ಮನವಿ
ಓ ಮನುಜ ನಿನಗೇ
ಏಕಿಷ್ಟು ಪ್ರಾಮುಖ್ಯ?
ಜೀವಿಸಬಾರದೇ
ನಾವುಗಳು ನಿನ್ನ ಸಖ್ಯ!
ಭೂಮಿಗೆ ನೀನೊಬ್ಬನೇ
ಹಕ್ಕುದಾರನೇನು?
ಬದುಕಲು ನಮಗಾವ
ಅರ್ಹತೆಯು ಇಲ್ಲವೇನು!
ಬಟಾಬಯಲಾಗುವಂತೆ
ಕಾನನಗಳ ತರಿದೆ
ಕೊಳೆ ಕಸಗಳ ತಂದು
ಸಾಗರಕೆ ಸುರಿದೆ
ನೀರು ನೆರಳು ಆಹಾರಕೆ
ತತ್ವಾರವನು ತಂದೆ
ಊರೂರುಗಳ ಕಟ್ಟುತಾ
ಸಂಕುಲವನೇ ಸಂಹರಿಸಿದೆ
ನಿನ್ನ ಮೋಜಿಗೆ ನಮ್ಮ
ನೆಮ್ಮದಿಯ ಕಸಿದೆ
ಹುಡುಕುತ್ತಾ ಖನಿಜಗಳ
ನೆಲದ ಒಡಲನು ಬಗೆದೆ
ಭಗವಂತ ಕೊಟ್ಟಿಹನು
ಒಂದಷ್ಟು ಅಧಿಕ ಬುದ್ದಿ
ಸರಿದಾರಿಯಲ್ಲದ ಬಳಸೆ
ಸಕಲ ಜೀವರಾಶಿಗೆ ಸಿದ್ಧಿ
ನೆಲ ಜಲ ಜೀವಿ ನಿರ್ಜೀವಿ
ಎಲ್ಲರೂ ಕಲೆತು ನಲಿಯುತಿರೆ
ಸರ್ವಾಂಗ ಸುಂದರಳು ತಿರೆ
ಸ್ವಾರ್ಥ ತೊರೆಯೋ ಅ-ಸುರ
ಸೆರಗೊಡ್ಡಿ ಬೇಡುವೆವು ನಿನ್ನ
ಹೊಸಕದಿರೆಮ್ಮ.. ನೂರು ನಮನ
ಸರಿಸಮರೆಂದು ಭಾವಿಸು ತಮ್ಮಾ
ನಗಲಿ ಸದಾ ಭುವಿಯೆಂಬ ಕುಸುಮ
– ಚಂದ್ರೇಗೌಡನಾರಮ್ನಲ್ಲಿ
ಅರಸೀಕೆರೆ