ಚಿಟ್ಟೆ
© ಡಾ. ಅಶ್ವಥ ಕೆ ಎನ್
ಜಿಗಿದಾಡಿ ನಲಿಯುವ ಚಿಟ್ಟೆ
ಬಣ್ಣ ಬಣ್ಣದ ಬಟ್ಟೆಯ ತೊಟ್ಟೆ
ಮನಕೆ ಆಸೆಯ ಬಲೆಯ ಬಿಟ್ಟೆ
ಪ್ರೀತಿಯ ಮನಸ ಕದ್ದೇ ಬಿಟ್ಟೆ
ನಿನ್ನ ಚೆಲುವಿಗೆ ಮೈ ಮರೆಸಿಬಿಟ್ಟೆ
ಆಸೆಯ ಮೊಗ್ಗೊಡೆಸಿಬಿಟ್ಟೆ
ಹೂದುಟಿಗೆ ಮುತ್ತನಿಟ್ಟೆ
ಮಕರಂದ ಸವಿದು ಬಿಟ್ಟೆ
ನಿನಗಾಗಿ ಮನಸನು ಕೊಟ್ಟೆ
ಹಿರಿದಾಯಿತು ಕನಸಿನ ಕಟ್ಟೆ
ಎಲ್ಲಾ ಎಲ್ಲೇ ನೀ ಸುಟ್ಟೆ
ಬದುಕಿನ ಗುಟ್ಟ ರಟ್ಟು ಮಾಡಿಟ್ಟೆ
ಹೂವು ಹಣ್ಣಾಗಲು ಪರಾಗಸ್ಪರ್ಶ ಮಾಡಿ
ಧರಣಿಯ ಋಣಭಾರ ತೀರಿಸಿಬಿಟ್ಟೆ
ನಲಿ ನಲಿಯುತ ಬದುಕಲು ತೋರಿಸಿಕೊಟ್ಟೆ
ಜೀವನದ ಸವಿಯ ಸವಿದುಬಿಟ್ಟೆ
ವಾರ-ಹತ್ತು ದಿನದ ಜೀವನದೊಳಗ
ಅಂದವನ್ನೆಲ್ಲಾ ಬಿಚ್ಚಿ ಇಟ್ಟೆ
ಬದುಕಿನ ಬವಣೆಯ ಸುತ್ತಿಬಿಟ್ಟೆ
ಜಗ ಮುಗಿಸುತ್ತಾ ಪಯಣಕ್ಕೆ ವಿರಾಮವಿಟ್ಟೆ
– ರಾಮಲಿಂಗ ಮಾಡಗಿರಿ
ರಾಯಚೂರು ಜಿಲ್ಲೆ