭವಿಸಬೇಕು ಅಷ್ಟೆ. ಹೀಗಾಗುವುದು ಬೇಡ ಎನ್ನುವುದಾದರೆ ನಮ್ಮ ಜೀವನ ಶೈಲಿಯನ್ನು ಪರಿಸರ ಸ್ನೇಹಿಯಾಗಿ ಬದಲಾಯಿಸಿಕೊಳ್ಳುವುದೊಂದೇ ಮಾರ್ಗ. ಅದು ಹೆಚ್ಚಾಗಿ ಹಳ್ಳಿಯ ಸೊಗಡಿನ ಬದುಕಿನಲ್ಲಿದೆ ಎಂದರೆ ಎಳ್ಳಷ್ಟೂ ತಪ್ಪಾಗದು. ನಿಮಗೇನನ್ನಿಸುತ್ತದೆ….?

ಸೂಚನೆ: ಮೇಲೆ ಹೇಳಿದ ಸಂಶೋಧನೆಯ ಅಂಕಿ ಅಂಶಗಳು ಬೋಸ್ಟನ್ ನಗರಕ್ಕೆ ಮಾತ್ರ. ಬೇರೆ ವಾತಾವರಣಗಳ/ಪ್ರದೇಶಗಳ ಮರಗಳ ಅಂಕಿ ಅಂಶಗಳು ಬೇರೆ ಆಗಿರಬಹುದು.
ನಿಮ್ಮ ಅಭಿಪ್ರಾಯಗಳನ್ನು ನಮಗೂ ತಿಳಿಸಿ!
ಜೈಕುಮಾರ್ – 9066640808 (ವಾಟ್ಸಾಪ್ ನಂಬರು)

 ಮೂಲ ಲೇಖನ ScienceNewsforStudents.

ಲೇಖನ: ಜೈಕುಮಾರ್ ಆರ್.
ಡಬ್ಲ್ಯೂ.ಸಿ.ಜಿ, ಬೆಂಗಳೂರು

Spread the love
error: Content is protected.