ಪ್ರಕೃತಿ ಬಿಂಬ
ಕೋಗಿಲೆ © ದೀಪಕ್ ಎಲ್. ಎಂ
ಭಾರತೀಯ ಉಪಖಂಡ, ಪಾಕಿಸ್ತಾನ, ಚೀನಾ ಮತ್ತು ಆಗ್ನೇಯ ಏಷ್ಯಾದ ಕಾಡುಪ್ರದೇಶ ಮತ್ತು ಕೃಷಿಭೂಮಿಗಳಲ್ಲಿ ಕಂಡುಬರುವ ಕೋಗಿಲೆಯು ಕುಕುಲಿಡೇ (Cuculidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಯುಡೈನಮಿಸ್ ಸ್ಕೋಲೋಪೇಸಿಯಸ್ (Eudynamys scolopaceus) ಎಂದು ಕರೆಯಲಾಗುತ್ತದೆ. ಗಂಡು ಹಕ್ಕಿಯು ಹೊಳೆಯುವ ನೀಲಿ ಮಿಶ್ರಿತ ಕಪ್ಪು ಬಣ್ಣದಲ್ಲಿದ್ದು, ಕೆಂಪು ಕಣ್ಣು, ಬೂದು ಬಣ್ಣದ ಕಾಲುಗಳನ್ನು ಹೊಂದಿರುತ್ತದೆ. ಹೆಣ್ಣು ಹಕ್ಕಿಯ ಹಿಂಭಾಗವು ಕಡು ಕಂದು ಬಣ್ಣದಲ್ಲಿದ್ದು, ಬಿಳಿ ಚುಕ್ಕೆಗಳನ್ನು ಹೊಂದಿರುತ್ತದೆ. ಮುಂಭಾಗವು ಮಂದವರ್ಣದಲ್ಲಿದ್ದು, ಪಟ್ಟೆಗಳನ್ನು ಹೊಂದಿರುತ್ತದೆ. ಸಂತಾನೋತ್ಪತ್ತಿ ಅವಧಿಯಲ್ಲಿ (ಭಾರತೀಯ ಉಪಖಂಡದಲ್ಲಿ ಮಾರ್ಚ್ ನಿಂದ ಆಗಸ್ಟ್ ವರೆಗೆ) ವಿವಿಧ ರೀತಿಯಲ್ಲಿ ಕೂಗುತ್ತವೆ. ಇವು ಪರಾವಲಂಬಿಗಳಲಾಗಿದ್ದು, ಕಾಡು ಕಾಗೆ ಅಥವಾ ಕಾಗೆಯ ಗುಂಪಿಗೆ ಸೇರಿದ ವಿವಿಧ ಪಕ್ಷಿಗಳ ಗೂಡುಗಳಲ್ಲಿ 1-2 ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಗಳಿಂದ ಹೊರಬಂದ ಹಕ್ಕಿಯು ಅತಿಥೇಯ ಹಕ್ಕಿಯ ಮರಿಗಳೊಂದಿಗೆ ಬೆಳೆಯುತ್ತದೆ. ಇವು ಸರ್ವಭಕ್ಷಕಗಳಾಗಿದ್ದು, ವಿವಿಧ ಕೀಟ, ಮರಿಹುಳು, ಮೊಟ್ಟೆ, ಮೀನು ಮತ್ತು ಹಣ್ಣುಗಳನ್ನು ತಿನ್ನುತ್ತವೆ.

ಪ್ರಪಂಚದಾದ್ಯಂತ ಕಾಡುಗಳಲ್ಲಿ ಮತ್ತು ಮನುಷ್ಯರು ವಾಸಿಸುವ ಸ್ಥಳಗಳಲ್ಲಿ ಕಂಡುಬರುವ ಈ ಪಾರಿವಾಳವು ಕೊಲಂಬಿಡೇ (Columbidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಕೊಲಂಬಾ ಲಿವಿಯಾ (Columba livia) ಎಂದು ಕರೆಯಲಾಗುತ್ತದೆ. ದೇಹವು ಮಸುಕಾದ ಬೂದು ಬಣ್ಣದಲ್ಲಿದ್ದು, ರೆಕ್ಕೆಗಳ ಮೇಲೆ ಎರಡು ದಪ್ಪ ಕಪ್ಪು ಪಟ್ಟಿಗಳನ್ನು ಹೊಂದಿರುತ್ತದೆ. ಕುತ್ತಿಗೆಯು ಹೊಳೆಯುವ ನೇರಳೆ ಮತ್ತು ಹಸಿರು ಬಣ್ಣದಲ್ಲಿರುತ್ತದೆ. ಸಾಮಾನ್ಯವಾಗಿ ಕಿತ್ತಳೆ ಬಣ್ಣದ ಕಣ್ಣನ್ನು ಹೊಂದಿರುತ್ತದೆ. ಇವು ತಮ್ಮ ಗೂಡುಗಳನ್ನು ಕಟ್ಟಡಗಳ ಕಿಟಕಿಗಳ ಅಂಚುಗಳಲ್ಲಿ ಅಥವಾ ಛಾವಣಿಯ ಮೇಲೆ ಹುಲ್ಲು ಮತ್ತು ಕಡ್ಡಿಗಳಿಂದ ಮಾಡಿ ಮೊಟ್ಟೆಗಳನ್ನು ಇಡುತ್ತವೆ. ಕಾಡುಗಳಲ್ಲಿ ಕಂಡುಬರುವ ಪಕ್ಷಿಗಳು ಪಶ್ಚಿಮ ಯುರೋಪಿನಿಂದ ಮಧ್ಯ ಏಷ್ಯಾದವರೆಗಿನ ಪ್ರದೇಶಗಳಲ್ಲಿ ಸಿಗುವ ಬಂಡೆಗಳ ಮೇಲೆ ಅಥವಾ ಗುಹೆಗಳಲ್ಲಿ ಗೂಡು ಕಟ್ಟುತ್ತವೆ. ಮರಿಗಳಿಗೆ ತಮ್ಮ ಜೀರ್ಣಾಂಗ ವ್ಯವಸ್ಥೆಯಿಂದ ಬರುವ ವಿಶೇಷವಾದ ಹಾಲನ್ನು (crop milk) ನೀಡುತ್ತದೆ. ಧಾನ್ಯಗಳು, ಹಣ್ಣುಗಳು, ಕೀಟಗಳು ಮತ್ತು ಬಸವನ ಹುಳುಗಳು ಇವುಗಳ ಆಹಾರವಾಗಿವೆ.

ಭಾರತಕ್ಕೆ ಸ್ಥಳೀಯವಾಗಿರುವ ಈ ಕಾಡುಕೋಳಿಯು ಕಾಡುಗಳಲ್ಲಿ, ಪೊದೆಗಳಲ್ಲಿ ಮತ್ತು ತೆರೆದ ಪ್ರದೇಶಗಳಲ್ಲಿ ಕಂಡುಬರುತ್ತದೆ. ಫಾಸಿಯಾನಿಡೆ (Phasianidae) ಕುಟುಂಬಕ್ಕೆ ಸೇರುವ ಇದನ್ನು ವೈಜ್ಞಾನಿಕವಾಗಿ ಗ್ಯಾಲಸ್ ಸೊನ್ನೆರಾಟಿ (Gallus sonneratii) ಎಂದು ಕರೆಯಲಾಗುತ್ತದೆ. ಗಂಡು ಕೋಳಿಗಳು ಬೂದು ಬಣ್ಣದಲ್ಲಿದ್ದು, ರೆಕ್ಕೆಗಳ ಮೇಲೆ ಚಿನ್ನದ ಬಣ್ಣದ ಗುರುತುಗಳು ಮತ್ತು ಕುತ್ತಿಗೆಯ ಸುತ್ತಲೂ ಬಿಳಿ ಚುಕ್ಕೆಗಳನ್ನು ಹೊಂದಿರುತ್ತವೆ. ಉದ್ದವಾದ ಹೊಳೆಯುವ ಕಪ್ಪು ಬಾಲ, ಗುಲಾಬಿ ಬಣ್ಣದ ಪಾದಗಳನ್ನು ಹೊಂದಿರುತ್ತವೆ. ಹೆಣ್ಣು ಕೋಳಿಗಳು ಕಂದು ಬಣ್ಣದಲ್ಲಿದ್ದು, ಕೆಳಭಾಗದಲ್ಲಿ ಬಿಳಿಯ ಚುಕ್ಕೆಗಳನ್ನು ಹೊಂದಿರುತ್ತವೆ. ಗಂಡಿಗಿರುವ ಕೆಂಪು ಜುಟ್ಟು, ಉದ್ದವಾದ ಬಾಲ ಇರುವುದಿಲ್ಲ. ಫೆಬ್ರವರಿಯಿಂದ ಮೇ ವರೆಗೆ ಸಂತಾನೋತ್ಪತ್ತಿ ಮಾಡುತ್ತವೆ ಹಾಗೂ 4 ರಿಂದ 7 ಕೆನೆ ಬಣ್ಣದ ಮೊಟ್ಟೆಗಳನ್ನು ಇಡುತ್ತವೆ. ಅವು ಬಿದಿರಿನ ಬೀಜಗಳು, ಹಣ್ಣುಗಳು, ಕೀಟಗಳು ಮತ್ತು ಗೆದ್ದಲುಗಳನ್ನು ತಿನ್ನುತ್ತವೆ.

ಚಿತ್ರ : ದೀಪಕ್ ಎಲ್. ಎಂ.
ಲೇಖನ: ದೀಪ್ತಿ ಎನ್.