ಮೊಗವ ತೋರದ ಕೋಗಿಲೆ,…

ಮೊಗವ ತೋರದ ಕೋಗಿಲೆ,…

ಕುಹೂ ಕುಹೂ ಎನ್ನುವ ಹಕ್ಕಿಯ ಇಂಪಾದ ಸ್ವರವದು
ನಾ ಬಲ್ಲೆನು ನೀನು ಕೋಗಿಲೆಯೆಂದು!
ಕಾಡಿನ ಮರದ ಕೊಂಬೆಯಲ್ಲೆಲ್ಲೋ ಕದ್ದು ಕೂತಿರುವೆ
ನಿನ್ನ ಮೊಗವ ಕಾಣಲು ನಾ ಕಾದು ಕೂತಿರುವೆ!

ನಿನ್ನ ಸಂಗೀತ ಕೇಳಿ ಕಿವಿಗೆ ತಂಪೆರಗಿದರೆ ಸಾಕೇ?
ಮುದವೀಯುವ ನಿನ್ನೀ ಸುಸ್ವರದಿಂಪೇ ಸಾಕೇ?
ನಿನ್ನ ಮೊಗವ ಕಾಣಲು ಕಣ್ಣುಗಳು ಕಾತರಿಸಿವೆ!
ಬಾ ನಿನ್ನ ಮೊಗವ ತೋರು ಕೋಗಿಲೆ!

ಪದೇ ಪದೇ ಮಧುರಗಾನವೀಯುವೇಕೆ?
ನಿನ್ನ ಬಣ್ಣ ಕಪ್ಪೆಂದು ನಾ ಬಲ್ಲೆನು!
ಬಣ್ಣ ಕಪ್ಪೆಂದು ನಾನೇನು ನಿನ್ನ ನಿಂದಿಸೆನು
ಬಾ ನಿನ್ನ ಮೊಗವ ತೋರು ಕೋಗಿಲೆ!

ಇಳೆಗೆ ತಂಪಾದ ಮಳೆ ಸುರಿಸುವ ಕಾರ್ಮೋಡ ಕಪ್ಪು!
ಸದಾ ನಮ್ಮೊಟ್ಟಿಗಿರುವ ನಮ್ಮ ನೆರಳೇ ಕಪ್ಪು!
ಕಪ್ಪಾದ ಇರುಳಲ್ಲೇ ಬಾನ ತಾರೆಗಳು ಮಿನುಗುವುದು!
ಕಪ್ಪಾದ ಇರುಳಲ್ಲೇ ನೂರಾರು ಕನಸುಗಳು ಮೂಡುವುದು!

ಕೋಗಿಲೆಯೇ ಕೇಳಿಲ್ಲಿ ನಿನ್ನಿಂದ ನಾನೇನನ್ನೂ ಬಯಸೆನು!
ನಿನ್ನ ಕಂಠಸಿರಿಯ ಸವಿಯೊಂದನ್ನು ಬಿಟ್ಟು!
ನೀ ಬಾರದಿದ್ದರೇನೆಂತೆನಗೆ- ನಿನ್ನ ಇಂಪಾದ
ಮಾರ್ದನಿಯನ್ನಾಲಿಸುತಾ ಕೂತು ಮೈಮರೆಯುವೆ!

           – ಯಶವಂತ ಆರ್.
ತುಮಕೂರು ಜಿಲ್ಲೆ


Spread the love
error: Content is protected.