ಪ್ರಕೃತಿ ಬಿಂಬ

ಪ್ರಕೃತಿ ಬಿಂಬ

  ಬೆಡ್ಡೋಮಿ ಬೆನ್ನೆಣುಹಾವು                                                                                       ©  ಗಿರೀಶ್ ಗೌಡ

ಭಾರತದ ನೀಲಗಿರಿ ಬೆಟ್ಟಗಳ ಮಳೆಕಾಡುಗಳು ಮತ್ತು ತೇವಾಂಶವುಳ್ಳ ಕಾಡುಗಳಲ್ಲಿ ಕಂಡುಬರುವ ಈ ಹಾವು ಕೊಲುಬ್ರಿಡೇ (Colubridae) ಕುಟುಂಬಕ್ಕೆ ಸೇರುತ್ತದೆ‌. ಇದನ್ನು ವೈಜ್ಞಾನಿಕವಾಗಿ ಸಹ್ಯಾದ್ರಿಯೋಫಿಸ್ ಬೆಡ್ಡೋಮಿ (Sahyadriophis beddomei) ಎಂದು ಕರೆಯಲಾಗುತ್ತದೆ. ಇದು ಸುಮಾರು 51-66 ಸೆಂಟಿ ಮೀಟರ್ ಉದ್ದವಿದ್ದು, 13-19 ಸೆಂಟಿ ಮೀಟರ್ ಬಾಲವನ್ನು ಹೊಂದಿದೆ. ಮಧ್ಯಮ ಗಾತ್ರದ ಈ ಹಾವಿನ ದೇಹವು ಕಂದು ಬಣ್ಣದಲ್ಲಿದ್ದು, ಒರಟಾದ ಹುರುಪೆಗಳನ್ನು ಹೊಂದಿದೆ. ಹಿಂಭಾಗದ ಪ್ರತಿ ಬದಿಯಲ್ಲಿ ಎರಡು ಕಪ್ಪು ಚುಕ್ಕೆಗಳು ಅಥವಾ ಸಣ್ಣ ಅಡ್ಡ ಪಟ್ಟಿಗಳ ನಡುವೆ ಹಳದಿ ಚುಕ್ಕೆಗಳ ಸರಣಿ ಇರುತ್ತದೆ. ಹೊಟ್ಟೆ ಬೆಳ್ಳಗಿದ್ದು, ಬದಿಗಳಲ್ಲಿ ಕಂದು ಚುಕ್ಕೆಗಳನ್ನು ಹೊಂದಿರುತ್ತದೆ. ಮುಂಜಾನೆಯಿಂದ ಸಂಜೆಯವರೆಗೆ ಹೊಳೆಯ ದಡಗಳಲ್ಲಿ ಅಥವಾ ಇತರೆ ಜಲಮೂಲಗಳ ಬಳಿ ಬೇಟೆಯಾಡುವುದನ್ನು ಕಾಣಬಹುದು. ಕಪ್ಪೆಗಳು ಇವುಗಳ ಪ್ರಮುಖ ಆಹಾರವಾಗಿವೆ. ಹೆಣ್ಣು ಹಾವು 5-10 ಮೊಟ್ಟೆಗಳನ್ನು ರಂಧ್ರಗಳಲ್ಲಿ ಅಥವಾ ಬಿಲಗಳಲ್ಲಿ ಇಡುತ್ತದೆ.

  ಸಾಮಾನ್ಯ ಬೆಕ್ಕಿನ ಹಾವು                                                                                                                                      ©  ಗಿರೀಶ್ ಗೌಡ

ದಕ್ಷಿಣ ಏಷ್ಯಾದ ದಟ್ಟವಾದ ಕಾಡುಗಳು, ಕುರುಚಲು ಕಾಡುಗಳು, ಕಲ್ಲಿನ ಬೆಟ್ಟಗಳು ಮತ್ತು ಕರಾವಳಿ ಕಾಡುಗಳಿಗೆ ಸ್ಥಳೀಯವಾಗಿರುವ ಸಾಮಾನ್ಯ ಬೆಕ್ಕಿನ ಹಾವು ಕೊಲುಬ್ರಿಡೇ (Colubridae) ಕುಟುಂಬಕ್ಕೆ ಸೇರುತ್ತದೆ‌. ಇದನ್ನು ವೈಜ್ಞಾನಿಕವಾಗಿ ಬೋಯ್ಗಾ ಟ್ರಿಗೊನಾಟಾ (Boiga trigonata) ಎಂದು ಕರೆಯಲಾಗುತ್ತದೆ. ಇದು ಸುಮಾರು 3 ಅಡಿ (91 ಸೆಂಟಿ ಮೀಟರ್) ಉದ್ದವಿದ್ದು, 7-ಇಂಚಿನ (18 ಸೆಂಟಿ ಮೀಟರ್) ಬಾಲವನ್ನು ಹೊಂದಿದೆ. ದೇಹದ ಮೇಲ್ಭಾಗವು ಬೂದು ಮಿಶ್ರಿತ ಕಂದು ಬಣ್ಣದ್ದಾಗಿದ್ದು, ಕಪ್ಪು ಬಣ್ಣದ ಅಂಚಿನಿಂದ ಸುತ್ತುವರಿದ ಕೆನೆ ಬಣ್ಣದ ಅನಿಯಮಿತ ಗುರುತುಗಳನ್ನು ಹೊಂದಿದೆ. ಇದರ ಕೆಳಭಾಗವು ಹಳದಿ-ಬಿಳಿ ಅಥವಾ ಹಳದಿ-ಕಂದು ಬಣ್ಣದ್ದಾಗಿದೆ. ದೊಡ್ಡದಾದ ತಲೆಯು ತ್ರಿಕೋನಾಕಾರದಲ್ಲಿದ್ದು, ಕುತ್ತಿಗೆಗಿಂತ ಅಗಲವಾಗಿರುತ್ತದೆ. ದೇಹದ ಮೇಲೆ “Y” ಆಕಾರದ ಗುರುತುಗಳನ್ನು ಹೊಂದಿರುವುದರಿಂದ ತ್ವರಿತವಾಗಿ ಗುರುತಿಸಲು ಸಹಾಯಕವಾಗುತ್ತದೆ. ಇದು ಸ್ವಲ್ಪ ಮಟ್ಟಿಗೆ ವಿಷಕಾರಿಯಾಗಿದ್ದರೂ ಮನುಷ್ಯರಿಗೆ ಅಪಾಯಕಾರಿಯಲ್ಲ. ಹಲ್ಲಿಗಳು, ಸಣ್ಣ ಪಕ್ಷಿಗಳು ಮತ್ತು ಕಪ್ಪೆಗಳನ್ನು ತಿನ್ನುತ್ತವೆ. ಹೆಣ್ಣು ಹಾವು 3-10 ಮೊಟ್ಟೆಗಳನ್ನು ರಂಧ್ರಗಳಲ್ಲಿ ಮತ್ತು ಬಂಡೆಗಳ ಕೆಳಗೆ ಇಡುತ್ತದೆ.

ಸಾಮಾನ್ಯ ತೋಳದ ಹಾವು                                                                               ©  ಗಿರೀಶ್ ಗೌಡ

ಭಾರತೀಯ ಉಪಖಂಡ ಮತ್ತು ಏಷ್ಯಾದ ವಿವಿಧ ಪ್ರದೇಶಗಳ ಕಾಡುಗಳು, ಕಲ್ಲಿನ ಭೂಪ್ರದೇಶ ಮತ್ತು ಮಾನವರಿರುವ ಸ್ಥಳಗಳಲ್ಲಿ ಕಂಡುಬರುವ ಈ ಹಾವು ಕೊಲುಬ್ರಿಡೇ (Colubridae) ಕುಟುಂಬಕ್ಕೆ ಸೇರುತ್ತದೆ‌. ಇದನ್ನು ವೈಜ್ಞಾನಿಕವಾಗಿ ಲೈಕೊಡಾನ್ ಕ್ಯಾಪುಸಿನಸ್ (Lycodon capucinus) ಎಂದು ಕರೆಯಲಾಗುತ್ತದೆ. ವಿಷಕಾರಿಯಲ್ಲದ ಈ ಹಾವು ತೋಳದ ಹಲ್ಲುಗಳನ್ನು ಹೋಲುವ ಉದ್ದವಾದ, ಚೂಪಾದ ಮುಂಭಾಗದ ಹಲ್ಲುಗಳಿಂದ ಈ ಹೆಸರನ್ನು ಪಡೆದುಕೊಂಡಿದೆ. ಸಣ್ಣದಾದ ತೆಳು ದೇಹವನ್ನು ಹೊಂದಿರುವ ಈ ಹಾವು ಸುಮಾರು 76 ಸೆಂಟಿ ಮೀಟರ್ ಉದ್ದವಿರುತ್ತದೆ. ದೇಹವು ಬೂದು ಮಿಶ್ರಿತ ಕಂದು ಅಥವಾ ಕಪ್ಪು ಬಣ್ಣದಲ್ಲಿದ್ದು ದಪ್ಪದಾದ ಬಿಳಿ ಅಥವಾ ಹಳದಿ ಬಣ್ಣದ ಪಟ್ಟೆಗಳನ್ನು ಹೊಂದಿರುತ್ತದೆ. ಅಗಲವಾದ ಮತ್ತು ಚಪ್ಪಟೆಯಾದ ತಲೆಯನ್ನು ಹೊಂದಿರುತ್ತದೆ. ಮನೆಗಳ ಬಿರುಕುಗಳು, ದೊಡ್ಡ ಬಂಡೆಗಳು ಹಾಗೂ ತೊಗಟೆಗಳ ಕೆಳಗೆ ಸುರಕ್ಷಿತ ಸ್ಥಳಗಳಲ್ಲಿ ಅಡಗಿಕೊಳ್ಳುತ್ತವೆ. ಇವುಗಳು ಹಲ್ಲಿ, ಕಪ್ಪೆ ಮತ್ತು ಇಲಿಗಳನ್ನು ಬೇಟೆಯಾಡುತ್ತವೆ. ಹೆಣ್ಣು ಹಾವು 3-10 ಮೊಟ್ಟೆಗಳನ್ನು ರಂಧ್ರಗಳಲ್ಲಿ, ಬಂಡೆಗಳ ಬಿರುಕುಗಳಲ್ಲಿ ಅಥವಾ ಒಣ ಎಲೆಗಳ ಕೆಳಗೆ ಇಡುತ್ತದೆ.

ಹಳದಿ-ಹಸಿರು ಬೆಕ್ಕಿನ ಹಾವು                                                                                                  ©  ಗಿರೀಶ್ ಗೌಡ

ಭಾರತದ ಪರ್ಯಾಯ ದ್ವೀಪದ ವಿವಿಧ ಪ್ರದೇಶಗಳಿಗೆ ಸ್ಥಳೀಯವಾಗಿರುವ ಈ ಹಾವುಗಳು ಒಣ ಮತ್ತು ಕುರುಚಲು ಕಾಡುಗಳಲ್ಲಿ ಕಾಣಸಿಗುತ್ತವೆ‌. ಕೊಲುಬ್ರಿಡೇ (Colubridae) ಕುಟುಂಬಕ್ಕೆ ಸೇರುವ ಇದನ್ನು ವೈಜ್ಞಾನಿಕವಾಗಿ ಬೊಯ್ಗಾ ಫ್ಲೇವಿವಿರಿಡಿಸ್ (Boiga flaviviridis) ಎಂದು ಕರೆಯಲಾಗುತ್ತದೆ. ಸ್ವಲ್ಪ ಮಟ್ಟಿಗೆ ವಿಷಕಾರಿಯಾಗಿರುವ ಮಧ್ಯಮ ಗಾತ್ರದ ಈ ಹಾವಿನ ದೇಹವು, ಹಳದಿ ಮಿಶ್ರಿತ ಹಸಿರು ಬಣ್ಣದಲ್ಲಿದ್ದು, 70-100 ಸೆಂಟಿ ಮೀಟರ್ ಉದ್ದವಿರುತ್ತದೆ. ಮಸುಕಾದ ಕಪ್ಪು ಪಟ್ಟೆಗಳನ್ನು ಹೊಂದಿರುತ್ತದೆ. ಕೆಳಭಾಗವು ಹಳದಿ-ಬಿಳಿ ಬಣ್ಣದ್ದಾಗಿದ್ದು, ತಲೆ ತ್ರಿಕೋನಾಕಾರದಲ್ಲಿರುತ್ತದೆ. ಲಂಬವಾದ ದೊಡ್ಡ, ಹಸಿರು ಮಿಶ್ರಿತ ಹಳದಿ ಕಣ್ಣುಗಳನ್ನು ಹೊಂದಿರುತ್ತವೆ. ರಾತ್ರಿ ವೇಳೆ ಹಲ್ಲಿ, ಇಲಿಗಳು ಮತ್ತು ಕಪ್ಪೆಗಳನ್ನು ಬೇಟೆಯಾಡುತ್ತವೆ. ಹೆಣ್ಣು ಹಾವು 3-12 ಮೊಟ್ಟೆಗಳನ್ನು ಮರದ ಪೊಟರೆಗಳಲ್ಲಿ, ಇತರೆ ಬಿರುಕುಗಳಲ್ಲಿ ಇಡುತ್ತದೆ.

ಚಿತ್ರ : ಗಿರೀಶ್ ಗೌಡ
ಲೇಖನ: ದೀಪ್ತಿ ಎನ್.

Spread the love
error: Content is protected.