ಪ್ರಕೃತಿ ಬಿಂಬ
ಕಂದು ರೆಕ್ಕೆಯ ನೆಲಗುಬ್ಬಿ © ಸನತ್ ಶಾನುಭೋಗ
ಆಗ್ನೇಯ ಭಾರತ, ಶ್ರೀಲಂಕಾದ ಅರಣ್ಯ ಪ್ರದೇಶ, ಕಲ್ಲು ಮತ್ತು ಹುಲ್ಲಿನಿಂದ ಕೂಡಿದ ಕುರುಚಲು ಪ್ರದೇಶ, ಬಳಕೆಯಾಗದ ಹೊಲಗಳ ಅಂಚಿನ ಪೊದೆಗಳಲ್ಲಿ ಮತ್ತು ಬಿದಿರಿನ ಪೊದೆಗಳಲ್ಲಿ ಹೆಚ್ಚಾಗಿ ಕಾಣಸಿಗುವ ಕಂದು ರೆಕ್ಕೆಯ ನೆಲಗುಬ್ಬಿಯು ಅಲೌಡಿಡೆ (Alaudidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಮಿರಾಫ್ರಾ ಅಫಿನಿಸ್ (Mirafra affinis) ಎಂದು ಕರೆಯಲಾಗುತ್ತದೆ. ಸಣ್ಣ ಬಾಲ ಮತ್ತು ದೊಡ್ಡದಾದ ಕೊಕ್ಕನ್ನು ಹೊಂದಿದ್ದು, ಕಂದು ಬಣ್ಣದ ದೇಹದ ಮೇಲೆ ಗೆರೆಗಳನ್ನು ಹಾಗೂ ಎದೆಯ ಭಾಗದ ಮೇಲೆ ಬಾಣದ ಆಕಾರದ ಕಲೆಗಳನ್ನು ಹೊಂದಿದೆ. ಮರ ಅಥವಾ ಕಂಬಿಗಳ ಮೇಲೆ ಕುಳಿತು ಎತ್ತರದ ದನಿಯಲ್ಲಿ ಶಿಳ್ಳೆಗಳನ್ನು ಹಾಕುತ್ತಾ ಜೋರಾದ ಸದ್ದನ್ನು ಮಾಡುತ್ತದೆ. ಬೀಜಗಳು ಮತ್ತು ಸಣ್ಣ ಕೀಟಗಳನ್ನು ಆಹಾರವಾಗಿ ಸೇವಿಸುತ್ತದೆ.
ಭಾರತ ಮತ್ತು ಪಾಕಿಸ್ತಾನದ ಹುಲ್ಲುಗಾವಲು, ಕಲ್ಲಿನ ಪ್ರದೇಶ, ಕುರುಚಲು ಗಿಡಗಳಿರುವಂತಹ ಒಣ ಜಾಗಗಳಲ್ಲಿ ಕಂಡುಬರುವ ಬಣ್ಣದ ಗೌಜಲಕ್ಕಿಯು, ಟೆರೊಕ್ಲೈಡೆ (Pteroclidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಟೆರೊಕ್ಲಿಸ್ ಇಂಡಿಕಸ್ (Pterocles indicus) ಎಂದು ಕರೆಯಲಾಗುತ್ತದೆ. ಸಣ್ಣ ತಲೆ ಹಾಗೂ ಕಾಲುಗಳನ್ನು ಹೊಂದಿರುವ ಈ ಹಕ್ಕಿಗಳು ನೆಲದ ಮೇಲೆ ವಾಸಿಸುತ್ತವೆ. ಗಂಡು ಹಕ್ಕಿಯು ಕಿತ್ತಳೆ ಬಣ್ಣದ ಕೊಕ್ಕು ಮತ್ತು ಕಪ್ಪು ಪಟ್ಟಿ ಇರುವ ಬಿಳಿಯ ಹಣೆ ಹಾಗೂ ಕುತ್ತಿಗೆಯ ಮೇಲೆ ಕಪ್ಪು ಗೆರೆಗಳನ್ನು ಹೊಂದಿರುತ್ತದೆ. ಎದೆ ಮತ್ತು ಹೊಟ್ಟೆಯು ಗುಲಾಬಿ-ಕಂದು ಬಣ್ಣವನ್ನು ಹೊಂದಿರುತ್ತದೆ. ರೆಕ್ಕೆಗಳು ಮತ್ತು ಬಾಲವು ಕಂದು ಬಣ್ಣದ್ದಾಗಿದ್ದು, ಕಪ್ಪು ಮತ್ತು ಬಿಳಿ ಅಡ್ಡಪಟ್ಟಿಗಳನ್ನು ಹೊಂದಿವೆ. ಹೆಣ್ಣು ಹಕ್ಕಿಯು ಬೂದು ಮಿಶ್ರಿತ ಕಂದು ಬಣ್ಣದಲ್ಲಿದ್ದು, ಕಡು ಕಂದು ಮತ್ತು ಬಿಳಿ ಬಣ್ಣದ ಚುಕ್ಕೆಗಳನ್ನು ಹೊಂದಿರುತ್ತದೆ. ಇವುಗಳು ಹೆಚ್ಚಾಗಿ ಬೀಜಗಳನ್ನು ತಮ್ಮ ಆಹಾರವಾಗಿ ಸೇವಿಸುತ್ತವೆ.
ಭಾರತದ ಉಪಖಂಡ ಮತ್ತು ಇರಾನ್‌ನ ಒಣ ಭಾಗಗಳಲ್ಲಿ, ಬಯಲು ಪ್ರದೇಶ, ಕೃಷಿ ಭೂಮಿ ಮತ್ತು ಕುರುಚಲು ಕಾಡಿನಲ್ಲಿ ಕಂಡುಬರುವ ಈ ಬೂದು ಕವುಜುಗವು ಫಾಸಿಯಾನಿಡೆ (Phasianidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಆರ್ಟಿಗೋರ್ನಿಸ್ ಪಾಂಡಿಕೇರಿಯಾನಸ್ (Ortygornis pondicerianus) ಎಂದು ಕರೆಯಲಾಗುತ್ತದೆ. ಕಿತ್ತಳೆ ಬಣ್ಣದ ಮುಖವನ್ನು ಹೊಂದಿದ್ದು, ತೆಳುಗಂದು ಬಣ್ಣದ ಗಂಟಲಿಗೆ ತೆಳುವಾದ ಕಪ್ಪು ಗಡಿ ಇರುತ್ತದೆ. ಇವು ಸ್ವಲ್ಪೇ ಎತ್ತರಕ್ಕೆ ಮಾತ್ರ ಹಾರಬಲ್ಲವು. ಇವುಗಳ ಸ್ಥಳೀಯ ಹೆಸರು ಟೀಟಾರ್. ಜೋರಾದ ಪುನರಾವರ್ತಿತ ಕರೆಗಳಾದ ಕಾ-ಟೀ-ಟಾರ್…ಟೀ-ಟಾರ್ ಎಂದು ಕೂಗುವುದರಿಂದ ಈ ಹೆಸರು ಬಂದಿದೆ. ಬೀಜಗಳು, ಧಾನ್ಯಗಳು ಮತ್ತು ಕೀಟಗಳು ಇವುಗಳ ಆಹಾರವಾಗಿವೆ.
ಯುರೇಷಿಯಾ ಮತ್ತು ಉತ್ತರ ಆಫ್ರಿಕಾದ ಒಣ ಪ್ರದೇಶದಲ್ಲಿ, ರಸ್ತೆಬದಿ ಹಾಗೂ ಹೊಲಗಳಲ್ಲಿ ಕಂಡುಬರುವ ಈ ಹಕ್ಕಿಯು ಅಲೌಡಿಡೆ (Alaudidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಗ್ಯಾಲೆರಿಡಾ ಕ್ರಿಸ್ಟಾಟಾ (Galerida cristata) ಎಂದು ಕರೆಯಲಾಗುತ್ತದೆ. ಚಿಕ್ಕದಾದ ಈ ಹಕ್ಕಿಯ ಮೈ ಬಣ್ಣವು ಕಂದು ಬಣ್ಣದ್ದಾಗಿದ್ದು, ತಿಳಿ ಕಂದು ಬಣ್ಣದ ಹೊರ ಗರಿಗಳನ್ನು ಹಾಗೂ ಚಿಕ್ಕ ಬಾಲವನ್ನು ಹೊಂದಿದೆ. ಹೆಸರೇ ಸೂಚಿಸುವಂತೆ ತಲೆಯ ಮೇಲೆ ಜುಟ್ಟನ್ನು (crest) ಹೊಂದಿದೆ. ಸಸ್ಯಾಹಾರಿ ಪಕ್ಷಿಯಾಗಿದ್ದು, ಮುಖ್ಯವಾಗಿ ಓಟ್ಸ್, ಗೋಧಿ ಮತ್ತು ಬಾರ್ಲಿಯಂತಹ ಧಾನ್ಯಗಳು ಹಾಗು ಬೀಜಗಳನ್ನು ತಿನ್ನುತ್ತದೆ. ಕೆಲವೊಮ್ಮೆ ಜೀರುಂಡೆಗಳಂತಹ ಕೀಟಗಳು ಸಹ ಇವುಗಳ ಆಹಾರವಾಗಿವೆ.
ಚಿತ್ರಗಳು : ಸನತ್ ಶಾನುಭೋಗ
ಲೇಖನ : ದೀಪ್ತಿ ಎನ್.