ಗುಬ್ಬಿಗಳು ಮರೆಯಾಗಿವೆ
ಮನುಜನತಿಯುನ್ನತಿಗೆ
ಮನೆಯಿಲ್ಲದಂತಾಗಿ
ಮನನೊಂದ ಗುಬ್ಬಿಗಳು ಹೊರಗೋಡಿವೆ
ಮನೆಜಂತಿಯೊಳಗಡೆಯೆ
ಸನಿಹ ಗೂಡನು ಕಟ್ಟಿ
ದಿನವಾಡೊ ಗುಬ್ಬಿಗಳು ಮರೆಯಾಗಿವೆ
ಬೆಳಗೆದ್ದು ಕಲರವದೊ
ಎಳೆಬಿಸಿಲಲಾಡುತಲಿ
ಬಳಿಸುಳಿವ ಗುಬ್ಬಿಗಳು ಮನೆತೊರೆದಿವೆ
ಹುಳುಗಳನು ಹೆಕ್ಕುತಲಿ
ಹೊಲದೊಳಗೆ ದುಡಿದುಡಿದು
ಫಲಕಾಯ್ವ ಗುಬ್ಬಿಗಳು ಸರಿದೋಡಿವೆ
ಬಗೆಬಗೆಯ ವಿಕಿರಣವು
ಧಗಧಗಿಸಿ ತೂರಿರಲು
ಹಗೆಯಾಡಿ ಗುಬ್ಬಿಗಳು ಚೀತ್ಕರಿಸಿವೆ
ಹೊಗೆಯುಗುಳೆ ಕಾರ್ಖಾನೆ
ಜಗದೊಳಗೆ ನರಬುದ್ದಿ
ತೆಗಳುತಲಿ ನೋವಿನಲಿ ತಳಮಳಿಸಿವೆ
ಉರುಳೊಳಗೆ ಸಿಲುಕುತಲಿ
ನರಳುತಿವೆ ಗುಬ್ಬಿಗಳು
ನೆರಳೆರೆವ ಮರಬೆಳೆಸಿ ಪೊರೆಯಬೇಕು
ನರನೊಳಗೆ ಮಾನವತೆ
ಮರೆಯಾಗಿ ಹೋಗಿರಲು
ಮರೆಯದೆಲೆ ಗುಬ್ಬಿಗಳ ಸಲಹಬೇಕು
– ಚನ್ನಕೇಶವ ಜಿ. ಲಾಳನಕಟ್ಟೆ., ತುಮಕೂರು ಜಿಲ್ಲೆ