ಚಿಟ್ಟೆಯ ಗೆಳೆತನ
© ದೀಪ್ತಿ ಎನ್.
ಬಣ್ಣ ಬಣ್ಣದ ಚಿತ್ತಾರಗಳ ಉಡುಪಿನಲ್ಲಿ ಕಂಗೊಳಿಸುವ ಚಿಟ್ಟೆಯು ಎಲ್ಲರ ಗಮನವನ್ನು ಸೆಳೆಯುತ್ತದೆ. ನನಗೆ ಚಿಟ್ಟೆಗಳ ಲೋಕದ ಪರಿಚಯವಾದದ್ದು ’ಅಡವಿ ಫೀಲ್ಡ್ ಸ್ಟೇಷನ್’ನಲ್ಲಿ WCG ತಂಡದವರು 2019 ರಲ್ಲಿ ಆಯೋಜಿಸಿದ್ದ ‘Butterfly walk’ ಕಾರ್ಯಕ್ರಮದಿಂದ. ಅಂದು ಸಂಶೋಧಕರು ಹಾಗೂ HRBSFನ ಸಹ ಸಂಸ್ಥಾಪಕರೂ ಆದ ಶ್ರೀ ಚತುರ್ವೇದ್ ರವರು ಚಿಟ್ಟೆಗಳ ಕುರಿತು ಅನೇಕ ಮಾಹಿತಿಗಳನ್ನು ನೀಡಿ, ಸುತ್ತಮುತ್ತಲೂ ಸಿಗುವ ಸಾಮಾನ್ಯ ಚಿಟ್ಟೆಗಳನ್ನು ತೋರಿಸಿ ಆನಂದದ ರುಚಿಯನ್ನು ಉಣಬಡಿಸಿದ್ದರು. ಪ್ರತಿಯೊಂದು ಪ್ರಭೇದದ ಚಿಟ್ಟೆಗಳಿಗೆ ಅದರದ್ದೇ ಆದ ನಿರ್ದಿಷ್ಟ ಆಶ್ರಿತ ಸಸ್ಯವಿರುತ್ತದೆ. ತನ್ನ ಸಂಪೂರ್ಣ ಜೀವನ ಚಕ್ರವನ್ನು ಆ ಸಸ್ಯದಲ್ಲೇ ಕೈಗೊಳ್ಳುತ್ತದೆ ಎಂಬುದನ್ನು ಆ ಕಾರ್ಯಕ್ರಮದಲ್ಲಿ ಸವಿವರವಾಗಿ ತಿಳಿಸಿಕೊಟ್ಟಿದ್ದರು.
ಅಂದಿನಿಂದ ಸುತ್ತಮುತ್ತಲು ಕಾಣಸಿಗುವ ಚಿಟ್ಟೆಗಳನ್ನೂ, ಕಂಬಳಿಹುಳುಗಳನ್ನು ಗಮನಿಸಲು ಶುರುಮಾಡಿದೆ. ಜೀವ ವಿಜ್ಞಾನದ ವಿದ್ಯಾರ್ಥಿಯಾಗಿದ್ದ ನನಗೆ ಬರಿ ಇಷ್ಟರಲ್ಲೇ ಮನಸ್ಸು ತೃಪ್ತಿಪಡಲಿಲ್ಲ, ನೋಡಲು ವಿಚಿತ್ರವಾಗಿ ಕಾಣುವ ಕಂಬಳಿ ಹುಳುವು ಹೇಗೆ ಅಷ್ಟು ಸುಂದರವಾದ ಚಿಟ್ಟೆಯಾಗುತ್ತದೆ ಎಂಬುದನ್ನು ಒಮ್ಮೆ ನೋಡಬೇಕು ಎಂಬ ಕುತೂಹಲ ಮನದಲ್ಲೇ ನೆಲೆ ಮಾಡಿತ್ತು.
ಈ ವಿಸ್ಮಯವನ್ನು ಕಣ್ಣೆದುರಿಗೇ ವೀಕ್ಷಿಸಿ ಆನಂದಿಸಲು ಕಡೆಗೂ ಒಂದು ಅವಕಾಶ ಕೂಡಿ ಬಂತು. ಒಮ್ಮೆ ನನ್ನ ಅಣ್ಣನ ಮನೆಯ ಹಿತ್ತಲಲ್ಲಿನ ನಿಂಬೆ ಗಿಡದಲ್ಲಿ ಪಕ್ಷಿಗಳ ಹಿಕ್ಕೆಯಂತೆ ಕಾಣುವ ಮುಳ್ಳು ಮುಳ್ಳಾದ, ಕಂದು ಬಣ್ಣದ ಅತಿ ಪುಟ್ಟ ಹುಳುಗಳನ್ನು ಕಂಡೆನು. ಕಸದಂತೆ ಕಾಣುವ ಅವು ಹುಳುವೆಂದು ಗುರುತಿಸಲಾಗದಷ್ಟು ಕಿರಿದಾಗಿದ್ದವು. ನಿಂಬೆ ಗಿಡದಲ್ಲಿ ಇದ್ದುದರಿಂದ ಇದು ನಿಂಬೆ ಚಿಟ್ಟೆಯ ಮರಿಹುಳುವಿರಬಹುದೆಂದು ನನ್ನ ಅನಿಸಿಕೆಯಾಗಿತ್ತು. ಚಿಟ್ಟೆಯ ಮರಿಹುಳುವು ಐದು ಹಂತಗಳಲ್ಲಿ ಬೆಳೆವಣಿಗೆಯಾಗುತ್ತದೆ ಎಂದು ಮುಂಚೆಯೇ ತಿಳಿದಿದ್ದ ನನಗೆ, ಇದು ಹೇಗೆ ಚಿಟ್ಟೆಯಾಗುತ್ತದೆ ಎಂದು ಪರೀಕ್ಷಿಸಲೇಬೇಕೆಂದು ಪ್ಲಾಸ್ಟಿಕ್ ಡಬ್ಬವೊಂದನ್ನು ಹುಡುಕಿ, ಅದರ ಮುಚ್ಚಳಿಕೆಗೆ ಗಾಳಿಯಾಡಲು ರಂದ್ರಗಳನ್ನು ಮಾಡಿ, ಒಂದು ಹುಳುವಿದ್ದ ಎಲೆಯನ್ನು, ಜೊತೆಗೆ ಕೊಂಚ ತಾಜಾ ಎಲೆಗಳನ್ನು ಹಾಕಿ ಮನೆಗೆ ಸಾಗಿಸಿದೆ. ಇವು ಪುಟ್ಟದಾಗಿದ್ದುದರಿಂದ ಹೆಚ್ಚು ಎಲೆಗಳನ್ನೇನು ಸೇವಿಸುತ್ತಿರಲಿಲ್ಲ. ಆದರೂ ದಿನನಿತ್ಯ ನಿಂಬೆ ಗಿಡದ, ತಾಜಾ ಎಳೆ ಎಲೆಗಳನ್ನು ನೀಡುತ್ತಿದ್ದೆ. ಮೂರು ದಿನಗಳಲ್ಲಿ ಕಡುಗಂದು ಬಣ್ಣ, ಬಿಳಿ ಪಟ್ಟೆಯ ಮುಳ್ಳು ಪದರವನ್ನೊಳಗೊಂಡ ಹುಳುವಾಗಿ ಮಾರ್ಪಾಡಾಯಿತು. ಹೀಗೆ ಕೊಂಚ ಓಡಾಟವನ್ನು ಶುರುಮಾಡಿ ಎಲೆಗಳನ್ನು ತಿನ್ನುತ್ತಾ ತಿನ್ನುತ್ತಾ ದಡೂತಿಯಾಗಿ ನಾಲ್ಕು ದಿನಗಳಲ್ಲಿ ನಾಲ್ಕನೇ ಹಂತವನ್ನು ತಲುಪಿತು. ಪ್ರತಿ ಹಂತದಲ್ಲೂ ಈ ಹುಳುವು ತನ್ನ ಹೊರಕವಚವನ್ನು ಕಳಚುತ್ತಿತ್ತು. ಒಂದು ದಿನ ನೋಡನೋಡುತ್ತಿದ್ದಂತೆ ಉದುರಿದ್ದ ತನ್ನ ಹೊರ ಕವಚವನ್ನು ತಿನ್ನಲಾರಂಬಿಸಿತು!! ಈ ಸ್ವಭಾವಕ್ಕೆ ಎರಡು ಕಾರಣಗಳಿರಬಹುದು. ಒಂದು, ಹೊರಕವಚವು ಹೆಚ್ಚು ಪ್ರೋಟೀನ್ ಯುಕ್ತವಾಗಿದ್ದು, ಪುಷ್ಟಿ ನೀಡುತ್ತದೆ. ಎರಡು, ತಾನು ಹೊರಕವಚ ಕಳಚಿರುವ ಕುರುಹನ್ನು ಪರಭಕ್ಷಕರಿಂದ ಮರೆಮಾಚಲು. ಹೀಗೆ ಇನ್ನೊಮ್ಮೆ ತನ್ನ ಹೊರಕವಚ ಕಳಚಿ ಹೊಸ ಹಸಿರು ಬಣ್ಣದ ಉಡುಪನ್ನು ಧರಿಸಿ ಎರಡು ದಿನಗಳಲ್ಲಿ ಐದನೇ ಹಂತ ತಲುಪಿತು. ಸುಮಾರು ನಾಲ್ಕು ದಿನಗಳವರೆಗೆ ಬಕಾಸುರನಂತೆ ತಿನ್ನುತ್ತಿತ್ತು. ಮುಂಜಾನೆ ಹಾಕಿದ ಎಲೆಗಳು ಮಧ್ಯಾಹ್ನದ ವೇಳೆಗೆ ಮಾಯ!! ಎಷ್ಟು ಎಲೆಗಳನ್ನು ನೀಡಿದರೂಅಷ್ಟನ್ನು ತಿಂದು ತೇಗಿ ನಿದ್ರಿಸುತ್ತಿತ್ತು.
ಕೊನೆಗೂ ಅತ್ತಿತ್ತ ಓಡಾಡಿ ಡಬ್ಬಿಯೊಳಗೆ ಸೂಕ್ತ ಸ್ಥಳವನ್ನು ಹುಡುಕಿ ನೂಲಿನಂತ ಪದಾರ್ಥವನ್ನು ಬಾಯಿಂದ ಹೊರತೆಗೆದು ಡಬ್ಬಿಗೆ ಅಂಟಿಸಿಕೊಂಡು ಪ್ಯೂಪ ಆಗಲು ಸಜ್ಜಾಯಿತು. ಒಂದು ದಿನದ ತರುವಾಯ ಅದು ಈ ಹಿಂದೆ ಹುಳುವಾಗಿತ್ತೆ? ಎಂಬ ಅನುಮಾನ ಬರುವ ರೀತಿ ಆಕಾರ ಬದಲಾಯಿಸಿತಷ್ಟೇ ಅಲ್ಲ, ತನ್ನ ಸುತ್ತಲೂ ಕೋಶವನ್ನು ನಿರ್ಮಿಸಿಕೊಂಡಿತ್ತು!! ಇಷ್ಟೆಲ್ಲಾ ಮುಗಿದ ನಂತರ ಚಿಟ್ಟೆ ಹೊರ ಬರಲಿಕ್ಕೆ ಕಾಯಬೇಕಾದ ಕೆಲಸವೊಂದು ಬಾಕಿಯಿತ್ತು. ಪ್ರತಿದಿನ ಪ್ಯೂಪವನ್ನು ಗಮನಿಸುವುದು, ಒಳಗೆ ಏನು ನಡೆಯುತ್ತಿರಬಹುದು ಎಂದು ಯೋಚಿಸುವುದು ನನ್ನ ದಿನಚರಿಯಾಯಿತು.
ಸರಿಯಾಗಿ ಹತ್ತು ದಿನಗಳ ನಂತರ ಎಂದಿನಂತೆ ಮುಂಜಾನೆ ಪ್ಯೂಪ ನೋಡಲು ಹೋದ ನನಗೆ ಅಚ್ಚರಿ ಕಾದಿತ್ತು. ಅಲ್ಲಿದ್ದ ಪ್ಯುಪಾ ಹೊಡೆದು ಸುಂದರವಾದ ಚಿಟ್ಟೆ ಹೊರ ಬಂದಿತ್ತು. ವಾಹ್!!! ಎಂತಹ ಸೌಂದರ್ಯ!! ವಾಕರಿಕೆ ಬರಿಸುವ ಹಾಗೆ ಇದ್ದಂತಹ ಕಂಬಳಿ ಹುಳು ಇದೇನಾ? ಎನ್ನುವಷ್ಟು ಬದಲಾವಣೆ. ಇದು ಯಾವ ಚಿಟ್ಟೆ ಇರಬಹುದು ಎಂದು ನಾನು ಫೋಟೋ ತೆಗೆದು ತಿಳಿದಿದ್ದ ಸ್ನೇಹಿತರ ಬಳಿ ಕೇಳಿದಾಗ ತಿಳಿಯಿತು ಇದು ಲೈಮ್ ಬಟರ್ಫ್ಲೈ (lime Butterfly), ಲೈಮ್ ಸ್ವಾಲೋಟೇಲ್ (lime swallow tail) ಎಂದೂ ಕರೆಯುತ್ತಾರೆ, ಹಾಗೂ ಕೀಟಗಳ ಪ್ಯಾಪಿಲಿಯೊನಿಡೆ (Papilionidae) ಕುಟುಂಬಕ್ಕೆ ಸೇರಿಸಲಾಗಿದೆ ಎಂದು. ರೆಕ್ಕೆ ಬಂದ ಮೇಲೆ ಇದನ್ನು ಇನ್ನೂ ಬಾಟಲಿನಲ್ಲೇ ಇರುವುದು ತಪ್ಪಾಗುತ್ತದೆ ಎಂದು ತಿಳಿದ ನಾನು, ಮುಟ್ಟದೆ ಅದನ್ನು ಮನೆಯ ಹೊರಗಡೆ ಇದ್ದ ಒಂದು ಸಣ್ಣ ಗಿಡದ ಮೇಲೆ ಬಿಟ್ಟೆ. ಆದರೆ ನನ್ನ ಊಹೆಯಂತೆ ಅದು ಹಾರದೆ ರೆಕ್ಕೆ ತಟಸ್ಥವಾಗಿಯು ಮೊದ ಮೊದಲು ಇದರ ವರ್ತನೆ ತಿಳಿಯದ ನನಗೆ ತಿಳಿದದ್ದು ಇನ್ನೂ ದುರ್ಬಲವಾಗಿದ್ದ ಅದರ ರೆಕ್ಕೆಗಳನ್ನು ಮಡಚಿಟ್ಟುಕ್ಕೊಂಡು ಹಾರಿಸಿಕೊಳ್ಳುತ್ತಿದೆ ಎಂದು. ಸುಮಾರು ಒಂದು ತಾಸಿನ ಬಳಿಕ ರೆಕ್ಕೆಯನ್ನು ಬಿಚ್ಚಿ ತನ್ನ ಪೂರ್ಣ ಸೌಂದರ್ಯವನ್ನು ಪ್ರದರ್ಶಿಸಿತು. ರೆಕ್ಕೆಯನ್ನು ಬಡಿಯುತ್ತಾ ಅವುಗಳನ್ನು ಬಲಪಡಿಸಿಕೊಳ್ಳುತ್ತಿತ್ತು. ಕ್ಷಣಾರ್ಧದಲ್ಲಿ ರೆಕ್ಕೆಗಳನ್ನು ಪಟಪಟನೆ ಬಡಿಯುತ್ತಾ ಬಾನೆಡೆಗೆ ಜಿಗಿದು ಹಾರಿತು. ಅಷ್ಟು ದಿನಗಳ ಕಾಲ ನನ್ನೊಡನೆ ಇದ್ದ ಗೆಳೆಯನಿಗೆ ಟಾಟಾ ಹೇಳುತ್ತಾ, ಇಂತಹ ಅತ್ಯದ್ಭುತವಾದ ರೂಪ ಪರಿವರ್ತನೆಯ ಪ್ರಕ್ರಿಯೆಯನ್ನು ತನ್ನಲ್ಲಿ ಅಡಗಿಸಿಕೊಂಡಿರುವ ಪ್ರಕೃತಿ ಮಾತೆಗೆ ವಂದಿಸಿ ಮನೆಯ ಕಡೆ ಹಿಂದಿರುಗಿದೆ.
ಚಿತ್ರ – ಲೇಖನ: ದೀಪ್ತಿ ಎನ್.
ಬಂಗಾರಪೇಟೆ, ಕೋಲಾರ ಜಿಲ್ಲೆ