ಬೆಳೆಸುವ ಹಸಿರು
ಹಸಿರಿನ ವನಗಳ ಬೆಳೆಸುತ ನಾವು
ಉಸಿರನು ತುಂಬುವ ಜಗದಲ್ಲಿ
ಬಿಸಿಯನು ಸೂಸಿದೆ ಪರಿಸರ ಎಲ್ಲೆಡೆ
ಕುಸಿದಿದೆ ಶುದ್ಧತೆ ನೋಡಿಲ್ಲಿ
ಜಲವನು ವ್ಯಯಿಸದೆ ಮಿತದಲಿ ಬಳಸುವ
ಹೊಲಸನು ತೂರದೆ ನದಿಗಳಿಗೆ
ಮಲಿನವ ಮಾಡದೆ ಶರಧಿಯ ಒಡಲನು
ಒಲವನು ತೋರುವ ಈ ಇಳೆಗೆ
ಕಾನನ ಕಡಿಯದೆ ಗಿಡಗಳ ನೆಡುತಲಿ
ಗಾನವ ಪಾಡುವ ಧರೆಯಲ್ಲಿ
ಜೇನಿನ ಸವಿಯಿದೆ ಹಸಿರನು ಕಾಯ್ದರೆ
ಬೇನೆಯು ಬವಣೆಯು ನಮಗಿಲ್ಲ
ಬೀಸುವ ಗಾಳಿಗೆ ಧೂಮವ ಬೆರಸದೆ
ಸೂಸುವ ಗಂಧವ ಸುತ್ತಲಲಿ
ಮಾಸದೆ ಉಳಿಸುವ ಹಸಿರಿನ ಸಿರಿಯನು
ಹಾಸುತ ಬಂಧುರ ಭಾವದಲಿ
– ಶುಭಲಕ್ಷ್ಮಿ ಆರ್. ನಾಯಕ
ಉಡುಪಿ ಜಿಲ್ಲೆ