ಕಪ್ಪು ಮೋಡ
ಕಪ್ಪು ಮೋಡವು ಕೂಡಿ
ದಪ್ಪ ಹನಿಗಳು ಸೋರಿ
ತೊಪ್ಪೆಯಾಯಿತು ಭುವಿಯು ಸಿಂಗಾರದಿ
ಅಪ್ಪಿರಲು ಮಳೆರಾಯ
ತಿಪ್ಪೆಗೊಬ್ಬರ ಸೇರಿ
ತಪ್ಪದೆಯೆ ಹೊಲದೊಳಗೆ ಹಸಿರಿನ ಸಿರಿ
ಮಣ್ಣ ಕಣಕಣದೊಳಗು
ಬೆಣ್ಣೆ ಸತ್ವದ ಸಾರ
ಬಣ್ಣ ಬಣ್ಣದ ಹೂವು ನಳನಳಿಸಿವೆ
ತಣ್ಣನೆಯ ಸುಳಿಗಾಳಿ
ಹಣ್ಣು ಮರಗಳ ಸಾಲು
ಕಣ್ಣಿಗೇ ವೈಭೋಗ ಧರೆಯೊಳಗಡೆ
ಉತ್ತಿ ಬಿತ್ತುತ ರೈತ
ಮುತ್ತಿಕ್ಕಿ ಹೊಲದೊಳಗೆ
ಬುತ್ತಿಯುಣ್ಣುವ ನಮಿಸಿ ದಿನ ವರುಣಗೆ
ಎತ್ತುಗಳ ಜೊತೆಯಾಗಿ
ಬಿತ್ತುವ ಮಹಾಯೋಗಿ
ಸುತ್ತೂರು ಹೊನ್ನಾರು ಹೂಡುತಾನೆ
ಅಕ್ಕರೆಯ ಧರೆಯೊಳಗೆ
ಸಕ್ಕರೆಯ ಸುರಿ ಮಳೆಯು
ಸಿಕ್ಕಿದದರೊಳು ನೆನೆದರುಲ್ಲಾಸವು
ಉಕ್ಕಿ ಹರಿಯುವ ನದಿಯು
ದಿಕ್ಕುದಿಕ್ಕಲು ಹಸಿರು
ಹಕ್ಕಿ ಸಂಕುಲಕುಸಿರು ಜಗದಿಯೊಲವು
– ಚನ್ನಕೇಶವಜಿ. ಲಾಳನಕಟ್ಟೆ., ತುಮಕೂರು ಜಿಲ್ಲೆ