ಮಾಸ ವಿಶೇಷ – ಮರಗಾಡೆ ಗಿಡ

ಮಾಸ ವಿಶೇಷ – ಮರಗಾಡೆ ಗಿಡ

         © ಅಶ್ವಥ ಕೆ. ಎನ್. , ಮರಗಾಡೆ ಗಿಡ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಸಾಮಾನ್ಯ ಹೆಸರು: Indian Cadaba
ವೈಜ್ಞಾನಿಕ ಹೆಸರು : Cadaba Fruticosa

ಮರಗಾಡೆ ಗಿಡ ಬೇರೆ ಮರದ ಮೇಲೆ ಹರಡಿ ಬೆಳೆಯುವ ಬಳ್ಳಿ ರೂಪದ ಪೊದೆ ಗಿಡವಾಗಿದೆ. ಇದರ ಮೂಲ ಭಾರತವಾಗಿದ್ದು ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ಇಂಡೋನೇಷ್ಯಾ ಮತ್ತು ಚೈನಾ ಭಾಗಗಳಲ್ಲಿನ ಒಣ ಎಲೆ ಉದುರುವ ಕಾಡುಗಳಲ್ಲಿ ಕಂಡುಬರುತ್ತದೆ. ಸುಮಾರು 5 ಮೀಟರ್ ಎತ್ತರಕ್ಕೆ ಬೆಳೆಯುವ ಇದರ ಕಾಂಡವು ಗಟ್ಟಿಯಾಗಿದ್ದು ಹಳದಿ ಮಿಶ್ರಿತ ಕಂದು ಬಣ್ಣದಿಂದ ಕೂಡಿದ್ದು, ಸಣ್ಣ ಕೊಂಬೆಯ ಮಾದರಿ ಇರುತ್ತದೆ. ನವೆಂಬರ್ ನಿಂದ ಮಾರ್ಚ್ ತಿಂಗಳವರೆಗೆ ಇದು ಹೂ ಬಿಡುತ್ತದೆ. ಇದರ ರೆಂಬೆಯ ತುದಿಯಲ್ಲಿ ಸಣ್ಣ ಹೂ ಗೊಂಚಲುಗಳನ್ನು ಕಾಣಬಹುದು. ಹಸಿರು ಮಿಶ್ರಿತ ಬಿಳಿ ಪುಷ್ಪ ಪತ್ರಗಳ ಮೇಲೆ  4 ಬಿಳಿ  ಪುಷ್ಪದಳಗಳಿದ್ದು ಸಣ್ಣ ಶಲಾಕಾಗ್ರವು ತಿಳಿ ನೇರಳೆ ಬಣ್ಣದಿಂದ ಆಕರ್ಷಿಸುತ್ತದೆ. ಇದರ ಸುತ್ತಲೂ 4 ರಿಂದ 6 ಕೇಸರಗಳನ್ನು ಕಾಣಬಹುದು. ಸುಮಾರು 1.5 – 4 ಸೆಂ. ಮೀ. ಉದ್ದ ಮತ್ತು 1 – 2 ಸೆಂ.ಮೀ. ಅಗಲವಿರುವ ಸರಳ ವಿಧದ ಎಲೆಗಳು ಅಂಡಾಕಾರದಲ್ಲಿರುತ್ತವೆ. ಎಲೆಯ ತುದಿಯು ಚೂಪಾಗಿದ್ದು ತಳದ ಭಾಗ ಮೊಂಡಾಗಿರುವ ಆಕಾರವಿರುತ್ತವೆ. ಉದ್ದನೆಯ ನೀಳ ಕಾಯಿಗಳು ಜೋಡಿಯಾಗಿದ್ದು ಸಿಪ್ಪೆಯ ರಚನೆಯಿಂದ ಕೂಡಿರುತ್ತವೆ. ಈ ಗಿಡದ ಎಲೆ ಮತ್ತು ಹೂಗಳು ಹಲವಾರು ಔಷಧ ಗುಣ ಹೊಂದಿದ್ದು ಕೆಮ್ಮು, ಜ್ವರ, ಶ್ವಾಸಕೋಶ ಸಂಬಂಧ ಖಾಯಿಲೆ, ದೌರ್ಬಲ್ಯತೆ ಸೇರಿದಂತೆ ಕ್ಯಾನ್ಸರ್ ರೋಗ ಚಿಕಿತ್ಸೆಗೆ ಬಳಸಬಹುದಾಗಿದೆ.

Spread the love
error: Content is protected.