ವಿ.ವಿ. ಅಂಕಣ – ಹಾರುವ ಮಿಂಚು

ವಿ.ವಿ. ಅಂಕಣ – ಹಾರುವ ಮಿಂಚು

‘ಬಲ್ಲವನೇ ಬಲ್ಲ ನಿದ್ದೆಯ ರುಚಿಯಾ’ ಎಂಬ ಗಾದೆ ಕೇಳಿರುವಿರಿ…

ಇಲ್ಲವೇ? ಓಹೋ… ಸರಿ ಬಿಡಿ, ‘ಬಲ್ಲವನೇ ಬಲ್ಲ ಬೆಲ್ಲದ ರುಚಿಯಾ’ ಎಂಬ ಗಾದೆಯನ್ನು ಈಗಿನ ಕಾಲಕ್ಕೆ ತಕ್ಕಂತೆ, ನಿದ್ದೆಯನ್ನು ಸಿಹಿ-ಬೆಲ್ಲಕ್ಕೆ ಹೋಲಿಸಿ ಗಾದೆಯನ್ನು ಬದಲಾಯಿಸಿ ಹಾಗೆ ಹೇಳಿದೆ. ಮನೆಯ ತೊಂದರೆಗಳೋ, ಊಟವೋ, ಹೊರಗಿನ ತಲೆನೋವುಗಳೋ… ಹೀಗೆ ಹತ್ತು ಹಲವು ಕಾರಣಗಳಿಂದ ನಿದ್ದೆ ಎಂಬ ಚಿನ್ನ ಕೈಗೆ ಎಟುಕದ ಅಟ್ಟಕ್ಕೆ ಏರಿ, ಗೇಲಿ ಮಾಡುತ್ತಿರುವಂತಹ ಅನುಭವ ಹಲವರಿಗೆ ಆಗಿರಬಹುದು. ಇದೇ ಅಂಕಣದಲ್ಲಿ ಈ ಹಿಂದೆ ಯಾವಾಗಲೋ ಚರ್ಚಿಸಿರುವ ಹಾಗೆ, ಒಳ್ಳೆ ನಿದ್ದೆ ಇಲ್ಲದ ರಾತ್ರಿಯ ಕಳೆದರೆ, ಬೆಳಿಗ್ಗೆ ಹೇಗೆ ತಾನೆ ಫ್ರೆಶ್ ಆಗಿ ಇರುತ್ತದೆ ಹೇಳಿ? ಮುಂದಿನ ದಿನವೆಲ್ಲಾ ಹಾಗೆ ಸಾಗಿ, ಸವಾಲಾಗಿ, ಸಿಲ್ಲಿ ವಿಷಯಗಳೆಲ್ಲಾ ಸಂಕಷ್ಟಗಳಾಗುವ ಅಪಾಯ ಇದ್ದೇ ಇದೆ. ನಮ್ಮ ಚಿಕ್ಕಂದಿನ ವಯಸ್ಸಿನಲ್ಲಿ ಆಟವಾಡಿ ಬಂದ ತಕ್ಷಣ, ಊಟಮಾಡಿಸಿ ಅಮ್ಮ ‘ಮಲಗು ಚಿನ್ನಾ (ಸೋ…ನಾ – ಸೋನಾ)’ ಎನ್ನುವ ತಕ್ಷಣವೇ ನಿದ್ದೆ ಬರುವ ಹಾಗೆ ಈಗ ಏಕೆ ಬಾರದು? ನಾವು ಬೆಳೆದಂತೆ ನಿದ್ದೆ ಕಳೆಯುವುದೇ? ಆ ನಿದ್ದೆ ಈಗ ಬರಲು ಸಾಧ್ಯ ಇಲ್ಲವೇ?

ಏಕೆ ಬಾರದು, ಖಂಡಿತ ಬರುತ್ತದೆ. ನನಗೆ ತಿಳಿದ ಹಾಗೆ ಇದಕ್ಕೆ ಕೇವಲ ಎರಡು ವಿಷಯಗಳನ್ನು ನೆನಪಿನಲ್ಲಿಡಬೇಕು ಅಷ್ಟೇ… ಅವೆಂದರೆ, ನಾವು ಮಾಡುವ ಊಟ ಮತ್ತು ವ್ಯಾಯಾಮ-ಧ್ಯಾನ. ಪ್ರತಿದಿನ ಇವೆರೆಡನ್ನು ಸರಿಯಾದ ಸಮಯಕ್ಕೆ, ಸರಿಯಾದ ರೀತಿಯಲ್ಲಿ ಮಾಡಿಬಿಟ್ಟರೆ ಸಾಕು ಒಳ್ಳೆ ನಿದ್ದೆಗೆ ಆದರೂ ಸ್ವಲ್ಪ ಕಷ್ಟ ಎನ್ನುವವರಿಗೆ ಒಂದು ಸಣ್ಣ ಉಪಾಯ… ಇದನ್ನು ಟ್ರೈ ಮಾಡಿ ನೋಡಿ. ಮಲಗುವ ಸಮಯಕ್ಕೆ ಹಾಸಿಗೆಯ ಮೇಲೆ ಆರಾಮವಾಗಿ ಮಲಗಿ ವಿಶ್ರಮಿಸಿ. ಕಣ್ಣು ಮುಚ್ಚಿ, ನಿಮಗೆ ತುಂಬ ಇಷ್ಟವಾದ ಜಾಗಕ್ಕೆ ಹೋಗಿರುವಿರಿ ಎಂದುಕೊಳ್ಳಿ. ಅಲ್ಲಿ ನಿಮ್ಮ ಮನಸ್ಸಿಗೆ ಇಷ್ಟವಾಗುವ ಸಂದರ್ಭವನ್ನು ಊಹಿಸಿಕೊಳ್ಳಿ. ಉದಾಹರಣೆಗೆ…

“ಕಣ್ಣು ಮುಚ್ಚಿ ನಿಧಾನವಾಗಿ ಉಸಿರಾಡುತ್ತಾ… ನಿಧಾನವಾಗಿ ನಡೆದು ಹೋದಂತೆ… ತಾಜಾ ತಂಗಾಳಿ ನಿಮ್ಮ ಕೂದಲನ್ನು ನೇವರಿಸಿ ಹೋಗುತ್ತದೆ… ರಾತ್ರಿ ರಾಣಿಯ ಕಂಪು ಮೂಗಿನ ಒಳಗೆ ಸೇರುತ್ತಲೇ ನಿಮ್ಮ ಕೆನ್ನೆಯನ್ನು ಕೆಂಪಗಿನ ಸೇಬಿನ ಹಾಗೆ ಮಾಡುತ್ತದೆ. ಈಗತಾನೆ ಮಳೆ ಬಂದು ನಿಂತಿರುವುದರಿಂದ, ಮಣ್ಣಿನ ಆ ಘಮ ಗಾಢವಾಗೇ ತೋರುತ್ತದೆ, ಕ್ಷಣಾರ್ಧದಲ್ಲೇ ಮನದಲ್ಲಿ ಏನೋ ಅರಿಯದ ಸಂತೋಷ. ಚಿಕ್ಕಂದಿನ ಆ ಮಳೆಯಲ್ಲಿನ ಆಟ-ಮಣ್ಣಿನೊಂದಿಗಿನ ಗುದ್ದಾಟದ ಮೆಲುಕು ಹಾಕಿಸುತ್ತದೆ. ಅಲ್ಲೊಮ್ಮೆ ಇಲ್ಲೊಮ್ಮೆ ಜೋರಾಗಿ ಬೀಸುವ ಗಾಳಿ ಮರದ ರೆಂಬೆಗಳ ಜೊತೆ ಹಸ್ತಲಾಘವ ಮಾಡಿ, ಎಲೆಗಳ ಮೇಲಿನ ನೀರಿನ ಮುತ್ತುಗಳನ್ನು ನಿಮ್ಮ ಕೆನ್ನೆಗೆ ಗುರಿಯಿಟ್ಟು ಹೊಡೆದಂತೆ ಭಾಸವಾಗುತ್ತದೆ. ಮಂದಹಾಸ ಮುಖವನ್ನೆಲ್ಲಾ ಆವರಿಸಿ ಅಲೆದಾಡುತ್ತದೆ-ನಲಿದಾಡುತ್ತದೆ.

ಇದನ್ನೆಲ್ಲಾ ಒಮ್ಮೆ ಕಣ್ಣಿನಿಂದ ಸವಿದುಬಿಡೋಣವೆಂದು ಮನಸ್ಸು ಹೇಳಿದರೂ, ರಾತ್ರಿಯ ವೇಳೆ ಮಹಾ ಎಂದರೆ ಏನು ನೋಡಬಹುದು? ಬರೀ ಕತ್ತಲು! ಎಂದು ಇನ್ನೊಂದು ಯೋಚನೆ. ಆಗಿದ್ದಾಗಲಿ… ಅದೇನಿದೆ ನೋಡಿಯೇಬಿಡೋಣ, ಏಕೆಂದರೆ ‘you never know!’ ನನಗಾಗಿಯೇ ಅಚ್ಚರಿಯೊಂದು ಕಾದಿರಬಹುದು! ಎಂದುಕೊಂಡು ಕಣ್ಣು ತೆರೆದು ನೋಡುತ್ತಿದ್ದಂತೆಯೇ… ಮಳೆ ಮೋಡಗಳ ಮಧ್ಯೆ ಅವಿತು ನೋಡುತ್ತಿರುವ ಚಂದ್ರನ ಅರ್ಧ ಚಹರೆ ಸ್ಪಷ್ಟವಾಗಿ ಕಾಣುತ್ತದೆ. ಅವನು ಬೀರಿದ ಆ ಮಂದಹಾಸವೇ ಮಂದಬೆಳಕಾಗಿ ಸುತ್ತಲಿನ ಕಾಡೆಲ್ಲಾ ಆವರಿಸಿದೆ. ಅದನ್ನು ಕಣ್ಣಿನಿಂದ ನೀನು ಮಾತ್ರ ಸವಿಯಲು ಸಾಧ್ಯ. ಆ ಬೆಳಕಿನಲ್ಲಿ ಕಂಡೂ ಕಾಣದಂತ ನೀಳ, ನೇರ ನಿಂತ ಮರಗಳ ನೋಡುವ ಅನುಭವವೇ ಬೇರೆ. ಆ ದೃಶ್ಯವ ಮನಸಾರೆ ಅನುಭವಿಸುತ್ತಾ, ನಿಧಾನವಾಗಿ ಕಣ್ಣ ರೆಪ್ಪೆಯ ಬಡಿದು ತೆರೆದೊಡನೆ… ಹಳದಿ ಮಿಶ್ರಿತ ಹಸಿರು ಬಣ್ಣದ ನಕ್ಷತ್ರಗಳು ಕಪ್ಪು ಕಡಲಿನಂತಿರುವ ಕಾಡಿನ ಕಲ್ಪತರುಗಳ ಮಧ್ಯೆ ಹಾರಾಡುತ್ತಿರುವ ದೃಶ್ಯ. ಮಳೆಯ ಮಧ್ಯದಲ್ಲಿ ಮೂಡುವ ಮಿಂಚು ಬಂದು ಇಲ್ಲಿ ಹಾರಾಡುತ್ತಿದೆಯೇನೋ ಅನಿಸುತ್ತದೆ. ಇದನ್ನೆಲ್ಲಾ ಮೈ ಮರೆತು ನೋಡುವುದನು ಬಿಟ್ಟು ಬೇರೇನು ಕೆಲಸ ನಮಗೆ ಅಲ್ಲವೇ? ಹಾಗೆಂದು ಅದನ್ನು ವರ್ಣಿಸಿದಷ್ಟೂ ಕಡಿಮೆಯೇ…ಆ ಮಿಂಚು ಹುಳುಗಳು ಅಲ್ಲೊಮ್ಮೆ-ಇಲ್ಲೊಮ್ಮೆ ಮಿನುಗುತ್ತಾ ಇರುವಾಗ ನನ್ನ ಕಣ್ಣಿನ ರೆಪ್ಪೆಯ ಬಡಿತಕ್ಕೆ ಹೋಲುತ್ತಿದ್ದರೆ… ಒಮ್ಮೆಗೇ ಮಿನುಗಿದಾಗ ಗೂಡಿನ ಒಳಗಿರುವ ಹೃದಯ ಹೊರಗೆ ಬಂದು ಮಿಡಿಯುತ್ತಿದೆಯೇನೋ ಎಂಬ ಭಾವ ಮೂಡಿಸುತ್ತದೆ! ಪಂಚ ಇಂದ್ರಿಯಗಳಿಗೆ ಇಷ್ಟೆಲ್ಲಾ ಅನುಭವವಾದ ಬಳಿಕ ಒಳಗಿನ ಅರಿಯದ ಆರನೆ ಶಕ್ತಿ ದೇಹವೆಲ್ಲಾ ಆವರಿಸಿ ನೃತ್ಯದ ಮೂಲಕ ಹೊರಬಂದು ಕುಣಿಯುತ್ತದೆ. ಮನ ಹಗುರವಾಗುವಷ್ಟು ಕುಣಿದು ಕುಪ್ಪಳಿಸಿ ವಿಶ್ರಮಿಸುವಾಗ…

…ಸಣ್ಣ ಮಧುರ ದನಿಯೊಂದು ನಿಮ್ಮನ್ನು ಬೆಳಗಾಯಿತು ಎಂದು ಏಳಿಸುತ್ತದೆ! ಕನಸಿನ ಅದೇ ಸಂತಸ ದಿನವೆಲ್ಲಾ ಆವರಿಸಿ ಪ್ರಪಂಚವನ್ನೇ ವರ್ಣಮಯವಾಗಿಸಿಬಿಡುತ್ತದೆ.”

ಅಬ್ಬಾ ವಿ ವಿ ಅಂಕಣದಲ್ಲಿ ಇಂದು ಒಳ್ಳೆ ನಿದ್ದೆಯ ಅನುಭವ ದೊರೆಯಿತು ಎಂದು ಮಲಗಿಬಿಟ್ಟೀರಿ… ಸ್ವಲ್ಪ ಈ ಮಾಸದ ಹೊಸ ವಿಷಯದ ಕಡೆ ದೃಷ್ಠಿ ಹರಿಸೋಣ. ಅದೆಲ್ಲಾ ಸರಿ ನಾನು ಈ ಮೇಲೆ ಹೇಳಿದ ಸಂದರ್ಭದಲ್ಲಿ ‘ಹಳದಿ ಮಿಶ್ರಿತ ಹಸಿರು ಬಣ್ಣದ ನಕ್ಷತ್ರಗಳು’ ಎಂದು ಹೇಳಿದೆನಲ್ಲಾ ಅದು ಏನೆಂದು ಪ್ರಶ್ನೆ ಬರಲಿಲ್ಲವೇ? ಹಾ… ನೀವು ಊಹಿಸಿದ್ದು ಸರಿ. ಅದು ಮಿಂಚು ಹುಳು. ರಾತ್ರಿಯ ಆ ಕತ್ತಲಲ್ಲಿ ಅವು ಮಿನುಗುವ ದೃಶ್ಯ ಸವಿಯುವ ಅನುಭವವೇ ಬೇರೆ. ಅದು ಬಿಡಿ ಮಲಗುವಾಗ ಊಹಿಸಿಕೊಂಡರೆ ಆಯ್ತು. ವಿಷಯಕ್ಕೆ ಬಂದರೆ ನಿಮ್ಮ ಮುಂದಿನ ಪ್ರಶ್ನೆ ನನಗೇ ತಿಳಿಯಿತು ಬಿಡಿ. ಮಿಂಚು ಹುಳು ಹೇಗೆ ಮತ್ತು ಏಕೆ ಮಿನುಗುತ್ತದೆ? ಎಂದಲ್ಲವೇ? ಅದನ್ನೇ ಹೇಳಲು ಬಂದೆ…

ಎಲ್ಲ ತರಹದ ಬಣ್ಣಗಳನ್ನು ಹೊರಸೂಸುವ ಎಲ್. ಇ. ಡಿ. ಬಲ್ಬ್ ಗಳು ಈಗ ಮಾರುಕಟ್ಟೆಯಲ್ಲಿ ಸಾಕಷ್ಟಿವೆ. ವಿದ್ಯುತ್ತಿನ ಸಹಾಯದಿಂದ ಅವು ಬೆಳಗುತ್ತವೆ. ಕೆಲವು ನಗರವಾಸಿ ಮಕ್ಕಳಿಗೆ ಅದೇ ಅಚ್ಚರಿಯಂತೆಯೂ ಕಾಣಬಹುದು. ಆದರೆ ಮಿಂಚು ಹುಳುಗಳು ಅಂತಹ ಬೆಳಕನ್ನು ತಾವೇ ತಯಾರಿಸುತ್ತವೆ ಎಂದರೆ ನಂಬಲು ಸ್ವಲ್ಪ ಕಷ್ಟವೂ ಆದೀತು. ಆದರೆ ಅದೇ ಸತ್ಯ. ಅದು ಹೇಗೆ ಎಂದು ಸ್ವಲ್ಪ ಹೇಳಿಬಿಟ್ಟರೆ ಒಳ್ಳೆಯದು. ಇದೋ ಹೇಳಿಬಿಡುತ್ತೇನೆ… ಮಿಂಚು ಹುಳಗಳ ಒಳಗಿಂದ ಬೆಳಕು ಬರಲು ಕಾರಣ ಅಲ್ಲಾಗುವ ರಾಸಾಯನಿಕ ಕ್ರಿಯೆ. ಹಾಗಾದರೆ ಯಾವ ಯಾವ ವಸ್ತುಗಳ ನಡುವೆ ರಾಸಾಯನಿಕ ಕ್ರಿಯೆ ನಡೆಯುತ್ತದೆ? ಮಿಂಚು ಹುಳುಗಳಲ್ಲಿ ಲೂಸಿಫರೇಸ್ (luciferase)ಎಂಬ ಪ್ರೋಟೀನ್ ಉತ್ಪತ್ತಿಯಾಗುತ್ತದೆ. ಈ ಪ್ರೋಟೀನ್ ನ ಲೂಸಿಫೆರಿನ್ (luciferin) ಎಂಬ ಪಿಗ್ಮೆಂಟ್ ಜೊತೆಗೆ ಆಮ್ಲಜನಕ (oxygen) ಸೇರಿ ಬೆಳಕು ಉತ್ಪತ್ತಿಯಾಗುತ್ತದೆ.

ಹೀಗೆ ಬೆಳಕು ಹೊರಸೂಸುವ ಜೀವಿ ಇದೊಂದೇ ಅಲ್ಲ. ಕೆಲವು ಸಮುದ್ರದ ತೀರಗಳಲ್ಲಿ ರಾತ್ರಿ ಹೊಳೆಯುವ ಅಲೆಗಳನ್ನು ನೋಡಿರಬಹುದು ಅಥವಾ ಕೇಳಿರಬಹುದು. ಹೀಗೆ ಸಮುದ್ರದಲ್ಲೇ ಇನ್ನು ಹಲವಾರು ಜೀವಿಗಳು ಸ್ವಂತ ಬೆಳಕನ್ನು ಉತ್ಪಾದಿಸುತ್ತವೆ. ಅವುಗಳನ್ನು ಮುಂದೆ ಹೇಳುತ್ತೇನೆ. ಆದರೆ ಮಿಂಚು ಹುಳುಗಳು ಇವೆಲ್ಲಕ್ಕಿಂತ ವಿಶೇಷ. ಏಕೆಂದರೆ ಬೇರೆಲ್ಲಾ ಜೀವಿಗಳು ಬೆಳಕನ್ನು ಹೊರ ಹಾಕುವಾಗ ಬೆಳಕು ನಿರಂತರವಾಗಿ ಬರುತ್ತದೆ. ಆದರೆ ಮಿಂಚು ಹುಳುಗಳು ಮಿನುಗುತ್ತವೆ, ಅಂದರೆ ಬಲ್ಬ್ ನ ಹಾಗೆ ON ಮತ್ತು OFF ಆಗುತ್ತಿರುತ್ತದೆ. ಓಹ್…. ಹಾಗಾದರೆ ಅದಕ್ಕೆ ಕಾರಣವೇನು? ಎಂದು ತಾವು ತಲೆ ಕೆಡಿಸಿಕೊಳ್ಳುವ ಹಾಗಿಲ್ಲ. ಏಕೆಂದರೆ ಇತ್ತೀಚೆಗೆ ವಿಜ್ಞಾನಿಗಳು ಅದನ್ನೂ ಕಂಡು ಹಿಡಿದಿದ್ದಾರೆ. ಮಿಂಚು ಹುಳುಗಳು ಬೆಳಕನ್ನು ತಯಾರಿಸುವಾಗ ನೈಟ್ರೋಜನ್ಆಕ್ಸೈಡ್ (nitrogen oxide) ಇರುವುದು ಗಮನಿಸಿದ್ದಾರೆ. ಇದೇ ಮಿಂಚುಹುಳುಗಳಲ್ಲಿ ON ಮತ್ತು OFF ಮಾಡುವ ಸ್ವಿಚ್ ಆಗಿ ಕೆಲಸ ಮಾಡುವುದಂತೆ ಅಷ್ಟೇ ಅಲ್ಲ, ಈ ಲೂಸಿಫರೇಸ್ (luciferase)ಎಂಬ ಪ್ರೋಟೀನ್ ಉತ್ಪತ್ತಿಯಾಗಲು ಕಾರಣವಾದ ಡಿ. ಎನ್. ಎ ಅನ್ನು ಕೂಡಾ ಗುರುತಿಸಿದ್ದಾರೆ. ಇದರಿಂದ ವೈದ್ಯಕೀಯ ಸಂಶೋಧನೆಗೆ ಬಹಳ ಉಪಯೋಗವಾಗಬಹುದಂತೆ. ಅದು ಹೇಗೆ? ಎಂಬುದಲ್ಲವೇ ನಿಮ್ಮ ಪ್ರಶ್ನೆ. ಹೇಳುತ್ತೇನೆ, ಗುರುತಿಸಿದ ಪ್ರೋಟೀನ್ ಉತ್ಪತ್ತಿಯಾಗಲು ಕಾರಣವಾದ ಡಿ. ಎನ್. ಎ ಯನ್ನು ತೆಗೆದು ಬೇರೆ ಜೀವಿಗಳು ಅಥವಾ ಮನುಷ್ಯರಿಗೇ ಕೊಡುವ ಹಾಗಾದರೆ, ಕ್ಯಾನ್ಸರ್ ಇರುವ ಜೀವಕೋಶಗಳಿಗೆ ಈ ಡಿ. ಎನ್. ಎ ಹಾಕಿಬಿಟ್ಟರೆ ಆಯ್ತು. ಕ್ಯಾನ್ಸರ್ ಜೀವಕೋಶಗಳೆಲ್ಲಾ ಹೊಳೆಯುತ್ತವೆ. ಆಗ ವೈದ್ಯರ ಚಿಕಿತ್ಸೆ ಎಷ್ಟರ ಮಟ್ಟಿಗೆ ಫಲಕಾರಿಯಾಗುತ್ತಿದೆ ಎಂಬುದು ಬರೀ ಕಣ್ಣಿಗೆ ಕಾಣುತ್ತದೆ. ಆ ಆಲೋಚನೆಯೇ ಎಷ್ಟು ಚೆನ್ನಾಗಿದೆ ಅಲ್ಲವೇ?

ಸರಿ ಮಿಂಚು ಹುಳುಗಳಲ್ಲಿ ಬೆಳಕು ಹೇಗೆ ಬರುತ್ತದೆಂದು ತಿಳಿಯಿತು. ಹಾಗೆ ಬೆಳಕು ಬಿಡಲು ಕಾರಣವಾದರೂ ಏನು? ಅಲ್ಲಿಗೇ ಬಂದೆ… ಮಿಂಚು ಹುಳುಗಳು ಹೀಗೆ ಬೆಳಕು ಹೊರಸೂಸಲು ಮುಖ್ಯವಾಗಿ ಎರಡು ಕಾರಣಗಳು. ಒಂದು ತನ್ನ ಸಂಗಾತಿಯನ್ನು ಆಕರ್ಷಿಸಲು ಮತ್ತೊಂದು ಆಹಾರವನ್ನು ತನ್ನ ಬಳಿಗೆ ಆಕರ್ಷಿಸಲು. ಹೀಗೆ ಸ್ವಂತ ಬೆಳಕು ಬಿಡುವ ಒಂದೊಂದು ಜೀವಿಗೂ ತನ್ನದೇ ಆದ ಕಾರಣಗಳಿವೆ. ಕೆಲವೆಂದರೆ, ಸಮುದ್ರದಲ್ಲಿ ಇರುವ ಒಂದು ಬಗೆಯ ಜೀವಿ ಹೀಗೆ ಬೆಳಕು ಬೀರುವ ಸಿಂಬಳವನ್ನು ತನ್ನನ್ನು ತಿನ್ನಲು ಬರುವ ಜೀವಿಗೆ ಅಂಟಿಸಿಬಿಡುತ್ತದೆ. ಈ ಸಿಂಬಳ ಕೆಲವು ದಿನಗಳ ಕಾಲ ಬೆಳಕು ಬೀರುತ್ತಲೇ ಇರುವುದರಿಂದ ಆ ಪರಭಕ್ಷಕ ಸಮೀಪದಲ್ಲೇ ಎಲ್ಲಾದರೂ ಸುಳಿದಾಡುತ್ತಿದ್ದರೆ ಆ ಹುಳಕ್ಕೆ ದೂರದಿಂದಲೇ ಸುಳಿವು ಸಿಗುತ್ತದೆ. ಇದರಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಬಲು ಸಹಾಯವಾಗುತ್ತದೆ. ಇದೇನು ಮಹಾ… ನಾನು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗಲು ಈ ಬೆಳಕನ್ನು ಬಳಸುತ್ತೇನೆ ಎನ್ನುತ್ತವೆ ಒಂದು ಬಗೆಯ ಬ್ಯಾಕ್ಟೀರಿಯಾ. ಅದು ಹೇಗೆಂದರೆ, ಈ ಹೊಳೆಯುವ ಬ್ಯಾಕ್ಟೀರಿಯಾಗಳನ್ನು ಯಾವುದಾದರೂ ಪ್ರಾಣಿ ಬೆಳಗುವುದನ್ನು ನೋಡಿ ತಿನ್ನುತ್ತದೆ. ಸ್ವಲ್ಪ ದೂರ ಸಾಗಿದ ನಂತರ ಅದು ಆಹಾರವಲ್ಲ ಎಂದು ತಿಳಿದ ಬಳಿಕ ಹೊರ ಹಾಕುತ್ತದೆ. ಇವುಗಳೋ ಸೂಕ್ಷ್ಮಜೀವಿಗಳಾದ್ದರಿಂದ ಯವುದೇ ದೈಹಿಕ ವ್ಯಾಯಾಮ-ತೊಂದರೆಗಳಿಲ್ಲದೆ ಚಲಿಸಿದ ಹಾಗಾಗುತ್ತದೆ. ಅಲ್ಲವೇ?

ಸರಿಯಾಗಿ ಲಿಫ್ಟ್ ಸಹ ಕೇಳಲು ಬಾರದ ನನಗೆ ಈ ಬ್ಯಾಕ್ಟೀರಿಯಾವನ್ನು ನೋಡಿದರೆ, ಅರೇ… ಪರವಾಗಿಲ್ವೇ! ಅನ್ನಿಸುತ್ತದೆ. ಹಾಗೆ… ತಲೆಯಲ್ಲಿ ಒಂದು ಪ್ರಶ್ನೆಯೂ ಮೂಡುತ್ತದೆ. ಬುದ್ಧಿ ಜೀವಿಗಳೆಂದು ಹೇಳಿಕೊಂಡು ನಾವು ಮನಬಂದಂತೆ ನಡೆದುಕೊಂಡು, ತಿಮಿರಿನಿಂದ ತಿರುಗಾಡುತ್ತೇವಲ್ಲಾ ಇದು ಎಷ್ಟು ಸರಿ? ನಾವು ಇಂತಹ ಉದಾಹರಣೆಗಳನ್ನು ನೋಡಿಯಾದರೂ ಕೆಲವು ವಿಷಯಗಳನ್ನು ಅರಿತುಕೊಳ್ಳಬೇಕಿದೆ ಅಲ್ಲವೇ.. ಏನೇ ಆದರೂ ನಮಗೆ ತಿಳಿದದ್ದನ್ನು ಮಾತ್ರ ಆಧಾರವಾಗಿಟ್ಟುಕೊಂಡು ಏನನ್ನೂ ಆತುರದಲ್ಲಿ ನಿರ್ಧರಿಸಬಾರದು. ಪ್ರಕೃತಿಯ ಈ ದೊಡ್ಡ ರಂಗಮಂದಿರದಲ್ಲಿನ ಪಾತ್ರಧಾರಿಗಳಾದ ನಾವು ನಮ್ಮ ಪಾತ್ರಗಳ ಮಿತಿಯನ್ನು ಅರಿತು ಜೀವಿಸೋಣ!

ಲೇಖನ: ಜೈಕುಮಾರ್ ಆರ್.
ಡಬ್ಲೂ. ಸಿ. ಜಿ., ಬೆಂಗಳೂರು

Spread the love
error: Content is protected.