ಪ್ರಕೃತಿ ಬಿಂಬ

ಪ್ರಕೃತಿ ಬಿಂಬ

            ಗರಗಸ ಮಂಡಲ                                                                                                  ©  ವಿನೀತ್ ಕರ್ಥ

ಮಧ್ಯಪ್ರಾಚ್ಯ ಮತ್ತು ಮಧ್ಯ ಏಷ್ಯಾದ ಕೆಲವು ಭಾಗಗಳಲ್ಲಿ ಮತ್ತು ವಿಶೇಷವಾಗಿ ಭಾರತೀಯ ಉಪಖಂಡದ ಒಣ ಪ್ರದೇಶಗಳಲ್ಲಿನ ಬಂಡೆಗಳ ಕೆಳಗೆ, ಎಲೆಯ ಕಸದಲ್ಲಿ ಮತ್ತು ತೊಗಟೆಯ ಹಿಂದೆ ಕಾಣಸಿಗುವ ಗರಗಸ ಮಂಡಲ ಹಾವು ವೈಪೆರಿಡೇ (Viperidae) ಕುಟುಂಬಕ್ಕೆ ಸೇರುತ್ತದೆ‌. ಇದನ್ನು ವೈಜ್ಞಾನಿಕವಾಗಿ ಎಕಿಸ್ ಕ್ಯಾರಿನಾಟಸ್ (Echis carinatus) ಎಂದು ಕರೆಯಲಾಗುತ್ತದೆ. ಇದರ ಗಾತ್ರ ಸುಮಾರು 38 ರಿಂದ 80 ಸೆಂ. ಮೀ (15 ರಿಂದ 31 ಇಂಚು) ವರೆಗೆ ಇರುತ್ತದೆ. ಮರಳು ಅಥವಾ ಮಣ್ಣಿನ ಬಣ್ಣದ ದೇಹವನ್ನು ಹೊಂದಿದ್ದು, ಗಾಢ ಮತ್ತು ತೆಳುವಾದ ಅಲೆ ಅಲೆಯಾಗಿರುವ ವಿವಿಧ ರೇಖೆಗಳು, ಪಟ್ಟಿಗಳು ಮತ್ತು ಗರಗಸದಂತೆ ದಂತುರೀಕೃತ ಅಂಚುಗಳನ್ನು ಹೊಂದಿದೆ. ತಲೆಯು ಕುತ್ತಿಗೆಗಿಂತ ಭಿನ್ನವಾಗಿದ್ದು, ಮೂತಿ ತುಂಬಾ ಚಿಕ್ಕದಾಗಿ ಮತ್ತು ದುಂಡಾಗಿರುತ್ತದೆ. ತಲೆಯ ಮೇಲೆ ವಿಶಿಷ್ಟವಾದ ಬಾಣದ ಆಕಾರದ ಬಿಳಿ ಗುರುತು ಇರುತ್ತದೆ. ಅತ್ಯಂತ ವಿಷಕಾರಿಯಾದ ಈ ಹಾವು ರಾತ್ರಿ ವೇಳೆ ಸಕ್ರಿಯವಾಗಿದ್ದು, ಹಲ್ಲಿಗಳು, ಚೇಳುಗಳು ಮತ್ತು ಸಣ್ಣ ದಂಶಕಗಳನ್ನು ಬೇಟೆಯಾಡುತ್ತದೆ.

ಬಿದಿರು ಮಂಡಲ                                                                                                         ©  ವಿನೀತ್ ಕರ್ಥ

ಭಾರತದ ದಕ್ಷಿಣ ಮತ್ತು ಈಶಾನ್ಯ ಭಾಗಗಳ ದಟ್ಟವಾದ ಕಾಡುಗಳು, ಕುರುಚಲು ಕಾಡುಗಳು, ಹುಲ್ಲುಗಾವಲುಗಳು ಮತ್ತು ಕೃಷಿ ಭೂಮಿಗಳಲ್ಲಿ ಕಂಡುಬರುವ ಈ ವಿಷಪೂರಿತ ಬಿದಿರು ಮಂಡಲವು ವೈಪೆರಿಡೇ (Viperidae) ಕುಟುಂಬಕ್ಕೆ ಸೇರುತ್ತದೆ‌. ಇದನ್ನು ವೈಜ್ಞಾನಿಕವಾಗಿ ಕ್ರಾಸ್ಪಿಡೋಸೆಫಾಲಸ್ ಗ್ರ್ಯಾಮಿನಿಯಸ್ (Craspedocephalus gramineus) ಎಂದು ಕರೆಯಲಾಗುತ್ತದೆ. ಇದು ಸುಮಾರು 60-80 ಸೆಂ.ಮೀ. ಉದ್ದವಿದ್ದು, ದೇಹವು ಸಾಮಾನ್ಯವಾಗಿ ಹಸಿರು ಅಥವಾ ಹಳದಿ ಮಿಶ್ರಿತ ಹಸಿರು ಬಣ್ಣದಲ್ಲಿರುತ್ತದೆ. ಬೆನ್ನಿನ ಕೆಳಗೆ, ಪಟ್ಟೆಗಳು ಅಥವಾ ವಿಶಿಷ್ಟ ಮಾದರಿಯ ಮಚ್ಚೆಗಳನ್ನು ಹೊಂದಿರುತ್ತದೆ. ತ್ರಿಕೋನಾಕಾರದ ತಲೆ ಮತ್ತು ದಪ್ಪ ದೇಹವನ್ನು ಹೊಂದಿರುತ್ತವೆ. ಅವುಗಳ ಕಣ್ಣುಗಳು ದೊಡ್ಡದಾಗಿದ್ದು, ಲಂಬವಾದ ಪಾಪೆಗಳನ್ನು ಹೊಂದಿರುತ್ತವೆ, ಇದು ಪಿಟ್ ವೈಪರ್‌ಗಳ ವಿಶಿಷ್ಟ ಲಕ್ಷಣವಾಗಿದೆ. ಇವು ಹಲ್ಲಿಗಳು, ಇಲಿಗಳು ಮತ್ತು ಪಕ್ಷಿಗಳನ್ನು ತಿನ್ನುತ್ತವೆ.

ಕೊಳಕು ಮಂಡಲ  ©  ವಿನೀತ್ ಕರ್ಥ

ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ ಮತ್ತು ಪಾಕಿಸ್ತಾನದ ತೆರೆದ ಪ್ರದೇಶ, ಹುಲ್ಲುಗಾವಲು ಅಥವಾ ಪೊದೆ ಪ್ರದೇಶಗಳಲ್ಲಿ ಅಥವಾ ಕುರುಚಲು ಕಾಡುಗಳು, ತೋಟಗಳು ಮತ್ತು ಕೃಷಿ ಭೂಮಿಗಳಲ್ಲಿ ಕಂಡುಬರುವ ಕೊಳಕು ಮಂಡಲವು ವೈಪೆರಿಡೇ (Viperidae) ಕುಟುಂಬಕ್ಕೆ ಸೇರುತ್ತದೆ‌. ಇದನ್ನು ವೈಜ್ಞಾನಿಕವಾಗಿ ಡಬೋಯಿಯಾ ರಸ್ಸೆಲಿ (Daboia russelii) ಎಂದು ಕರೆಯಲಾಗುತ್ತದೆ. ಈ ವಿಷಪೂರಿತ ಹಾವು ಸುಮಾರು 1.5 ಮೀ (5 ಅಡಿ) ವರೆಗೆ ಬೆಳೆಯುತ್ತದೆ. ಹಳದಿ ಮಿಶ್ರಿತ ಕಂದು ಬಣ್ಣದ ದೇಹವು ಕಪ್ಪು ಬಣ್ಣದಿಂದ ಸುತ್ತುವರಿದ ಕಡುಗಂದು ಬಣ್ಣದ ಮಚ್ಚೆಗಳ, 3 ಸಾಲುಗಳನ್ನು ಹೊಂದಿದೆ. ತಲೆಯು ಚಪ್ಪಟೆಯಾಗಿ, ತ್ರಿಕೋನಾಕಾರದಲ್ಲಿದ್ದು, ಕುತ್ತಿಗೆಯಿಂದ ಭಿನ್ನವಾಗಿದೆ. ಮೂತಿ ಮೊಂಡಾಗಿ ಮತ್ತು ದುಂಡಾಗಿದ್ದು ಎತ್ತರವಾಗಿರುತ್ತದೆ. ಮೂಗಿನ ಹೊಳ್ಳೆಗಳು ದೊಡ್ಡದಾಗಿರುತ್ತವೆ. ಅಗಲವಾದ, ತ್ರಿಕೋನಾಕಾರದ ಸಣ್ಣ ಕಣ್ಣುಗಳು ಲಂಬವಾದ ಪಾಪೆಗಳನ್ನು ಹೊಂದಿವೆ. ಇದು ರಾತ್ರಿಯ ವೇಳೆ ಸಣ್ಣ ಸರೀಸೃಪಗಳು, ಭೂ ಏಡಿಗಳು, ಚೇಳುಗಳು ಮತ್ತು ಇತರೆ ಸಂಧಿಪದಿಗಳನ್ನು ಸೇವಿಸುತ್ತದೆ. ಹೆಣ್ಣು ಹಾವುಗಳು 20 ರಿಂದ 60 ಜೀವಂತ ಮರಿಗಳಿಗೆ ಜನ್ಮ ನೀಡುತ್ತವೆ. ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಲು, ದೇಹವನ್ನು ಸುರುಳಿ ಸುತ್ತಿಕೊಂಡು ತಲೆಯನ್ನು ಮಧ್ಯದಲ್ಲಿರಿಸಿ ಬಲವಾಗಿ ಉಸಿರನ್ನು ಒಳಗೆ ಮತ್ತು ಹೊರಗೆ ಬಿಡುತ್ತದೆ.  

 ಸಾಮಾನ್ಯ ಬೆಕ್ಕಿನ ಹಾವು                                                                                        ©  ವಿನೀತ್ ಕರ್ಥ

ದಕ್ಷಿಣ ಏಷ್ಯಾದ ದಟ್ಟವಾದ ಕಾಡುಗಳು, ಕುರುಚಲು ಕಾಡುಗಳು, ಕಲ್ಲಿನ ಬೆಟ್ಟಗಳು ಮತ್ತು ಕರಾವಳಿ ಕಾಡುಗಳಿಗೆ ಸ್ಥಳೀಯವಾಗಿರುವ ಸಾಮಾನ್ಯ ಬೆಕ್ಕಿನ ಹಾವು ಕೊಲುಬ್ರಿಡೇ (Colubridae) ಕುಟುಂಬಕ್ಕೆ ಸೇರುತ್ತದೆ‌‌. ಇದನ್ನು ವೈಜ್ಞಾನಿಕವಾಗಿ ಬೋಯ್ಗಾ ಟ್ರಿಗೊನಾಟಾ (Boiga trigonata) ಎಂದು ಕರೆಯಲಾಗುತ್ತದೆ. ಇದು ಸುಮಾರು 3 ಅಡಿ (91 ಸೆಂ. ಮೀ) ಉದ್ದವಿದ್ದು, 7-ಇಂಚಿನ (18 ಸೆಂ. ಮೀ) ಬಾಲವನ್ನು ಹೊಂದಿದೆ. ದೇಹದ ಮೇಲ್ಭಾಗವು ಬೂದು ಮಿಶ್ರಿತ ಕಂದು ಬಣ್ಣದ್ದಾಗಿದ್ದು, ಕಪ್ಪು ಬಣ್ಣದ ಅಂಚಿನಿಂದ ಸುತ್ತುವರಿದ ‌ಕೆನೆ ಬಣ್ಣದ ಅನಿಯಮಿತ ಗುರುತುಗಳನ್ನು ಹೊಂದಿದೆ. ಇದರ ಕೆಳಭಾಗವು ಹಳದಿ-ಬಿಳಿ ಅಥವಾ ಹಳದಿ-ಕಂದು ಬಣ್ಣದ್ದಾಗಿದೆ. ದೊಡ್ಡದಾದ ತಲೆಯು ತ್ರಿಕೋನಾಕಾರದಲ್ಲಿದ್ದು, ಕುತ್ತಿಗೆಗಿಂತ ಅಗಲವಾಗಿರುತ್ತದೆ. ದೇಹದ ಮೇಲೆ “Y” ಆಕಾರದ ಗುರುತುಗಳನ್ನು ಹೊಂದಿರುವುದರಿಂದ ತ್ವರಿತವಾಗಿ ಗುರುತಿಸಲು ಸಹಾಯಕವಾಗುತ್ತದೆ. ಇದು ಸ್ವಲ್ಪ ಮಟ್ಟಿಗೆ ವಿಷಕಾರಿಯಾಗಿದ್ದರೂ ಮನುಷ್ಯರಿಗೆ ಅಪಾಯಕಾರಿಯಲ್ಲ. ಹಲ್ಲಿಗಳು, ಸಣ್ಣ ಪಕ್ಷಿಗಳು ಮತ್ತು ಕಪ್ಪೆಗಳನ್ನು ತಿನ್ನುತ್ತದೆ. ಹೆಣ್ಣು ಹಾವು 3-10 ಮೊಟ್ಟೆಗಳನ್ನು ರಂಧ್ರಗಳಲ್ಲಿ ಮತ್ತು ಬಂಡೆಗಳ ಕೆಳಗೆ ಇಡುತ್ತದೆ.

ಚಿತ್ರ : ವಿನೀತ್ ಕರ್ಥ
ಲೇಖನ: ದೀಪ್ತಿ ಎನ್.

Spread the love

One thought on “ಪ್ರಕೃತಿ ಬಿಂಬ

  1. ಅರ್ಥಪೂರ್ಣ ವೈಜ್ಞಾನಿಕ ಲೇಖನಗಳು

Comments are closed.

error: Content is protected.