ಪ್ರಕೃತಿ ಬಿಂಬ
ರೇಸರ್ ಹಾವು © ಡಾ. ವರಪ್ರಸಾದ್
ಭಾರತೀಯ ಉಪಖಂಡದ ಹೆಚ್ಚಿನ ಭಾಗಗಳಲ್ಲಿನ ಒಣ ಹುಲ್ಲುಗಾವಲುಗಳು, ಕುರುಚಲು ಕಾಡುಗಳು, ಕೃಷಿ ಭೂಮಿಗಳು ಮತ್ತು ನಗರದ ಹೊರವಲಯದಲ್ಲಿ ಕಂಡುಬರುವ ಈ ವಿಷಕಾರಿಯಲ್ಲದ ಹಾವು ಕೊಲುಬ್ರಿಡೇ (Colubridae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಆರ್ಗೈರೋಜೆನಾ ಫ್ಯಾಸಿಯೋಲಾಟ (Argyrogena fasciolata) ಎಂದು ಕರೆಯಲಾಗುತ್ತದೆ. ವೇಗವಾಗಿ ಚಲಿಸುವ ಈ ಹಾವಿನ ದೇಹವು ತೆಳುವಾಗಿದ್ದು, ನಯವಾದ ಹುರುಪೆಗಳಿರುವ ಕೆಂಪು ಮಿಶ್ರಿತ ಕಂದು ಬಣ್ಣದ ಮೇಲ್ಭಾಗವನ್ನು ಹೊಂದಿರುತ್ತದೆ. ಹೊಟ್ಟೆಯ ಭಾಗವು ಹಳದಿ ಅಥವಾ ಬಿಳಿ ಬಣ್ಣದಲ್ಲಿರುತ್ತದೆ. ಮರಿಗಳಲ್ಲಿ ಬಿಳಿ ಅಡ್ಡಪಟ್ಟಿಗಳನ್ನು ಕಾಣಬಹುದು. ವಯಸ್ಕ ಹಾವಿನ ಮುಂಭಾಗದಲ್ಲಿ ಮಂದ ಪಟ್ಟಿಗಳಿರುತ್ತವೆ, ಆದರೆ ಹಲವುಗಳಲ್ಲಿ ಪಟ್ಟಿಗಳಿರುವುದಿಲ್ಲ. ಎತ್ತರದ ಹುಲ್ಲು ಮತ್ತು ಪೊದೆಗಳ ಬಳಿ ಕಂಡುಬರುತ್ತದೆ. ಇಲಿಗಳ ಬಿಲಗಳು, ಕಲ್ಲಿನ ರಾಶಿಗಳು ಮತ್ತು ದಟ್ಟವಾದ ಪೊದೆಗಳಲ್ಲಿ ಅಡಗಿಕೊಳ್ಳುತ್ತದೆ. ಇಲಿಗಳು ಇವುಗಳ ಪ್ರಮುಖ ಆಹಾರವಾಗಿವೆ. ಕೆಲವೊಮ್ಮೆ ಕಪ್ಪೆಗಳು ಮತ್ತು ಹಲ್ಲಿಗಳನ್ನು ತಿನ್ನುತ್ತವೆ. ಹೆಣ್ಣು ಹಾವುಗಳು 2-22 ಮೊಟ್ಟೆಗಳನ್ನು ಸಸ್ತನಿಗಳ ಬಿಲಗಳು, ಗೆದ್ದಲು ದಿಬ್ಬಗಳು, ಮರದ ಪೊಟರೆ, ಬಿರುಕುಗಳು, ಬಂಡೆಗಳು ಅಥವಾ ಬಿದ್ದಿರುವ ಮರದ ಟೊಂಗೆಗಳ ಕೆಳಗೆ ಇಡುತ್ತವೆಂದು ದಾಖಲು ಮಾಡಲಾಗಿದೆ.

ಭಾರತದ ಪಶ್ಚಿಮ ಘಟ್ಟಗಳು ಮತ್ತು ದಕ್ಷಿಣಕ್ಕೆ ಕನ್ಯಾಕುಮಾರಿಯವರೆಗೆ ಕಾಣಸಿಗುವ ಈ ವಿಷಕಾರಿ ಹಪ್ಪಾಟೆ ಹಾವುಗಳು ವೈಪರಿಡೇ (Viperidae) ಕುಟುಂಬಕ್ಕೆ ಸೇರುತ್ತವೆ. ಇವುಗಳನ್ನು ವೈಜ್ಞಾನಿಕವಾಗಿ ಕ್ರಾಸ್ಪಿಡೋಸೆಫಾಲಸ್ ಮಲಬಾರಿಕಸ್ (Craspedocephalus malabaricus) ಎಂದು ಕರೆಯಲಾಗುತ್ತದೆ. ಎತ್ತರದ ಕಾಡುಗಳು ಹಾಗೂ ಮರಗಳಲ್ಲಿ ವಾಸಿಸುತ್ತವೆ. ಕೆಲವೊಮ್ಮೆ ತೊರೆಗಳ ಬಳಿ ಇರುವ ಬಂಡೆಗಳು ಹಾಗೂ ಮರಗಳ ಮೇಲೆ ವಿಶ್ರಮಿಸುವುದನ್ನು ಕಾಣಬಹುದಾಗಿದೆ. ಹಸಿರು, ಕಂದು, ಕಪ್ಪು ಮಿಶ್ರಿತ ಮೈಬಣ್ಣವಿರುವ ಇವುಗಳು ವಿಶಿಷ್ಟವಾದ ಕೀಲ್ಡ್ (Keeled) ಹುರುಪೆಗಳು ಮತ್ತು ತ್ರಿಕೋನಾಕಾರದ ತಲೆಯನ್ನು ಹೊಂದಿವೆ. ಇತರ ವೈಪರ್ಗಳಂತೆ ಇವು ಮೊಟ್ಟೆಗಳನ್ನು ಇಡುವುದಿಲ್ಲ, ಬದಲಿಗೆ ಒಂದೇ ಸಮಯದಲ್ಲಿ ನಾಲ್ಕರಿಂದ ಐದು ಮರಿಗಳಿಗೆ ಜನ್ಮ ನೀಡುತ್ತವೆ. ಈ ಮರಿಗಳು ತಮ್ಮ ಬೇಟೆಯನ್ನು ಕೊಲ್ಲುವ ಮತ್ತು ತಕ್ಷಣವೇ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಮಳೆಗಾಲದಲ್ಲಿ ಹೆಚ್ಚಾಗಿ ಕಾಣಸಿಗುವ ಈ ಹಾವುಗಳ ಆಹಾರವು, ಕಪ್ಪೆಗಳು, ಹಲ್ಲಿಗಳು, ಗೂಡುಕಟ್ಟುವ ಪಕ್ಷಿಗಳು, ಇಲಿಗಳು ಮತ್ತು ಇತರ ಸಣ್ಣ ಪ್ರಾಣಿಗಳಾಗಿವೆ.

ಭಾರತ ಮತ್ತು ಶ್ರೀಲಂಕಾದ ಪರ್ಯಾಯ ದ್ವೀಪಗಳಲ್ಲಿನ ಬಯಲು ಪ್ರದೇಶಗಳಲ್ಲಿ, ಬೆಟ್ಟಗಳಲ್ಲಿ ಕಂಡುಬರುವ ವಿಷಕಾರಿಯಲ್ಲದ ಈ ಹಾವು ಕೊಲುಬ್ರಿಡೇ (Colubridae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ರಾಬ್ಡೋಫಿಸ್ ಪ್ಲಂಬಿಕಲರ್ (Macropisthodon plumbicolor) ಎಂದು ಕರೆಯಲಾಗುತ್ತದೆ. ಹಿಂಭಾಗವು ಪ್ರಕಾಶಮಾನವಾದ ಹಸಿರು ಬಣ್ಣದ್ದಾಗಿದ್ದು, ಕೆಲವೊಮ್ಮೆ ಕಪ್ಪು ಪಟ್ಟೆಗಳು ಅಥವಾ ತೇಪೆಗಳನ್ನು ಹೊಂದಿರುತ್ತದೆ. ಅಗಲವಾದ ತಲೆ, ದುಂಡಗಿನ ಕಣ್ಣುಗುಡ್ಡೆಗಳು ಮತ್ತು ಕುತ್ತಿಗೆಯ ಮೇಲೆ ಕಪ್ಪು ಮತ್ತು ಹಳದಿ ಬಣ್ಣದ ತಲೆಕೆಳಗಾದ V ಆಕಾರವನ್ನು ಹೊಂದಿರುತ್ತದೆ. ತೇವಾಂಶವುಳ್ಳ ಸಸ್ಯವರ್ಗ, ದಟ್ಟವಾದ ಪೊದೆಗಳು ಮತ್ತು ಬಿದ್ದಿರುವ ಎಲೆಗಳಲ್ಲಿ ವಾಸಿಸುತ್ತದೆ. ಕಪ್ಪೆಗಳು ಇವುಗಳ ಪ್ರಮುಖ ಆಹಾರವಾಗಿವೆ. ಜಾರುವಂತಹ ಕಪ್ಪೆಗಳನ್ನು ಹಿಡಿಯಲು ವಿಶೇಷವಾದ ಉದ್ದವಾದ ಹಲ್ಲುಗಳನ್ನು ಹಿಂಭಾಗದಲ್ಲಿ ಹೊಂದಿರುತ್ತದೆ. ಇವು 8-14 ಮೊಟ್ಟೆಗಳನ್ನು ಇಡುತ್ತವೆ.

ದಕ್ಷಿಣ ಭಾರತದ ಕಾಡುಗಳಿಗೆ ಸ್ಥಳೀಯವಾಗಿರುವ ವಿಷಕಾರಿಯಲ್ಲದ ಈ ಈಲಿಯಟ್ ಗುರಾಣಿ ಹಾವು ಯುರೊಪೆಲ್ಟಿಡೆ (Uropeltidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಯುರೊಪೆಲ್ಟಿಸ್ ಎಲಿಯೋಟಿ (Uropeltis ellioti) ಎಂದು ಕರೆಯಲಾಗುತ್ತದೆ. ಕುತ್ತಿಗೆಯಿಂದ ಬಾಲದವರೆಗೂ ಸಿಲಿಂಡರಾಕಾರದಲ್ಲಿದ್ದು, ಹೊಳೆಯುವ ನಯವಾದ ಹುರುಪೆಗಳನ್ನು ಹೊಂದಿರುತ್ತದೆ. ಇದರ ತಲೆ ಚಿಕ್ಕದಾಗಿದ್ದು, ಕುತ್ತಿಗೆಗಿಂತ ಕಿರಿದಾಗಿರುತ್ತದೆ ಮತ್ತು ಶಂಕುವಿನಾಕಾರದ ಮೊನಚಾದ ಮೂತಿಯನ್ನು ಹೊಂದಿರುತ್ತದೆ. ಇದರ ಮೇಲ್ಭಾಗವು ಗಾಢ ಕಂದು ಅಥವಾ ಕಪ್ಪು ಮಿಶ್ರಿತ ಕಂದು ಬಣ್ಣದ್ದಾಗಿದ್ದು, ಹುರುಪೆಗಳಲ್ಲಿ ಸಣ್ಣ ಹಳದಿ ಚುಕ್ಕೆಗಳನ್ನು ಹೊಂದಿರುತ್ತದೆ. ಕುತ್ತಿಗೆ ಮತ್ತು ಬಾಲದ ಎರಡೂ ಬದಿಗಳಲ್ಲಿ ಹಳದಿ ಬಣ್ಣದ ಪಟ್ಟೆಯನ್ನು ಹೊಂದಿರುತ್ತದೆ. ಇದರ ಕೆಳಭಾಗದಲ್ಲೂ ಹಳದಿ ಚುಕ್ಕೆಗಳನ್ನು ಕಾಣಬಹುದು. ಎರೆಹುಳುಗಳು ಇವುಗಳ ಪ್ರಮುಖ ಆಹಾರವಾಗಿವೆ. ಮೊಟ್ಟೆಯು ಹೆಣ್ಣು ಹಾವಿನ ದೇಹದೊಳಗೆ ಒಡೆದು ಮರಿಗಳು ಹೊರಬರುತ್ತವೆ.
ಚಿತ್ರ : ಡಾ. ವರಪ್ರಸಾದ್
ಲೇಖನ: ದೀಪ್ತಿ ಎನ್.