ಪ್ರಕೃತಿ ಬಿಂಬ
ಬೂದು ಬಕ © ಮಹೇಂದ್ರ ಎಂ. ಹೆಗಡೆ.
ಯೂರೋಪ್, ಏಷ್ಯಾ ಮತ್ತು ಆಫ್ರಿಕಾ ಖಂಡಗಳ ಸರೋವರ, ಜಲಾಶಯ, ನದಿ, ಹಳ್ಳ, ಸಮುದ್ರ ತೀರಗಳು ಹಾಗೂ ಜೌಗು ಪ್ರದೇಶಗಳಲ್ಲಿ ಸ್ಥಳೀಯವಾಗಿ ಕಂಡುಬರುವ ಉದ್ದನೆಯ ಕಾಲಿನ ಬೂದು ಬಕವು, ಆರ್ಡಿಡೆ (Ardeidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಆರ್ಡಿಯಾ ಸಿನೆರಿಯಾ (Ardea cinerea) ಎಂದು ಕರೆಯಲಾಗುತ್ತದೆ. ಪುಕ್ಕಗಳು ಬೂದು ಬಣ್ಣದ್ದಾಗಿದ್ದು, ಕೆಳಭಾಗದಲ್ಲಿ ಬೂದು ಮಿಶ್ರಿತ ಬಿಳುಪು ಮತ್ತು ಪಾರ್ಶ್ವಗಳಲ್ಲಿ ಸ್ವಲ್ಪ ಕಪ್ಪು ಬಣ್ಣವನ್ನು ಹೊಂದಿರುತ್ತವೆ. ಉದ್ದನೆಯ, ನೇರವಾದ ಮತ್ತು ಶಕ್ತಿಯುತವಾದ ಗುಲಾಬಿ ಮಿಶ್ರಿತ ಹಳದಿ ಕೊಕ್ಕನ್ನು ಹಾಗೂ ಹಳದಿ ಬಣ್ಣದ ಕಣ್ಣನ್ನು ಹೊಂದಿರುತ್ತವೆ. ಸಂತಾನೋತ್ಪತ್ತಿಯ ಸಮಯದಲ್ಲಿ ಪ್ರಕಾಶಮಾನವಾದ ಮೈಬಣ್ಣವನ್ನು ಪಡೆದುಕೊಳ್ಳುತ್ತವೆ. ಸಾಮಾನ್ಯವಾಗಿ ಮುಂಜಾನೆ ಮತ್ತು ಮುಸ್ಸಂಜೆಯ ಸಮಯದಲ್ಲಿ ಮೀನು, ಹಾವು, ಸಣ್ಣ ಪಕ್ಷಿಗಳು, ಇಲಿಗಳನ್ನು ಬೇಟೆಯಾಡುತ್ತವೆ ಹಾಗೂ ಕೆಲವೊಮ್ಮೆ ಸಸ್ಯಗಳನ್ನು ಸೇವಿಸುತ್ತವೆ. ಸಾಮಾನ್ಯವಾಗಿ ಒಂದೇ ಕಾಲಿನ ಮೇಲೆ ದೀರ್ಘಕಾಲ ನಿಲ್ಲುವುದು ಇವುಗಳ ವಿಶೇಷತೆಯಾಗಿದೆ.
ದಕ್ಷಿಣ ಯುರೋಪ್, ಆಫ್ರಿಕಾ ಮತ್ತು ಏಷ್ಯಾದ ಕೆಲವು ಭಾಗಗಳ ಕಡಲ ತೀರಗಳಲ್ಲಿ ಕಂಡುಬರುವ ಈ ಕಡಲ ತೀರದ ಬೆಳ್ಳಕ್ಕಿಯು ಆರ್ಡಿಡೆ (Ardeidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಎಗ್ರೆಟ್ಟಾ ಗುಲಾರಿಸ್ (Egretta gularis) ಎಂದು ಕರೆಯಲಾಗುತ್ತದೆ. ಇವುಗಳನ್ನು ಗಾಢ ಬೂದು ಬಣ್ಣ ಅಥವಾ ಬಿಳಿಯ ಬಣ್ಣದ ಎರಡು ರೂಪಗಳಲ್ಲಿ ಕಾಣಬಹುದಾಗಿದೆ. ಬಿಳಿಯ ಬಣ್ಣದ ಹಕ್ಕಿಯು ಚಿಕ್ಕ ಬೆಳ್ಳಕ್ಕಿಗೆ ಹೋಲುತ್ತದೆ ಹಾಗೂ ದೊಡ್ಡ ಹಳದಿ ಬಣ್ಣದ ಕೊಕ್ಕು ಮತ್ತು ದಪ್ಪವಾದ ಕಾಲುಗಳನ್ನು ಹೊಂದಿರುತ್ತದೆ. ಬೂದುಬಣ್ಣದ ಹಕ್ಕಿಯು ಬಿಳಿಯ ಗಂಟಲು ಹಾಗೂ ಬಿಳಿಯ ಹಕ್ಕಿಯಂತೆಯೇ ಕೊಕ್ಕು ಮತ್ತು ಕಾಲುಗಳನ್ನು ಹೊಂದಿರುತ್ತದೆ. ಸಂತಾನೋತ್ಪತ್ತಿ ಅವಧಿಯಲ್ಲಿ ಕಾಲುಗಳು ಮತ್ತು ಮುಖದ ಚರ್ಮವು ಕೆಂಪು ಬಣ್ಣದ್ದಾಗಿರುತ್ತದೆ. ಇವುಗಳು ಮೀನು ಮತ್ತು ಇತರೆ ಜಲಚರಗಳನ್ನು ಬೇಟೆಯಾಡಿ ತಿನ್ನುತ್ತವೆ.
ದಕ್ಷಿಣ ಮತ್ತು ಪೂರ್ವ ಏಷ್ಯಾದ ಕಾಡು, ತೊರೆ ಮತ್ತು ಜೌಗು ಪ್ರದೇಶಗಳಲ್ಲಿ ಕಂಡುಬರುವ ಈ ಹುಲಿ ಬಕವು ಆರ್ಡಿಡೆ (Ardeidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಗೋರ್ಸಾಚಿಯಸ್ ಮೆಲನೋಲೋಫಸ್ (Gorsachius melanolophus) ಎಂದು ಕರೆಯಲಾಗುತ್ತದೆ. ಇದರ ಮೈ ಬಣ್ಣವು ಕೆಂಪು ಮಿಶ್ರಿತ ಬೂದು ಬಣ್ಣದ್ದಾಗಿದ್ದು, ಕತ್ತಿನ ಮಧ್ಯಭಾಗದಿಂದ ಎದೆಯವರೆಗೆ ಗೆರೆಗಳನ್ನು ಕಾಣಬಹುದಾಗಿದೆ. ಬಿಳಿಯ ಗಲ್ಲ, ಹಳದಿ ಕಣ್ಣುಗಳು, ಕಪ್ಪು ಕೊಕ್ಕು ಮತ್ತು ಹಸಿರು ಕಾಲುಗಳನ್ನು ಹೊಂದಿದೆ. ಇವುಗಳು ಸಾಮಾನ್ಯವಾಗಿ ಒಂಟಿಯಾಗಿರುತ್ತವೆ ಹಾಗೂ ಮರಗಳಲ್ಲಿ ನೆಲೆಸುತ್ತವೆ. ಇವುಗಳು ಎರೆಹುಳು, ಕಪ್ಪೆ ಕೆಲವೊಮ್ಮೆ ಮೀನುಗಳನ್ನು ತಿನ್ನುತ್ತವೆ.
ಭಾರತೀಯ ಉಪಖಂಡಕ್ಕೆ ಸ್ಥಳೀಯವಾಗಿರುವ ಈ ಕೊಳದ ಬಕವು ಕೊಳ, ನದಿ, ತೊರೆ, ಗದ್ದೆ, ಕಾಲುವೆ, ಮ್ಯಾಂಗ್ರೋವ್ಗಳು ಮತ್ತು ಜೌಗು ಪ್ರದೇಶಗಳಲ್ಲಿ ವಾಸಿಸುತ್ತದೆ. ಆರ್ಡಿಡೆ (Ardeidae) ಕುಟುಂಬಕ್ಕೆ ಸೇರುವ ಇದನ್ನು ವೈಜ್ಞಾನಿಕವಾಗಿ ಆರ್ಡಿಯೋಲಾ ಗ್ರೇಯಿ (Ardeola grayii) ಎಂದು ಕರೆಯಲಾಗುತ್ತದೆ. ಮೈ ಬಣ್ಣವು ಬಿಳಿಯಾಗಿದ್ದು, ಹಸಿರು ಮಿಶ್ರಿತ ಕಂದು ಚುಕ್ಕೆಗಳಿರುತ್ತವೆ. ಚಿಕ್ಕ ಕುತ್ತಿಗೆ, ಹಸಿರು ಬಣ್ಣದ ಪಾದಗಳು, ಕಪ್ಪು ತುದಿಯ ಹಳದಿ ಕೊಕ್ಕನ್ನು ಹೊಂದಿರುತ್ತವೆ ಹಾಗೂ ಸಂತಾನಾಭಿವೃದ್ಧಿಯ ಸಮಯದಲ್ಲಿ ಬಿಳಿಯ ಪುಕ್ಕಗಳ ಮೇಲೆ ಗಾಢ ಕಂದು ತೇಪೆಗಳಿರುತ್ತವೆ ಮತ್ತು ಕಾಲುಗಳು ಹಸಿರು ಬಣ್ಣದಿಂದ ಪ್ರಕಾಶಮಾನವಾದ ಹಳದಿ ಬಣ್ಣಕ್ಕೆ ತಿರುಗುತ್ತವೆ. ಕೆಲವು ಬಕಗಳು ಕೆಂಪು ಕಾಲುಗಳನ್ನೂ ಸಹ ಹೊಂದಿರುತ್ತವೆ. ನೀರಿನಲ್ಲಿ ಬಹಳ ಸಮಯ ನಿಂತು ಹೊಂಚುಹಾಕಿ ಮೀನು, ಕಪ್ಪೆ, ಏಡಿ, ಇತರೆ ಕೀಟಗಳು ಮತ್ತು ಮರಿ ಆಮೆಗಳನ್ನು ಸೇವಿಸುತ್ತವೆ.
ಚಿತ್ರಗಳು : ಮಹೇಂದ್ರ ಎಂ. ಹೆಗಡೆ
ಲೇಖನ : ದೀಪ್ತಿ ಎನ್.