ಅನುಕರಣೆಯ ನಂಟು
©ರಕ್ಷಿತ್ ಕೆ. ಸಿ.
ಜೀವಜಗತ್ತು ಏಕಕೋಶ ಜೀವಿಯಿಂದ ಅಗಣಿತ ಸಂಖ್ಯೆಗೆ ಬೆಳೆದು ನಿಲ್ಲಲು ಪ್ರತಿ ಜೀವಿಯ ಧಾತುವಿನ ವರ್ಗಾವಣೆ ಅಥವಾ ರಕ್ಷಣೆಯ ಹಂಬಲವೇ ಕಾರಣ. ಇದೊಂದು ಉದ್ದೇಶದಿಂದ ಜೀವಿ ಜೀವಿಗಳ ನಡುವೆ ಅರಿಯಲು ಅಸಾಧ್ಯವಾದಂತಹ ನಂಟು, ವೈರುಧ್ಯ, ತಂತ್ರ-ಕುತಂತ್ರ, ಕಲಾಪಗಳ ಜಾಲವೇ ಬೆಳೆದು ನಿಂತಿತು. ಅಸ್ತಿತ್ವ ಹಾಗೂ ಆರೋಗ್ಯಕ್ಕಾಗಿ ಯಾವೆಲ್ಲಾ ಅಸ್ತ್ರ ಪ್ರಯೋಗಗಳು ನಡೆಯಬಹುದಾಗಿತ್ತೋ ಎಲ್ಲವೂ ಸಹ ಪ್ರಕೃತಿ ಪ್ರಯೋಗಾಲಯದಲ್ಲಿ ನಿರಾಯಾಸವಾಗಿ ಬಳಸಲ್ಪಟ್ಟವು. ಅವುಗಳಲ್ಲಿ ಅನುಕರಣಾ ವಿಧಾನವು ಸಹ ಒಂದು ಪ್ರಮುಖ ಅಸ್ತ್ರ. ಈ ಮೂಲಕ ನಮ್ಮ ಸುತ್ತಮುತ್ತಲೇ ಎಷ್ಟೋ ಜೀವಚರಗಳು ಬೆಸೆದುಕೊಂಡು ನಮಗರಿವಿಲ್ಲದಂತೆಯೇ ಬಾಳಿ ಬದುಕುತ್ತಿವೆ.
ವಿಶ್ವದಾದ್ಯಂತ ಹೊಸ ಹೊಸ ತಂತ್ರಜ್ಞಾನಗಳ ಸೃಷ್ಟಿ, ವಸಾಹತುಶಾಹಿ ಪ್ರಭುತ್ವಕ್ಕಾಗಿ ಕಿತ್ತಾಟ, ಹೊಸ ಹೊಸ ಜೀವಸಂಕುಲಗಳ ಅನ್ವೇಷಣೆಯ ಪರ್ವಕಾಲವಾಗಿದ್ದ 19ನೇ ಶತಮಾನದಲ್ಲಿ ಪರಿಸರ ವಿಜ್ಞಾನಿಯೊಬ್ಬ ಇವೆಲ್ಲದರಿಂದ ದೂರದ ಕೌತುಕಗಳ ಖಜಾನೆಯಾದ ದಕ್ಷಿಣ ಅಮೇರಿಕಾದ ಅಮೆಜಾನ್ ಮಳೆಕಾಡುಗಳಲ್ಲಿ ಪರಿಸರ ಅಧ್ಯಯನದ ದಂಡಯಾತ್ರೆಯ ತಪಸ್ಸನ್ನು ಮಾಡುತ್ತಾ, ಸುಮಾರು ಹದಿನಾಲ್ಕು ಸಾವಿರ ಕೀಟಗಳು, ಇತರೆ ಪ್ರಾಣಿಗಳ ಪರಸ್ಪರ ಸಂಬಂಧ, ಪರಿಸರದಲ್ಲಿ ಅವುಗಳ ಪಾತ್ರದ ಕುರಿತು ಅಧ್ಯಯನ ನಡೆಸುತ್ತಿರುತ್ತಾನೆ. ಇವುಗಳ ಅಧ್ಯಯನದ ಸಂದರ್ಭದಲ್ಲಿ ಇಥೊಮೀನೇ (Ithomiinae, Family: Nymphalidae) ಎಂಬ ಉಪಕುಟುಂಬಕ್ಕೆ ಸೇರಿದ ಪತಂಗ ಪ್ರಭೇದವೊಂದು ಆತನನ್ನು ಆಕರ್ಷಿಸುತ್ತದೆ. ಇವು ಅತಿ ನಿಧಾನವಾಗಿ ಹಾರುವ ರೀತಿಯಲ್ಲಿ ವಿಕಸನ ಹೊಂದಿದ್ದು, ಪರಿಸರದಲ್ಲಿ ಹೇರಳವಾಗಿ ಕಂಡು ಬರುತ್ತಿದ್ದರೂ ಕೀಟಭಕ್ಷಕಗಳು ಇವುಗಳೆಡೆಗೇನೂ ವಿಶೇಷ ಆಸಕ್ತಿ ತೋರುತ್ತಿರಲಿಲ್ಲ (ಸೇವಿಸುತ್ತಿರಲಿಲ್ಲ). ಪತಂಗಗಳು ಸೇವಿಸಲಾಗದ ಅಥವಾ ಅಹಿತಕರವಾಗಿ ರುಚಿಸುವ ಜೀವಿಗಳಾದ್ದರಿಂದ ಇವುಗಳನ್ನು ಯಾವುದೇ ಕೀಟಭಕ್ಷಕಗಳು ತಿನ್ನುತ್ತಿಲ್ಲವಿರಬಹುದೆಂದು ಊಹಿಸುತ್ತಾನೆ. ಇವುಗಳ ಅಧ್ಯಯನಕ್ಕೆಂದು ಕೆಲ ಪತಂಗಗಳನ್ನು ಸಂಗ್ರಹಿಸುತ್ತಿದ್ದಂತೆ ಒಂದೇ ರೀತಿಯ ನಡವಳಿಕೆ ಹಂಚಿಕೊಂಡು ಬೇರೆಯ ಕುಟುಂಬಕ್ಕೆ (Family: Pieridae, Subfamily: Dismorphiinae, Genus: Dismorphia) ಸೇರಿದ ಪ್ರಭೇದವೊಂದು ಸಣ್ಣ ಸಂಖ್ಯೆಯಲ್ಲಿ ಇವುಗಳಂತೆಯೇ ವಿಕಸನ ಹೊಂದಿರುವುದನ್ನು ಗಮನಿಸಿ ಅಚ್ಚರಿಗೊಳ್ಳುತ್ತಾನೆ. ಹನ್ನೊಂದು ವರ್ಷಗಳ ಸುದೀರ್ಘ ಅಧ್ಯಯನದ ನಂತರ 1859 ರಲ್ಲಿ ತನ್ನ ತಾಯ್ನಾಡಿಗೆ ಹಿಂದಿರುಗಿದ ಸಂದರ್ಭ ಅಂದರೆ 24/11/1859 ರಲ್ಲಿ ವಿಶ್ವದ ಅಗ್ರಮಾನ್ಯ ಪರಿಸರ ತಜ್ಞ, ಪರಿಸರ ವಿಜ್ಞಾನದಲ್ಲಿ ಊಹಿಸಲಸಾಧ್ಯವಾದ ತಿರುವನ್ನು ಪರಿಚಯಿಸಿಕೊಟ್ಟ ಚಾರ್ಲ್ಸ್ ಡಾರ್ವಿನನು “ಪ್ರಭೇದಗಳ ಉಗಮವೆಂಬ” ವೈಜ್ಞಾನಿಕ ಗ್ರಂಥವನ್ನು ಪ್ರಕಟಿಸುತ್ತಾನೆ ಹಾಗೂ ಭೂಮಂಡಲದ ಮೇಲಿನ ಜೀವಚರಗಳು ಸಾವಿರಾರು ವರ್ಷಗಳ ನಿರಂತರ ಬದಲಾವಣೆ ಹಾಗೂ ವಿಕಾಸದ ಹಾದಿಯಲ್ಲಿ ನೈಸರ್ಗಿಕ ಆಯ್ಕೆಯ ಜರಡಿಯ ಮೂಲಕ ಅಳಿದು, ಉಳಿದು, ಬೆಳೆದು ಸ್ಥಾಪಿತಗೊಂಡಿವೆ ಮತ್ತು ಗೊಳ್ಳುತ್ತಿವೆ ಎಂದು ನೈಸರ್ಗಿಕ ಆಯ್ಕೆಯ ಸಿದ್ಧಾಂತವನ್ನು ಮಂಡಿಸಿ ಪುರಾವೆಗಳನ್ನು ಒದಗಿಸುತ್ತಾನೆ.
ನೈಸರ್ಗಿಕ ಆಯ್ಕೆಯ ಸಿದ್ಧಾಂತವು ಪ್ರಕೃತಿಯ ಹಲವು ವಿದ್ಯಮಾನಗಳಿಗೆ ಒಂದು ಅರ್ಥಪೂರ್ಣ ವಿವರಣೆಯನ್ನು ನೀಡಿದರೂ, ಬೆಟ್ಸ್ ನ ಅವಲೋಕನದ ವಿಚಾರದಲ್ಲಿ ಮೌನ ತಾಳಿತು. ಯಾವ ಪ್ರಯೋಜನಗಳ ಅಕ್ಷಯಪಾತ್ರೆ ಎರಡು ದೂರ ಸಂಬಂಧಿ ಪ್ರಭೇದಗಳು ಒಂದೇ ಹಾದಿಯಲ್ಲಿ ದೇಹರಚನೆ, ಬಣ್ಣ ನಡವಳಿಕೆಯನ್ನು ಹಂಚಿಕೊಂಡು ಒಂದೇ ಆವಾಸಸ್ಥಾನದಲ್ಲಿ ಬದುಕುವಂತೆ ಪ್ರೇರೆಪಿಸಿತು ಎಂಬ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳುವ ಹಾದಿಯಲ್ಲಿ ಸಾಗುತ್ತಿರುವಾಗ ಒಂದನ್ನೊಂದು ಹೋಲದೆ ತದ್ರೂಪಾನುಕರಣೆಯಿಂದ ದೂರ ಉಳಿದ ದಿಸ್ಮೋರ್ಫಿಯ (Dismorphia) ಪ್ರಭೇದದ ಪತಂಗಗಳು ಸುಲಭವಾಗಿ ಕೀಟಭಕ್ಷಕಗಳಿಗೆ ಆಹಾರವಾಗುವ ಅಚ್ಚರಿಯ ವಿದ್ಯಮಾನವನ್ನು ಗಮನಿಸುತ್ತಾನೆ. ಅಲ್ಲದೆ ಇಥೊಮೀನೇ (Ithomiinae) ಪ್ರಭೇದವನ್ನು ಹೋಲದ ಡಿಸ್ಮೋರ್ಫಿಯಾ (Dismorphia) ಪ್ರಭೇದದ ಪತಂಗಗಳು ಸಮರ್ಥ ರೀತಿಯಲ್ಲಿ ಹಾರುವ ಶಕ್ತಿಯನ್ನು ಪಡೆದುಕೊಂಡಿದ್ದವು, ಡಿಸ್ಮೋರ್ಫಿಯಾ (Dismorphia) ಪ್ರಭೇದದ ಕುಟುಂಬವಾದ ಪಿರಿಡೇ ಕುಟುಂಬದ (Family: Pieridae) ಇತರೆ ಪ್ರಭೇದಗಳು ಸಹ ಮೇಲಿಂದ ಮೇಲೆ ಕೀಟಭಕ್ಷಕಗಳ ಆಕ್ರಮಣಕ್ಕೆ ಸಿಲುಕಿ ಆಹಾರವಾಗುತಿದ್ದವು. ಈ ಹಿನ್ನೆಲೆಯ ಅವಲೋಕನಗಳ ಮೇರೆಗೆ ಡಿಸ್ಮೋರ್ಫಿಯಾ ಪ್ರಭೇದವು ಕೀಟಭಕ್ಷಕಗಳಿಗೆ ರುಚಿಸದ ಜೀವಿಗಳೇನು ಅಲ್ಲವೆಂಬ ತೀರ್ಮಾನಕ್ಕೆ ಬರಲಾಯಿತು. ಈ ರೀತಿಯ ವಿಕಾಸ ಪಥವು ಪರಭಕ್ಷಕಗಳ ಆಯ್ಕೆ ಎಂದರೆ ಪರಭಕ್ಷಕಗಳಿಗೆ ರುಚಿಸುವ ಪ್ರಭೇದವು ರುಚಿಸದ ಅಥವಾ ಲಾಭಾದಾಯಕವಲ್ಲದ ಪ್ರಭೇದವನ್ನು ಹೋಲುವಂತೆ ವಿಕಸನ ಹೊಂದುತ್ತ ರಕ್ಷಣೆ ಪಡೆದುಕೊಳ್ಳುವುದು.
ಯಾವುದೇ ಪರಭಕ್ಷಕವು ಅಹಿತಕರ ರುಚಿಯ ಇಥೊಮೀನೇ ಪ್ರಭೇದದ ಸೇವನೆಯ ಅನುಭವದ ನಂತರದಲ್ಲಿ ಡಿಸ್ಮೋರ್ಫಿಯಾ ಪ್ರಭೇದದ ಪತಂಗಗಳ ಸೇವನೆಯಿಂದಲೂ ದೂರ ಉಳಿಯಲು ಪ್ರಯತ್ನಿಸುತ್ತದೆ. ಈ ರೀತಿಯ ವಿದ್ಯಮಾನವು ಹೆಚ್ಚಿನ ಅನುಕರಣೆಯ ಉದಾಹರಣೆಗಳಲ್ಲಿ ಸಾಮಾನ್ಯವಾಗಿ ಕಾಣಬಹುದು. ಇಲ್ಲಿ ಅನುಕರಿಸುವ ಪ್ರಭೇದಕ್ಕೆ ಸ್ವತಃ ಯಾವುದೇ ಸ್ವಯಂ ರಕ್ಷಣಾಸ್ತ್ರಗಳು ಇಲ್ಲದಿದ್ದರೂ ತನಗಿರುವ ಅಪಾಯಗಳ ವಿರುದ್ಧವಾಗಿ ಹೆಚ್ಚಿನ ರಕ್ಷಣೆ ಹಾಗೂ ಬದುಕುಳಿಯುವ ಅವಕಾಶವನ್ನು ಪಡೆದುಕೊಳ್ಳುತ್ತದೆ. ಈ ತರನಾದ ಅನುಕರಣಾ ವಿದ್ಯಮಾನವನ್ನು ಪರಿಚಯಿಸಿ ಪರಿಸರ ಅಧ್ಯಯನ ಕ್ಷೇತ್ರಕ್ಕೆ ಹೆನ್ರಿ ವಾಲ್ಟೇರ್ ಬೆಟ್ಸ್ ನೀಡಿದ ಕೊಡುಗೆಯನ್ನು ಗೌರವಿಸಿ ಈ ವಿದ್ಯಮಾನಕ್ಕೆ ಬೆಟ್ಸಿಯನ್ ಮಿಮಿಕ್ರಿ ಎಂದು ನಾಮಕರಣ ಮಾಡಲಾಯಿತು. ಅಲ್ಲದೆ ಇದು ನೈಸರ್ಗಿಕ ಆಯ್ಕೆಯ ಪ್ರಧಾನ ವಿಧಾನವೆಂದು ಪರಿಗಣಿಸಿ ಡಾರ್ವಿನ್ನನ ಪ್ರಭೇದಗಳ ಉಗಮದ ನಂತರದ ಆವೃತ್ತಿಗಳಲ್ಲಿ ಸೇರಿಸಲಾಯಿತು. ನಂತರದ ಕಾಲಘಟ್ಟದಲ್ಲಿ ಮುಲ್ಲೇರಿಯನ್ ಅನುಕರಣೆ (Muellerian mimicry) ಹಾಗು ಸ್ವ-ಅನುಕರಣೆ (Self-mimicry) ಎಂಬ ಮತ್ತೆರಡು ಹೊಸ ವಿಧದ ಅನುಕರಣ ವಿಧಾನವನ್ನೂ ಅನ್ವೇಷಿಸಲಾಯಿತು.
ಅನುಕರಣೆಯು ದೇಹರಚನೆ ಅಥವಾ ಬಣ್ಣಕ್ಕಷ್ಟೇ ಸೀಮಿತವಲ್ಲ. ಈ ಸಂಬಂಧ ನಡವಳಿಕೆ, ಕೂಗು, ಫೆರೋಮೋನಲ್ಲಿಯೂ ಗಮನಿಸಬಹುದು. ದಕ್ಷಿಣ ಅಮೇರಿಕಾದ ಸಿನೇರಿಯಸ್ ಮೋರ್ನೆರ್ (Cinereous mourner) ಪಕ್ಷಿಯ ಮರಿಗಳು ಕಂಬಳಿಹುಳಗಳ ದೇಹದ ಮೇಲಿನ ವಿಷಕಾರಿ ಚುಂಗಿನ ರೀತಿಯ ರಚನೆಯನ್ನು ಹೊಂದಿದ್ದು, ಗೂಡಿನಲ್ಲಿ ಕಂಬಳಿಹುಳಗಳಂತೆ ನಿಧಾನವಾಗಿ ಚಲನವಲನವನ್ನು ಅನುಕರಿಸುವುದನ್ನೂ, ಬಿಲವಾಸಿ ಗೂಬೆಗಳು, ನರಿ, ಕತ್ತೆಕಿರುಬಗಳಿಂದ ರಕ್ಷಣೆಗೆಂದು ಹಪ್ರೆ ಹಾವುಗಳ ಎಚ್ಚರಿಕೆಯ ಧ್ವನಿಯನ್ನು ಅನುಸರಿಸುವುದನ್ನೂ ಕಾಣಬಹುದು.
ಹಲವು ಬಾರಿ ಅನುಕರಣೆ (Mimicry) ಮತ್ತು ಛದ್ಮವೇಷ (Camouflage) ಎರಡೂ ವಿದ್ಯಮಾನಗಳನ್ನು ಒಂದೇ ಅರ್ಥದಲ್ಲಿ ಬಳಸಲಾಗುತ್ತದೆ. ಛದ್ಮವೇಷ ಪರಭಕ್ಷಕಗಳ ಕಣ್ಣಿಗೆ ಕಾಣದ ಹಾಗೆ ಪ್ರಕೃತಿಯ ನೈಸರ್ಗಿಕ ಬಣ್ಣದಲ್ಲಿ ಬೆರೆತುಕೊಳ್ಳುವುದು. ಎಲೆ ಹುಳು (Pulchriphyllium bioculatum), ಒಣಗಿದ ಕೋಲನ್ನು ಹೋಲುವ ಕಂಬಳಿಹುಳು ಛದ್ಮವೇಷಕ್ಕೆ ಕೆಲ ಉದಾಹರಣೆ. ಆಫ್ರಿಕಾದ ಸವನ್ನಾ ಹುಲ್ಲುಗಾವಲುಗಳ ಚಕ್ರಾಧಿಪತಿಯಾದ ಸಿವಂಗಿಗಳಲ್ಲಿ (Acinonyx jubatus) ಅನುಕರಣೆ ಹಾಗು ಛದ್ಮವೇಷದ ಸಮಾಗಮವನ್ನು ಗಮನಿಸಬಹುದು. ದೇಹದ ವರ್ಣ ಸಂಯೋಜನೆ ಬೇಟೆಯಾಡಲು ಸಹಕಾರಿಯಾಗುವ ರೀತಿ ಒಣಹುಲ್ಲಿನ ಬಣ್ಣದೊಂದಿಗೆ ಬೆರೆಯುವಂತಿರುತ್ತದೆ. ಇದನ್ನು ಛದ್ಮವೇಷವೆನ್ನಬಹುದು. ಇವುಗಳ ಮರಿಗಳು ಇತರೆ ಬೇಟೆ ಪ್ರಾಣಿಗಳ ಆಕ್ರಮಣಕ್ಕೆ ತುತ್ತಾಗುವ ಸಾಧ್ಯತೆ ಇದ್ದೇ ಇರುತ್ತದೆ. ಇದರಿಂದ ಬಚಾವಾಗಲು ಅದಮ್ಯ ಧೈರ್ಯಶಾಲಿಗಳೂ, ಆಕ್ರಮಣ ಸ್ವಭಾವದ ಸಿಂಹ, ಚಿರತೆ, ಕತ್ತೆಕಿರುಬಗಳೊಂದಿಗೂ ಕಾದಾಟಕ್ಕೆ ಇಳಿಯುವ ಸಣ್ಣಗಾತ್ರದ ಜೀವಿಯಾದ ಜೇನ್ ಹೀರ್ಕ (ಹನಿ ಬ್ಯಾಡ್ಜರ್) ನಂತೆ ದೇಹದ ವರ್ಣರಚನೆಯ ಚಿರತೆಯ ಮರಿಗಳಿರುವುದು ಅನುಕರಣೆ. ಈ ಅಳವಡಿಕೆಗಳ ಅಸ್ತಿತ್ವಕ್ಕಾಗಿ ಹೋರಾಟದ ಹಾದಿಯಲ್ಲಿನ ಕೊಡುಗೆ ಊಹಾತೀತ.
ಭೂಮಿಯ ಮೇಲೆ ಅಂಟಾರ್ಟಿಕಾ ಖಂಡವನ್ನು ಹೊರತುಪಡಿಸಿ ಉಳಿದೆಲ್ಲಾ ಕಡೆಯಲ್ಲಿ ಇರುವೆಗಳು ಕಂಡುಬರುತ್ತವೆ. ಭೂಮಿಯ ಮೇಲಿನ ಜೀವಲೋಕದ ಶೇ. 15-25% ಜೀವರಾಶಿಯ (ಬಯೋಮಾಸ್) ಬೃಹತ್ ಪಾಲು ಇರುವೆಗಳದ್ದೇ. ಅಕಸ್ಮಾತ್ ಇರುವೆಗಳೆಲ್ಲ ನೇರವಾಗಿ ಒಂದರ ಹಿಂದೆ ಒಂದರಂತೆ ಹೊರಟರೆ ಭೂಮಿಯಿಂದ ನಮ್ಮ ಸೌರಮಂಡಲದ ಕೊನೆಯ ಗ್ರಹದವರೆಗೂ ನಿರಂತರ ಹಾದಿಯನ್ನು ನಿರ್ಮಿಸಬಹುದು. ಇಷ್ಟೊಂದು ಹೇರಳವಾಗಿರುವ ಇರುವೆಗಳ ನಡುವೆ ಇತರೆ ಜೀವಿಗಳು ಕೀಟಭಕ್ಷಕಗಳ ಕಾಟದಿಂದ ತಲೆಮರೆಸಿಕೊಳ್ಳಲು ಇವುಗಳಂತೆಯೇ ವಿಕಾಸಹೊಂದಿ ಪ್ರಯತ್ನಿಸದಿರುವುದು ಸಾಧ್ಯವೇ? ಚಗಳಿ ಅಥವಾ ಕೆಂದಗಿ ಇರುವೆಗಳನ್ನು ನಾವೆಲ್ಲರೂ ಸಾಮಾನ್ಯವಾಗಿ ನೋಡಿರುತ್ತೇವೆ. ಪಶ್ಚಿಮಘಟ್ಟದವರಾಗಿದ್ದರೆ ಜ್ವರ-ಗಿರ ಬರುವುದಿಲ್ಲ ಅಂತ ಹೇಳಿ ಮನೆಗಳಲ್ಲಿ ಚಗಳಿ ಚಟ್ನಿಯನ್ನು ತಿನ್ನಿಸಿರಲೂಬಹುದು. ಪರಿಸರ ವಿಜ್ಞಾನದಲ್ಲಿ ಇವುಗಳು ತಮ್ಮ ಪರಸ್ಪರ ಸಹಕಾರಯುತ ವ್ಯವಸ್ಥಿತ ಕೆಲಸಕ್ಕಾಗಿ, ಧೈರ್ಯ ಹಾಗೂ ಆಕ್ರಮಣಶೀಲ ನಡತೆಗಾಗಿ ಚಿರಪರಿಚಿತ. ಆದ್ದರಿಂದ ಹಲವಾರು ಕೀಟಭಕ್ಷಕ ಜೀವಿಗಳು ಇವುಗಳ ಸಹವಾಸವೇ ಬೇಡವೆಂದು ತಿನ್ನುವ ಸಾಹಸಕ್ಕೆ ಹೋಗುವುದಿಲ್ಲ. ಹಾರುವ ಜೇಡಗಳು (Myrmarachne plataleoides) ತಮ್ಮ ಭಕ್ಷಕ ಜೀವಿಗಳಿಂದ ರಕ್ಷಿಸಿಕೊಳ್ಳಲು ಚಗಳಿ ಇರುವೆಯ ರೀತಿ ವಿಕಸನ ಗೊಂಡಿರುವುದನ್ನು ಕಾಣಬಹುದು. ಈ ಛದ್ಮವೇಷಧಾರಿ ತಮ್ಮ ಬಾಹ್ಯ ಭೌತಿಕ ಸ್ವರೂಪವನ್ನು ಎರವಲಾಗಿ ಪಡೆದ ಚಗಳಿಗಳನ್ನೇ ಭಕ್ಷಿಸುತ್ತಿರುವುದನ್ನು ಹಾಗೂ ಚಗಳಿ ಇರುವೆಗಳು ಈ ಜೇಡಗಳ ಹತ್ಯೆ ಮಾಡುತ್ತಿರುವುದನ್ನು ಹಲವು ಬಾರಿ ದಾಖಲಿಸಿಕೊಳ್ಳಲಾಗಿದೆ.
ಪಕ್ಷಿ ಲೋಕದಲ್ಲಿ ಧ್ವನಿ ಅನುಕರಣೆಯ ಕುರಿತು ಯೋಚಿಸುವಾಗ ಮೊದಲು ನೆನಪಿಗೆ ಬರುವುದು ಗಿಳಿಗಳು. ಮಾನವರ ಮಾತುಗಳನ್ನು ಅನುಕರಿಸುವುದು. ಆದರೆ ಗಿಳಿಗಳ ಅನುಕರಣೆ ನೈಸರ್ಗಿಕವಾದಂತಹ ಕ್ರಿಯೆಯಲ್ಲ. ತನ್ನ ಸುತ್ತಮುತ್ತ ಎಲ್ಲೆಡೆ ಮನುಷ್ಯರೇ ತುಂಬಿರುವುದರಿಂದ ಆಲಿಸುವ ಶಬ್ಧವನ್ನು ಅನುಕರಿಸುತ್ತದೆಯೇ ಹೊರತು, ಅರಣ್ಯದಲ್ಲಿನ ಗಿಳಿಗಳು ಎಂದಿಗೂ ಮಾನವನ ಮಾತುಗಳನ್ನು ಅನುಕರಿಸುವುದಿಲ್ಲ. ನೈಸರ್ಗಿಕವಾಗಿ ವನ್ಯಜೀವಿಗಳು ಇನ್ನೊಂದು ಜೀವಿಯ ಕೂಗನ್ನು ಅನುಕರಿಸಲು ಪ್ರಮುಖ ಕಾರಣ, ತನ್ನ ಅಹಾರಗಳಿಕೆಗಾಗಿ ಅಥವಾ ಧಾತುವಿನ ವರ್ಗಾವಣೆಗಾಗಿ ಸಹಭಾಗಿಯನ್ನು ಗಿಟ್ಟಿಸಿಕೊಳ್ಳುವುದಕ್ಕಾಗಿ (ಸಹಭಾಗಿಯನ್ನು ಗಿಟ್ಟಿಸಿಕೊಳ್ಳುವ ಉದ್ದೇಶದಿಂದಲೇ ಬ್ರೆಜಿಲ್ ನಲ್ಲಿ ಕಂಡುಬರುವ ಮ್ಯನಕಿನ್ (Manakin) ಗುಂಪಿಗೆ ಸೇರಿದ ಪಕ್ಷಿಗಳು ಒಂದು ಗಂಡು ಪಕ್ಷಿಯ ನಾಯಕತ್ವದಲ್ಲಿ ಹೆಣ್ಣು ಪಕ್ಷಿಯ ಎದುರು ಗುಂಪು ನೃತ್ಯ, ಬ್ಯಕ್ಫ್ಲಿಪ್ ಗಳ ಪ್ರದರ್ಶನ ಆಶ್ಚರ್ಯಕರ). ದಕ್ಷಿಣ ಹಾಗೂ ಮಧ್ಯ ಆಫ್ರಿಕಾದಲ್ಲಿ ಕಂಡುಬರುವ ಕವಲು ಬಾಲದ ಕಾಜಾಣ (Fork tailed drongo) ಪಕ್ಷಿಗಳು ಈ ಧ್ವನಿ ಅನುಕರಣೆಯ ಸಾಮರ್ಥ್ಯವನ್ನು ತಂತ್ರವಾಗಿ ಪರಿವರ್ತಿಸಿಕೂಂಡು, ಆಹಾರವನ್ನು ಸಂಪಾದಿಸಿ ಸೇವಿಸುತ್ತಿರುವ ಪಕ್ಷಿಯ ಎದುರಾಳಿಯ ಕೂಗನ್ನು ಅಣಕಿಸಿದಾಗ ಆಹಾರವನ್ನು ಸೇವಿಸುತ್ತಿದ್ದ ಪಕ್ಷಿಯು ತನ್ನ ಪ್ರಾಣಕ್ಕೆ ಆದ್ಯತೆ ನೀಡಿ ಕಾಲಿಗೆ ಬುದ್ಧಿ ಹೇಳುತ್ತದೆ. ಈ ಸದಾವಕಾಶವನ್ನು ಬಳಸಿಕೊಂಡ ಕಾಜಾಣ ಪಕ್ಷಿಗಳು ನಿರಾಯಾಸವಾಗಿ ದಕ್ಕಿದ ಭೋಜನದ ಔತಣಕೂಟವನ್ನು ನಡೆಸುತ್ತವೆ.
ಧ್ವನಿ ಅನುಕರಣೆಯ ಸಾಧನೆಯ ಮೈಲಿಗಲ್ಲನ್ನು ಮುಟ್ಟಿದ ಪಕ್ಷಿಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಭಾಗದ ಲೈರ್ ಬರ್ಡ್ (Lyrebird) ಅಗ್ರಮಾನ್ಯ (ಲೈರ್ ಪುರಾತನ ಗ್ರೀಕ್ ಪರಂಪರೆಯಲ್ಲಿ ಬಳಸಲಾಗುತ್ತಿದ್ದ ಒಂದು ತಂತಿವಾದ್ಯ). ಈ ಪಕ್ಷಿಯ ಬಾಲವು ತಂತಿವಾದ್ಯದ ಆಕಾರವನ್ನು ಹೋಲುವುದರಿಂದ ಲೈರ್ ಬರ್ಡ್ ಎಂದು ನಾಮಕರಣಗೊಂಡಿರಬಹುದು. ಈ ಪಕ್ಷಿಯ ಹೆಗ್ಗಳಿಕೆ ಎಂದರೆ ನೃತ್ಯವನ್ನು ಪ್ರದರ್ಶಿಸುತ್ತಾ ಒಂದೇ ಉಸಿರಿನಲ್ಲಿ ನಿರಂತರವಾಗಿ ಸುಮಾರು 20 ವಿಧದ ಅನ್ಯ ಶಬ್ಧಗಳನ್ನು ಅನುಕರಿಸಬಲ್ಲದು. ಅನುಕರಣೆಯ ವಿಧ ಹಾಗೂ ನಿಖರತೆ ಹೆಚ್ಚಿದಷ್ಟೂ ಸಂಗಾತಿಯನ್ನು ಗಿಟ್ಟಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಗಂಡು ಪಕ್ಷಿಗಳು ಹಲವು ವನ್ಯಜೀವಿಗಳ ಕೂಗಿನ ಜೊತೆಗೆ ನಾಯಿ ಬೊಗಳುವ ಕೂಗು, ಹಸುಳೆಯ ಅಳು, ಕ್ಯಾಮೆರಾದಲ್ಲಿ ಫೋಟೋ ಕ್ಲಿಕ್ಕಿಸುವುದು, ಗರಗಸದಿಂದ ಮರ ಕೊಯ್ಯುವ ಶಬ್ಧಗಳನ್ನೂ ಸಹ ಅನುಕರಿಸುತ್ತವೆ. ಕೇವಲ ಗಂಡು ಲೈರ್ ಬರ್ಡ್ ಮಾತ್ರವಲ್ಲದೆ ಹೆಣ್ಣು ಪಕ್ಷಿಗಳೂ ಸಹ ಅಪಾಯದ ಸಂದರ್ಭದಲ್ಲಿ ಇತರೆ ಸಂಘ ಹಾಗೂ ಆಕ್ರಮಣಕಾರಿ ಜೀವಿಗಳ ಧ್ವನಿ ಅನುಕರಿಸಿ ಅಪಾಯದಿಂದ ಪಾರಾದ ನಿದರ್ಶನ ಸಹ ಇದೆ. ಹೀಗೆ ಅಚ್ಚರಿಯ ರೀತಿಯಲ್ಲಿ ಕೂಗನ್ನು ಅಣಕಿಸುವ ಈ ಪಕ್ಷಿಗೆ ತನ್ನ ವೈಯಕ್ತಿಕ ಕಂಠವೆಂದು ಯಾವುದೂ ಇಲ್ಲದಿರುವುದು ವಿಪರ್ಯಾಸ.
ಈ ರೀತಿಯ ವಿಚಿತ್ರಗಳು ಎಲ್ಲೋ ದೂರದ ಆಸ್ಟ್ರೇಲಿಯಾ, ಆಫ್ರಿಕಾದಲ್ಲಿ ಮಾತ್ರ ನಡೆಯುವುದೆಂದೇನಲ್ಲ. ನಮ್ಮ ಕಣ್ಣೆದುರಿಗೇ ಎಷ್ಟೋ ಈ ರೀತಿಯ ವಿದ್ಯಮಾನಗಳು ಜರುಗಿದ್ದರೂ ಆ ಕುರಿತು ಲಕ್ಷ್ಯವನ್ನು ನೀಡದ ಕಾರಣ ಆ ಸನ್ನಿವೇಶವನ್ನು ಸ್ಮೃತಿಪಟಲದಲ್ಲಿ ಚಿತ್ರಿಸಿಕೊಳ್ಳುವುದು ಕೊಂಚ ಕಷ್ಟವಾಗಬಹುದು. ಕುವೆಂಪುರವರ ಕಾಜಾಣದ ಕುರಿತ ಕವಿತೆಯಲ್ಲಿ ಕಾಜಾಣವನ್ನು ವರ್ಣಿಸುತ್ತಾ, ವೈವಿಧ್ಯಮಯ ಕಂಠದ ಸೊಬಗಿನ ಬಗ್ಗೆ ವಿವರಿಸುತ್ತಾರೆ. ಇದೇ ಕಾಜಾಣದ ಬೆನ್ನುಹತ್ತಿದ ಪಕ್ಷಿತಜ್ಞರು ಆಸಕ್ತಿಕರ ವಿಚಾರಗಳನ್ನು ಬೆಳಕಿಗೆ ತರುತ್ತಾರೆ. ಈ ಪಕ್ಷಿಯ ಸ್ವಂತ ಸೊಬಗಿನ ಇಂಚರದ ಜೊತೆ ಜೊತೆಗೆ ಸುಮಾರು 40 ಪಕ್ಷಿ, 3 ಪ್ರಾಣಿ, 2 ಕಪ್ಪೆ ಹಾಗೂ ಕೆಲ ಕೀಟಗಳ ವೈವಿಧ್ಯಮಯ ಕೂಗುಗಳನ್ನು ಅಣಕಿಸುವ ವಿಶೇಷ ಕಲೆಯನ್ನು ಕರಗತಗೊಳಿಸಿಕೊಂಡಿದೆ. ಈ ಕಲೆಯ ಶಸ್ತ್ರಪ್ರಯೋಗ ಸಾಮಾನ್ಯವಾಗಿ ಅಪಾಯದ ಸಂದರ್ಭದಲ್ಲಿ, ತನ್ನ ಸೀಮೆಯ ಎಲ್ಲೆಯನ್ನು ಗುರುತಿಸಲು, ಮುಂತಾದ ನಿರ್ದಿಷ್ಟ ಸನ್ನಿವೇಶದಲ್ಲಿ ಮಾತ್ರ ಪ್ರಯೋಗಿಸಲ್ಪಡುತ್ತದೆ. ವಿಶೇಷವಾಗಿ ಪಕ್ಷಿಗಳು ಆಹಾರಕ್ಕಾಗಿ ಮಿಶ್ರಗುಂಪುಗಳ ದಂಡಯಾತ್ರೆಯನ್ನು ಹೊರಟಾಗಲೂ ಕೂಗುಗಳ ಅಣಕಿಸುವ ಪ್ರಯೋಗ ನಡೆಯುತ್ತದೆ. ಮಿಶ್ರ ಗುಂಪುಗಳ ಬೇಟೆಯಲ್ಲಿ ಕಾಜಾಣಗಳು ಸಾಮಾನ್ಯವಾಗಿ ಎಂದಿಗೂ ಅವಕಾಶ ತಪ್ಪಿಸಿಕೊಳ್ಳದ ಸ್ಪರ್ಧಾರ್ಥಿಗಳು. ಕೂಗಿನ ಅನುಕರಣೆಯು ಇತರೆ ಪಕ್ಷಿಗಳೊಂದಿಗೆ ಬಾಂಧವ್ಯ ಬೆಳೆಸುವಸಲುವಾಗಿ ಬಳಸಲ್ಪಟ್ಟಿರಬಹುದೇನೋ?
ಪರಿಸರದಲ್ಲಿ ಯಾವುದೇ ಜೀವಿಯೂ ಪ್ರಜ್ಞಾಪೂರ್ವಕವಾಗಿ ಅನುಕರಣೆಯನ್ನು ಮಾಡುವುದಿಲ್ಲ. ಅನುಕರಣೆ ಎನ್ನುವುದು ಪ್ರಕೃತಿಯ ಪ್ರಯೋಗಾಲಯದಲ್ಲಿ ವಿಕಾಸದ ತಕ್ಕಡಿಯಲ್ಲಿ “ಅಸ್ತಿತ್ವಕ್ಕಾಗಿ ಹೋರಾಟ” ವೆಂಬ ಸಾವಿರಾರು ವರ್ಷದ ಪ್ರಯೋಗದಲ್ಲಿ ಅಳಿದು, ಉಳಿದು, ಬೆಳೆದು ಬಂದಿರುವುದು. ಪ್ರಕೃತಿಯ ಈ ಪ್ರಯೋಗವು ಚಿರಂತನ, ನಿತ್ಯ ನಿರಂತರ, ಅನಂತ.
ಜೀವಜಗತ್ತಿನ ಸಾಗರದಲ್ಲಿ ಮೊಗೆದಷ್ಟೂ ಕೌತುಕಗಳು ಉತ್ಪತ್ತಿಯಾಗುತ್ತವೆ. ಆದರೆ ಆ ಸಾಗರದ ಅಸ್ತಿತ್ವವನ್ನೇ ರಕ್ಷಿಸುವ ದಯನೀಯ ಸ್ಥಿತಿಗೆ ತಲುಪಿಸಿರುವುದು ಮನುಜನ ವಿಕಾಸ ಯಾ(ಜಾ?)ತ್ರೆ ಅನಂತ ಆಕಾಂಕ್ಷೆಗಳ ಯುಕ್ತಿಯೋ ಅಥವಾ ಕುಯುಕ್ತಿಯೋ ಎಂಬ ಯಕ್ಷಪ್ರಶ್ನೆಯ ಮಜಲಿನಲ್ಲಿ ಅಂತ್ಯಗೊಳ್ಳುತ್ತದೆ.
ಲೇಖನ: ರಜತ್ ಕುಮಾರ್
ಚಿಕ್ಕಮಗಳೂರು ಜಿಲ್ಲೆ.