ಅಲೆಮಾರಿಯ ಅನುಭವಗಳು -೦೪

ಅಲೆಮಾರಿಯ ಅನುಭವಗಳು  -೦೪

©  ವಿಪಿನ್ ಬಾಳಿಗಾ

ಜಲಮೂಲಗಳ ತೇವವನ್ನು ಬಸಿದು ಬಾಷ್ಪೀಕರಿಸಿ ತನ್ನ ತೆಕ್ಕೆಗೆ ತೆಗೆದುಕೊಂಡು ಇಕ್ಕಟ್ಟಾಗಿ ಪೇರಿಸಿಕೊಳ್ಳುತ್ತಾ, ಒಂದಕ್ಕೊಂದು ಬೆಸೆದು ಹೊಸೆದುಕೊಂಡು ಘನೀಕರಿಸಿದ ಮುಂಗಾರು ಮೋಡಗಳು ನೈರುತ್ಯ ಮಾನ್ಸೂನ್ ಮಾರುತಗಳ ಹೊಡೆತಕ್ಕೆ ಸಿಕ್ಕು ಸೋತು ಪಲಾಯನಗೊಳ್ಳುತ್ತಾ ಮೈ ಬೆವರಿಳಿಸಿಕೊಂಡು ಸಾಗುವಾಗ,  ಸರಿ ಸುಮಾರು 360 ಕೋಟಿ ವರ್ಷಗಳ ಕಾಲದಿಂದ ಜಪ್ಪೆನ್ನದೆ ಸದೃಢವಾಗಿ ನಿಂತ ಪಶ್ಚಿಮಘಟ್ಟದ ಶಿಖರ ಶಿರೋಮಣಿಯನ್ನು ಈ ಧೂಮಯೋನಿಯು ತಾಕಿ ಬೆಳಕೂ ಸಹ ಇಣುಕದಂತಹ ಅಭೇದ್ಯ ಕಾನನದೊಳಗೆ ತನ್ನ ಮೈ ಸ್ಖಲಿಸಿ ಸ್ರವಿಸುತ ಅನಂತ ಹಸಿರೆಲೆಗಳನು ಸವರಿ ಅಖಂಡ ಅರಣ್ಯವನ್ನು ಶರಂಪರ ತೋಯಿಸಿ ಇಳೆಗೆ ಇಳಿಯುತ ಜಾರಿ ನೆಲಕಚ್ಚಿ ಮಣ್ಣು ಪಾಲಾಗುವ ಹೊತ್ತಿಗೆ, ಜೀವಜಲವನ್ನೆಲ್ಲಾ ತನ್ನೊಡಲೊಳಗೆ ಇಂಗಿಸಿಕೊಂಡ ಮಣ್ಣು, ಅಸಂಖ್ಯಾತ ಬೇರುಗಳ ಮೂಲಕ ಮತ್ತೆ ಕ್ಸೈಲಮ್ ನಾಳಕ್ಕೇರಿಸಿ ನೀರಿನೊಟ್ಟಿಗೆ ಒಂದಷ್ಟು ಖನಿಜಾಂಶಗಳನ್ನು ಘಟ್ಟದ ತಪ್ಪಲಿಗೆ ಸಾಗಿಸುವ ಕೆಲಸವೊಂದು ಮಾಡುವಾಗ, ದಟ್ಟ ಕಾನನದೊಳಗೆ ಸೂಕ್ಷ್ಮಾತಿಸೂಕ್ಷ್ಮ ಘಟನೆ ಒಂದು ಘಟಿಸಿ ಹೋಗಿದ್ದರ ಬಗ್ಗೆ ನಿರ್ಲಿಪ್ತ ಭಾವ ಬಿಟ್ಟು ಅವಲೋಕಿಸುತ್ತಾ ಘಟ್ಟದ ನಿಗೂಢ ದಾರಿ ತುಳಿಯುತ್ತಿದ್ದರೆ, ನೈಸರ್ಗಿಕ ಅಚ್ಚರಿಗಳು ಒಂದೊಂದಾಗಿ ತೆರೆದುಕೊಳ್ಳುತ್ತಾ ಮೈಮನಸ್ಸನ್ನು ಕೌತುಕದ ಛಾಯೆಯಲ್ಲಿ ತೇಲಾಡಿಸಿ ನವನವೀನವಾದ ಲೋಕವೊಂದು ಕಣ್ಣೆದುರು ಅರಳಿಸಿ ಅಚ್ಚರಿಗಳನು ಕಂಗಳ ಎವೆಗೆ ಎಸೆಯುತ್ತವೆ!

ಆಗಷ್ಟೆ ಮಳೆ ನಿಂತ ಕಾಡಿನಲಿ ಕಾಲಿಟ್ಟು ಕಾಂಡಗಳ ಮೈಗೆ ಮೆತ್ತಿದ ಅತ್ತಿ ಹಣ್ಣು ಕಿತ್ತು ಒಡಲಿಗಿಳಿಸಿಕೊಳ್ಳುತ್ತಾ ಘಟ್ಟದ ತರಗೆಲೆಗಳ ಮೈಮುರಿಯುತ್ತಲೆ ಹೆಜ್ಜೆ ಕಿತ್ತಿಡುವಾಗ ಚೂರೂ ಸುಳಿವು ಕೊಡದೆ ಅಳುಕೂ ಸಹ ಆಗದಂತೆ ತಮ್ಮ ಒಡಲಿಗೆ ಐದಾರು ತಿಂಗಳಿಗಾಗುವಷ್ಟು ಆಹಾರವನ್ನು ಒಂದೇ ಸಲಕ್ಕೆ ನಮ್ಮ ನೆತ್ತರನ್ನೇ ಹೀರಿ ತುಂಬಿಸಿಟ್ಟುಕೊಳ್ಳುತ್ತವೆ, ಈ ಇಂಬಳಗಳು! ಕಾಡಿನ ಪಾದಕ್ಕಂಟಿ ಬೆಳೆದು ನಿಂತ ರಂಗುರಂಗಿನ ಹೂವುಗಳನ್ನು ಅರಳಿಸುವ ಲಂಟಾನ ಕಾನನದೊಳಗೆ ಸ್ವಾಗತಿಸುವ ಪರಿಗೆ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಹೆಣೆದ ಜೇಡರ ಬಲೆಯೊಳಗೆ ಸಿಕ್ಕಿಕೊಂಡ ಮಂಜಿನ ಹನಿಗಳು ಕಾಡ ದೇವತೆಯ ಕತ್ತಿನ ಸರದಂತೆ ಸೃಷ್ಟಿಗೊಂಡಿದೆ! ಉದ್ದನೆಯ ಮರಗಳುದುರಿಸಿದ ಮುಗಿಲ ಮಲ್ಲಿಗೆಯು, ಬೇರುಗಳು ಬೆಸೆದ ದಾರಿಯುದ್ದಕ್ಕೂ ಮೈಚೆಲ್ಲಿ ಮಲಗಿವೆ. ಕಶೇರುಕಗಳ ಜಾಡು ಹಿಡಿದು ಹೊರಟಷ್ಟು ದುರ್ಗಮವಾದ ದಾರಿ ಎದುರುಗೊಳ್ಳುತ್ತದೆ. ಆಗಾಗ ಕಾಣಸಿಗುವ ಅಕಶೇರುಕ ಪ್ರಭೇದದ ಮೃದ್ವಂಗಿಗಳನು ಹಾವಿನಂತ ಸರಿಸೃಪಗಳು ತಿಂದು ತೇಗುತ್ತವೆ. ಒಂದೇ ಒಂದು ಹಣ್ಣನ್ನು ತಿಂದರೂ ಸಹ ಬದುಕುಳಿಯಲು ಹೆಣಗಾಡಬೇಕಾಗುವಂತಹ ನಕ್ಸ್ – ವೋಮಿಕಾ ಸೀಡ್ಸ್ ನ್ನು ಇಡೀ ದಿನ ತನ್ನ ಆಹಾರ ಅದೊಂದೆ ಎಂಬಂತೆ ಗ್ರೇಟ್ ಪೈಡ್ ಹಾರ್ನ್ ಬಿಲ್ ಗಳು ಸರಾಗವಾಗಿ ಸೇವಿಸುತ್ತಲೇ ಜೀವಿಸುತ್ತವೆ! ಎಷ್ಟೊಂದು ಅಚ್ಚರಿಗಳನ್ನು ಈ ಪ್ರಕೃತಿ ತನ್ನೊಳಗೆ ಬಸಿದು ಕೊಡುತ್ತದೆ ಎಂದರೆ ಇಡೀ 360 ಕೋಟಿ ವರ್ಷ ನಾವು ಜೀವಿಸಿದರೂ ಸಹ ಇನ್ನೂ ಕೌತುಕ ಉಳಿದೆ ಬಿಡುವಂತಹ ಮತ್ತೊಂದು ಬೆಳಗನ್ನು ತನ್ನ ದಟ್ಟ ಕಂದರದೊಳಗೆ ಗೌಪ್ಯವಾಗಿ ಇಟ್ಟಿರುತ್ತದೆ! ಅಪರೂಪದ ಚಿಟ್ಟೆಗಳು ಆಗಾಗ ಗಿಡದಿಂದ ಗಿಡಕ್ಕೆ ಜಿಗಿಯುವ ಸಿಂಗಳಿಕಗಳು ಅಪೂರ್ವ ತಳಿಯ ಸಸ್ಯಗಳ ವೃದ್ಧಿಗೆ ಕಾರಣವಾಗುತ್ತವೆ. ನಿಸರ್ಗದಲ್ಲಿ ನಿರಂತರ ನಡೆಯುವ ನಿಗೂಢ ಚಟುವಟಿಕೆಗಳು ನಮಗೆ ಗೋಚರಿಸದೆ ಉಳಿಯಬಹುದು ಆದರೆ ಅವು ಆ ಕ್ಷಣಕ್ಕೆ ಆಗಲೇಬೇಕಾದಂತಹ ತುರ್ತು ಇದೆ. ಅವೆಲ್ಲವುಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆಯೂ ಆಗಿದ್ದು, ಸದ್ಯಕ್ಕೆ ರಕ್ಷಿಸದಿದ್ದರೂ ಪರವಾಗಿಲ್ಲ ಭಕ್ಷಿಸದೆ ದೂರ ಇದ್ದರೂ ಸಾಕಾದೀತು ಎಂಬ ತರ್ಕಕ್ಕೆ ಜೋತು ಬೀಳುವ ಪರಿಸ್ಥಿಯಲ್ಲಿದ್ದೇವೆ.

©  ವಿಪಿನ್ ಬಾಳಿಗಾ

ನಿರಂತರ ಸುರಿವ ಮಳೆಯಿಂದಾಗಿ ಮತ್ತು ರಕ್ಕಸ ಗಾಳಿಯ ರಭಸಕ್ಕೆ ಶಿಖರ ಶಿರದಲ್ಲಿ ಮಣ್ಣಿನ ಸವಕಳಿ ಗರಿಷ್ಠ ಪ್ರಮಾಣದಲ್ಲಿರುತ್ತದೆ. ಹಾಗಾಗಿಯೇ ನಾವು ಏರಿದ ಯಾವುದೇ ಪರ್ವತ ಶ್ರೇಣಿಯಾಗಲಿ, ಬೆಟ್ಟದಂಚಿರಲಿ, ದಟ್ಟ ಕಾನನದ ಜಟಿಲತೆ ಹೊಂದಿರುವುದಿಲ್ಲ. ಹುಲ್ಲುಗಾವಲೇ ಅಲ್ಲಿನ ಹಸಿರ ಜೀವಾಳ. ಅಕ್ಕಪಕ್ಕದಲ್ಲಿ ಎಲ್ಲಿಯಾದರೂ ನೀರಿನ ಆಕರಗಳಿದ್ದರೆ ಒಂದಷ್ಟು ಪಕ್ಷಿ ಸಂಕುಲವೂ ಸಹ ತನ್ನ ವಾಸವನ್ನು ಇಲ್ಲಿ ಆರಂಭಿಸಿಬಿಡುತ್ತವೆ. ಇವುಗಳನ್ನು ಮತ್ತು ಇವುಗಳ ಮೊಟ್ಟೆಗಳನ್ನು ಆಹಾರವನ್ನಾಗಿಸಿಕೊಳ್ಳುತ್ತಾ ಸರಿಸೃಪಗಳು ಇಲ್ಲಿ ನೆಲೆಗೊಳ್ಳುತ್ತವೆ. ಅಲ್ಲಲ್ಲಿ ಕಲ್ಲಿನ ಇಕ್ಕೆಲಗಳಲ್ಲಿ ಚೇಳು ಹುಳಹುಪ್ಪಟೆಗಳು ಕಾಣಸಿಗುತ್ತವೆ. ಅದಮ್ಯ ಮಲಯ ಮಾರತಗಳು ಒಕ್ಕರಿಸಿಕೊಂಡು ಬಂದು ಸುರಿಯುವ ಮೋಡದ ಮೇಲ್ಪದರ ತಂಪುತಿಳಿಗಾಳಿ ಇಬ್ಬನಿಯೇ ಹುಲ್ಲುಗಾವಲಿನ ಜೀವಸಂಕುಲದ ಜಲಜೀವಾಳ!

© ವಿಪಿನ್ ಬಾಳಿಗಾ

ಕಾನನದ ಒಳಹೊಕ್ಕಷ್ಟು ಮೈ ಪುಳಕಿತಗೊಳ್ಳುತ್ತದೆ. ಮೈ ನವಿರು ಬಟ್ಟೆ ನಿಮಿರಿ ನಿಲ್ಲುತ್ತದೆ. ಸದಾಕಾಲ ಸಸ್ಯಸಂಕುಲ ಒಣಗದಂತೆ ತಡೆಯಲು ಪ್ಯಾರಂಕೈಮ ಜೀವಕೋಶಗಳಿಂದ ಕೂಡಿದ ಹೊರದರ್ಮಾಂಗಾಂಶ ಅಂದರೆ ಸಸ್ಯ ದೇಹದ ಚರ್ಮವೂ ಇದರಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಮೇದಾರ ಕುಟುಂಬಗಳು ಜಾಗದಿಂದ ಜಾಗಕ್ಕೆ ವಲಸೆ ಹೋದ ಮೇಲೆ ಬಿದಿರು ಸಹ ಅವರೊಟ್ಟಿಗೆ ಹೋದಂತಾಯಿತೇನೋ ಗೊತ್ತಿಲ್ಲ. ಮಣ್ಣಿನ ಸವಕಳಿ ತಡೆಗಟ್ಟುವಲ್ಲಿ ಬಿದಿರಿನದು ಅತಿ ಮುಖ್ಯ ಪಾತ್ರವಾಗಿತ್ತು ಎನ್ನುವುದು ಬ್ರಿಟಿಷ್ ಆಡಳಿತದಿಂದ ಹಿಡಿದು ಇಲ್ಲಿಯವರೆಗಿನ ಯಾವ ಆಡಳಿತಗಾರರಿಗೂ ಅರ್ಥವಾಗದೆ ಇರುವುದು ದುರ್ದೈವ! ಸಣ್ಣ ಸಣ್ಣ ಸಂಗತಿಗಳು ದೊಡ್ಡ ದೊಡ್ಡ ಸಂತಸಗಳನ್ನು ಸುರಿಯಬಲ್ಲವು. ನಾವು ಅನುಭವಿಸುವ ಪ್ರತಿ ಕ್ಷಣವನ್ನು ಪರಿಪೂರ್ಣತೆಯಿಂದ ಸಂಪೂರ್ಣವಾಗಿ ತೋಯಿಸಿಕೊಳ್ಳಬೇಕು ಅದು ಮಳೆಯಾಗಲಿ ಚೂಪು ಚಳಿಯಾಗಲಿ ಇಲ್ಲವೆ ಬೆವರಿಳಿಸುವ ಬೇಸಿಗೆಯಾಗಲಿ! ನಮ್ಮಲ್ಲಿ ಕುತೂಹಲದ ತೀವ್ರತೆ ಹೆಚ್ಚಾದಷ್ಟು ನಮ್ಮ ಗಮ್ಯದನುಭವದ ಎಲ್ಲೆ ಕೈಗೆಟುಕುವಂತೆ ಕೈಗೆಟುಕದೆ ಕಾಡಿಸಿ ಸುಖ ಒಂದನ್ನು ಸದಾ ಕಾಲ ನಮ್ಮೆದೆಯಲ್ಲಿ ಅರಳಿಸಿ ಆನಂದಭರಿತ ಕಂಗಳ ಪಸೆಗೆ ಕಾರಣವಾಗುತ್ತದೆ!

ಮುಂದುವರಿಯುವುದು. . . . .

ಲೇಖನ: ಮೌನೇಶ ಕನಸುಗಾರ
             ಕಲ್ಬುರ್ಗಿ ಜಿಲ್ಲೆ
.

             

Print Friendly, PDF & Email
Spread the love
error: Content is protected.