ಇರುವೆಯೋ? ಜೇಡವೋ?

ಇರುವೆಯೋ? ಜೇಡವೋ?

©ವಿನಯ್ ಎನ್.

ಅವತ್ತು ಬೇಸಿಗೆಯ ಒಂದೊಳ್ಳೆ ಶುಭ್ರವಾದ ದಿನ! ಅದರ ಹಿಂದಿನ ರಾತ್ರಿಯಿಡೀ ಮಳೆ ಧೋ… ಎಂದು ಸುರಿದಿತ್ತು. ಇಂಥ ಮಳೆಯ ಮರುದಿನದ ಹಗಲನ್ನು ನೋಡುವುದೇ ಒಂದು ಸೊಗಸು! ಹೂವಿನ ಮರಗಳ ಕೆಳಗೆ ಹೂವಿನ ಹಾಸಿಗೆಯೇ ಸೃಷ್ಟಿಯಾದರೆ, ಮಾವಿನ ಮರದ ಕೆಳಗೆ ಅಸಂಖ್ಯಾತ ಹಣ್ಣಿನ ರಾಶಿ! ಅಲ್ಲದೆ ಇದರ ಸೊಗಸನ್ನು ಸವಿಯಲು ಪಕ್ಷಿ ಮತ್ತು ಕೀಟಗಳ ಸಮೂಹ. ಚಿಕ್ಕಂದಿನಿಂದಲೂ ಇಂತಹ ದಿನಗಳಿಗಾಗಿ ಕಾಯುತ್ತಿದ್ದೆ. ಇಂತಹ ಅಭೂತಪೂರ್ವ ದಿನದ ರುಚಿಯನ್ನು ನನ್ನ ಮಗನಿಗೂ ತೋರಿಸುವ ಆಸೆ. ಅದಕ್ಕಾಗಿಯೇ ಅವತ್ತು ಅವನನ್ನು ಬೇಗ ಎಬ್ಬಿಸಿ ರಾತ್ರಿ ಮಳೆಯ ವರ್ಣನೆಯನ್ನು ಅವನ ಭಾಷೆಯಲ್ಲಿ ವಿವರಿಸಿ (ತುಸು ಹೆಚ್ಚಾಗಿಯೇ ವರ್ಣಿಸಿ!) ಉದ್ಯಾನವನದ ಕೀಲಿ ತೆಗೆಯುವಷ್ಟರಲ್ಲಿ ಹಾಜರಾಗಿಬಿಟ್ಟೆವು. ಚಿಕ್ಕ ಚಿಕ್ಕ ತಗ್ಗಿನಲ್ಲಿ ನಿಂತ ನೀರು, ಇರುವೆಗಳು ಮಣ್ಣು ತಂದಿಡುವ ನಿರಂತರ ಕೆಲಸ, ನೀರಿನಲ್ಲಿ ತೇಲುತ್ತಿರುವ ಹಾತೆಗಳ ಅಸಂಖ್ಯ ರೆಕ್ಕೆಗಳು, ಕದಂಬ ಮರದಡಿಯಲ್ಲಿ ಬಿದ್ದ ಚಿಕ್ಕ ಚಿಕ್ಕ ಚೆಂಡಿನಂತಹ ಹೂಗಳ ರಾಶಿ, ಮುರಿದು ಬಿದ್ದ ಅಪರಿಮಿತ ಟೊಂಗೆಗಳು ಮಳೆಯ ಭೀಕರತೆಯನ್ನು ಸೂಚಿಸುತ್ತಿದ್ದವು! ಇದನ್ನೆಲ್ಲಾ ನೋಡಿ ಸವಿಯುವಷ್ಟರಲ್ಲಿ ಒಂದು ಗಂಟೆ ಸರಿದಿದ್ದೇ ತಿಳಿಯಲಿಲ್ಲ. ಬೆಳಗಿನ ವಾಯುವಿಹಾರಕ್ಕೆ ಎಂದು ಬರುತ್ತಿದ್ದ ಜನರ ವಿಚಿತ್ರ ದೃಷ್ಟಿಗಳು ನಮ್ಮನ್ನು ತಿವಿಯುತ್ತಿದ್ದವು! ಅಷ್ಟರಲ್ಲೇ ಒಬ್ಬ ಮಹಿಳೆ “ಏನಮ್ಮಾ, 3-4 ವರ್ಷದ ಮಗುವನ್ನು ಯಾರಾದರೂ ಹೀಗೆ ಗಿಡದ ಬುಡಕ್ಕೆ ಬಿಡ್ತಾರಾ? ನೋಡು, ಅವನ ಕೈಯೆಲ್ಲಾ ಮಣ್ಣಾಗಿದೆ. ಒಳ್ಳೆಯ ನಾಗರಿಕರಂತೆ ಕಾಣಿಸುತ್ತೀರಿ ಅವನಿಗೇಕೆ ಕಟ್ಟಿಗೆ ಆರಿಸಲು ಬಿಟ್ಟಿದ್ದೀರ?” ಎಂದು ಕೇಳಿಯೇಬಿಟ್ಟರು. ಅವರ ಪ್ರಶ್ನೆಗೆ ಹೇಗೆ ಉತ್ತರಿಸುವುದೆಂದು ತಿಳಿಯದೆ ಸುಮ್ಮನೆ ಹಲ್ಲು ಕಿರಿದು ಅಲ್ಲಿಂದ ಪಲಾಯನಗೈದೆವು.

© ಶ್ರದ್ಧಾ ಕುಮಾರಿ ಕೆ.

ಜಾರು ಬಂಡೆಯ ಮೇಲೆ ಇನ್ನೂ ಮಳೆ ಹನಿಗಳು ಒಣಗಿರಲಿಲ್ಲ. ಅವುಗಳ ಮುತ್ತಿನ ಸರವನ್ನು ನನ್ನ ಮಗ ತನ್ನ ಪುಟ್ಟ ಮೃದು ಕೈಗಳಿಂದ ಜಾರಿಸಿ ಬೀಳಿಸಿ ನಗುತ್ತ ಅಲೌಕಿಕ ಸುಖವನ್ನು ಪಡೆಯುತ್ತಿದ್ದ. ಅಷ್ಟರಲ್ಲೇ “ಅವ್ವಾ! ನೋಡಿಲ್ಲಿ! ಆ ಇರುವೆ ನನಗಿಂತ ಮೊದಲು ಜಾರುಬಂಡೆ ಏರುತ್ತಿದೆ. ನಾನು ಮೊದಲು ಏರಬೇಕು!” ಎಂದವನೇ ಅದನ್ನು ಎತ್ತಿ ನೆಲಕ್ಕೆ ಎಸೆಯಲು ಪ್ರಯತ್ನಿಸಿದ. ಅಷ್ಟೇ; ಅದು ಉಳಿದ ಇರುವೆಗಳಂತೆ ನೆಲಕ್ಕೆ ಅಪ್ಪಳಿಸದೆ ಸುಯ್ ಎಂದು ಜೇಡಗಳಂತೆ ಎಳೆಯ ಮೂಲಕ ಭೂಮಿಗೆ ನಿಧಾನವಾಗಿ ಕೆಳಗಿಳಿಯಿತು! ನನ್ನ ಮಗ ಹಾಗು ನಾನು ಒಮ್ಮೆಲೇ ಆಶ್ಚರ್ಯದಿಂದ ಒಬ್ಬರ ಮುಖ ಒಬ್ಬರು ನೋಡಿಕೊಂಡೆವು! ಒಂದು ಕ್ಷಣದೊಳಗೆ ಏನು ನಡೆಯಿತೆಂದೇ ಅರ್ಥವಾಗಲಿಲ್ಲ! ನನ್ನ ಮಗ ಅದನ್ನು ಹಿಂಬಾಲಿಸತೊಡಗಿದ (ನನಗಿಂತ ಮೊದಲೇ!) ನಾನು ಅವರಿಬ್ಬರನ್ನು ಹಿಂಬಾಲಿಸಿದೆ. ಇರುವೆ ನೋಡಲು ಕಿತ್ತಳೆ ಬಣ್ಣ ಮಿಶ್ರಿತ ಕೆಂಪಾಗಿತ್ತು. ಉದ್ದುದ್ದ ಕಾಲುಗಳಿದ್ದವು. ಅದರ ಪೂರ್ತಿ ದೇಹ ಸ್ವಲ್ಪ ಉದ್ದವಾಗಿಯೇ ಇತ್ತು. ಹೀಗಾಗಿ ಇದು ವೀವರ್ ಇರುವೆ ಇರಬಹುದು ಎಂದುಕೊಂಡೆ. ಅಲ್ಲದೆ ಪಕ್ಕದ ಮರಗಳಲ್ಲಿ ಅವುಗಳ ಗೂಡುಗಳನ್ನು ನೋಡಿದ್ದೆ. ಹೀಗಾಗಿ ಇದು ವಿವರ್ ಇರುವೆ ಎಂದುಕೊಂಡೆ. ಅದರ ಬಾಯಲ್ಲಿ ಇನ್ನೊಂದು ಇರುವೆಯನ್ನು ಕಚ್ಚಿ ಹಿಡಿದುಕೊಂಡು ಹೊರಟಿದೆ ಎಂದು ಭಾಸವಾಗುತ್ತಿತ್ತು. ಮುಂದಿನ ಎರಡು ಮೀಸೆಗಳು ಕೂಡ ಉದ್ದವಾಗಿದ್ದು ಗಾಳಿಯಲ್ಲಿ ಎತ್ತಿ ಹಿಡಿದಿತ್ತು. ಆದರೆ ಇದು ಕೆಳಗೆ ಇಳಿದ ಬಗೆ ವಿಚಿತ್ರವಾಗಿತ್ತು! ಮಗ ಆಗಲೇ ಸುಮಾರು ಪ್ರಶ್ನೆಗಳನ್ನು ಕೇಳಿದ್ದ. ಇನ್ನೊಂದು ಸಲ ಪ್ರಯೋಗ ಮಾಡಿ ನೋಡೋಣವೆಂದು ಇರುವೆಯನ್ನು ಎಲೆಯ ಮೇಲೆ ಇರಿಸಿಕೊಂಡು ಮತ್ತೆ ಕೆಳಕ್ಕೆ ಹಾಕಿದೆ, ಅದು ಎಳೆಯ ಮೂಲಕ ಇಳಿಯುವಾಗ ಅದರ ಎಳೆಯನ್ನು ಹಿಡಿದು ಮೇಲೆತ್ತಿದೆ. ಥೇಟ್ ಜೇಡದ ಹಾಗೆ! ಪಟಕ್ಕನೆ ಕೆಳಗಿಳಿದು ನೆಗೆಯುವ ಜೇಡದ ಹಾಗೆ ಅತ್ತಿಂದಿತ್ತ ನೆಗೆಯುತ್ತಾ ಓಡಿ ಕ್ಷಣದಲ್ಲಿ ಹುಲ್ಲಿನ ಹಿಂದೆ ಮರೆಯಾಯಿತು. ಅದನ್ನು ಸಮೀಪದಿಂದ ಗಮನಿಸಿದಾಗ ಅದರ ಬಾಯಲ್ಲಿ ಇರುವೆಯನ್ನು ಕಚ್ಚಿ ಹಿಡಿದಿಲ್ಲವೆಂದು ತಿಳಿಯಿತು.

© ಸನತ್ ಕುಮಾರ್ ಡಿ.

ಅದು ಅದರ ಬಾಯಿಯ ಭಾಗವೇ ಆಗಿತ್ತು. ಇದೇನು ವಿಚಿತ್ರ ಎಂದು ಎರಡು ಕ್ಷಣ ಏನೂ ಹೊಳೆಯಲಿಲ್ಲ. ಇಷ್ಟು ದಿನ ಇಂಥ ಇರುವೆ ಅಲ್ಲಲ್ಲ ಜೇಡ ಅಥವಾ ಯಾವುದೊ ಬೇರೆ ಕೀಟವನ್ನೇ ನೋಡಲಿಲ್ಲವೇ? ಎಂದುಕೊಂಡು, ಅದು ಅವಿತ ಜಾಗದಲ್ಲಿ ಸ್ವಲ್ಪ ದಿಟ್ಟಿಸಿ ನೋಡಿದೆ. ಈ ಇರುವೆಗೆ ಇರುವುದು ಆರು ಕಾಲುಗಳಲ್ಲ! ಬದಲಾಗಿ ಎಂಟು! ಕಣ್ಣುಗಳು ಎಂಟು! ಹೊಟ್ಟೆಯ ಭಾಗದಲ್ಲಿ ಸ್ವಲ್ಪ ಹೊಳೆಯುವ ರೇಷ್ಮೆ ಎಳೆಗಳಂತಹ ಕೂದಲು! ಆಗ ಹೊಳೆಯಿತು ಇದು ಇರುವೆ ಅನುಕರಿಸುವ ಜೇಡ ಎಂದು! ಅದರ ಗುಣ ವಿಶೇಷಣಗಳನ್ನು ಯಾವುದೊ ಜೇಡಗಳ ಪುಸ್ತಕದಲ್ಲಿ ಓದಿದ ನೆನಪು ಬಂದಿತು. ಪಕ್ಷಿಗಳ ಆಹಾರದಲ್ಲಿ ಜೇಡವು ಮುಖ್ಯ ಪಾತ್ರವಹಿಸುತ್ತದೆ, ಆದರೆ ಇರುವೆಗೆ ಆ ಸ್ಥಾನವಿಲ್ಲ, ಹೀಗಾಗಿ ಜೇಡವು ಕಂಡುಕೊಂಡ ಉಪಾಯವೆಂದರೆ ಇರುವೆಯಂತೆ ಕಾಣಿಸಿಕೊಳ್ಳುವುದು ಹಾಗು ಅದರಂತೆಯೇ ವರ್ತಿಸಿ ಪಕ್ಷಿಗಳನ್ನು ಮತ್ತು ಇತರ ಜೀವಿಗಳನ್ನು ಯಾಮಾರಿಸುವುದು. ನಾವು ಕಂಡ ಜೇಡ ವೀವರ್ ಇರುವೆಯನ್ನು ಅನುಕರಿಸುವ ಗಂಡು ಜೇಡ! ಹೀಗಾಗಿಯೇ ನಾವು ಸುಲಭವಾಗಿ ಮೋಸ ಹೋಗಿದ್ದು. ಅದರ ಬಾಯಿಯಲ್ಲಿ ಯಾವುದೊ ಇರುವೆಯನ್ನು ಹಿಡಿದುಕೊಂಡಂತೆ ಭಾಸವಾಗುತ್ತಿತ್ತು ಎಂದು ಹೇಳಿದ್ದೆನಲ್ಲವೇ? ಅದು ಅದರ ಬಾಯಿಯ ಒಂದು ವಿಶೇಷ ರಚನೆ. ಕೆಲಸಗಾರ ಇರುವೆಯು ಚಿಕ್ಕ ಕೆಲಸಗಾರ ಇರುವೆಯನ್ನು ಕಚ್ಚಿ ಹಿಡಿದಿರುವ ಹಾಗೆ ಭಾಸವಾಗುತ್ತದೆ. ಇವು ಎಷ್ಟರ ಮಟ್ಟಿಗೆ ಅನುಕರಿಸುತ್ತವೆ ಎಂದರೆ ಇರುವೆಗಳ ಹಾಗೆ ತನ್ನ ಮುಂದಿನ ಎರಡು ಕಾಲುಗಳನ್ನು ಗಾಳಿಯಲ್ಲಿ ಎತ್ತಿ ಹಿಡಿದು ಅಲ್ಲಾಡಿಸುತ್ತವೆ. ಇದರ ಮುಖ್ಯ ಉದ್ದೇಶವೇನೆಂದರೆ, ಒಂದು, ಇದು ಮೀಸೆಯ ತರಹ ಕಾಣಿಸುತ್ತದೆ. ಎರಡನೆಯದು, ಹೀಗೆ ಎತ್ತಿ ಹಿಡಿಯುವುದರಿಂದ ಅದು ಆರು ಕಾಲುಗಳ ಮೇಲೆ ನಿಂತಂತೆ ಭಾಸವಾಗುತ್ತದೆ!  ಅಂದ ಹಾಗೆ ಈ ಜೇಡವು ನೋಡಲು ಇರುವೆ ತರಹ ಕಾಣಿಸಿದರೂ ಇರುವೆಗಳ ಜೊತೆ ಬೆರೆಯುವುದಿಲ್ಲ ಏಕೆಂದರೆ ಅವು ಕಚ್ಚುತ್ತವೆ! ಹೊರತಾಗಿ ಅದು ಇರುವೆ ಗೂಡಿನ ಸುತ್ತಮುತ್ತವೆ ತಿರುಗಾಡುತ್ತದೆ ಹಾಗು ಬೇರೆ ಕಾಲೋನಿಯ ಇರುವೆಗಳು ಒಬ್ಬಂಟಿಯಾಗಿ ತಿರುಗಾಡುವಾಗ ಅವುಗಳ ಬೇಟೆಯಾಡಿ ಊಟ ಮಾಡುತ್ತವೆ.

© ನವೀನ್ ಐಯ್ಯರ್

ಕೆಲ ಬೇರೆ ಜೇಡಗಳು ವಿಶೇಷವಾಗಿ ವೀವರ್ ಇರುವೆಗಳನ್ನು ಅನುಕರಿಸುವ ಜೇಡಗಳು ಇರುವೆಗಳ ವಿಶಿಷ್ಟ ರಾಸಾಯನಿಕ ಸಂಕೇತಗಳನ್ನು ಕೂಡ ಅನುಕರಿಸುತ್ತವೆ! ಅಲ್ಲದೆ ಇವು ಕಾಣಲು ಬೇರೆ ರೀತಿಯಿದ್ದರೂ ಸಹ ರಾಸಾಯನಿಕ ಸಂಕೇತಗಳು ಒಂದೇ ತರಹ ಇರುವುದರಿಂದ ಇರುವೆಗಳು ಈ ಜೇಡಗಳನ್ನು ತಮ್ಮ ಗೂಡೊಳಗೆ ಸೇರಿಸಿಕೊಳ್ಳುತ್ತವೆ. ಜೇಡಗಳು, ಅಪ್ರಾಪ್ತ ಕೆಲಸಗಾರ ಇರುವೆಗಳಿಂದ ಮೊಟ್ಟೆಗಳನ್ನು, ಲಾರ್ವಾಗಳನ್ನು ಕಸಿದುಕೊಂಡು ಗುಳುಂ ಮಾಡುತ್ತವೆ ಮತ್ತು ಇದರಿಂದಲೇ ಆ ಕಾಲೋನಿಯ ರಾಸಾಯನಿಕ ಸಂಕೇತವನ್ನು ತನ್ನದಾಗಿಸಿಕೊಳ್ಳುತ್ತವೆ!

ಸಾಧ್ಯವಾದಷ್ಟು ಮಗನಿಗೆ ಅವನ ಭಾಷೆಯಲ್ಲಿ ತಿಳಿಸಿ ಹೇಳಿದೆ. ಅದೇನು ತಿಳಿಯಿತೋ ಏನೋ “ನಾನೆ ಜೇಡ ರಾಜ! ಇರುವೆಗಳು ನನ್ನ ಸೈನಿಕರು! ನಾನೀಗ ಅವುಗಳಿಗೆ ಆದೇಶ ನೀಡುತ್ತೇನೆ!” ಎಂದು ಟುಗ ಡುಕ್… ಟುಗ ಡುಕ್ ಅಂತ ಕುದುರೆಯೇರಿ ಹೊರಟು ಹೋದ. ಇವನು ಮುಂದೆ ಒಬ್ಬ ಅದ್ಭುತ ಕತೆಗಾರನಾಗಬಹುದೇನೋ ಎಂದು ನಾನು ವಿಚಾರ ಮಾಡುತ್ತಾ ಕುಳಿತೆ!

© ವಿನಯ್ ಎನ್


ಲೇಖನ: ಅನುಪಮಾ ಕೆ. ಬೆಣಚಿನಮರ್ಡಿ.
             ಬೆಂಗಳೂರು ಜಿಲ್ಲೆ
.

Print Friendly, PDF & Email
Spread the love
error: Content is protected.