ಪ್ರಕೃತಿ ಬಿಂಬ

ಪ್ರಕೃತಿ ಬಿಂಬ

ಬಿಳಿಪೃಷ್ಠದ ರಾಟವಾಳ                                                                                                ©  ಗುರು ಪ್ರಸಾದ್ ಕೆ. ಆರ್.

ಏಷ್ಯಾ ಖಂಡ ಹಾಗೂ ಪಕ್ಕದಲ್ಲಿನ ದ್ವೀಪಗಳ ಕಾಡುಪ್ರದೇಶ, ಹುಲ್ಲುಗಾವಲು, ಪೊದೆ ಮತ್ತು ಕೃಷಿ ಭೂಮಿಗಳಲ್ಲಿ ಕಂಡುಬರುವ ಈ ಹಕ್ಕಿಯು ಎಸ್ಟ್ರಿಲಿಡೇ (Estrildidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಲೊಂಚುರಾ ಸ್ಟ್ರೈಟಾ (Lonchura striata) ಎಂದು ಕರೆಯಲಾಗುತ್ತದೆ. ಬೂದು ಬಣ್ಣದ ಕೊಕ್ಕು ಮತ್ತು ಉದ್ದವಾದ ಕಪ್ಪು ಬಣ್ಣದ ಮೊನಚಾದ ಬಾಲವನ್ನು ಹೊಂದಿರುವ ಈ ಹಕ್ಕಿಗೆ ದೇಹದ ಮೇಲ್ಭಾಗವು ಕಪ್ಪು ಮಿಶ್ರಿತ ಕಂದು ಬಣ್ಣವಿದ್ದು, ತಳಭಾಗವು ಬಿಳಿಯ ಬಣ್ಣದ್ದಾಗಿರುತ್ತದೆ. ಇವು ಸಾಮಾನ್ಯವಾಗಿ ಮರ ಹಾಗೂ ಪೊದೆಗಳಲ್ಲಿ ಗೂಡು ಕಟ್ಟುತ್ತವೆ. ಗುಂಪುಗಳಲ್ಲಿ ವಾಸಿಸುವ ಈ ಪಕ್ಷಿಗಳು ಬೀಜಗಳನ್ನು ಹಾಗೂ ಪಾಚಿಯನ್ನು ತಮ್ಮ ಆಹಾರವನ್ನಾಗಿ ಸೇವಿಸುತ್ತವೆ.

                                     ಚುಕ್ಕೆ ರಾಟವಾಳ                                                                                    ©  ಗುರು ಪ್ರಸಾದ್ ಕೆ. ಆರ್.                                

ಏಷ್ಯಾ ಖಂಡಕ್ಕೆ ಸ್ಥಳೀಯವಾಗಿರುವ ಈ ಗುಬ್ಬಚ್ಚಿಗಿಂತ ಚಿಕ್ಕದಾದ ಹಕ್ಕಿಯು ಕುರುಚಲು ಕಾಡು, ಕೃಷಿ ಭೂಮಿ, ತೋಟ, ಬಯಲು ಪ್ರದೇಶ, ಉದ್ಯಾನವನ, ಜನವಸತಿ ಪ್ರದೇಶಗಳಲ್ಲಿ ಕಾಣಸಿಗುತ್ತದೆ. ಎಸ್ಟ್ರಿಲಿಡೇ (Estrildidae) ಕುಟುಂಬಕ್ಕೆ ಸೇರುವ ಇದನ್ನು ವೈಜ್ಞಾನಿಕವಾಗಿ ಲಾಂಕ್ಯೂರಾ ಪಂಕ್ಟುಲೇಟಾ (Lonchura punctulata) ಎಂದು ಕರೆಯಲಾಗುತ್ತದೆ. ಇದರ ದೇಹದ ಮೇಲ್ಭಾಗವು ಕಂದು ಬಣ್ಣದ್ದಾಗಿದ್ದು, ತಳಭಾಗವು ಚುಕ್ಕೆಗಳನ್ನು ಹೊಂದಿರುತ್ತದೆ. ಚುಕ್ಕೆ ರಾಟವಾಳ ಪಕ್ಷಿಯು ಹುಲ್ಲು, ಹತ್ತಿ ಮತ್ತು ನಾರುಗಳಿಂದ ಕೂಡಿದ ಚೆಂಡಿನಾಕಾರದ ಗೂಡನ್ನು ಕಟ್ಟಿ ಪಕ್ಕದಿಂದ ಅದಕ್ಕೆ ಒಳದಾರಿಯನ್ನೂ ಮಾಡಿರುತ್ತದೆ. ಈ ಹಕ್ಕಿಗಳು ದೊಡ್ಡ ದೊಡ್ಡ ಗುಂಪುಗಳಲ್ಲಿ ಬಂದು, ಭತ್ತದ ಪೈರನ್ನು ತಿನ್ನುತ್ತವೆ. ಇವು ಧಾನ್ಯದ ಬೀಜಗಳನ್ನು ಒಡೆಯಲು ಅನುಕೂಲಕರವಾದಂತಹ ಬಲವಾದ ಕೊಕ್ಕನ್ನು ಸಹ ಹೊಂದಿವೆ.

                                    ಬಿಳಿ ಕತ್ತಿನ ರಾಟವಾಳ                                                                 ©  ಗುರು ಪ್ರಸಾದ್ ಕೆ. ಆರ್.

ಏಷ್ಯಾ ಖಂಡದಲ್ಲಿ ಕಂಡುಬರುವ ಈ ಗುಬ್ಬಚ್ಚಿಗಿಂತ ಚಿಕ್ಕದಾದ ಪಕ್ಷಿಗಳು ಕುರುಚಲು ಕಾಡು, ಕೃಷಿಭೂಮಿಗಳಲ್ಲಿ ವಾಸಿಸುತ್ತವೆ. ಇವುಗಳು ಎಸ್ಟ್ರಿಲಿಡೇ (Estrildidae) ಕುಟುಂಬಕ್ಕೆ ಸೇರುತ್ತವೆ. ಇವುಗಳನ್ನು ವೈಜ್ಞಾನಿಕವಾಗಿ ಲಾಂಕ್ಯುರಾ ಮಲಬಾರಿಕಾ (Lonchura malabarica) ಎಂದು ಕರೆಯಲಾಗುತ್ತದೆ. ತೆಳು ಕಂದು ಬಣ್ಣದ ದೇಹವನ್ನು ಹೊಂದಿರುವ ಬಿಳಿ ಕತ್ತಿನ ರಾಟವಾಳ ಪಕ್ಷಿಯ ಕೆನ್ನೆ, ಕತ್ತು, ಬೆನ್ನು ಹಾಗೂ ತಳಭಾಗವು ಬಿಳಿ ಬಣ್ಣವಿದ್ದು, ಬಾಲದ ತುದಿ ಕಪ್ಪು ಹಾಗೂ ಕೊಕ್ಕು ಮತ್ತು ಕಾಲುಗಳು ಬೂದು ಬಣ್ಣದ್ದಾಗಿರುತ್ತವೆ. ಈ ರಾಟವಾಳಗಳು ಚಂಡಿನಾಕಾರದ ಗೂಡನ್ನು ಪೊದೆಗಳಲ್ಲಿ, ಮುಳ್ಳಿನಿಂದ ಕೂಡಿರುವ ಅಕೇಶಿಯಾ ಮರದಲ್ಲಿ ಗೀಜುಗನ ಹಳೆಯ ಗೂಡುಗಳನ್ನು, ಹುಲ್ಲುಗಳನ್ನು ಬಳಸಿಕೊಂಡು ಕಟ್ಟುತ್ತವೆ. ಇವು ಮುಖ್ಯವಾಗಿ ಬೀಜಗಳನ್ನು, ಕೆಲವೊಮ್ಮೆ ಕೀಟಗಳನ್ನು ಹಾಗೂ ಹೂವಿನ ಮಕರಂದವನ್ನು ತಮ್ಮ ಆಹಾರವನ್ನಾಗಿ ಸೇವಿಸುತ್ತವೆ.

               ಕರಿತಲೆ ರಾಟವಾಳ                                                                                      ©  ಗುರು ಪ್ರಸಾದ್ ಕೆ. ಆರ್.                                       

ಬಾಂಗ್ಲಾದೇಶ, ಭಾರತ, ಶ್ರೀಲಂಕಾ, ಪಾಕಿಸ್ತಾನ ಮತ್ತು ದಕ್ಷಿಣ ಚೀನಾಕ್ಕೆ ಸ್ಥಳೀಯವಾಗಿರುವ ಈ ಕರಿತಲೆ ರಾಟವಾಳ ಹಕ್ಕಿಯು ಎಸ್ಟ್ರಿಲಿಡೇ (Estrildidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಲೋಂಚುರಾ ಮಲಕ್ಕಾ (Lonchura malacca) ಎಂದು ಕರೆಯಲಾಗುತ್ತದೆ. ಇದು ಕಪ್ಪು ಬಣ್ಣದ ತಲೆಯನ್ನು ಹೊಂದಿದ್ದು, ದೇಹದ ಮೇಲ್ಭಾಗವು ಕಂದು ಬಣ್ಣ ಹಾಗು ಎದೆ ಮತ್ತು ಹೊಟ್ಟೆಯ ಭಾಗವು ಬಿಳಿಯ ಬಣ್ಣದ್ದಾಗಿದೆ. ತೆಳುನೀಲಿ ಬಣ್ಣದ ಕೊಕ್ಕನ್ನು ಧಾನ್ಯ ಮತ್ತು ಇತರೆ ಬೀಜಗಳನ್ನು ಸೇವಿಸಲು ಬಳಸಿಕೊಳ್ಳುತ್ತದೆ. ಗಂಡು ಪಕ್ಷಿಯು ಹಾಡು ಮತ್ತು ನೃತ್ಯದೊಂದಿಗೆ ಹೆಣ್ಣು ಪಕ್ಷಿಯನ್ನು ಆಕರ್ಷಿಸುವುದು ಈ ಪಕ್ಷಿ ಪ್ರಭೇದದಲ್ಲಿನ ವಿಶೇಷತೆಯಾಗಿದೆ. ಸಾಮಾನ್ಯವಾಗಿ ಇವುಗಳು ಗುಂಪುಗಳಲ್ಲಿ ವಾಸಿಸುವುದನ್ನು ಕಾಣಬಹುದಾಗಿದೆ.  

ಚಿತ್ರಗಳು : ಗುರು ಪ್ರಸಾದ್ ಕೆ. ಆರ್
        ಲೇಖನ : ದೀಪ್ತಿ ಎನ್.

Spread the love
error: Content is protected.