ಒಂದು ಮುತ್ತಿನ ಸುತ್ತ…

ಒಂದು ಮುತ್ತಿನ ಸುತ್ತ…

© pearl5

ಅವನ ಹೆಸರು ಐತು. ಕಡಲ ತೀರ ಅವನ ಬಿಡಾರ. ಮನೆ, ಮಕ್ಕಳು, ಸಂಸಾರ ಎಲ್ಲದನ್ನೂ ಪೋಷಿಸುವುದಕ್ಕೆ ಕಡಲೇ ಅವನಿಗೆ ಆಧಾರ. ಕಡಲಿಗೆ ಹೋಗಿ ಮೀನು ಹಿಡಿದು ತಂದು ಮಾರಿ ಜೀವನ ನಡೆಸುವ ಒಬ್ಬ ಸಾಮಾನ್ಯ ಮೀನುಗಾರ. ಎಲ್ಲಾ ಚೆನ್ನಾಗಿ ನಡೆಯುವ ಸಮಯದಲ್ಲಿ ಒಂದು ದೊಡ್ಡ ಗಾತ್ರದ ಕಡಲ ಮುತ್ತು ಅವನ ಜೀವನ ಪ್ರವೇಶ ಮಾಡುತ್ತದೆ. ಪ್ರಕೃತಿಯ ಅಪರೂಪ ಮತ್ತು ಮಾನವನ ಗುಣಗಳ ನಡುವೆ ನಡೆಯುವ ಸ್ವಾರಸ್ಯ ಕಥಾ ಭಾಗ ‘ಒಂದು ಮುತ್ತಿನ ಕಥೆ’. ರಾಜ್ ಕುಮಾರ್ ರವರು ಮುಖ್ಯ ಭೂಮಿಕೆಯಲ್ಲಿ ನಟಿಸಿ, ಶಂಕರ್ ನಾಗ್ ರವರು ನಿರ್ದೇಶಿಸಿದ ಕನ್ನಡದ ಹೆಮ್ಮೆಯ ಚಲನಚಿತ್ರ. ಇದು ಒಂದು ಮುತ್ತಿನ ಸುತ್ತಲೂ ನಡೆಯುವ ಕಥೆ. ಆದರೆ ನಾನು ಹೇಳಲು ಹೊರಟಿರುವುದು, ಅಂತಹ ಒಂದು ಸುಂದರ ಮುತ್ತು ಹೇಗಾಗುತ್ತದೆ ಎಂಬ ಕಥೆ.

© pearl4

ಒಂದೊಂದಾಗಿ ದಾರದೊಡನೆ ಸೇರಿ ಕೊರಳನ್ನು ಸಿಂಗರಿಸುವ, ಸಮುದ್ರದಾಳದಲ್ಲಿನ ಸಣ್ಣ ಪೆಟ್ಟಿಗೆಯಲ್ಲಿ ಸಿಗುವ, ಆ ಮುತ್ತು ಆಗುವುದು ಸ್ವಾತಿ ಮುತ್ತಿನ ಮಳೆಹನಿಯು ಕಪ್ಪೆ ಚಿಪ್ಪಿನಲ್ಲಿ ಸೇರಿ ಎಂಬ ನಂಬಿಕೆಯಿದೆ. ಆದರೆ ವಿಜ್ಞಾನ ಹೇಳುವುದು ಹೀಗೆ, ಕಪ್ಪೆ ಚಿಪ್ಪಿನ ಒಳಗೆ ಯಾವುದಾದರೂ ಸಣ್ಣ ಕಲ್ಲೋ, ಮಣ್ಣೋ ಅಥವಾ ಯಾವುದೇ ಅನ್ಯವಸ್ತು ಕಾರಣಾಂತರಗಳಿಂದ ಒಳಗೆ ಬಂದರೆ ಅದರಿಂದ ತನಗಾಗಬಹುದಾದ ಅಪಾಯವನ್ನು ತಡೆಯಲು ಕಪ್ಪೆ ಚಿಪ್ಪಿನ ಒಳಗಿರುವ ಜೀವಿ ಕಂಡುಕೊಂಡಿರುವ ಉಪಾಯವೇ ಈ ಮುತ್ತು. ಅರ್ಥವಾಗಲಿಲ್ಲವೇ? ಇನ್ನೂ ವಿವರವಾಗಿ ಹೇಳುತ್ತೇನೆ, ನಮ್ಮ ದೇಹಕ್ಕೆ ಯಾವುದಾದರೂ ಗಾಯವಾದರೆ ಬಿಳಿರಕ್ತ ಕಣಗಳು ಆ ಜಾಗಕ್ಕೆ ನುಗ್ಗಿ ನಮ್ಮ ದೇಹಕ್ಕೆ ಹಾನಿ ಉಂಟುಮಾಡುವ ಕ್ರಿಮಿಗಳ ಜೊತೆ ಯುದ್ಧ ಮಾಡುತ್ತವೆ. ಅದರಲ್ಲಿ ಅಸುನೀಗಿದ ಬಿಳಿರಕ್ತಕಣಗಳು ನಾವು ಗಾಯದ ಸುತ್ತ ಕಾಣುವ ಕೀವು. ಇಲ್ಲಿ ಕಪ್ಪೆಚಿಪ್ಪು ದೇಹದ ಹಾಗೆ ಅದರೊಳಗೆ ನುಗ್ಗುವ ಮಣ್ಣಿನ ಅಥವಾ ಕಲ್ಲಿನ ಕಣ ಅಲ್ಲಿನ ಮೃದ್ವಂಗಿಯ ಜೀವನಕ್ಕೆ ಅಪಾಯತರಬಹುದು, ಅದನ್ನು ತಡೆಯಲು ನಾಕ್ರೆ (nacre) ಎಂದು ಕರೆಯಲ್ಪಡುವ ಖನಿಜ ಮತ್ತು ಒಂದು ಬಗೆಯ ಪ್ರೋಟೀನನ್ನು ಸ್ರವಿಸಿ ಅದರ ಸುತ್ತ ಒಂದೊಂದಾಗಿ ಲೇಪಿಸುತ್ತದೆ. ಕ್ರಮೇಣ ಹೀಗೆ ಸುತ್ತಿದ ಸಾವಿರಾರು ಪದರಗಳು ಕೊನೆಗೆ ಸುಂದರವಾಗಿ ನಾವು ಕಾಣುವ ಮುತ್ತಾಗಿ ಮಾರ್ಪಾಡಾಗುತ್ತದೆ. ಆದರೆ ಅಷ್ಟು ನಿಖರವಾಗಿ ಗೋಳಾಕಾರವನ್ನು ಪಡೆಯಲು ಮೃದ್ವಂಗಿ ಯಾವ ರೇಖಾಗಣಿತದ ಸೂತ್ರಗಳನ್ನು ಬಳಸಿತ್ತೋ ಯಾರಿಗೂ ತಿಳಿಯದು.

ಈ ನಾಕ್ರೆ ಎಂಬ ವಸ್ತು ಬಲು ಸುಂದರ, ವರ್ಣ ವೈವಿಧ್ಯ ಮತ್ತು ಹೊಳಪನ್ನು ಹೊಂದಿದೆ. ಇದು ಹೆಚ್ಚಾಗಿ ಕಪ್ಪೆ ಚಿಪ್ಪಿನ ಒಳ ಪದರದಲ್ಲಿ ಅಥವಾ ಹೊಳೆವ ಮುತ್ತಿನ ಮೇಲ್ಮೈ ಮೇಲೆ ಕಾಣುತ್ತದೆ. ಈ ಮುತ್ತಿನ ಸಮ್ಮಿತಿಯ (symmetry) ಪದರಗಳನ್ನು ಜೋಡಿಸುವಾಗ ಮಧ್ಯದಲ್ಲಿ ಉಂಟಾಗುವ ಕ್ಷೀಣತೆಗಳನ್ನು (abberations) ಮುಂದಿನ ಪದರವನ್ನು ಲೇಪಿಸುವಾಗ ಸರಿಪಡಿಸಿಕೊಳ್ಳುತ್ತದೆ. ಹೀಗೆ ಪ್ರತೀ ಪದರದಲ್ಲೂ ಸಣ್ಣ ಪುಟ್ಟ ಕ್ಷೀಣತೆಗಳನ್ನು ಸರಿದೂಗಿಸುವಂತಹ ದಪ್ಪ ಅಥವಾ ಸಣ್ಣ ಪದರವನ್ನು ಲೇಪಿಸುವ ಮೂಲಕ ಕ್ಷೀಣತೆಯಿಂದ ಮುತ್ತಾಗುವ ಕೊನೆಯ ಹಂತದಲ್ಲಿ ಆಗುವ ವಿಕಾರತೆಯನ್ನು ತಡೆಯುತ್ತದೆ. ಇಲ್ಲವಾದರೆ ನಾವು ಕಾಣುವ ಹಾಗೆ ಮುತ್ತು ಗೋಳಾಕಾರವಾಗಿರದೆ ಕಡಲೆ ಕಾಳಿನಂತೆ ವಿಕೃತಿಯನ್ನು ಪಡೆಯುತ್ತಿತ್ತು. ಅಷ್ಟೇ ಅಲ್ಲ ಕೆಲವೊಮ್ಮೆ ಮೃದ್ವಂಗಿ ಲೇಪಿಸುವ ನಾಕ್ರೆಯ ಪದರ ದಪ್ಪವಾಗಬಹುದು, ಆಗ ಅದನ್ನು ಸರಿದೂಗಿಸಲು ಮುಂದಿನ ಕೆಲವು ಪದರಗಳನ್ನು ಸಣ್ಣದಾಗಿ ಲೇಪಿಸುತ್ತದೆ. ಇದರಿಂದ ಲೇಪಿಸುವ ಸಾವಿರಾರು ಪದರಗಳ ಸರಾಸರಿ ದಪ್ಪ ಒಂದೇ ಇರುವ ಹಾಗೆ ನೋಡಿಕೊಳ್ಳುತ್ತದೆ. ಇಲ್ಲವಾದರೆ ಪದರ ಪದರಗಳಾಗಿರುವ ಕಣಶಿಲೆಗೂ (sedimentary rock) ನಮ್ಮ ಮುತ್ತಿಗೂ ಯಾವುದೇ ವ್ಯತ್ಯಾಸಗಳಿರುತ್ತಿರಲಿಲ್ಲ.

© JIS EOK GIM

ಇದನ್ನು ತಿಳಿಯಲೆಂದು ಕೆಲವು ಸಂಶೋಧಕರು ಪೂರ್ವ ಆಸ್ಟ್ರೇಲಿಯಾದ ಕಡಲತೀರಕ್ಕೆ ಹೊರಟರು. ಅಲ್ಲಿ ದೊರೆಯುವ ‘ಅಕೋಯ’ ಎಂಬ ಕಪ್ಪೆಚಿಪ್ಪಿನ ಒಳಗೆ ಸಿಗುವ ‘ಕೇಶಿ’ ಎಂಬ ಮುತ್ತನ್ನು ಸಂಶೋಧನೆಗೆಂದು ಆರಿಸಿಕೊಂಡರು. ಅದನ್ನು ವಜ್ರದ ತಂತಿಯಿಂದ ಮಾಡಿದ ಗರಗಸದಿಂದ ಅರ್ಧಕ್ಕೆ ಕತ್ತರಿಸಿ ಅದನ್ನು ನಮ್ಮ ‘ರಾಮನ್ ಸ್ಪೆಕ್ಟ್ರೋಸ್ಕೋಪಿ’ಯನ್ನು ಬಳಸಿ ಪರೀಕ್ಷಿಸಿದರು. ಅವರು ಪರೀಕ್ಷಿಸಿದ ಮುತ್ತುಗಳೊಂದರಲ್ಲಿ ಅವರು ಎಣಿಸಿದ್ದು 2,615 ಪದರಗಳು. ಇದನ್ನು ಮಾಡಲು ಆ ಮೃದ್ವಂಗಿ ತೆಗೆದುಕೊಂಡದ್ದು ಸುಮಾರು 548 ದಿನಗಳು. ಅದರ ಚಿತ್ರವನ್ನು ಈ ಕೆಳಗೆ ಕಾಣಬಹುದು.

© Freshwater_pearl_texturedloose

ಮುಂದುವರಿದ ಸಂಶೋಧನೆಯಲ್ಲಿ ತಿಳಿದದ್ದು, ಮುತ್ತಿನ ಪದರಗಳು ‘1/f ನಾಯ್ಸ್’ ಅಥವಾ ‘ಪಿಂಕ್ ನಾಯ್ಸ್’ ಎಂಬ ವಿದ್ಯಮಾನವನ್ನು ತೋರುತ್ತಿದ್ದವಂತೆ. ಅಂದರೆ ವಿವಿಧ ಗಾತ್ರಗಳಲ್ಲಿ ಇದ್ದ ಮುತ್ತಿನ ಪದರಗಳು ಸುಮ್ಮನೆ ಹಾಗೆ ಬಂದವಲ್ಲ. ಬದಲಿಗೆ ತಪ್ಪಾದ ಪದರವನ್ನು ಸರಿಪಡಿಸಲು ಮೃದ್ವಂಗಿಯೇ ಸ್ವತಃ ಸರಿಪಡಿಸಲು ಲೆಕ್ಕಾಚಾರ ಮಾಡಿ ಹೊದಿಸಿದ ಪದರಗಳು. ಇದನ್ನು ಭೂಕಂಪನದಲ್ಲಿ ಭೂಮಿ ನಡುಗುವ ರೀತಿ ಸಾಮ್ಯತೆ ಇಲ್ಲ ಎಂದನಿಸಿದರೂ ಅದೂ ಸಹ ಹಿಂದಿನ ಕಂಪನಕ್ಕೆ ಅನುಗುಣವಾಗಿ ಮುಂದಿನ ಕಂಪನದ ತೀವ್ರತೆ ನಿರ್ಧಾರವಾಗುತ್ತದೆ ಎನ್ನುತ್ತಾರೆ ಸಂಶೋಧಕ ರಾಬರ್ಟ್ ಹೋವ್ಡನ್. ಹಾಗೂ ಸಂಗೀತದಲ್ಲೂ ಇಂತಹದೇ ವಿದ್ಯಮಾನ ಕಾಣಬಹುದು.

© pearl2

ಇದೇ ಮೊದಲಬಾರಿಗೆ ಮುತ್ತನ್ನು ಮಾಡುವ ಕಚ್ಛಾವಸ್ತುವಾದ ನಾಕ್ರೆ ಎಂಬ ಖನಿಜ, ಬೇರೆ ಯಾವುದೇ ಹೊರ ವಸ್ತುವಿನ ಸಹಾಯವಿಲ್ಲದೆ ಸ್ವ-ಸರಿಪಡಿಸಿಕೊಳ್ಳುವ ಗುಣವನ್ನು ಹೊಂದಿದೆ ಎಂಬ ವಿಷಯವನ್ನು ಸಂಶೋಧಿಸಿ ಕಂಡುಹಿಡಿದದ್ದು. ಅಷ್ಟೇ ಎಂದು ತಿಳಿದೀರಿ, ಈ ನಾಕ್ರೆ ಎಷ್ಟು ಮಹತ್ವದ್ದೆಂದರೆ ತಾನು ತಯಾರಾಗಿರುವ ಮೂಲ ವಸ್ತುಗಳಾದ ಕ್ಯಾಲ್ಶಿಯಮ್ ಕಾರ್ಬೊನೇಟ್ ಮತ್ತು ಪ್ರೋಟೀನಿಗಿಂತ 3000ಪಟ್ಟು ಹೆಚ್ಚು ಬಿರುಸಾದುದು. ಅತ್ಯಂತ ಹಗುರ ಮತ್ತು ಬಿರುಸಾದ ಇಂತಹ ವಸ್ತುಗಳನ್ನು ಪ್ರಕೃತಿಯ ಸಣ್ಣ ಸಣ್ಣ ಜೀವಿಗಳು ಯಾವುದೇ ಆಯಾಸವಿಲ್ಲದೆ ಮತ್ತು ನಾವು ಹೆಮ್ಮೆಯಿಂದ ಜಂಭಕೊಚ್ಚಿಕೊಳ್ಳುವ ಉನ್ನತ ಟೆಕ್ನಾಲಜಿಗಳನ್ನು ಬಳಸದೇ ತಯಾರಿಸುತ್ತವೆ.

ವ್ಯಂಗ್ಯವೆಂದರೆ, ಈ ಜೀವಿಗಳ ಸಾಮರ್ಥ್ಯ ಕಂಡು ಬೆರಗಾಗಿ, ನಮ್ಮಲ್ಲಿ ಅವನ್ನು ಅಳವಡಿಸಿಕೊಳ್ಳಲು ಈಗಲೂ ಎಡೆಬಿಡದ ಪ್ರಯತ್ನಗಳು ಸಾಗುತ್ತಿವೆ.

© pearl6

ಮೂಲ ಲೇಖನ: ScienceNewsforStudents

ಲೇಖನ: ಜೈಕುಮಾರ್ ಆರ್.
    ಡಬ್ಲ್ಯೂ
.ಸಿ.ಜಿ, ಬೆಂಗಳೂರು

Print Friendly, PDF & Email
Spread the love
error: Content is protected.