ಪ್ರಕೃತಿ ಬಿಂಬ
ನೀಲಿ ಹುಲಿ ಚಿಟ್ಟೆ © ಗುರುಪ್ರಸಾದ್ ಕೆ. ಆರ್.
ದಕ್ಷಿಣ ಮತ್ತು ದಕ್ಷಿಣ ಆಗ್ನೇಯ ಏಷ್ಯಾದ ಸಮತಟ್ಟು ಪ್ರದೇಶ, ಕುರುಚಲು ಕಾಡುಗಳು, ನಿತ್ಯ ಹರಿದ್ವರ್ಣ ಕಾಡುಗಳು ಹಾಗೂ ಎಲೆ ಉದುರುವ ಕಾಡುಗಳಲ್ಲಿ ಕಂಡುಬರುವ ಈ ನೀಲಿ ಹುಲಿ ಚಿಟ್ಟೆಯು ನಿಂಫಾಲಿಡೇ (Nymphalidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ತಿರುಮಲ ಲಿಮ್ನಿಯಾಸ್ (Tirumala limniace) ಎಂದು ಕರೆಯಲಾಗುತ್ತದೆ. ರೆಕ್ಕೆಗಳ ಮುಂಭಾಗವು ಕಡು ಕಂದು ಅಥವಾ ಕಪ್ಪು ಬಣ್ಣವಿದ್ದು, ಅರೆ ಪಾರದರ್ಶಕವಾದ ಬಿಳಿ ಮಿಶ್ರಿತ ನೀಲಿ ಬಣ್ಣದ ಚುಕ್ಕೆಗಳು ಹಾಗೂ ಗೆರೆಗಳನ್ನು ಹೊಂದಿರುತ್ತದೆ. ಹಿಂಭಾಗವು ಇದೇ ರೀತಿ ಇದ್ದು, ಕೊಂಚ ತೆಳು ಬಣ್ಣದ್ದಾಗಿರುತ್ತದೆ. ಈ ಚಿಟ್ಟೆಗಳು ಮಳೆಗಾಲದಲ್ಲಿ ಪಶ್ಚಿಮ ಘಟ್ಟದಿಂದ ಪೂರ್ವ ಘಟ್ಟಗಳೆಡೆ, ಚಳಿಗಾಲದಲ್ಲಿ ಪೂರ್ವ ಘಟ್ಟಗಳಿಂದ ಪಶ್ಚಿಮ ಘಟ್ಟಗಳೆಡೆ ವಲಸೆ ಹೋಗುವುದನ್ನು ಕಾಣಬಹುದು. ಪೊಯೇಸೀ (Poaceae) ಕುಟುಂಬದ ಕಬ್ಬಿನ ಗಿಡ, ಅಪೊಸಿನೇಸಿ (Apocynaceae) ಕುಟುಂಬದ ಎಕ್ಕದ ಗಿಡ, ಬುಗುಡಿ ಬಳ್ಳಿ, ಮೇಣದ ಬಳ್ಳಿ ಇತ್ಯಾದಿ ಇವುಗಳ ಅತಿಥೇಯ ಸಸ್ಯಗಳಾಗಿವೆ.!

ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಸಮತಟ್ಟು ಪ್ರದೇಶ, ಕುರುಚಲು ಕಾಡುಗಳು, ನಿತ್ಯ ಹರಿದ್ವರ್ಣ ಕಾಡುಗಳು, ಎಲೆ ಉದುರುವ ಕಾಡುಗಳಲ್ಲಿ ಕಂಡು ಬರುವ ಪಟ್ಟೆ ಹುಲಿ ಚಿಟ್ಟೆಯು ನಿಂಫಾಲಿಡೇ (Nymphalidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಡಾನೌಸ್ ಜೆನುಟಿಯಾ (Danaus genutia) ಎಂದು ಕರೆಯಲಾಗುತ್ತದೆ. ರೆಕ್ಕೆಗಳ ಮುಂಭಾಗವು ಕಡು ಕಂದು ಅಥವಾ ಕಪ್ಪು ಬಣ್ಣವಿದ್ದು, ಅರೆ ಪಾರದರ್ಶಕವಾದ ಬಿಳಿ ಮಿಶ್ರಿತ ನೀಲಿ ಬಣ್ಣದ ಚುಕ್ಕೆಗಳು ಹಾಗೂ ಗೆರೆಗಳನ್ನು ಹೊಂದಿರುತ್ತದೆ. ಚಳಿಗಾಲದಲ್ಲಿ ವಲಸೆ ಹೋಗುವುದನ್ನು ಕಾಣಬಹುದು. ಪೊಯೇಸೀ (Poaceae) ಕುಟುಂಬದ ಕಬ್ಬಿನ ಗಿಡ, ಅಪೊಸಿನೇಸಿ (Apocynaceae) ಕುಟುಂಬದ ಎಕ್ಕದ ಗಿಡ, ಬುಗುಡಿ ಬಳ್ಳಿ, ಮೇಣದ ಬಳ್ಳಿ ಇತ್ಯಾದಿ ಇವುಗಳ ಅತಿಥೇಯ ಸಸ್ಯಗಳಾಗಿವೆ.

ಭಾರತೀಯ ಉಪಖಂಡ ಮತ್ತು ದಕ್ಷಿಣ ಆಗ್ನೇಯ ಏಷ್ಯಾದ ಸಮತಟ್ಟು ಪ್ರದೇಶ, ಕುರುಚಲು ಕಾಡುಗಳು, ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಕಂಡು ಬರುವ ಕಪ್ಪು ಚುಕ್ಕೆ ಚಿಟ್ಟೆಯು ಲೈಕೇನಿಡೆ (Lycaenidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಕ್ಯಾಸ್ಟಲಿಯಸ್ ರೋಸಿಮನ್ (Castalius rosimon) ಎಂದು ಕರೆಯಲಾಗುತ್ತದೆ. ಎರಡೂ ಬಿಳಿಯ ರೆಕ್ಕೆಗಳ ಮುಂಭಾಗದ ತಳದಲ್ಲಿ ಹೊಳೆಯುವ ತೆಳು ನೀಲಿಯಿದ್ದು, ಅಂಚುಗಳಲ್ಲಿ ಮತ್ತು ಒಳಭಾಗದಲ್ಲಿ ಕಪ್ಪು ತೇಪೆಗಳನ್ನು ಕಾಣಬಹುದು. ಹಿಂಭಾಗವು ಬಿಳಿಯ ಬಣ್ಣವಿದ್ದು, ಕಪ್ಪು ಚುಕ್ಕೆ ಮತ್ತು ಗೆರೆಗಳನ್ನು ಹೊಂದಿರುತ್ತದೆ. ನೆಲದ ಸಮೀಪ ಹಾರಾಡುತ್ತಾ, ಗಿಡಗಳ ಮೇಲೆ ಕುಳಿತಾಗ ರೆಕ್ಕೆಗಳನ್ನು ಅರ್ಧ ತೆರೆದು ಬಿಸಿಲನ್ನು ಕಾಯುತ್ತದೆ. ರಾಮ್ನೇಸಿ (Rhamnaceae) ಕುಟುಂಬದ ಬೋರೆ ಹೆಣ್ಣಿನ ಮರದ ಜಾತಿಗೆ ಸೇರಿದ ವಿವಿಧ ಸಸ್ಯಗಳು ಇವುಗಳ ಅತಿಥೇಯ ಸಸ್ಯಗಳಾಗಿವೆ.

ಏಷ್ಯಾ, ಆಸ್ಟ್ರೇಲಿಯಾ ಮತ್ತು ಆಫ್ರಿಕಾದ ಶುಷ್ಕ, ತೆರೆದ ಪ್ರದೇಶಗಳಲ್ಲಿ ಮತ್ತು ಮರುಭೂಮಿಗಳು, ಪರ್ವತಗಳು, ಎಲೆ ಉದುರುವ ಕಾಡುಗಳು, ನಗರಗಳು ಮತ್ತು ಉದ್ಯಾನವನಗಳಲ್ಲಿ ಕಂಡು ಬರುವ ಈ ಸಾಮಾನ್ಯ ಹುಲಿ ಚಿಟ್ಟೆಯು ನಿಂಫಾಲಿಡೇ (Nymphalidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಡಾನೌಸ್ ಕ್ರಿಸಿಪಸ್ (Danaus chrysippus) ಎಂದು ಕರೆಯಲಾಗುತ್ತದೆ. ದೇಹವು ಕಪ್ಪು ಬಣ್ಣದ್ದಾಗಿದ್ದು, ಬಿಳಿ ಚುಕ್ಕೆಗಳನ್ನು ಹೊಂದಿರುತ್ತದೆ. ರೆಕ್ಕೆಗಳು ಕಂದು ಮಿಶ್ರಿತ ಕಿತ್ತಳೆ ಬಣ್ಣದಲ್ಲಿದ್ದು, ಮೇಲ್ಭಾಗವು ಕೆಳಭಾಗಕ್ಕಿಂತ ಪ್ರಕಾಶಮಾನವಾಗಿರುತ್ತದೆ. ಮುಂಭಾಗದ ರೆಕ್ಕೆಯ ತುದಿಯ ಅರ್ಧಭಾಗವು ಬಿಳಿ ಪಟ್ಟಿಯೊಂದಿಗೆ ಕಪ್ಪು ಬಣ್ಣದ್ದಾಗಿರುತ್ತದೆ. ಹಿಂಭಾಗದ ರೆಕ್ಕೆಯ ಮಧ್ಯದಲ್ಲಿ ಮೂರು ಕಪ್ಪು ಚುಕ್ಕೆಗಳಿರುತ್ತವೆ. ಅತಿಥೇಯ ಸಸ್ಯಗಳಿಂದ ದೇಹದೊಳಗೆ ಶೇಖರಿಸಿರುವ ವಿಷವು ಪರಭಕ್ಷಕಗಳು ಇವುಗಳನ್ನು ತಿನ್ನಲಾಗದಂತೆ ಮಾಡುತ್ತದೆ. ಹಾಗಾಗಿ ತನ್ನ ಪ್ರಕಾಶಮಾನವಾದ ಬಣ್ಣದಿಂದ ಎಚ್ಚರಿಕೆ ನೀಡುತ್ತದೆ. ಅಪೊಸಿನೇಸಿ (Apocynaceae) ಕುಟುಂಬದ ಎಕ್ಕದ ಗಿಡ, ಮೊರೇಸೀ (Moraceae) ಕುಟುಂಬದ ಕೆಲವು ಅತ್ತಿ ಮರಗಳು ಇತ್ಯಾದಿ ಇವುಗಳ ಅತಿಥೇಯ ಸಸ್ಯಗಳಾಗಿವೆ.
ಚಿತ್ರ : ಗುರುಪ್ರಸಾದ್ ಕೆ. ಆರ್.
ಲೇಖನ: ದೀಪ್ತಿ ಎನ್.