ಪ್ರಕೃತಿ ಬಿಂಬ

ಪ್ರಕೃತಿ ಬಿಂಬ

ಕಪ್ಪು ಕಿತ್ತಳೆ ನೊಣಹಿಡುಕ                                                                        ©  ಶ್ರೀಕಾಂತ್ ಎ. ವಿ.

ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳ ಶೋಲಾ ಹುಲ್ಲುಗಾವಲುಗಳು ಮತ್ತು ಕಾಡುಗಳಿಗೆ ಸ್ಥಳೀಯವಾಗಿರುವ ಈ ಸಣ್ಣ ಪ್ರಕಾಶಮಾನವಾದ ಬಣ್ಣದ ಪಕ್ಷಿಯು ಮಸ್ಸಿಕಾಪಿಡೆ (Muscicapidae) ಕುಟುಂಬಕ್ಕೆ ಸೇರುತ್ತದೆ‌. ಇದನ್ನು ವೈಜ್ಞಾನಿಕವಾಗಿ ಫಿಸೆಡುಲಾ ನಿಗ್ರೊರುಫಾ (Ficedula nigrorufa) ಎಂದು ಕರೆಯಲಾಗುತ್ತದೆ. ಗಂಡು ಹಕ್ಕಿಯು ಕಪ್ಪು ತಲೆ ಮತ್ತು ರೆಕ್ಕೆಗಳನ್ನು ಹೊಂದಿದ್ದು, ಕೆಂಪಗಿನ ಬೆನ್ನು ಮತ್ತು ಕಿತ್ತಳೆ ಬಣ್ಣದ ತಳಭಾಗವನ್ನು ಹೊಂದಿರುತ್ತದೆ. ಹೆಣ್ಣು ಹಕ್ಕಿಯು ಗಾಢ ಕಂದು ಬಣ್ಣದ ತಲೆ ಮತ್ತು ರೆಕ್ಕೆಗಳನ್ನು ಹೊಂದಿದ್ದು, ಕಣ್ಣಿನ ಸುತ್ತ ತೆಳುವಾದ ಉಂಗುರದ ಆಕಾರವನ್ನು ಹೊಂದಿರುತ್ತದೆ. ಹೆಣ್ಣು ಹಕ್ಕಿ ಪೊದೆ ಅಥವಾ ಜರೀಗಿಡದಲ್ಲಿ ಗೂಡನ್ನು ನಿರ್ಮಿಸಿ, ಎರಡು ಬೂದು ಬಣ್ಣದ ಚುಕ್ಕೆಗಳುಳ್ಳ ಮೊಟ್ಟೆಗಳನ್ನು ಇಡುತ್ತದೆ. ಮರಿ ಹಕ್ಕಿಗಳು ಕಂದು ಬಣ್ಣವಿದ್ದು, ಚುಕ್ಕೆಗಳಿಂದ ಕೂಡಿರುತ್ತವೆ. ಈ ಹಕ್ಕಿಗಳು ನೆಲದ ಸಮೀಪ ಹಾರುತ್ತಾ ಕೀಟಗಳನ್ನು ಹಿಡಿದು ತಿನ್ನುತ್ತವೆ ಹಾಗೂ ನೇರವಾಗಿ ನೆಲದಿಂದಲೂ ಕೂಡ ಕೀಟಗಳನ್ನು ಹೆಕ್ಕಿ ತಿನ್ನುತ್ತವೆ‌. ಮುಂಜಾನೆ ಮತ್ತು ಸಂಜೆ ವೇಳೆಯಲ್ಲಿ ಗಂಟೆಗೆ ಸುಮಾರು 100 ಕೀಟಗಳನ್ನು ಹಿಡಿದು ತಿನ್ನುವ ಸಾಮರ್ಥ್ಯ ಇವುಗಳಿಗಿವೆ!

 ಕಂದು ಮೀನು ಗೂಬೆ                                                                                                                    ©  ಶ್ರೀಕಾಂತ್ ಎ. ವಿ.

ದಕ್ಷಿಣ ಮತ್ತು ದಕ್ಷಿಣ ಪೂರ್ವ ಏಷ್ಯದ ವಿವಿಧ ಭಾಗಗಳ ಕಾಡುಗಳು ಮತ್ತು ಜೌಗು ಪ್ರದೇಶಗಳಲ್ಲಿ, ಹಾಗೂ ನದಿಗಳು, ಸರೋವರಗಳು ಮತ್ತು ಕೊಳಗಳಂತಹ ಜಲಮೂಲಗಳ ಬಳಿ ಕಂಡುಬರುತ್ತದೆ. ಈ ನಿಶಾಚರಿ ಹಕ್ಕಿಯು ಸ್ಟ್ರಿಗಿಡೇ (Strigidae) ಕುಟುಂಬಕ್ಕೆ ಸೇರುತ್ತದೆ‌. ಇದನ್ನು ವೈಜ್ಞಾನಿಕವಾಗಿ ಕೆಟುಪ ಜೈಲೋನೆನ್ಸಿಸ್ (Ketupa zeylonensis) ಎಂದು ಕರೆಯಲಾಗುತ್ತದೆ. ಕಂದು ಬಣ್ಣದ ಮೀನು ಗೂಬೆಯು ದಟ್ಟವಾದ ಗರಿಗಳಿಂದ ಕೂಡಿದ ಕಿವಿಯನ್ನು ಪ್ರಧಾನವಾಗಿ ಹೊಂದಿದೆ ಹಾಗು ಮೇಲ್ಭಾಗದಲ್ಲಿ ಕಪ್ಪು ಮತ್ತು ಕಡುಗಂದು ಬಣ್ಣದ ಗೆರೆಗಳನ್ನು ಹೊಂದಿದೆ. ಒಂಟಿಯಾಗಿ ಅಥವಾ ಜೋಡಿಗಳಲ್ಲಿ, ಹೊಳೆ, ಕೆರೆಗಳ ಹತ್ತಿರದ ದೊಡ್ಡ ದೊಡ್ಡ ಮರಗಳ ಮೇಲೆ ಕುಳಿತಿರುತ್ತವೆ. ‘ಊಹ್ಹೋ’ ಎಂದು ಹೂಂಕರಿಸಿದಂತೆ ನೀಳವಾಗಿ ಕೂಗುತ್ತದೆ ಹಾಗೂ ಹಗಲೆಲ್ಲಾ ದೊಡ್ದ ಮರಗಳ ಎಲೆಗಳ ನಡುವೆ ನಿದ್ರಿಸುತ್ತದೆ. ಮೀನು, ಏಡಿ, ಹಕ್ಕಿಗಳು, ಕಪ್ಪೆ, ಮೊಲ ಇತ್ಯಾದಿಗಳನ್ನು ಬೇಟೆಯಾಡುತ್ತದೆ.  ಹಳೆಯ ಮರಗಳ ಪೊಟರೆಗಳಲ್ಲಿ ಮತ್ತು ಪರ್ವತ ಶಿಖರಗಳ ಬಂಡೆ ಬಿರುಕಿನಲ್ಲಿ ಗೂಡು ಮಾಡಿ ಕೆನೆ ಬಣ್ಣದ ಒಂದು ಅಥವಾ ಎರಡು ಮೊಟ್ಟೆಗಳನ್ನು ಇಟ್ಟು ಮರಿ ಮಾಡುತ್ತದೆ.

ನೀಲಗಿರಿ ನೊಣಹಿಡುಕ ©  ಶ್ರೀಕಾಂತ್ ಎ. ವಿ.

ಪಶ್ಚಿಮ ಘಟ್ಟ ಮತ್ತು ನೀಲಗಿರಿಗಳ ಶೋಲಾ ಕಾಡುಗಳ ಎತ್ತರದ ಪ್ರದೇಶಗಳಲ್ಲಿ ಕಂಡುಬರುವ ಈ ನೀಲಗಿರಿ ನೊಣಹಿಡುಕ ಮಸ್ಸಿಕಾಪಿಡೆ (Muscicapidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಯುಮಿಯಾಸ್ ಅಲ್ಬಿಕಾಡಾಟಸ್ (Eumyias albicaudatus) ಎಂದು ಕರೆಯಲಾಗುತ್ತದೆ. ಇದರ ಮೈಬಣ್ಣವು ಗಾಢ ಇಂಡಿಗೋ ನೀಲಿ ಬಣ್ಣದ್ದಾಗಿದ್ದು, ಹಣೆಯು ನೇರಳೆ ನೀಲಿ ಬಣ್ಣದಲ್ಲಿರುತ್ತದೆ. ಹೆಣ್ಣು ಹಕ್ಕಿ ಮಂದ ಬಣ್ಣದಲ್ಲಿದ್ದು, ಮೇಲ್ಭಾಗವು ಗಾಢ ಕಂದು ಮತ್ತು ಕೆಳಗಿನ ಭಾಗವು ಗಾಢ ಬೂದು ಬಣ್ಣದಲ್ಲಿರುತ್ತದೆ. ಈ ಹಕ್ಕಿಗಳು ನೆಲದ ಸಮೀಪ ಹಾರುತ್ತಾ ಕೀಟಗಳನ್ನು ಹಿಡಿದು ತಿನ್ನುತ್ತವೆ. ಕೆಲವೊಮ್ಮೆ ಮರಗಳ ಮೇಲಾವರಣದಲ್ಲೂ ಕಂಡು ಬರುತ್ತವೆ. ಗೂಡನ್ನು ದಂಡೆಗಳಲ್ಲಿ ಅಥವಾ ಮರದ ರಂಧ್ರದ ಕುಳಿಯಲ್ಲಿ ನಿರ್ಮಿಸುತ್ತವೆ. ಗೂಡು ಬಟ್ಟಲಿನಂತಿದ್ದು, ಹೊರಭಾಗದಲ್ಲಿ ಪಾಚಿ, ಕಲ್ಲುಹೂವುಗಳು ಮತ್ತು ಗರಿಗಳನ್ನು ಹೊಂದಿರುತ್ತದೆ. ಸಾಮಾನ್ಯವಾಗಿ ಎರಡರಿಂದ ಮೂರು ಕೆನೆ ಕಂದು ಬಣ್ಣದ್ದ ಮೊಟ್ಟೆಗಳನ್ನು ಇಡುತ್ತವೆ ಹಾಗೂ ಮೊಟ್ಟೆಯ ಅಗಲವಾದ ಭಾಗದಲ್ಲಿ ದಟ್ಟವಾದ ಮಚ್ಚೆಯಿರುತ್ತದೆ.

ತರಗುಹಕ್ಕಿ                                                                                                          ©  ಶ್ರೀಕಾಂತ್ ಎ. ವಿ.
 

ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ತೇವಾಂಶವುಳ್ಳ ಎಲೆ ಉದುರುವ ಮತ್ತು ನಿತ್ಯಹರಿದ್ವರ್ಣ ಕಾಡುಗಳಲ್ಲಿ, ವಿಶೇಷವಾಗಿ ಬೆಟ್ಟಗಳಲ್ಲಿ ಕಂಡುಬರುವ ಈ ತರಗುಹಕ್ಕಿಯು ಲಿಯೋಥ್ರಿಚಿಡೆ (Leiothrichidae) ಕುಟುಂಬಕ್ಕೆ ಸೇರುತ್ತದೆ‌. ಇದನ್ನು ವೈಜ್ಞಾನಿಕವಾಗಿ ಆಲ್ಸಿಪ್ಪೆ ಪೊಯೊಯಿಸೆಫಾಲಾ (Alcippe poioicephala) ಎಂದು ಕರೆಯಲಾಗುತ್ತದೆ. ಇದೊಂದು ಮಂದ ಬಣ್ಣದ ಪುಟ್ಟ ಹಕ್ಕಿಯಾಗಿದೆ. ಬಹಳ ಚಿಕ್ಕದಾದ ನಯವಾದ ಕೊಕ್ಕನ್ನು ಹೊಂದಿದ್ದು, ಗರಿಗಳು ಕಂದು ಬಣ್ಣ ಮತ್ತು ತಲೆಯ ಮೇಲ್ಭಾಗವು ಬೂದು ಬಣ್ಣದಲ್ಲಿರುತ್ತದೆ. ಕಾಡಿನ ಪೊದೆಗಳಲ್ಲಿ ಅಥವಾ ಎಲೆಗಳ ಮಧ್ಯೆ ಕೀಟಗಳನ್ನು ಹುಡುಕಿ ತಿನ್ನುತ್ತವೆ. ಕೆಲವೊಮ್ಮೆ ಸಣ್ಣ ಹಣ್ಣುಗಳು ಮತ್ತು ಮಕರಂದವನ್ನೂ ಸಹ ತಮ್ಮ ಆಹಾರವಾಗಿ ಸೇವಿಸುತ್ತವೆ. ಗೂಡು ಬಟ್ಟಲಿನಾಕಾರದಲ್ಲಿದ್ದು, ಪಾಚಿ, ಬೇರುಗಳು, ಕಲ್ಲುಹೂವು, ಎಲೆಗಳು ಮತ್ತು ಹುಲ್ಲಿನಿಂದ ಮುಚ್ಚಲ್ಪಟ್ಟಿರುತ್ತದೆ. ಇದನ್ನು ನೆಲದಿಂದ ಸರಾಸರಿ 2 ಅಡಿ ಎತ್ತರದಲ್ಲಿನ ಫೋರ್ಕ್ ಆಕಾರದ ಕೊಂಬೆಗಳ ಮಧ್ಯೆ ಇರಿಸಿರುತ್ತದೆ ಅಥವಾ ತೂಗುಬಿಟ್ಟಿರುತ್ತದೆ. ಎರಡರಿಂದ ಮೂರು ಮೊಟ್ಟೆಗಳನ್ನು ಇಟ್ಟು ಮರಿ ಮಾಡುತ್ತದೆ.

ಚಿತ್ರ : ಶ್ರೀಕಾಂತ್ ಎ. ವಿ.
ಲೇಖನ: ದೀಪ್ತಿ ಎನ್.

Spread the love
error: Content is protected.