ಮರಗಳ ರಾಣಿ

ಮರಗಳ ರಾಣಿ

© ಅಶ್ವಥ ಕೆ ಎನ್

ನಮ್ಮೂರು ಕಾಳೇಶ್ವರಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಕೂಗಳತೆ ದೂರದಲ್ಲಿರುವ ಒಂದು ಚಿಕ್ಕ ಹಳ್ಳಿ. ಊರ ಮಧ್ಯ ಭಾಗದಲ್ಲಿ ನನ್ನ ತಾತನ ಪಾಳು ಬಿದ್ದ ಮನೆಯಿದೆ. ಅದು ಕೆಲ ದಶಕಗಳ ಹಿಂದೆಯೇ ಪಾಳುಬಿದ್ದಿದ್ದು, ಇಲ್ಲೊಂದು ಮನೆ ಇತ್ತು ಎಂಬುದಕ್ಕೆ ಅಲ್ಲಲ್ಲಿ ಮಗ್ಗುಲುಗಳಲ್ಲಿ ಕುಸಿದ ಗೋಡೆಗಳು ಬಿಟ್ಟರೆ ಬೇರೆ ಯಾವ ಕುರುಹುಗಳೂ ಇಲ್ಲ. ಆದರೆ ಈ ಜಾಗದಲ್ಲಿ ಯಾವುದೋ ಪಕ್ಷಿ ಹಾಕಿದ ಹಿಕ್ಕೆಯಿಂದ ಬೀಜ ಪ್ರಸರಣಗೊಂಡೂ ಒಂದು ಅತ್ತಿ ಮರ (ficus resimosa) ಇಂದು ಬೃಹದಾಕಾರದಲ್ಲಿ ಬೆಳೆದು ನಿಂತಿದೆ. ಈ ಮರದ ವಿಚಾರದಲ್ಲಿ ನನಗೂ ನನ್ನ ತಂದೆಗೂ ಆಗಾಗ ಶೀತಲ ಸಮರವಾಗುತ್ತಿತ್ತು. ಏಕೆಂದರೆ ನಗರಗಳಲ್ಲಿ ಮೇಕೆಗಳನ್ನು ಸಾಕುವ ಕೆಲ ಸಾಬರು ಮೇಯಿಸಲು ಸೊಪ್ಪಿಗಾಗಿ ಹಳ್ಳಿಗಳ ಕಡೆ ಬಂದು ಅತ್ತಿ, ಆಲ, ಮೊದಲಾದ ಮರಗಳ ಸೊಪ್ಪನ್ನು ಚೂರೂ ಬಿಡದೆ ಕಡಿದುಕೊಂಡು ಹೋಗುತ್ತಿದ್ದರು. ಜಮೀನಿನಲ್ಲಿದ್ದರೆ ಜಮೀನಿನವರಿಗೆ ಒಂದಿಷ್ಟು ದುಡ್ಡು ಕೊಟ್ಟು ಅಥವಾ ರಸ್ತೆ ಪಕ್ಕದಲ್ಲಿದ್ದರಂತೂ ಯಾರನ್ನೂ ಕೇಳದೆಯೇ ಮರವನ್ನ ಬೋಳು ಮಾಡಿ ಹೋಗುತ್ತಿದ್ದುದು ಉಂಟು. ಹೀಗಾಗಿ ತಂದೆಯೂ ಒಮ್ಮೆ ಅತ್ತಿ ಮರವನ್ನ ಮೇಕೆ ಸಾಕುವವರಿಗೆ ಈ ಸೊಪ್ಪನ್ನು ಮಾರಲು ಸಿದ್ಧರಿದ್ದ ವಿಷಯ ತಿಳಿದು ನಾನು ಮತ್ತು ನನ್ನ ಅಣ್ಣ, ತಂದೆಯವರನ್ನು ತಡೆದು ಈ ಅತ್ತಿ ಮರದ ವಿಶೇಷತೆಯನ್ನ ತಿಳಿ ಹೇಳಿದೆವು. ಹಾಗಾಗಿ ಇಂದಿಗೂ ಆ ಅತ್ತಿ ಮರ ಊರ ಮಧ್ಯ ಬೃಹತ್ತಾಗಿ ನಿಂತಿದೆ.

© ಮಹದೇವ ಕೆ ಸಿ

ಸಾಮಾನ್ಯವಾಗಿ ಹಳ್ಳಿ ಜೀವನವನ್ನ ಅನುಭವಿಸಿರುವ ಪ್ರತಿಯೊಬ್ಬರೂ ಈ ಅತ್ತಿ ಮರದ ಹಣ್ಣಿನ ರುಚಿ ನೋಡಿರುತ್ತಾರೆ ಹಾಗೂ ಕೆಂಪಗಿನ ಹಣ್ಣಿನ ಒಳಗೆ ಇರುವ ಹುಳುಗಳನ್ನೂ ನೋಡಿರಲೇಬೇಕು. ಇದಕ್ಕೂ ಒಂದು ಕಾರಣ ಹಾಗೂ ವಿಶೇಷತೆ ಇದೆ. ಅಂತಹ ವಿಶೇಷ ಏನಿದೆ? ಈ ಅತ್ತಿ ಮರದಲ್ಲಿ ಎನ್ನುತ್ತೀರಾ…! ಹೌದು ವಿಶೇಷ ಇದೆ. ಈ ಅತ್ತಿ ಮರವನ್ನು ಮರಗಳ ರಾಣಿ ಎಂದು ಪರಿಸರ ತಜ್ಞರು ಹೇಳುತ್ತಾರೆ. ಫೈಕಸ್ (ficus) ಕುಟುಂಬಕ್ಕೆ ಸೇರುವ ಈ ಮರ ಅಪಾರ ಕೌತುಕಗಳ ಗೂಡು ಎಂದರೆ ತಪ್ಪಾಗಲಾರದು. ಫೈಕಸ್ ಕುಟುಂಬದಲ್ಲಿ ನಮ್ಮ ದೇಶದಲ್ಲಿಯೇ ಸುಮಾರು 600 ಪ್ರಭೇದದ ವಿವಿಧ ಮರಗಳಿವೆ ಎಂದು ಹೇಳುತ್ತಾರೆ.

             ನಮ್ಮ ಹಳ್ಳಿಗಳಲ್ಲಿ ಮತ್ತೊಂದು ನಂಬಿಕೆ ಇದೆ. ಅದೇನೆಂದರೆ ಈ ಅತ್ತಿಮರ ರಾತ್ರಿಯ ಸಮಯದಲ್ಲಿ ಹೂಬಿಡುತ್ತದೆ ಅದು ಯಾರಿಗೂ ಕಾಣುವುದಿಲ್ಲವೆಂದು. ಹಾಗಾದರೆ ಈ ಅತ್ತಿಮರ ಹೂಬಿಡುವುದಿಲ್ಲವೇ?  ಅಥವ ಅದು ನಮಗೆ ಕಾಣುವುದಿಲ್ಲವೇ? ಈ ಅತ್ತಿ ಹಣ್ಣಿನ ಒಳಗೆ ಕಾಣುವ ಹುಳುಗಳು ಹೇಗೆ ಹೋದವು? ಹೌದು ಹೀಗೆ ಹತ್ತು ಹಲವು ಪ್ರಶ್ನೆಗಳು ಮೂಡುತ್ತವೆ ಅಲ್ಲವೇ? ಆ ಎಲ್ಲಾ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರಗಳನ್ನು ಹುಡುಕೋಣ. 

ಅತ್ತಿಮರ ಹೂ ಬಿಡುವುದಿಲ್ಲವೇ?

© ಅಶ್ವಥ ಕೆ ಎನ್

ಅತ್ತಿಮರ ಹೂ ಬಿಡುತ್ತವೆ. ನಮಗೆ ಕಾಣುವ ಹಸಿರು ಬಣ್ಣದ ಕಾಯಿಗಳೇ ಹೂಗಳು! ಅತ್ತಿ ಮರವು ತನ್ನ ಹೂಗಳ ಸುತ್ತ ಹಣ್ಣಿನ ಪದರವನ್ನು ಬೆಳೆಸಿಕೊಂಡಿರುತ್ತದೆ. ಆ ಹಣ್ಣಿನ ಪದರದ ಒಳಗೆ ಗೊಂಚಲು ಗೊಂಚಲಾಗಿ ಗಂಡು ಮತ್ತು ಹೆಣ್ಣು ಹೂಗಳು ಜೋಡಿಸಲ್ಪಟ್ಟಿರುತ್ತವೆ, ಇದಕ್ಕೆ ಪುಷ್ಪಗುಚ್ಛ (Inflorescence)  ಎನ್ನುತ್ತಾರೆ.

ಅತ್ತಿ ಹಣ್ಣಿನ ಒಳಗೆ ಹುಳುಗಳು ಹೇಗೆ ಹೋದವು?

ಹೂಗಳು ವಿಭಿನ್ನ ಆಕರ್ಷಕ ಬಣ್ಣದಲ್ಲಿರುವುದು ನಮಗೆ ನೋಡಲು ಮುದ ನೀಡುವುದಕ್ಕಲ್ಲ,  ಬದಲಾಗಿ ಕೀಟಗಳನ್ನ ತನ್ನೆಡೆ ಸೆಳೆಯಲು, ಹೂಗಳಿಂದ ಹೂಗಳಿಗೆ ಪರಾಗಸ್ಪರ್ಶ ಕ್ರಿಯೆ ನಡೆಸಲು. ಆದ ಕಾರಣ ಸಸ್ಯಗಳಲ್ಲಿ ನಾವು ವಿಶಿಷ್ಟ ಬಣ್ಣದ ಹೂಗಳನ್ನು ಕಾಣಬಹುದು. ಆದರೆ ಈ ಅತ್ತಿ ಮರದ ವಿಷಯ ಬೇರೆಯೇ ಇದೆ. ಏಕೆಂದರೆ ಹೂಗಳು ಕೀಟಗಳ ಕಣ್ಣಿಗೆ ಬೀಳುವುದೇ ಇಲ್ಲ. ಹಾಗಾಗಿ ಅತ್ತಿ ಮರ ತನ್ನ ಹೂ ಅರಳುವ ಸಮಯಕ್ಕೆ ಹೂ ಗೊಂಚಲಿನಿಂದ ಕೂಡಿದ ಹಣ್ಣಿನ ಬುಡದಲ್ಲಿ ಒಂದು ಸಣ್ಣ ರಂಧ್ರ ಉಂಟು ಮಾಡುತ್ತದೆ. ಹಾಗೂ ಕೀಟಗಳನ್ನು ತನ್ನೆಡೆಗೆ ಸೆಳೆಯಲು ಸುಗಂಧವನ್ನು ಸೂಸುತ್ತದೆ. ಸುಗಂಧಕ್ಕೆ ಆಕರ್ಷಿತವಾಗಿ ಹಣ್ಣಿನ ಬುಡದಲ್ಲಿನ ರಂಧ್ರದ ಮೂಲಕವೇ ನಾವು ಕಣಜ ಎಂದು ಕರೆಯಲ್ಪಡುವ ವಾಸ್ಪ್ ಕುಟುಂಬಕ್ಕೆ ಸೇರಿದ ಒಂದು ಕೀಟ ಹೂ ಗೊಂಚಲಿನ ಒಳಗೆ ಹೋಗುತ್ತದೆ. ಹೀಗೆ ಹಣ್ಣಿನ ಒಳ ಹೋಗುವಾಗ ಈ ಕಣಜಗಳು ತನ್ನ ರೆಕ್ಕೆಗಳನ್ನು ಕಳೆದುಕೊಳ್ಳುತ್ತವೆ. ಹೀಗೆ ಹೂ ಗೊಂಚಲಿನ ಒಳಹೊಕ್ಕ ನಂತರ ಮರ ಹಣ್ಣಿನಲ್ಲಿದ್ದ ಸಣ್ಣ ರಂಧ್ರವನ್ನು ಮುಚ್ಚಿಕೊಳ್ಳುತ್ತದೆ. ಒಳ ಹೊಕ್ಕ ಕಣಜ ಅಲ್ಲಿ ಹಲವು ಮೊಟ್ಟೆಗಳನ್ನಿಟ್ಟು ಪರಾಗಸ್ಪರ್ಶ ಕ್ರಿಯೆ ಮಾಡಿ ರೆಕ್ಕೆಗಳನ್ನು ಕಳೆದುಕೊಂಡಿರುವ ಕಾರಣ ಅಲ್ಲೇ ಸತ್ತು ಹೋಗುತ್ತದೆ. ನಂತರ ಕಣಜ ಇಟ್ಟಿದ್ದ ಮೊಟ್ಟೆಗಳೆಲ್ಲ ಒಡೆದು, ಬರುವ ಮರಿಗಳಲ್ಲಿ ಹಲವು ಹೆಣ್ಣು ಹಾಗೂ ಗಂಡು ಕಣಜಗಳಿರುತ್ತವೆ. ಗಂಡು ಕಣಜ ನೋಡಲು ಕಂಬಳಿಹುಳುವಿನಂತಿದ್ದು, ಅದು ಹೊಸದಾಗಿ ಹುಟ್ಟಿದ ಹೆಣ್ಣು ಕಣಜಗಳೊಂದಿಗೆ ಮಿಲನ ಕ್ರಿಯೆ ನಡೆಸಿ, ನಂತರ ಅತ್ತಿಹಣ್ಣಿನ ಒಳ ಭಾಗದಿಂದ ಹೊರಕ್ಕೆ ದೊಡ್ಡದೊಂದು ರಂಧ್ರವನ್ನ ಕೊರೆದು, ಆ ಗಂಡು ಕಣಜ ಅಲ್ಲಿಯೆ ಸಾಯುತ್ತದೆ. ಉಳಿದ ಹೆಣ್ಣು ಕೀಟಗಳು ಅಲ್ಲಿರುವ ಗಂಡು ಹೂಗಳಲ್ಲಿನ ಪರಾಗಗಳನ್ನು ಸಂಗ್ರಹಿಸಿಕೊಂಡು ಗಂಡು ಕಣಜ ಕೊರೆದ ದೊಡ್ಡ ರಂಧ್ರದಿಂದ ಹೊರಬಂದು ಮತ್ತೊಂದು ಅತ್ತಿ ಹಣ್ಣಿನ ಪರಾಗಸ್ಪರ್ಶ ಕ್ರಿಯೆಗೆ ಸಜ್ಜಾಗುತ್ತದೆ. ಇದು ಈ ಕಣಜ ಮತ್ತು ಅತ್ತಿ ಮರದ ಪರಸ್ಪರಾವಲಂಬನೆ ಎಂದರೆ ತಪ್ಪಾಗಲಾರದು.

© ಮಹದೇವ ಕೆ ಸಿ

ಹೀಗೆ ಕಾಯಿ ಹಣ್ಣಾಗುವ ಸಮಯದಲ್ಲಿ ಮರವು ಸಕ್ಕರೆ ಅಂಶವನ್ನು (ಸ್ಯಾಪ್) ಎಲೆಗಳಲ್ಲಿ ಉತ್ಪಾದನೆ ಮಾಡಿ, ಮರದ ಎಲ್ಲಾ ಭಾಗಗಳಿಗೆ ರವಾನೆ ಮಾಡುತ್ತದೆ. ಇದರಿಂದ ಹಲವಾರು ಟ್ರೀ ಹಾಪರ್ ಗಳು ಈ ಸಕ್ಕರೆ ಅಂಶವನ್ನು ಸವಿಯಲು ಬರುತ್ತವೆ ಹಾಗೂ ಸಕ್ಕರೆ ಅಂಶ (ಸ್ಯಾಪ್) ಸವಿದು ತನ್ನ ದೇಹದಿಂದ ಸಿಹಿ ದ್ರವವನ್ನ ಟ್ರೀ ಹಾಪರ್ ಗಳು ಹೊರ ಹಾಕುತ್ತವೆ. ಅದನ್ನು ಸವಿಯಲು ಇರುವೆಗಳು ಟ್ರೀ ಹಾಪರ್ ಅನ್ನು ಹಿಂಬಾಲಿಸುತ್ತಿರುತ್ತವೆ. ಟ್ರೀ ಹಾಪರ್ ಗಳನ್ನು ಮರದ ರೆಂಬೆಯಿಂದ ರೆಂಬೆಗೆ ಸಾಗಿಸುವುದು ಹಾಗೂ ಅವುಗಳಿಗೆ ರಕ್ಷಣೆ ಕೊಡುವ ಕೆಲಸವನ್ನು ಇರುವೆಗಳು ಮಾಡುತ್ತವೆ. ಒಂದು ರೀತಿ ಹೇಳುವುದಾದರೆ ಮಾನವರು ಹಾಲು ಸಿಗುತ್ತದೆ ಎಂಬ ಕಾರಣಕ್ಕೆ ಹಸುಗಳನ್ನು ಸಾಕುವ ಹಾಗೆ ಟ್ರೀ ಹಾಪರ್ ಗಳನ್ನು ಇರುವೆಗಳು ಸಾಕುತ್ತವೆ.

ಹೀಗೆ ಪರಾಗ ಸ್ಪರ್ಶಗೊಂಡ ಹೂಗಳನ್ನು ಹೊಂದಿರುವ ಅತ್ತಿ ಹಣ್ಣಿಗೆ ಮರವು ಅದರ ಬಣ್ಣ ಬದಲಾಯಿಸುತ್ತದೆ. ಸಾಮಾನ್ಯವಾಗಿ ಕೆಂಪುಬಣ್ಣಕ್ಕೆ ಹಣ್ಣುಗಳು ತಿರುಗುತ್ತವೆ. ಏಕೆಂದರೆ ತನ್ನ ಸಂತಾನೋತ್ಪತ್ತಿ ಮುಂದುವರಿಸಲು ಬೀಜ ಪ್ರಸರಣೆ ಆಗಬೇಕು, ಹಾಗಾಗಿ ಇವು ಹಣ್ಣಾದಾಗ ತನ್ನ ಬಣ್ಣವನ್ನ ಬದಲಾಯಿಸಿಕೊಂಡು ಪಕ್ಷಿಗಳನ್ನು ತನ್ನೆಡೆಗೆ ಆಕರ್ಷಿಸುತ್ತವೆ. ನಮ್ಮ ಜಾಗದಲ್ಲಿರುವ ಅತ್ತಿ ಮರದಲ್ಲಿಯೇ ನಾವು ಸರಿಸುಮಾರು 20ಕ್ಕೂ ಹೆಚ್ಚು ಪ್ರಭೇದದ ಪಕ್ಷಿಗಳು ಈ ಹಣ್ಣನ್ನು ತಿನ್ನಲು ಬರುವುದನ್ನು ಕಂಡಿದ್ದೇನೆ.

© ಹೇಮಂತ್ ಕುಮಾರ್ ಎಚ್ ಎಂ

ಹೀಗೆ ಹಣ್ಣಾದ ಅತ್ತಿಹಣ್ಣನ್ನ ಸವಿಯಲು ರಾತ್ರಿಯ ಸಮಯ ಹತ್ತಾರು ಬಾವಲಿಗಳು ಬಂದರೆ. ಬೆಳಗಿನ ಸಮಯ ಪ್ರಾಣಿ, ಪಕ್ಷಿ, ಚಿಟ್ಟೆ, ನೊಣಗಳ ಸರದಿ. ಒಟ್ಟಾರೆಯಾಗಿ ಅತ್ತಿ ಮರ ವರ್ಷದಲ್ಲಿ 2 ರಿಂದ 3 ಸಲ ಹಣ್ಣುಗಳನ್ನು ಬಿಡುತ್ತದೆ. ಆ ಸಮಯದಲ್ಲಿ ಈ ಮರವು ತುಂಬಾ ಚಟುವಟಿಕೆಯಿಂದ ಕೂಡಿರುತ್ತದೆ. 

ಈ ಅತ್ತಿ ಮರದ ಇನ್ನೂ ಹಲವಾರು ಕೌತುಕಗಳನ್ನು ತಿಳಿಯಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ಕಿಸಿ. ( https://youtu.be/xy86ak2fQJM )


ಲೇಖನ : ಮಹದೇವ ಕೆ ಸಿ
ಬೆಂಗಳೂರು
ಜಿಲ್ಲೆ.

Print Friendly, PDF & Email
Spread the love

4 thoughts on “ಮರಗಳ ರಾಣಿ

  1. ಅತ್ತಿ ಹಣ್ಣಿನ ವಿಶೇಷತೆ ಇಷ್ಟೊಂದಿದೆ ಅಂತ ಗೊತ್ತಿರ್ಲಿಲ್ಲ ಸರ್….. ತುಂಬಾ ಒಳ್ಳೆ information

Comments are closed.

error: Content is protected.