ಪ್ರಕೃತಿ ಬಿಂಬ
ಕಂಚಿನ ಬೆನ್ನಿನ ಹಾವು © ಡಾ. ಅಶ್ವಥ ಕೆ. ಎನ್.
ಆಗ್ನೇಯ ಏಷ್ಯಾದ ವಿವಿಧ ಭಾಗಗಳಲ್ಲಿ ಕಂಡುಬರುವ ಈ ವಿಷಕಾರಿಯಲ್ಲದ ಹಾವು ಮರಗಳ ಮೇಲೆ ವಾಸಿಸುತ್ತದೆ. ಇದು ಕೊಲುಬ್ರಿಡೇ (Colubridae) ಕುಟುಂಬಕ್ಕೆ ಸೇರುತ್ತದೆ ಮತ್ತು ವೈಜ್ಞಾನಿಕವಾಗಿ ಇದನ್ನು ಡೆಂಡ್ರೆಲಾಫಿಸ್ ಪಿಕ್ಟಸ್ (Dendrelaphis pictus) ಎಂದು ಕರೆಯಲಾಗುತ್ತದೆ. ತೆಳುವಾದ ದೇಹದ ಬಣ್ಣವು ಹಸಿರು ಅಥವಾ ಕಂದು ಬಣ್ಣವಿದ್ದು, ಕಪ್ಪು ರೇಖೆಯಿಂದ ಸುತ್ತುವರೆದಿರುವ ಕಂಚು ಹಳದಿ ಬಣ್ಣದ ಪಟ್ಟಿಯನ್ನು ಬದಿಗಳಲ್ಲಿ ಹೊಂದಿರುತ್ತದೆ. ತಲೆಯ ಎರಡೂ ಬದಿಯಲ್ಲಿನ ಕಪ್ಪು ಪಟ್ಟಿಯು ಕಣ್ಣಿನ ಮೂಲಕ ಹಾದುಹೋಗುತ್ತಾ, ಅಗಲವಾಗುತ್ತಿದ್ದಂತೆ ಚುಕ್ಕೆಗಳಂತಾಗುತ್ತದೆ. ಮರದ ಪೊಟರೆ ಅಥವಾ ಕೊಳೆಯುತ್ತಿರುವ ಸಸ್ಯವರ್ಗಗಳಲ್ಲಿ 2 ರಿಂದ 10 ಮೊಟ್ಟೆಗಳನ್ನು ಇಡುವ ಮೂಲಕ ಸಂತಾನೋತ್ಪತ್ತಿ ಮಾಡುತ್ತದೆ. ಕಪ್ಪೆಗಳು, ಹಲ್ಲಿಗಳು, ಕೀಟಗಳು, ಸಣ್ಣ ಪಕ್ಷಿಗಳು ಹಾಗೂ ಮೊಟ್ಟೆಗಳನ್ನು ತಮ್ಮ ಆಹಾರವಾಗಿ ಸೇವಿಸುತ್ತದೆ.

ಭಾರತದ ಪಶ್ಚಿಮ ಘಟ್ಟಗಳು ಮತ್ತು ದಕ್ಷಿಣಕ್ಕೆ ಕನ್ಯಾಕುಮಾರಿಯವರೆಗೆ ಕಾಣಸಿಗುವ ಈ ವಿಷಕಾರಿ ಹಪ್ಪಾಟೆ ಹಾವುಗಳು ವೈಪರಿಡೇ (Viperidae) ಕುಟುಂಬಕ್ಕೆ ಸೇರುತ್ತವೆ. ಇವುಗಳನ್ನು ವೈಜ್ಞಾನಿಕವಾಗಿ ಕ್ರಾಸ್ಪಿಡೋಸೆಫಾಲಸ್ ಮಲಬಾರಿಕಸ್ (Craspedocephalus malabaricus) ಎಂದು ಕರೆಯಲಾಗುತ್ತದೆ. ಎತ್ತರದ ಕಾಡುಗಳು ಹಾಗೂ ಮರಗಳಲ್ಲಿ ವಾಸಿಸುತ್ತವೆ. ಕೆಲವೊಮ್ಮೆ ತೊರೆಗಳ ಬಳಿ ಇರುವ ಬಂಡೆಗಳು ಹಾಗೂ ಮರಗಳ ಮೇಲೆ ವಿಶ್ರಮಿಸುವುದನ್ನು ಕಾಣಬಹುದಾಗಿದೆ. ಹಸಿರು, ಕಂದು, ಕಪ್ಪು ಮಿಶ್ರಿತ ಮೈಬಣ್ಣವಿರುವ ಇವುಗಳು ವಿಶಿಷ್ಟವಾದ ಕೀಲ್ಡ್ (Keeled) ಹುರುಪೆಗಳು ಮತ್ತು ತ್ರಿಕೋನಾಕಾರದ ತಲೆಯನ್ನು ಹೊಂದಿವೆ. ಇತರ ವೈಪರ್‌ಗಳಂತೆ ಇವು ಮೊಟ್ಟೆಗಳನ್ನು ಇಡುವುದಿಲ್ಲ, ಬದಲಿಗೆ ಒಂದೇ ಸಮಯದಲ್ಲಿ ನಾಲ್ಕರಿಂದ ಐದು ಮರಿಗಳಿಗೆ ಜನ್ಮ ನೀಡುತ್ತವೆ. ಈ ಮರಿಗಳು ತಮ್ಮ ಬೇಟೆಯನ್ನು ಕೊಲ್ಲುವ ಮತ್ತು ತಕ್ಷಣವೇ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಮಳೆಗಾಲದಲ್ಲಿ ಹೆಚ್ಚಾಗಿ ಕಾಣಸಿಗುವ ಈ ಹಾವುಗಳ ಆಹಾರವು, ಕಪ್ಪೆಗಳು, ಹಲ್ಲಿಗಳು, ಗೂಡುಕಟ್ಟುವ ಪಕ್ಷಿಗಳು, ಇಲಿಗಳು ಮತ್ತು ಇತರ ಸಣ್ಣ ಪ್ರಾಣಿಗಳಾಗಿವೆ.

ಭಾರತ ಮತ್ತು ಆಗ್ನೇಯ ಏಷ್ಯಾದ ವಿವಿಧ ಭಾಗಗಳಲ್ಲಿ ಪೊದೆಗಳು ಹಾಗೂ ಮರಗಳಿರುವ ದಟ್ಟವಾದ ಸಸ್ಯವರ್ಗಗಳಲ್ಲಿ, ತಗ್ಗು ಪ್ರದೇಶದ ಹೊಳೆಗಳ ಬಳಿ ಕಂಡುಬರುವ ಈ ಹಸಿರು ಹಾವು ಕೊಲುಬ್ರಿಡೇ (Colubridae) ಕುಟುಂಬಕ್ಕೆ ಸೇರುತ್ತದೆ ಮತ್ತು ವೈಜ್ಞಾನಿಕವಾಗಿ ಇದನ್ನು ಅಹೇತುಲ್ಲಾ ನಸುತಾ (Ahaetulla nasuta) ಎಂದು ಕರೆಯಲಾಗುತ್ತದೆ. ಇದು ಸ್ವಲ್ಪ ವಿಷಕಾರಿಯಾಗಿದೆ. ಕಚ್ಚಿದಾಗ ಮಾನವರಲ್ಲಿ ನೋವು, ಊತ, ಮೂಗೇಟುಗಳು ಮತ್ತು ಮರಗಟ್ಟುವಿಕೆ ಉಂಟಾಗಬಹುದು. ಉದ್ದನೆಯ ತೆಳ್ಳಗಿನ ಇದರ ದೇಹವು ಪ್ರಕಾಶಮಾನವಾದ ಹಸಿರು ಬಣ್ಣ ಅಥವಾ ಮಸುಕಾದ ಕಂದು ಬಣ್ಣದಲ್ಲಿದ್ದು, ಮೊನಚಾದ ಮೂತಿಯನ್ನು ಹೊಂದಿರುತ್ತದೆ. ದೇಹದ ಕೆಳಗಿನ ಭಾಗದ ಬದಿಗಳಲ್ಲಿ ಹಳದಿ ರೇಖೆಯನ್ನು ಹೊಂದಿರುತ್ತದೆ. ಮೊಟ್ಟೆಯ ಪದರದೊಳಗಿನ ಭ್ರೂಣವು ತಾಯಿಯ ದೇಹದೊಳಗೆ ಬೆಳೆಯುತ್ತದೆ. ಹೆಣ್ಣು ಹಾವು ಸುಮಾರು 6-12 ಮರಿಗಳಿಗೆ ಜನ್ಮ ನೀಡುತ್ತದೆ. ಕಪ್ಪೆಗಳು ಮತ್ತು ಹಲ್ಲಿಗಳು ಇವುಗಳ ಪ್ರಮುಖ ಆಹಾರವಾಗಿವೆ.

ಮಧ್ಯಪ್ರಾಚ್ಯ, ಮಧ್ಯ ಏಷ್ಯಾದ ಕೆಲವು ಭಾಗಗಳಲ್ಲಿ ಮತ್ತು ವಿಶೇಷವಾಗಿ ಭಾರತೀಯ ಉಪಖಂಡದ ಒಣ ಪ್ರದೇಶಗಳಲ್ಲಿನ ಬಂಡೆಗಳ ಕೆಳಗೆ, ಎಲೆಯ ಕಸದಲ್ಲಿ ಮತ್ತು ತೊಗಟೆಯ ಹಿಂದೆ ಕಾಣಸಿಗುವ ಗರಗಸ ಮಂಡಲ ಹಾವು ವೈಪೆರಿಡೇ (Viperidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಎಕಿಸ್ ಕ್ಯಾರಿನಾಟಸ್ (Echis carinatus) ಎಂದು ಕರೆಯಲಾಗುತ್ತದೆ. ಮರಳು ಅಥವಾ ಮಣ್ಣಿನ ಬಣ್ಣದ ದೇಹವನ್ನು ಹೊಂದಿದ್ದು, ಗಾಢ ಮತ್ತು ತೆಳುವಾದ ಅಲೆ ಅಲೆಯಾಗಿರುವ ವಿವಿಧ ರೇಖೆಗಳು, ಪಟ್ಟಿಗಳು ಮತ್ತು ಗರಗಸದಂತೆ ದಂತುರೀಕೃತ ಅಂಚುಗಳನ್ನು ಹೊಂದಿದೆ. ತಲೆಯು ಕುತ್ತಿಗೆಗಿಂತ ಭಿನ್ನವಾಗಿದ್ದು, ಮೂತಿ ತುಂಬಾ ಚಿಕ್ಕದಾಗಿ ಮತ್ತು ದುಂಡಾಗಿರುತ್ತದೆ. ತಲೆಯ ಮೇಲೆ ವಿಶಿಷ್ಟವಾದ ಬಾಣದ ಆಕಾರದ ಬಿಳಿ ಗುರುತು ಇರುತ್ತದೆ. ಅತ್ಯಂತ ವಿಷಕಾರಿಯಾದ ಈ ಹಾವು ರಾತ್ರಿ ವೇಳೆ ಸಕ್ರಿಯವಾಗಿದ್ದು, ಹಲ್ಲಿಗಳು, ಚೇಳುಗಳು ಮತ್ತು ಸಣ್ಣ ದಂಶಕಗಳನ್ನು ಬೇಟೆಯಾಡುತ್ತದೆ.
ಚಿತ್ರ : ಡಾ. ಅಶ್ವಥ ಕೆ. ಎನ್.
ಲೇಖನ: ದೀಪ್ತಿ ಎನ್.