ಪ್ರಕೃತಿ ಬಿಂಬ
ಮೀನು ಗೂಬೆ © ಸನತ್ ಶಾನುಭೋಗ
ಮೀನುಗೂಬೆ ಅಥವಾಮೀನು ಗುಮ್ಮ ಎಂದು ಕರೆಯಲ್ಪಡುವ ಈ ನಿಶಾಚರ ಹಕ್ಕಿ ಸಾಮಾನ್ಯವಾಗಿ ಭಾರತ, ದಕ್ಷಿಣ ಮತ್ತು ಪೂರ್ವ ಏಷ್ಯಾ ಮತ್ತು ಶ್ರೀಲಂಕಾದಲ್ಲಿ ಕಂಡುಬರುತ್ತದೆ. ಕಂದು ಬಣ್ಣದ ಮೀನು ಗೂಬೆಯು ದಟ್ಟವಾದ ಗರಿಗಳಿಂದ ಕೂಡಿದ ಕೊಂಬನ್ನು ಪ್ರಧಾನವಾಗಿ ಹೊಂದಿದೆ ಹಾಗು ಮೇಲ್ಭಾಗದಲ್ಲಿ ಕಪ್ಪು ಮತ್ತು ಕಡುಗಂದು ಬಣ್ಣದ ಗೆರೆಗಳನ್ನು ಹೊಂದಿದೆ. ಒಂಟಿಯಾಗಿ ಅಥವಾ ಜೋಡಿಗಳಲ್ಲಿ ಹೊಳೆ ಕೆರೆಗಳ ಹತ್ತಿರದ ದೊಡ್ಡ ದೊಡ್ಡ ಮರಗಳ ಮೇಲೆ ಕುಳಿತಿರುತ್ತವೆ. ದಟ್ಟವಾದ ಮರಗಳಿರುವಲ್ಲಿ ಹಳ್ಳಿಗಳ ಕೆರೆಗಳಿಗೆ ಹತ್ತಿರವಿರುತ್ತವೆ. ಊಹ್ಹೋ ಎಂದು ಹೂಂಕರಿಸಿದಂತೆ ನೀಳವಾಗಿ ಕೂಗುತ್ತವೆ. ಹಗಲೆಲ್ಲಾ ದೊಡ್ಡ ಮರಗಳ ಸೊಪ್ಪಿನ ನಡುವೆ ನಿದ್ರಿಸುತ್ತದೆ. ಮೀನು, ಏಡಿ, ಹಕ್ಕಿಗಳು, ಕಪ್ಪೆ, ಮೊಲ ಇತ್ಯಾದಿಗಳನ್ನು ಬೇಟೆಯಾಡುತ್ತವೆ. ಹಳೆಯ ಬೃಹತ್ ಮರಗಳ ಪೊಟ್ಟರೆಗಳಲ್ಲಿ ಮತ್ತು ಪರ್ವತ ಶಿಖರಗಳ ಬಂಡೆ ಬಿರುಕಿನಲ್ಲಿ ಗೂಡು ಮಾಡುತ್ತವೆ.
ಕೊಂಬಿನ ಗೂಬೆ © ಸನತ್ ಶಾನುಭೋಗ
ಹದ್ದಿನ ಗಾತ್ರದ ಕಡು ಬೂದು ಬಣ್ಣದ ಈ ಹಕ್ಕಿಯು, ಸ್ಟ್ರಿಜಿಡೇ (Strigidae) ಕುಟುಂಬಕ್ಕೆ ಸೇರಿದೆ. ಇವು ಸಾಮಾನ್ಯವಾಗಿ ಯುರೋಪ್ ಮತ್ತು ಏಷ್ಯಾ ಖಂಡಗಳಲ್ಲಿ ಕಾಣಸಿಗುತ್ತವೆ. ತಲೆಯ ಮೇಲೆ ಕೊಂಬಿನಂತಹ ಕಡು ಕಂದು ಬಣ್ಣದ ಪುಕ್ಕ ಇದರ ವಿಶೇಷ ಲಕ್ಷಣ. ಕೇಸರಿ ಕಣ್ಣು, ಬಾಗಿದ ಚೂಪು ಕೊಕ್ಕು, ಎದೆ, ಹೊಟ್ಟೆ ಕೆಳ ಭಾಗ ತಿಳಿ ಕಂದು ಬಣ್ಣ ಇರುತ್ತದೆ. ಪುಕ್ಕಗಳಿರುವ ಬಲಿಷ್ಠ ಕಾಲುಗಳಿರುತ್ತವೆ. ಇದರ ಪುಕ್ಕಗಳಿಗೆ ವಿಶೇಷ ಅಂಚಿರುವುದರಿಂದ ಹಾರುವಾಗ ಶಬ್ದವಾಗುವುದಿಲ್ಲ. ಇದರಿಂದ ತನ್ನ ಬೇಟೆಯ ಮೇಲೆ ಎರಗಲು ಅನುಕೂಲವಾಗುತ್ತದೆ. ಇವು ಸಂಜೆಯ ವೇಳೆಯಲ್ಲಿ ಬೂಬು…ಬೂಬು…ಬೂಬು… ಎಂದು ಕೂಗುತ್ತವೆ. ಇವು ಬೃಹತ್ ಮರಗಳಲ್ಲಿ, ಹಳೆಯ ಕಟ್ಟಡಗಳಲ್ಲಿ ವಾಸಿಸುತ್ತವೆ. ಹಾಗು ಪೊಟರೆಗಳಲ್ಲಿ ಗೂಡು ಕಟ್ಟುತ್ತವೆ. ಮೀನು, ಹಾವು, ಇಲಿ ಇತ್ಯಾದಿಗಳು ಇದರ ಆಹಾರವಾಗಿವೆ.
ಗಿಡುಗಗೂಬೆ © ಸನತ್ ಶಾನುಭೋಗ
ಚುಕ್ಕೆ-ಹೊಟ್ಟೆಯ ಹದ್ದು-ಗೂಬೆಗಳು ಭಾರತದ ಉಪಖಂಡ ಮತ್ತು ಆಗ್ನೇಯ ಏಷ್ಯಾದ ದಟ್ಟವಾದ ಆರ್ದ್ರ ತಗ್ಗು ಪ್ರದೇಶಗಳಲ್ಲಿ ಹಾಗು ಬೆಟ್ಟದ ಕಾಡುಗಳಲ್ಲಿ ಕಂಡುಬರುವ ತೀಕ್ಷ್ಣ ನೋಟವುಳ್ಳ ಬೇಟೆ ಪಕ್ಷಿಯಾಗಿವೆ. ಬೂದು ಮತ್ತು ಕಂದು ಬಣ್ಣದ ಹಕ್ಕಿಯಾಗಿದ್ದು, ಹಿಂಭಾಗ ಮತ್ತು ಮೇಲಿನ ರೆಕ್ಕೆಗಳ ಮೇಲೆ ಗಾಢವಾದ ಕಂದು ಬಣ್ಣವನ್ನು ಹೊಂದಿರುತ್ತವೆ. ಗಂಟಲು ಮತ್ತು ಹೊಟ್ಟೆಯ ಕೆಳಭಾಗವು ಮುಖ್ಯವಾಗಿ ಮಸುಕಾದ ಬಣ್ಣದಲ್ಲಿರುತ್ತದೆ ಮತ್ತು ದೇಹದ ಪಾರ್ಶ್ವದ ಉದ್ದಕ್ಕೂ ಕಪ್ಪು ಮತ್ತು ಬಿಳಿ ಸಮತಲ ಪಟ್ಟೆಗಳು, ಹೊಟ್ಟೆಯ ಮೇಲೆ ಮತ್ತು ಬಾಲದ ಹೊದಿಕೆಯ ಅಡಿಯಲ್ಲಿ ವಿಶಾಲವಾದ ಚುಕ್ಕೆಗಳಾಗುತ್ತವೆ. ದೊಡ್ಡ ಹಳದಿ ಕೊಕ್ಕು ಹಾಗು ಕಪ್ಪು ಕಣ್ಣುಗಳನ್ನು ಹೊಂದಿವೆ. ದೊಡ್ಡದಾದ ಕೊಂಬುಗಳು ಬದಿಗಳಲ್ಲಿ ಓರೆಯಾಗಿವೆ. ಈ ಗೂಬೆಯು ತನ್ನ ವಿಚಿತ್ರವಾದ, ಮಾನವ ಧ್ವನಿಯ ಕರೆಗೆ ಹೆಸರುವಾಸಿಯಾಗಿದೆ. ಸಣ್ಣ ಸಸ್ತನಿಗಳು ಮತ್ತು ಇಲಿಗಳು ಇವುಗಳ ಆಹಾರವಾಗಿವೆ.
ಹಾಲಕ್ಕಿ © ಸನತ್ ಶಾನುಭೋಗ
ಗೊರವಂಕ ಗಾತ್ರದ ಬೂದು ಬಣ್ಣದ ಹಕ್ಕಿ. ಇವು ಸಾಮಾನ್ಯವಾಗಿ ಭಾರತ, ಬಾಂಗ್ಲಾದೇಶ, ಸಿಲೋನ್, ಪಾಕಿಸ್ತಾನ ಮತ್ತು ಬರ್ಮಾ ದೇಶಗಳಲ್ಲಿ ಕಂಡು ಬರುತ್ತವೆ. ಪರ್ಣಪಾತಿ ಕಾಡು, ಕುರುಚಲು ಕಾಡು, ಜನವಸತಿ ಪ್ರದೇಶಗಳಲ್ಲಿ ಕಂಡು ಬರುವ ಬೇಟೆ ಹಕ್ಕಿ. ದೊಡ್ಡ ಕಣ್ಣುಗಳು ಹಳದಿ ಬಣ್ಣದಿಂದ ಕೂಡಿದ್ದು, ಎದೆಯ ಮೇಲೆ ಬೂದು ಚುಕ್ಕೆಗಳಿದ್ದು, ತಳಭಾಗದಲ್ಲಿ ಬಿಳಿಬಣ್ಣದಿಂದ ಕೂಡಿರುತ್ತದೆ. ಬೂದು ಕಾಲುಗಳು; ಕಪ್ಪು ಪಟ್ಟಿಯಿರುವ ಬೂದು ಮೋಟು ಬಾಲವಿರುತ್ತದೆ. ಇಲಿ ಹೆಗ್ಗಣಗಳನ್ನು ತಿಂದು ರೈತರಿಗೆ ಉಪಕಾರಿಯಾಗಿವೆ. ಹಾಲಕ್ಕಿಗಳ ರೆಕ್ಕೆಯ ಪುಕ್ಕಗಳು ಬಹಳ ಮೃದುವಾಗಿರುತ್ತವೆ. ಹಾಗಾಗಿ ಹಾರುವಾಗ ಶಬ್ಧವಾಗುವುದಿಲ್ಲ. ಇವು ಮರಗಳ ಪೊಟರೆಗಳಲ್ಲಿ ಅಥವಾ ಕಟ್ಟಡಗಳ ಸಣ್ಣ ರಂಧ್ರಗಳಲ್ಲಿ ಬಟ್ಟೆ ಚೂರು, ಹತ್ತಿಗಳಿಂದ ಗೂಡು ಮಾಡುತ್ತವೆ, 3-5 ಮೊಟ್ಟೆಗಳನ್ನು ಇಡುತ್ತದೆ. ಬೀದಿ ದೀಪಕ್ಕೆ ಬರುವ ಹುಳುಗಳು, ಚಿಕ್ಕ ಚಿಕ್ಕ ಇಲಿ, ಕಪ್ಪೆಗಳನ್ನು ಹಿಡಿದು ತಿನ್ನುತ್ತವೆ.
ಚಿತ್ರಗಳು: ಸನತ್ ಶಾನುಭೋಗ..
ಲೇಖನ: ದೀಪ್ತಿ ಎನ್.