ಪ್ರಕೃತಿ ಬಿಂಬ
ಕೆನ್ನೀಲಿ ನೀರು ಕೋಳಿ © ಸನತ್ ಶಾನುಭೋಗ
ಮಧ್ಯಪ್ರಾಚ್ಯ ಮತ್ತು ಭಾರತೀಯ ಉಪಖಂಡದಿಂದ ದಕ್ಷಿಣ ಚೀನಾ ಮತ್ತು ಉತ್ತರ ಥೈಲ್ಯಾಂಡ್‌ನ ನದಿಗಳ, ಸರೋವರಗಳ ಜೌಗುಪ್ರದೇಶಗಳಲ್ಲಿ ಗುಂಪುಗಳಲ್ಲಿ ಕಂಡುಬರುವ ಈ ಕೆನ್ನೀಲಿ ನೀರು ಕೋಳಿಯು ರಾಲಿಡೇ (Rallidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಪೋರ್ಫೈರಿಯೊ ಪೋಲಿಯೊಸೆಫಾಲಸ್ (Porphyrio poliocephalus) ಎಂದು ಕರೆಯಲಾಗುತ್ತದೆ. ನೀಲಿ ಮಿಶ್ರಿತ ನೇರಳೆ ಬಣ್ಣದ ಈ ಹಕ್ಕಿಯು ಕೆಂಪು ಹಣೆ ಹೊಂದಿದ್ದು, ಕೊಕ್ಕು ಹಾಗೂ ಕಾಲುಗಳು ಕೆಂಪು ಬಣ್ಣವನ್ನು ಹೊಂದಿರುತ್ತದೆ. ಹೆಚ್ಚಾಗಿ ಸಸ್ಯ ಸಾಮಗ್ರಿಗಳು, ಕಾಂಡಗಳು, ಬೇರುಗಳು, ಎಲೆಗಳು ಮತ್ತು ಜಲಸಸ್ಯಗಳ ಬೀಜಗಳು, ಕೆಲವು ಕೀಟಗಳು, ಕಪ್ಪೆಗಳು, ಇತರ ಸಣ್ಣ ಜೀವಿಗಳು ಇದರ ಆಹಾರವಾಗಿವೆ.
ಭಾರತ, ಪಾಕಿಸ್ತಾನ, ಶ್ರೀಲಂಕಾ, ಮ್ಯಾನ್ಮಾರ್, ಬಾಂಗ್ಲಾದೇಶಗಳಲ್ಲಿ ವಿವಿಧ ಜಲಮೂಲಗಳಿರುವೆಡೆ ಕಂಡುಬರುವ ಈ ಹಕ್ಕಿಯು, ಪೊಡಿಸಿಪಿಡಿಡೆ (Podicipedidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಟಾಕಿಬ್ಯಾಪ್ಟಸ್ ರುಫಿಕೋಲಿಸ್ (Tachybaptus ruficollis) ಎಂದು ಕರೆಯಲಾಗುತ್ತದೆ. ದೇಹವು ಕೆಂಪು ಮಿಶ್ರಿತ ಕಂದು ಬಣ್ಣದಲ್ಲಿದ್ದು, ಮೊನಚಾದ ಕೊಕ್ಕು ಹಾಗೂ ಕಿರಿದಾದ ರೆಕ್ಕೆಗಳನ್ನು ಹೊಂದಿದೆ. ಏಪ್ರಿಲ್ ನಿಂದ ಅಕ್ಟೋಬರ್ ಅವಧಿಯಲ್ಲಿ ಕೆರೆಗಳ ಜೋಂಡು, ತೇಲುವ ಕಸಕಡ್ಡಿಗಳ ಮೇಲೆ ಗೂಡು ಕಟ್ಟುತ್ತದೆ. ಇದು ಮಾಂಸಾಹಾರಿಯಾಗಿದ್ದು, ಸಣ್ಣಪುಟ್ಟ ಮೀನು, ಜಲಚರಗಳನ್ನು ತಿನ್ನುತ್ತದೆ. ನೀರಿನಲ್ಲಿ ಮುಳುಗೇಳುವುದು, ಈಜಾಡುವುದು ಇದರ ವಿಶೇಷತೆಯಾಗಿದೆ.
ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಮ್ಯಾನ್ಮಾರ್, ಆಗ್ನೇಯ ಚೀನಾ ಮತ್ತು ವಿಯೆಟ್ನಾಮ್ ದೇಶಗಳ ಜೌಗು ಪ್ರದೇಶಗಳಲ್ಲಿ, ಭತ್ತದ ಗದ್ದೆಗಳಲ್ಲಿ ಕಂಡುಬರುವ ಈ ಹಕ್ಕಿಯು ರಾಲಿಡೇ (Rallidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಜಪೋರ್ನಿಯಾ ಅಕೂಲ್ (Zapornia akool) ಎಂದು ಕರೆಯಲಾಗುತ್ತದೆ. ದೇಹದ ಮೇಲ್ಭಾಗವು ಕಂದು ಬಣ್ಣವಿದ್ದು, ಮುಖ, ಎದೆ ಮತ್ತು ಹೊಟ್ಟೆಯು ಬೂದು ಬಣ್ಣದ್ದಾಗಿರುತ್ತದೆ. ಕಾಲುಗಳು ಉದ್ದವಾಗಿದ್ದು, ಕಂದು ಮಿಶ್ರಿತ ಬೂದು ಬಣ್ಣದಲ್ಲಿರುತ್ತವೆ. ಕೀಟಗಳು, ಹುಳುಗಳು, ಸಣ್ಣ ಕಪ್ಪೆಗಳು ಹಾಗೂ ಮೃದ್ವಂಗಿಗಳು, ಬೀಜಗಳು, ಹುಲ್ಲು, ಚಿಗುರುಗಳು ಮತ್ತು ಹಣ್ಣುಗಳು ಇವುಗಳ ಆಹಾರವಾಗಿವೆ.
ಯುರೇಷಿಯಾದಾದ್ಯಂತ ಕೊಳಗಳಲ್ಲಿ ಹಾಗೂ ವಿವಿಧ ಜೌಗು ಪ್ರದೇಶಗಳಲ್ಲಿ, ಸಮುದ್ರ ತೀರದಲ್ಲಿ ವ್ಯಾಪಕವಾಗಿ ಕಂಡುಬರುವ ಈ ಹಕ್ಕಿಯು ಲಾರಿಡೆ (Laridae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಕ್ರೋಕೋಸೆಫಾಲಸ್ ರಿಡಿಬಂಡಸ್ (Chroicocephalus ridibundus) ಎಂದು ಕರೆಯಲಾಗುತ್ತದೆ. ಸಂತಾನೋತ್ಪತ್ತಿಯ ಸಮಯದಲ್ಲಿ ತಲೆಯ ಕೊಂಚ ಭಾಗವು ಕಡುಗಂದು ಬಣ್ಣಕ್ಕೂ, ಕೊಕ್ಕು ಮತ್ತು ಕಾಲುಗಳು ಗಾಢ ಕೆಂಪು ಬಣ್ಣಕ್ಕೂ ತಿರುಗುತ್ತವೆ. ಉಳಿದ ಸಮಯದಲ್ಲಿ ತಲೆಯ ಭಾಗವು ಕೇವಲ ಎರಡು ಕಪ್ಪು ಚುಕ್ಕೆಗಳನ್ನು ಹೊಂದಿದ್ದು, ದೇಹದ ಮೇಲ್ಭಾಗವು ಮೇಲ್ಬಾಗವು ತೆಳು ಬೂದು ಬಣ್ಣವಿದ್ದು, ತಳಭಾಗವು ಬಿಳಿ ಬಣ್ಣದ್ದಾಗಿರುತ್ತದೆ. ಸಾಮಾನ್ಯವಾಗಿ ಗುಂಪುಗಳಲ್ಲಿ ಕಂಡುಬರುವ ಇವುಗಳಿಗೆ ಕೀಟಗಳು, ಮೀನುಗಳು, ಹುಳುಗಳು ಉಳುಮೆ ಮಾಡಿದ ಹೊಲಗಳಲ್ಲಿ ಸಿಗುವ ಜೀವಿಗಳು ಆಹಾರವಾಗಿವೆ. ಬೇಸಿಗೆಯಲ್ಲಿ ಇವು ಕೆಲವು ಬೀಜಗಳು ಮತ್ತು ಹಣ್ಣುಗಳನ್ನು ತಿನ್ನುತ್ತವೆ.
ಚಿತ್ರಗಳು : ಸನತ್ ಶಾನುಭೋಗ
ಲೇಖನ : ದೀಪ್ತಿ ಎನ್.