ನೀ ಯಾರಿಗಾದೆಯೋ ಎಲೆ ಮಾನವ . . . !

ನೀ ಯಾರಿಗಾದೆಯೋ ಎಲೆ ಮಾನವ . . . !

© ಶಶಿಧರಸ್ವಾಮಿ ಆರ್. ಹಿರೇಮಠ

ನಾನೊಂದು ಮೈಯೆಲ್ಲಾ ಮುಳ್ಳಿರುವ ಬೇಲಿಯ ಪೊದೆ , ಕನ್ನಡ ನಾಡಿನ ಎಲ್ಲ ಪ್ರದೇಶದಲ್ಲಿಯೂ ಮತ್ತು ಭಾರತದ ಎಲ್ಲಾ ಭಾಗಗಳಲ್ಲಿ ಕಂಡು ಬಂದರೂ ನನ್ನ ಬಗ್ಗೆ ಯಾರಿಗೂ ಅಷ್ಟಾಗಿ ಗೊತ್ತಿಲ್ಲ ಕಾರಣ, ನಾನೊಂದು ಮುಳ್ಳು ಗಿಡವಾಗಿರುವುದು. ನಾನು ಪಾಳುಬಿದ್ದ ಕೋಟೆ, ಊರ ಹೊರ ವಲಯದ ಹೊಲಗಳ ಅಂಚಿನಲ್ಲಿ, ಹಾದಿ ಬದಿಯಲ್ಲಿ ಅನಾಥನಂತೆ ಬೆಳೆದರೂ ಸದಾ ಹಚ್ಚ ಹಸಿರಿನಿಂದ ಕಂಗೊಳಿಸುತ್ತೇನೆ. ನನ್ನನ್ನು ಗಂಜಿ ಪೆಳಿ, ಸಕಪತ, ಎಗಚಿ, ಉಪ್ಪು ಗೋಜೆ, ಬಿಳಿ ಉಪ್ಪಿ ಗಿಡ ಎಂಬೆಲ್ಲ ಹೆಸರಿನಿಂದ ಕರೆದರೆ ಸಂಸ್ಕೃತದಲ್ಲಿ ನನ್ನ ಹೆಸರು ಕುಂಡಲಿ ಗಿಡ. ಆಂಗ್ಲ ಭಾಷೆಯಲ್ಲಿ ನೀಡಲ್‌ ಬುಷ್‌  (Needle Bush) ಎಂದು ಕರೆಯುತ್ತಾರೆ. ಸಸ್ಯ ವಿಜ್ಞಾನಿಗಳು ನನ್ನನ್ನು ವೈಜ್ಞಾನಿಕವಾಗಿ ಅಜೀಮ ಟೆಟ್ರಾಕ್ಯಾಂತ (Azima tetracantha) (Synonyms: Azima spinosissima, Azima nova, Azima angustifolia) ಎಂದು ಹೆಸರಿಸಿ ಸಾಲ್ವಡೊರೇಸಿ (Salvadoraceae) ಸಸ್ಯ ಕುಟುಂಬಕ್ಕೆ ಸೇರಿಸಿದ್ದಾರೆ.

© ಶಶಿಧರಸ್ವಾಮಿ ಆರ್. ಹಿರೇಮಠ

ನಾನು ಸುಮಾರು 3 ಮೀಟರ್ ಎತ್ತರವಾಗಿ ಬೆಳೆಯುವೆ. ನನ್ನ ಚಿಕ್ಕ ಕೊಂಬೆಗಳು ನಾಲ್ಕು ಕೋನಾಕೃತಿಯಲ್ಲಿವೆ. ಅದರ ಮೇಲೆ ಸೂಕ್ಷ್ಮ ರೊಮಗಳಿವೆ. ಅಂಡಾಕಾರದ ಎಲೆಗಳು ಕಾಂಡದ ಮೇಲೆ ಅಭಿಮುಖವಾಗಿ ಜೋಡಣೆ ಹೊಂದಿರುತ್ತವೆ. ತುದಿಯಲ್ಲಿ ಸೂಜಿಯಂತಿರುವ ಚೂಪಾದ ಮುಳ್ಳನ್ನು ಹೊಂದಿರುವೆ. ಎಲೆಯ ಕಂಕುಳಲ್ಲಿ ಮಾಸಲು ಬಿಳುಪಿನ ಅತಿ ಸಣ್ಣ ಹೂಗಳು ಅರಳುತ್ತವೆ. ನನ್ನ ಮೈ ಮೇಲೆಲ್ಲಾ ಮುಳ್ಳೊ ಮುಳ್ಳು. ಸಸ್ಯದ ಪ್ರತಿ ಗಿಣ್ಣಿನಲ್ಲಿ 4 ಮುಳ್ಳುಗಳಿದ್ದು ಇವು 3 ಸೆಂಟಿ ಮೀಟರನಷ್ಟು ಉದ್ದವಾಗಿವೆ. ಮುಳ್ಳುಗಳು ನಿಮಗೆ ಏನಾದರೂ ಚುಚ್ಚಿ ಬಿಟ್ಟರೇ ಅಯೋ ಪಾಪ ಜೇನು ಕಚ್ಚಿದ ಅನುಭವವಾಗುತ್ತದೆ. ಎಲೆ-ಕಕ್ಷೆಗಳು ಮತ್ತು ಕವಲೊಡೆಯುವ ತುದಿಯಲ್ಲಿ ಕದಿರು ಗೊಂಚಲುಗಳಲ್ಲಿ ಅತೀ ಚಿಕ್ಕದಾದ ಬಿಳಿ ಹೂವುಗಳು ಹುಟ್ಟಿಕೊಳ್ಳುತ್ತವೆ. ಈ ಹೂವುಗಳು ಗುಂಪಾಗಿದ್ದು ಏಕಲಿಂಗಿಗಳಾಗಿವೆ. ಗಂಡು ಮತ್ತು ಹೆಣ್ಣು ಹೂವುಗಳು ಬೇರೆ ಬೇರೆ ಆಗಿರುತ್ತವೆ. ಪರಾಗ ಸ್ಪರ್ಶ ಹೊಂದಿದ ಹೆಣ್ಣು ಹೂಗಳು ಹಸಿರಾದ ಕಾಯಾಗಿ ನಂತರ ಮಾಗಿ ಬಿಳುಪಾದ ಗಂಜಿಯಂತಿರುವ ಹಣ್ಣಾಗುತ್ತವೆ. ನೋಡಲು ಗಂಜಿಯಂತಿರುವ ಈ ಹಣ್ಣುಗಳಿಂದ ನನಗೆ ಗಂಜಿಪೆಳೆ ಎಂಬುದು ಅನ್ವರ್ಥವಾಗಿ ಬಂದಿದೆ. ಈ ಗಂಜಿ ಹಣ್ಣಿನಲ್ಲಿ ಕರಿದಾದ 1-2 ಬೀಜಗಳಿವೆ.

© ಶಶಿಧರಸ್ವಾಮಿ ಆರ್. ಹಿರೇಮಠ

ನಾನು ಸಣ್ಣ ಉಪ್ಪಿ ಚಿಟ್ಟೆಗಳ ಕಂಬಳಿಹುಳಿವಿನ ಆಹಾರ ಸಸ್ಯವಾಗಿದ್ದೇನೆ. ನನ್ನ ಎಲೆಗಳ ಮೇಲೆ ಸಣ್ಣ ಉಪ್ಪಿ ಚಿಟ್ಟೆಯು ಮೊಟ್ಟೆ ಇಟ್ಟು ಹೋಗುತ್ತದೆ. ಮೊಟ್ಟೆಯಿಂದ ಹೋರ ಬಂದ ಕಂಬಳಿಹುಳುಗಳು ನನ್ನ ಚಿಗುರೆಲೆಗಳನ್ನು ತಿಂದು ಕೋಶಾವಸ್ಥೆಗೆ ತಲುಪಿ, ಆ ಕೋಶದಿಂದ ಫ್ರೌಢ ಚಿಟ್ಟೆಯು ಹೊರ ಬಂದು ಈ ಪ್ರಕೃತಿಯಲ್ಲಿ ಒಂದಾಗುತ್ತದೆ. ಕೆಲ ಕೀಟಗಳು ಶತ್ರುಗಳಿಂದ ತಪ್ಪಿಸಿಕೊಳ್ಳಲು ಛದ್ಮವೇಷಧಾರಿಗಳಾಗಿ ನನ್ನನ್ನು ಅವಲಂಬಿಸಿವೆ. ಇನ್ನೂ ಕೆಲ ಚಿಟ್ಟೆಗಳು ಮಾಗಿದ ನನ್ನ ಹಣ್ಣಿನರಸವನ್ನು ತಮ್ಮ ಹೀರು ಗೊಳವೆಯಿಂದ ಹೀರಿ, ಹಿರಿಹಿರಿ ಹಿಗುತ್ತವೆ. ಕೆಲ ಚಿಟ್ಟೆಗಳು ಎಲೆಯ ಮೇಲೆ  ಆಶ್ರಯ ಪಡೆದು ವಿಶ್ರಾಂತಿ ಪಡೆಯುತ್ತವೆ. ಪಕ್ಷಿಗಳು ನನ್ನ ಹಣ್ಣನ್ನು ತಮ್ಮ ಮರಿಗಳಿಗೆ ಆಹಾರವಾಗಿ ನೀಡುವುದಲ್ಲದೇ ತಾವೂ ತಿಂದು ಸ್ವಾದೀಸುತ್ತವೆ. ನನ್ನ ಹಣ್ಣುಗಳು ಪಕ್ಷಿ ಹೊಟ್ಟೆ ಸೇರಿ ಜೀರ್ಣ ಕ್ರೀಯೆ ನಡೆದು ಅವು ಹಾಕುವ ಹಿಕ್ಕೆಯ ಜೊತೆಯಲ್ಲಿ ಬೀಜಗಳು ನೆಲ ಸೇರಿ ವರುಣನ ಸಿಂಚನವಾದಗ ಭೂತಾಯಿಯ ಒಡಲಿನಿಂದ ಮೊಳಕೆಯೊಡೆದು ನನ್ನ ವಂಶಾಭಿವೃದ್ಧಿಯಾಗುತ್ತದೆ. ನನ್ನ ಮತ್ತು ಪಕ್ಷಿ-ಕೀಟಗಳ ನಂಟು ಯುಗ ಯುಗಗಳಿಂದ ಸಾಗಿ ಬಂದಿದೆ.

© ಶಶಿಧರಸ್ವಾಮಿ ಆರ್. ಹಿರೇಮಠ

ಬೇಲಿ ಸಸ್ಯವಾಗಿ ಮಾನವರಾದ ನಿಮಗೆ ಔಷಧೀಯ ಗುಣವುಳ್ಳ ನಾನು ಅನೇಕ ರೋಗಗಳಿಗೆ ಔಷಧೋಪಚಾರ ನೀಡುವೆ. ಇಲಿ ಕಡಿತದ ನಂಜನ್ನು ನಿವಾರಿಸಲು, ಸ್ತ್ರೀಯರಿಗೆ ಕಾಡುವ ಅಧಿಕ ರಕ್ತಸ್ರಾವ ಕಡಿಮೆ ಮಾಡಲು, ವಿಷ ಸೇವಿಸಿದವರಿಗೆ ವಾಂತಿ ಮಾಡಿಸಲು, ವಾತ ರೋಗಕ್ಕೆ, ಅಧಿಕ ಭೇದಿ ವಾಸಿಯಾಗಲು, ಉಗುರು ಸುತ್ತು ನಿವಾರಣೆಗಾಗಿ, ಅಸ್ತಮಾ, ಕೆಮ್ಮು ನಿವಾರಿಸಲು, ಮೂಳೆ ಸಂಬಂಧಿ ರೋಗಗಳಿಗೆ ಅತೀ ಅವಶ್ಯವಿರುವೆ. ಪಶುಗಳಿಗೆ ಆವರಿಸುವ ನರಡಿ (ಗುಲ್ಮರೋಗ) ನಿವಾರಣೆಗಾಗಿ ನನ್ನನ್ನು ಉಪಯೋಗಿಸುತ್ತಾರೆ.

ಇತ್ತೀಚಿನ ದಿನಗಳಲ್ಲಿ ಬೆಲಿ ಗಿಡವೆಂದು ನನಗೆ ಕೊಡಲಿ ಏಟು ನೀಡಿ ನನ್ನ ಕುಲದವರನ್ನು ಮಾರಣ ಹೋಮ ಮಾಡುತ್ತಿರುವಿರಿ. ನಾನು ಇಷ್ಟೇಲ್ಲಾ ಪಕ್ಷಿ-ಕೀಟ-ಪ್ರಾಣಿಗಳಿಗೆ ಆಹಾರವಾಗಿ ನಿಮಗೆಲ್ಲಾ ಔಷಧಿಸಸ್ಯವಾಗಿ, ಉಪಯೋಗಕಾರಿಯಾಗಿ ನಿಸರ್ಗದಲ್ಲಿ ಒಬ್ಬವನಾಗಿರುವೆ. ಆದರೆ ನನ್ನನ್ನು ನಮ್ಮರನ್ನು ಪ್ರಕೃತಿಯಲ್ಲಿ ಹಾಳುಮಾಡುತ್ತಿರುವ ನೀ ಯಾರಿಗಾದೆಯೋ ಎಲೆ ಮಾನವ… ?

© ಶಶಿಧರಸ್ವಾಮಿ ಆರ್. ಹಿರೇಮಠ


ಚಿತ್ರ-ಲೇಖನ:  ಶಶಿಧರಸ್ವಾಮಿ ಆರ್. ಹಿರೇಮಠ
ಹಾವೇರಿ ಜಿಲ್ಲೆ

Spread the love
error: Content is protected.