ಆಫ್ರಿಕನ್ ಟ್ಯುಲಿಪ್ ಮರವೂ. . . ಖಗರತ್ನಗಳೂ

ಆಫ್ರಿಕನ್ ಟ್ಯುಲಿಪ್ ಮರವೂ. . .  ಖಗರತ್ನಗಳೂ

© ಸಿದ್ಧರಾಮ ಹಿರೇಮಠ ಕೂಡ್ಲಿಗಿ

ಮೊನ್ನೆ ಪತ್ರಕರ್ತ ಮಿತ್ರ ಸೋಮಶೇಖರ್ ಆರಾಧ್ಯ ಫೋನ್ ಮಾಡಿದ್ದರು. “ಸರ್ ತಹಶೀಲ್ದಾರ್ ಕಛೇರಿ ಹತ್ತಿರ ಸಾಕಷ್ಟು ಹೂ ಬಿಟ್ಟ ಮರ ಇದೆ. ಅಲ್ಲಿ ಯಾವ್ಯಾವೋ ನೂರಾರು ಪಕ್ಷಿ ಇವೆ. ನೀವು ಬೆಳ್ ಬೆಳಿಗ್ಗೆ ಹೋದರೆ ಸಾಕಷ್ಟು ಆರಾಮವಾಗಿ ಫೋಟೊ ತೆಗೀಬಹುದು “ಅಂದರು. ಇಷ್ಟು ಮಾಹಿತಿ ಸಿಕ್ಕರೆ ಸಾಕಲ್ಲವೇ? ಮತ್ತೆ ನನ್ನೊಳಗಿನ ಫೋಟೊಗ್ರಾಫರ್ ಜಾಗೃತನಾಗಿಬಿಟ್ಟ. ಬೆಳಿಗ್ಗೆ ಬೇಗನೆ ಎದ್ದು ರೂಢಿ. ಎದ್ದ ತಕ್ಷಣವೇ ಹೆಗಲಿಗೆ ಕೆಮರಾ ಬ್ಯಾಗ್ ಹಾಕಿಕೊಂಡು, ಹೊಸ ಗೆಳೆಯನ ಸ್ಕೂಟಿ ಏರಿ ಹೊರಟೆ.

© ಸಿದ್ಧರಾಮ ಹಿರೇಮಠ ಕೂಡ್ಲಿಗಿ

ಊರ ಹೊರಭಾಗದಲ್ಲಿರುವ ತಹಶೀಲ್ದಾರ್ ಕಛೇರಿಯ ಆವರಣ ಪ್ರವೇಶಿಸಿದೆ. ಅದೇ ತಾನೆ ಚುಮುಚುಮು ಬೆಳಗು. ವಾತಾವರಣ ಹಿತಕರವಾಗಿತ್ತು. ಅಷ್ಟು ದೊಡ್ಡ ಆವರಣದಲ್ಲಿ ಆರಾಧ್ಯ ಹೇಳಿದ ಮರ ಯಾವುದು? ಎಲ್ಲಿ ಹಕ್ಕಿಗಳಿವೆ ಅಂತ ಸುತ್ತಲೂ ನೋಡುತ್ತ ಒಂದೆಡೆ ನಿಂತೆ. ಅರೆ! ಏನಾಶ್ಚರ್ಯ. “ಹುಡುಕುವ ಬಳ್ಳಿ ಕಾಲ್ತೊಡರಿದಂತಾಯ್ತ” ಎಂಬಂತೆ ಕಣ್ಣೆದುರೇ ಮರವಿತ್ತು. ಅದರ ಮೈತುಂಬ ಎಷ್ಟು ಚಂದದ ಕೆಂಪನೆಯ ಹೂಗಳರಳಿದ್ದವೆಂದರೆ ನನಗೇ ಅಚ್ಚರಿಯಾಯ್ತು. ಪ್ರತಿಯೊಂದು ಟೊಂಗೆಯಲ್ಲೂ ಕಂದು ವರ್ಣದ ಮೊಗ್ಗುಗಳ ಗುಚ್ಛ ಅದರೊಳಗಿಂದ ಆ ಮೊಗ್ಗನ್ನೇ ಸೀಳಿ ಬಂದಿವೆಯೇನೋ ಎಂಬಂತಹ ಹಳದಿ ಕೆಂಪು ಮಿಶ್ರಿತ ಗಾಢ ಬಣ್ಣದ ಹೂಗಳು. ಅದರ ಅಂಚುಗಳೆಲ್ಲ ತೆಳು ಹಳದಿ ಬಣ್ಣ. ವಾಹ್ ಅನಿಸಿಬಿಟ್ಟಿತು. ಇಡೀ ಮರ ಕಡುಗೆಂಪು, ಹೂಗಳನ್ನರಳಿಸಿಕೊಂಡು ಹೇಗೆ ನಿಂತಿತ್ತೆಂದರೆ ನಿಗಿನಿಗಿ ಕೆಂಡಗಳನ್ನೇ ಹೊತ್ತಿದೆಯೇನೋ ಅನಿಸಿಬಿಟ್ಟಿತು. ಮರದ ಕೆಳಗೆ ಉದುರಿದ ಹೂಗಳು ಇಡೀ ನೆಲವನ್ನೇ ಕೆಂಡದ ನೆಲವನ್ನಾಗಿಸಿತ್ತು.

© ಸಿದ್ಧರಾಮ ಹಿರೇಮಠ ಕೂಡ್ಲಿಗಿ

ಈ ಗಿಡವನ್ನು ಆಫ್ರಿಕನ್ ಟ್ಯುಲಿಪ್ ಮರ (African Tulip Tree) ಎಂದು ಕರೆಯುತ್ತಾರೆ. ಮೂಲತಃ ಆಫ್ರಿಕಾದಿಂದ ವಿಸ್ತರಣೆಗೊಳ್ಳುತ್ತ ಬಂದಿರುವ ಈ ಗಿಡದ ಎಲೆ ಹಾಗೂ ಹೂಗಳು ಔಷಧೀಯ ಗುಣಗಳನ್ನು ಹೊಂದಿವೆ. ಇದರ ಕಾಯಿ, ಹಣ್ಣು ವಿಷಮಯವಾಗಿರುತ್ತೆ. ಆಫ್ರಿಕಾದಿಂದ ಸುಡಾನ್, ಜಿನೆವಾ, ಘಾನಾ ಎಲ್ಲೆಡೆ ಹಬ್ಬಿದ ಈ ಗಿಡ ಭಾರತಕ್ಕೆ ಅದು ಹೇಗೆ ಬಂತೋ ಇಲ್ಲಿ ನಮ್ಮೆದುರು ಅರಳಿ ನಿಂತಿದೆ. ಇರಲಿ…

 ಇಂಥ ಹಿನ್ನೆಲೆ ಹೊಂದಿರುವ ಈ ಗಿಡದಲ್ಲಿ ಆಗಲೇ ಹಕ್ಕಿಗಳು ಹಾರಾಡುವುದು, ಹೂಗಳ ಮಕರಂದ ಕುಡಿಯುವುದು ನಡೆಸಿಬಿಟ್ಟಿದ್ದವು. ಅದೆಷ್ಟು ಅವು ಅದರಲ್ಲಿ ಮಗ್ನವಾಗಿದ್ದವೆಂದರೆ ಹೊರಪ್ರಪಂಚದ ಅರಿವೇ ಇಲ್ಲವೆಂಬಂತೆ ಇಡೀ ಮರವೇ ತಮ್ಮ ಆಶ್ರಯತಾಣವೆಂಬಂತೆ, ಅದೇ ತಮ್ಮ ಪ್ರಪಂಚವೆಂಬಂತೆ ಸೇರಿಬಿಟ್ಟಿದ್ದವು. ಅವುಗಳ ಗಲಾಟೆ, ಅವುಗಳ ಹೊಡೆದಾಟ ಮಜವೆನಿಸಿತ್ತು. ಟೊಂಗೆಯ ಮೇಲೆ ಕೂಡುವುದಕ್ಕೂ, ಹೂಗಳ ಬಳಿ ಬರುವುದಕ್ಕೂ ಹಕ್ಕಿಗಳು ಒಂದಕ್ಕೊಂದು ಹೊಡೆದಾಡುತ್ತಿದ್ದವು. ಪುಟ್ಟದಾಗಿರುವ ಈ ಹಕ್ಕಿಗಳಾದರೂ ಯಾವುವು ಎಂದು ನನ್ನ ಕ್ಯಾಮೆರಾ ತೆಗೆದು ಝೂಮ್ ಲೆನ್ಸ್ ಹಾಕಿ ನೋಡಿದೆ. ಅವೆಲ್ಲ ಖಗರತ್ನಗಳು (sunbird). ತಮ್ಮ ಬಾಗಿದ ಕೊಳವೆಯಂತಹ ಕೊಕ್ಕಿನಿಂದ ಅಲ್ಲೆಲ್ಲ ಹಾರಾಡುತ್ತ, ಗಲಾಟೆ ಮಾಡುತ್ತ, ಹೂಗಳ ಮೇಲೆ ಕೂಡುತ್ತ, ತಾವೇ ತಾವಾಗಿದ್ದವು. ಅವುಗಳ ಹಾರಾಟದ ಚಂದವನ್ನು ನೋಡುತ್ತಲೇ ಇದ್ದೆ. ಯಾವ ಕಡೆ ಕ್ಯಾಮೆರಾ ತಿರುಗಿಸಿದರೂ ಅಲ್ಲೊಂದು ಹಕ್ಕಿ. ಆರಾಧ್ಯ ಹೇಳಿದ್ದು ಸರಿಯಾಗೇ ಇತ್ತು. ಅಲ್ಲೆಲ್ಲ ಸಾಕಷ್ಟು ಈ ಖಗರತ್ನಗಳೇ ಇದ್ದದ್ದು. ನಾನು ಯಾವುದೇ ಸದ್ದು ಮಾಡದೆ ತೆಪ್ಪಗೆ ನಿಂತಿದ್ದಕ್ಕೇ ಅವೆಲ್ಲ ತಮ್ಮ ಪಾಡಿಗೆ ತಾವು ಚಟುವಟಿಕೆಯಿಂದಿದ್ದವು. ಹಕ್ಕಿಗಳು ತುಂಬಾ ಸೂಕ್ಷ್ಮ. ತಮ್ಮ ಏಕಾಂತಕ್ಕೆ, ಚಟುವಟಿಕೆಗೆ ಭಂಗವಾಗುವಂತಿದ್ದರೆ ಅಲ್ಲಿರುವುದಿಲ್ಲ. ಹೀಗಾಗಿ ನಾನು ದೂರದಿಂದಲೇ ಆದರೂ ತೆಪ್ಪಗೆ ನಿಂತೇ ಇದನ್ನೆಲ್ಲ ವೀಕ್ಷಿಸುತ್ತಿದ್ದೆ.

ಒಂದು ಹಕ್ಕಿ ನಾವು ಬೆಳಿಗ್ಗೆ ಮುಖ ತೊಳೆದು ಸ್ವಚ್ಛಗೊಳ್ಳುವಂತೆ, ಅದು ಅಲ್ಲೇ ಇರುವ ತಂತಿಯ ಮೇಲೆ ಕುಳಿತು ತನ್ನ ರೆಕ್ಕೆಪುಕ್ಕಗಳನ್ನೆಲ್ಲ ಸ್ವಚ್ಛಗೊಳಿಸಿಕೊಳ್ಳುವುದು ತುಂಬಾ ಖುಷಿ ನೀಡಿತು. ತನ್ನ ಬೆನ್ನು, ರೆಕ್ಕೆಯಗಲಿಸಿ ಅದರ ಕೆಳಭಾಗ, ತನ್ನ ಬಾಲ ಎಲ್ಲವನ್ನು ತನ್ನ ಪುಟ್ಟ ಕೊಕ್ಕಿನಿಂದ ಅದು ಹೇಗೆ ಅತ್ಯಂತ ತಾಳ್ಮೆಯಿಂದ ಸ್ವಚ್ಛಗೊಳಿಸಿಕೊಳ್ಳತೊಡಗುತ್ತಿತ್ತೆಂದರೆ ಅಕ್ಷರಶಃ ಅದನ್ನೇ ನೋಡುತ್ತ ಮೈಮರೆತಿದ್ದೆ. ಮತ್ತೊಂದು ಹಕ್ಕಿ ಪುರ್ ಎಂದು ಹಾರಿ, ತನಗಿಂತ ಎರಡು ಮೂರು ಪಟ್ಟು ದೊಡ್ಡದಿದ್ದ ಹೂವಿನ ಕೆಳಗೆ ಬಂದು ಕುಳಿತುಕೊಂಡಿತು. ಅದಕ್ಕೆ ಅದೊಂದು ಕೊಡೆಯ ರೀತಿಯಲ್ಲೇ ಕಾಣುತ್ತಿತ್ತು. ಅದು ಕೊರಳು ಕೊಂಕಿಸಿ ಅತ್ತಿತ್ತ ನೋಡಿತು. ತನ್ನ ಎದುರಾಳಿ ಯಾರಾದರೂ ಬಂದಾರೆಯೇ ಎಂದು ನೋಡುತ್ತ ಪಟ್ಟನೆ ತನ್ನ ಕೊಕ್ಕಿನಿಂದ ಆ ಹೂವಿನ ಮಕರಂದ ಹೀರಿತು. ಮತ್ತೆ ಆಚೀಚೆ ನೋಡುವುದು ಹೂವಿನ ಮಕರಂದ ಹೀರುವುದು. ಅದೊಂದು ಚಂದದ ಮರೆಯಲಾರದ ದೃಶ್ಯ. ಇದನ್ನು ಟೈಪಿಸುವಾಗಲೂ ಈಗಲು ಅದು ಕಣ್ಣು ಮುಂದೆ ಕಟ್ಟಿದಂತಿದೆ.

© ಸಿದ್ಧರಾಮ ಹಿರೇಮಠ ಕೂಡ್ಲಿಗಿ

ಹೀಗೇ ಅದೆಷ್ಟು ಹೊತ್ತು ನಿಂತಿದ್ದೆನೋ, ಎಷ್ಟು ಹೊತ್ತು ಗಮನಿಸುತ್ತಿದ್ದೆನೋ ನನಗೇ ಗೊತ್ತಿಲ್ಲ. ಅಕ್ಕ-ಪಕ್ಕದಲ್ಲಿ ಯಾರ್ಯಾರೋ ಬಂದು ಚಟುವಟಿಕೆಗಳಲ್ಲಿ ತೊಡಗಿದ್ದರು. “ಈ ಮನುಷ್ಯ ಇಲ್ಲಿ ನಿಂತು ಅದೇನು ನೋಡುತ್ತಿದ್ದಾನೆ? ಆ ಗಿಡದಲ್ಲೇನಿದೆ? “ಎಂಬ ಕುತೂಹಲ ಇತ್ತಾದರೂ ಕೈಯಲ್ಲಿ ಕ್ಯಾಮೆರಾ ಇದ್ದುದರಿಂದ “ಅದೇನೋ ಪಟ ತೆಗೀತಿದಾನೆ “ಅಂದುಕೊಂಡು ತಮ್ಮ ಕೆಲಸದಲ್ಲಿ ತಾವು ತೊಡಗಿಸಿಕೊಂಡರು. ನಿಧಾನವಾಗಿ ಜನರೆಲ್ಲ ಬರತೊಡಗಿದ್ದುದರಿಂದಲೋ ಏನೋ ನಾನು ಮೊದಲೇ ಹೇಳಿದಂತೆ ಹಕ್ಕಿಗಳ ಏಕಾಂತಕ್ಕೆ ಭಂಗವೆನಿಸಿ ಅಲ್ಲಿಂದ ನಿಧಾನವಾಗಿ ಒಂದೊಂದೇ ಜಾಗ ಖಾಲಿ ಮಾಡತೊಡಗಿದವು.

ಅದುವರೆಗೂ ಯಾರೂ ಇಲ್ಲದಾಗ ಅಲ್ಲಿ ಕೇವಲ ನಾನು, ಆಫ್ರಿಕನ್ ಮರದ ಹೂಗಳು, ಹಕ್ಕಿಗಳು ಇಷ್ಟೇ ನನ್ನ ಪ್ರಪಂಚವಾಗಿತ್ತು. ಅದೊಂದು ಪ್ರಕೃತಿಯ ರಸಮಯ ಸನ್ನಿವೇಶ, ರಂಗಸ್ಥಳವೆನಿಸಿತ್ತು. ಅಲ್ಲಿ ನಾನೇ ನಾನಾಗಿದ್ದೆ. ಈಗ ಹೊರಪ್ರಪಂಚದ ಗೌಜು ಗದ್ದಲ ಮತ್ತೆ ನನ್ನನ್ನು ಹಗ್ಗ ಕಟ್ಟಿ ಕೆಳಗೆ ಎಳೆದು ಹಾಕಿದಂತೆನಿಸಿತು.

ನಿಧಾನವಾಗಿ ಕ್ಯಾಮೆರಾವನ್ನು ಬ್ಯಾಗ್ ನಲ್ಲಿರಿಸಿಕೊಂಡು ಸ್ಕೂಟಿಯ ಕಿವಿ ತಿರುವಿ ಅಲ್ಲಿಂದ ಹೊರಟೆ. ತಲೆಯಲ್ಲೆಲ್ಲ ಕಿತ್ತಳೆ ಬಣ್ಣದ ಆಫ್ರಿಕನ್ ಹೂಗಳು, ಕಿವಿಯಲ್ಲಿ ಖಗರತ್ನ ಹಕ್ಕಿಗಳ ಗಲಾಟೆ ತುಂಬಿಕೊಂಡಿದ್ದವು.

© ಸಿದ್ಧರಾಮ ಹಿರೇಮಠ ಕೂಡ್ಲಿಗಿ


ಚಿತ್ರ – ಲೇಖನ: ಸಿದ್ಧರಾಮ ಹಿರೇಮಠ ಕೂಡ್ಲಿಗಿ
             ವಿಜಯನಗರ ಜಿಲ್ಲೆ

Spread the love
error: Content is protected.