ಪ್ರಕೃತಿ ಬಿಂಬ

ಪ್ರಕೃತಿ ಬಿಂಬ

                                                   ಗುಲಾಬಿ ಕೊರಳಿನ ಗಿಳಿ                                                    ©  ದೀಪಕ್ ಎಲ್. ಎಂ.

ಆಫ್ರಿಕಾ ಮತ್ತು ದಕ್ಷಿಣ ಏಷ್ಯಾದ ವಿವಿಧ ಪ್ರದೇಶಗಳಲ್ಲಿ ಕಂಡುಬರುವ ಈ ಗುಲಾಬಿ ಕೊರಳಿನ ಗಿಳಿಯು ಸಿಟ್ಟಾಕುಲಿಡೇ (Psittaculidae) ಕುಟುಂಬಕ್ಕೆ ಸೇರುತ್ತದೆ‌. ಇದನ್ನು ವೈಜ್ಞಾನಿಕವಾಗಿ ಸಿಟ್ಟಾಕುಲಾ ಕ್ರಮೇರಿ (Psittacula krameri) ಎಂದು ಕರೆಯಲಾಗುತ್ತದೆ. ಮೈ ಬಣ್ಣವು ಹಸಿರಾಗಿದ್ದು, ಕೆಂಪು ಕೊಕ್ಕು ಮತ್ತು ನೀಲಿ ಬಾಲವನ್ನು ಹೊಂದಿರುತ್ತದೆ. ಗಂಡು ಹಕ್ಕಿಗೆ ಗುಲಾಬಿ ಮತ್ತು ಕಪ್ಪು ಬಣ್ಣದ ಉಂಗುರವು ಕುತ್ತಿಗೆಯ ಭಾಗದಲ್ಲಿ ಇರುತ್ತದೆ. ಮರಗಳ ಅಥವಾ ಕಟ್ಟಡಗಳಲ್ಲಿನ ರಂಧ್ರ ಮತ್ತು ಪೊಟರೆಗಳಲ್ಲಿ ಗೂಡು ಮಾಡಿ ಮೊಟ್ಟೆ ಇಡುತ್ತದೆ. ಹಣ್ಣುಗಳು, ಹೂವು, ಮಕರಂದ, ಬೀಜಗಳು, ಧಾನ್ಯಗಳು ಮತ್ತು ಕೀಟಗಳು ಇವುಗಳ ಆಹಾರವಾಗಿವೆ.

ಬೆಳ್ಗಣ್ಣ                                                                                                 ©  ದೀಪಕ್ ಎಲ್. ಎಂ.                    

ದಕ್ಷಿಣ ಹಾಗೂ ಆಗ್ನೇಯ ಏಷ್ಯಾದ ತೋಟ, ಅರಣ್ಯ ಪ್ರದೇಶ ಹಾಗೂ ಮ್ಯಾಂಗ್ರೋವ್ ಗಳಲ್ಲಿ ಕಂಡು ಬರುವ ಈ ಬೆಳ್ಗಣ್ಣ ಹಕ್ಕಿಯು ಜೋಸ್ಟೆರೋಪಿಡೆ (Zosteropidae) ಕುಟುಂಬಕ್ಕೆ ಸೇರುತ್ತದೆ‌. ಇದನ್ನು ವೈಜ್ಞಾನಿಕವಾಗಿ ಜೋಸ್ಟೆರೋಪ್ಸ್ ಪಾಲ್ಪೆಬ್ರೋಸಸ್ (Zosterops palpebrosus) ಎಂದು ಕರೆಯಲಾಗುತ್ತದೆ. ದೇಹವು ಹಳದಿ ಮಿಶ್ರಿತ ಹಸಿರು ಬಣ್ಣವಿದ್ದು, ಕಣ್ಣ ಸುತ್ತಲೂ ಉಂಗುರಾಕಾರದಲ್ಲಿ ಬಿಳಿಯ ಬಣ್ಣವಿರುತ್ತದೆ. ಹೊಟ್ಟೆಯ ಭಾಗವು ಬೂದು ಮಿಶ್ರಿತ ಬಿಳಿ ಬಣ್ಣವಿರುತ್ತದೆ. ಸಾಮಾನ್ಯವಾಗಿ ಮರಗಳ ಮೇಲೆ ಗುಂಪುಗಳಲ್ಲಿ ಕಾಣಿಸುತ್ತವೆ. ವಿವಿಧ ರೀತಿಯ ಕೀಟಗಳನ್ನು ಸೇವಿಸುತ್ತವೆ. ಕೆಲವು ಪ್ರಭೇದಗಳು ಮಕರಂದ ಮತ್ತು ಹಣ್ಣುಗಳನ್ನೂ ಸಹ ತಮ್ಮ ಆಹಾರವಾಗಿ ಸೇವಿಸುತ್ತವೆ.

                              
ಬಿಳಿಹುಬ್ಬಿನ ಬೀಸಣಿಗೆ ನೊಣಹಿಡುಕ                                                                     ©  ದೀಪಕ್ ಎಲ್. ಎಂ.

ಭಾರತೀಯ ಉಪಖಂಡ ಮತ್ತು ಆಗ್ನೇಯ ಏಷ್ಯಾದ ಕಾಡುಗಳಲ್ಲಿ ಕಂಡುಬರುವ ಬಿಳಿಹುಬ್ಬಿನ ಬೀಸಣಿಗೆನೊಣಹಿಡುಕ ಹಕ್ಕಿಯು ರಿಪಿಡುರಿಡೆ (Rhipiduridae) ಕುಟುಂಬಕ್ಕೆ ಸೇರುತ್ತದೆ‌. ಇದನ್ನು ವೈಜ್ಞಾನಿಕವಾಗಿ ರಿಪಿದುರಾ ಔರಿಯೊಲಾ (Rhipidura aureola) ಎಂದು ಕರೆಯಲಾಗುತ್ತದೆ. ಮೇಲ್ಭಾಗವು ಕಡುಗಂದು ಬಣ್ಣವಿದ್ದು, ಕೆಳಭಾಗವು ಬಿಳಿಯ ಬಣ್ಣದಲ್ಲಿರುತ್ತದೆ. ಬಿಳಿಯ ಹುಬ್ಬು, ರೆಕ್ಕೆಯ ಮೇಲೆ ಬಿಳಿಯ ಮಚ್ಚೆಗಳು ಹಾಗೂ ಫ್ಯಾನ್ ಆಕಾರದ ಬಾಲವನ್ನು ಹೊಂದಿರುತ್ತದೆ. ಕೀಟಗಳನ್ನು ತಮ್ಮ ಆಹಾರವಾಗಿ ಸೇವಿಸುತ್ತವೆ.

    ಕೆಂಬೂತ                                                                                                  ©  ದೀಪಕ್ ಎಲ್. ಎಂ.

ಭಾರತೀಯ ಉಪಖಂಡ ಮತ್ತು ಆಗ್ನೇಯ ಏಷ್ಯಾದ ಕಾಡು, ತೋಟಗಳು ಹಾಗೂ ನಗರ ಪ್ರದೇಶದಲ್ಲಿ ಕಂಡುಬರುವ ಈ ಹಕ್ಕಿಯು ಕುಕ್ಯುಲಿಡೇ (Cuculidae) ಕುಟುಂಬಕ್ಕೆ ಸೇರುತ್ತದೆ‌. ಇದನ್ನು ವೈಜ್ಞಾನಿಕವಾಗಿ ಸೆಂಟ್ರೊಪಸ್ ಸಿನೆನ್ಸಿಸ್ (Centropus sinensis) ಎಂದು ಕರೆಯಲಾಗುತ್ತದೆ. ತಲೆಯು ಕಪ್ಪಾಗಿದ್ದು, ದೇಹವು ನೇರಳೆ ಮಿಶ್ರಿತ ಕಪ್ಪು ಹೊಳಪನ್ನು ಹೊಂದಿದೆ. ರೆಕ್ಕೆಗಳು ಕಂದು ಬಣ್ಣವಿದ್ದು, ಕಣ್ಣುಗಳು ಕೆಂಪಾಗಿರುತ್ತವೆ. ಬೆಳಗಿನ ಸಮಯದಲ್ಲಿ ರೆಕ್ಕೆಗಳನ್ನು ಹರಡಿ ಬಿಸಿಲನ್ನು ಕಾಯಿಸಿಕೊಳ್ಳುತ್ತದೆ. ಕೀಟಗಳು, ಮರಿಹುಳು, ಬಸವನ ಹುಳು, ಸಣ್ಣ ಹಾವುಗಳು, ಬೀಜಗಳು ಮತ್ತು ಹಣ್ಣುಗಳು ಇವುಗಳ ಆಹಾರವಾಗಿವೆ.

ಚಿತ್ರಗಳು : ದೀಪಕ್ ಎಲ್. ಎಂ.
        ಲೇಖನ : ದೀಪ್ತಿ ಎನ್.

Spread the love
error: Content is protected.