ಬಾನಾಡಿ ಹಕ್ಕಿ
ರೆಕ್ಕೆ ಪುಕ್ಕ ಗರಿಗೆದರಿ
ಪುರ್ರನೆ ಮುಗಿಲೆತ್ತರಕೆ ಜಿಗಿದು
ಸ್ವಚ್ಛಂದದಲಿ ಹಾರಾಡಿ
ಗರಿಬಿಚ್ಚಿ ಕೂಗಿ ಹೇಳಿತೆ
ಆಗಸ ತನ್ನ ಮನೆ-ಮನವೆಂದು
ರೆಕ್ಕೆ ಬಲಿತ ಆ ಪುಟ್ಟ
ಹಕ್ಕಿಗಳ ಸೊಗಸಾದ
ಚಿತ್ತಾರದ ಹಿಂಡೊಂದು!
ಪುರ್ರನೆ ನೆಗೆದು ಚಂಗನೆ ಕುಪ್ಪಳಿಸಿ
ಹೆಕ್ಕಿ ಹೆಕ್ಕಿ ಹೀರೀತೆ
ಗಿಡ ಗಂಟೆಗಳಲಿನ
ಹುಳುಗಳ ಶಿಸ್ತಿನ ಸಾಲೊಂದ
ನೋಡ ನೋಡುತಲಿ
ಮಾವು-ಪೇರಲ ಮುತ್ತಿಕ್ಕಿ
ಘಮ ಘಮಿಸಿತೆ
ಸುತ್ತ-ಮುತ್ತಣ ದಾರಿಹೋಕರ!
ಕ್ಷಣಾರ್ಧದಲಿ ಪುಕ್ಕ ಹರಡಿ
ಕಾಲು, ಕೊಕ್ಕ ಹೊರಚಾಚಿ
ಇನ್ನೆಲ್ಲಿಗೋ ಹಣ್ಣ ಸವಿಯುತ
ಬೀಜಗಳ ಅಲ್ಲಲ್ಲಿ ಬಿತ್ತಿ-ಉತ್ತುತ್ತ
ಹಸಿರನ್ನ ಎಲ್ಲೆಡೆ ಪಸರಿಸಿ
ಅರಣ್ಯದ ನಿಜ ಕೃಷಿಕನಾದ
ಈ ಪುಟ್ಟ ಹಕ್ಕಿ-ಪಕ್ಷಿಗಳ
ಕೂಡು ಕಲರವ!
– ಡಾ. ಚಂದ್ರಪ್ಪ ಎಚ್.
ಚಿತ್ರದುರ್ಗ ಜಿಲ್ಲೆ