ಪ್ರಕೃತಿ ಬಿಂಬ
ತಗಡು ಹಪ್ಪಾಟೆ ಹಾವು © ಗಿರೀಶ್ ಗೌಡ ಪಿ.
ಭಾರತ ಮತ್ತು ಶ್ರೀಲಂಕಾದ ದಟ್ಟವಾದ ಕಾಡು ಮತ್ತು ಗುಡ್ಡಗಾಡು ಪ್ರದೇಶಗಳಿಗೆ ಹಾಗೂ ಕಾಫಿ ತೋಟಗಳಿಗೆ ಸ್ಥಳೀಯವಾಗಿರುವ ಈ ವಿಷಕಾರಿ ಹಾವು, ತಿಳಿ ಬೂದು ಅಥವಾ ಕೆಂಪು- ಕಂದು ಬಣ್ಣದ ತಗಡು ಹಪ್ಪಾಟೆ ಹಾವು, ವೈಪರಿಡೇ (viperidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಹಿಪ್ನೇಲ್ ಹಿಪ್ನೇಲ್ (Hypnale hypnale) ಎಂದು ಕರೆಯಲಾಗುತ್ತದೆ. ಚಪ್ಪಟೆಯಾದ ತ್ರಿಕೋನಾಕಾರದ ಹುರುಪೆಗಳುಳ್ಳ ಅಗಲವಾದ ತಲೆಯನ್ನು ಹೊಂದಿದ್ದು, ದೇಹವು ಎರಡು ಸಾಲಿನ ದೊಡ್ಡ ಕಪ್ಪು ಚುಕ್ಕೆಗಳಿಂದ ಆವೃತವಾಗಿದೆ. ಹೊಟ್ಟೆಯು ಕಂದು ಅಥವಾ ಹಳದಿ ಬಣ್ಣದ್ದಾಗಿದ್ದು, ಗಾಢವಾದ ಮಚ್ಚೆಯನ್ನು ಹೊಂದಿರುತ್ತದೆ ಹಾಗೂ ಬಾಲದ ತುದಿ ಹಳದಿ ಅಥವಾ ಕೆಂಪು ಬಣ್ಣದ್ದಾಗಿರುತ್ತದೆ. ನಿಶಾಚರಿಯಾದ ಇವುಗಳು ಒಣಗಿದ ಎಲೆಗಳಲ್ಲಿ ಮತ್ತು ದಟ್ಟವಾದ ಪೊದೆಗಳಲ್ಲಿ ದಿನವನ್ನು ಕಳೆಯುತ್ತವೆ ಮತ್ತು ಕೆರಳಿಸಿದಾಗ ತನ್ನ ದೇಹವನ್ನು ಚಪ್ಪಟೆ ಮಾಡಿ ಬಾಲವನ್ನು ಕಂಪಿಸುವುದು ವಿಶಿಷ್ಟವಾಗಿದೆ. ಹಲ್ಲಿಗಳು, ದಂಶಕಗಳು, ಕಪ್ಪೆಗಳು ಮತ್ತು ಇತರೆ ಸರಿಸೃಪಗಳು ಇವುಗಳ ಆಹಾರವಾಗಿವೆ. ಇವು ಮೊಟ್ಟೆಗಳನ್ನು ಇಡುವ ಬದಲು ಜೀವಂತ ಚಿಕ್ಕ ಮರಿಗಳಿಗೆ ಜನ್ಮ ನೀಡುತ್ತವೆ. ಭ್ರೂಣಗಳು ತಾಯಿಯ ದೇಹದೊಳಗಿನ ಮೊಟ್ಟೆಗಳ ಒಳಗೆ ಬೆಳೆದು, ಮರಿಗಳು ಜನಿಸುತ್ತವೆ. ಇವು 4 ರಿಂದ 17 ಮರಿಗಳಿಗೆ ಜನ್ಮ ನೀಡುತ್ತವೆ.

ಪಶ್ಚಿಮ ಘಟ್ಟಗಳ ತೇವಾಂಶವುಳ್ಳ ಕಾಡುಗಳಿಗೆ ಸ್ಥಳೀಯವಾಗಿರುವ ವಿಷಕಾರಿಯಲ್ಲದ ಈ ಆಭರಣದ ಹಾವು ಕೊಲುಬ್ರಿಡೇ (Colubridae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಕೊಯ್ಲೊಗ್ನಾಥಸ್ ಹೆಲೆನಾ (Coelognathus helena) ಎಂದು ಕರೆಯಲಾಗುತ್ತದೆ. ಇದು ತೆಳ್ಳಗಿನ ದೇಹ, ನಯವಾದ, ಹೊಳಪುಳ್ಳ ಹುರುಪೆಗಳನ್ನು ಹೊಂದಿರುತ್ತದೆ. ದೇಹದ ಬಣ್ಣವು ಕಪ್ಪು ಮತ್ತು ಬಿಳಿ ಗುರುತುಗಳನ್ನು ಹೊಂದಿದ್ದು, ತಿಳಿ ಕಂದು ಅಥವಾ ಕಂದು ಬಣ್ಣದ್ದಾಗಿರುತ್ತದೆ. ಇದರ ಕುತ್ತಿಗೆಯ ಸುತ್ತಲು ಇರುವ ಕಾಲರ್ ನಂತಹ ಕಪ್ಪು ಮತ್ತು ಬಿಳಿ ಪಟ್ಟಿಯು, ಗುರುತಿಸಲು ಸಹಾಯಕವಾಗುವ ಪ್ರಮುಖ ಲಕ್ಷಣವಾಗಿದೆ. ಹಗಲಿನಲ್ಲಿ ಸಕ್ರಿಯವಾಗಿದ್ದು, ಅಪಾಯವು ಎದುರಾದಾಗ ದೇಹವನ್ನು ಉಬ್ಬಿಸಿ, ಸುರುಳಿ ಸುತ್ತಿಕೊಂಡು ಬಾಯಿ ತೆರೆಯುತ್ತದೆ. ಇಲಿಗಳು, ಸಣ್ಣ ಹಲ್ಲಿಗಳು ಮತ್ತು ಕಪ್ಪೆಗಳನ್ನು ತಿನ್ನುತ್ತವೆ. 6-12 ಮೊಟ್ಟೆಗಳನ್ನು ಇಡುತ್ತವೆ.

ದಕ್ಷಿಣ ಏಷ್ಯಾದ ವಿವಿಧ ಭಾಗಗಳಲ್ಲಿ ಕಂಡುಬರುವ ವಿಷಕಾರಿಯಲ್ಲದ ಈ ಕುಕ್ರಿ ಹಾವು ತೆರೆದ ಕಾಡುಗಳು, ಕಲ್ಲಿರುವ ಭೂಪ್ರದೇಶ ಮತ್ತು ಮಾನವ ವಾಸಸ್ಥಳಗಳು ಸೇರಿದಂತೆ ವಿವಿಧ ಕಾಡುಗಳಲ್ಲಿ ವಾಸಿಸುತ್ತದೆ. ಇದು ಕೊಲುಬ್ರಿಡೇ (Colubridae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಆಲಿಗೋಡಾನ್ ಆರ್ನೆನ್ಸಿಸ್ (Oligodon arnensis) ಎಂದು ಕರೆಯಲಾಗುತ್ತದೆ. ಇದು ಸಡಿಲವಾದ ಮಣ್ಣು ಮತ್ತು ತೇವಾಂಶವಿರುವ ಪ್ರದೇಶಗಳನ್ನು ಬಯಸುತ್ತದೆ. ಮೇಲ್ಭಾಗವು ಮಸುಕಾದ ಕಂದು ಅಥವಾ ಕಿತ್ತಳೆ ಬಣ್ಣದ್ದಾಗಿದ್ದು, ಸ್ಪಷ್ಟವಾಗಿ ಕಾಣುವ ಕಪ್ಪು ಅಡ್ಡಪಟ್ಟಿಗಳನ್ನು ಹೊಂದಿರುತ್ತದೆ, ಕಣ್ಣುಗಳ ಮಧ್ಯೆ ಮತ್ತು ಅದರ ಹಿಂಭಾಗದಲ್ಲಿ ಮೂರು ಬಾಣದ ಆಕಾರದ ಗುರುತುಗಳನ್ನು ಹೊಂದಿದ್ದು, ಮೊನಚಾದ ಮೂತಿಯನ್ನು ಹೊಂದಿರುತ್ತದೆ. ಕುಕ್ರಿ ಹಾವುಗಳು ಸಾಮಾನ್ಯವಾಗಿ ರಾತ್ರಿಯ ವೇಳೆ ಸಕ್ರಿಯವಾಗಿದ್ದು, ಎರೆಹುಳುಗಳು, ಕೀಟಗಳು ಮತ್ತು ಲಾರ್ವಾಗಳನ್ನು ತಿನ್ನುತ್ತವೆ.

ಚಿತ್ರ : ಗಿರೀಶ್ ಗೌಡ ಪಿ.
ಲೇಖನ: ದೀಪ್ತಿ ಎನ್.