ಹದಿನಾರು ಕೆರೆಯ ಹತ್ತಾರು ಹಕ್ಕಿಗಳು
© ಡಾ.ದೀಪಕ್ ಭ
ನಂಜನಗೂಡು ತಾಲೂಕಿನ ಹದಿನಾರು ಕೆರೆಗೆ ಪಟ್ಟೆ ತಲೆಯ ಹೆಬ್ಬಾತುಗಳು (Bar-headed goose) ಚಳಿಗಾಲದಲ್ಲಿ ಬರುತ್ತವೆ. ಇವು ಮೂಲತಃ ಮಧ್ಯ ಏಷ್ಯಾದ ಪಕ್ಷಿಗಳು. ಚಳಿಗಾಲದಲ್ಲಿ ದಕ್ಷಿಣ ಭಾರತದೆಡೆಗೆ ವಲಸೆ ಬರುತ್ತವೆ. ಎರಡು ವರ್ಷಗಳ ಹಿಂದೆ ಅವುಗಳ ಛಾಯಾಚಿತ್ರವನ್ನು ತೆಗೆದಿದ್ದೆ. ಇನ್ನೊಮ್ಮೆ ಅದನ್ನು ನೋಡುವ ಹುರುಪಿನಿಂದ ಭಾನುವಾರ ನಾನು ಹಾಗು ನನ್ನ ಸಹಭಾಗಿ ಫೋಟೋಗ್ರಾಫ಼ರ್ ಬೆಳಗ್ಗೆ 6.15ಕ್ಕೆ ಮೈಸೂರಿನಿಂದ ಹೊರಟೆವು. ನಾವು ತಲುಪುವಷ್ಟರಲ್ಲೇ ಕೆರೆಯ ಏರಿ ಮೇಲೆ ಹಲವಾರು ಮಂದಿ ಕ್ಯಾಮೇರಾ-ದುರ್ಬೀನುಗಳೊಂದಿಗೆ ಪಕ್ಷಿ ವೀಕ್ಷಣೆಯನ್ನು ಆರಂಭಿಸಿದ್ದರು. ನನ್ನ ತಲೆಯಲ್ಲಿ ಎರಡು ವರ್ಷಗಳ ಹಿಂದೆ ಭೇಟಿಯಾಗಿದ್ದ ಪಟ್ಟೆ ತಲೆ ಹೆಬ್ಬಾತು ಹಾರುತ್ತಿತ್ತು.
ಕೆರೆಯ ಮೇಲೊಂದು ಪಾಚಿ ಬಣ್ಣದ ಹಕ್ಕಿ ಹಾರಿತು. ಕ್ಯಾಮೇರಾವನ್ನು ಅತ್ತ ತಿರುಗಿಸಿ ಕ್ಲಿಕ್ಕಿಸಿದೆವು. ಅದೊಂದು ಕೊಳದ ಬಕ (Striated pond heron), ಕೆರೆಯ ದಡದಲ್ಲಿದ್ದ ಪೊದೆಯೊಂದರ ನೆರಳಿನಲ್ಲಿ ಕುಳಿತಿತ್ತು. ಅದು ಹಾರಿಹೋಗಿ ಕುಳಿತದ್ದನ್ನು ನಾವು ನೋಡದಿದ್ದರೆ ಬಹುಶಃ ನಮಗೆ ತಿಳಿಯುತ್ತಲೇ ಇರಲಿಲ್ಲವೇನೊ! ಬಕಗಳು ಕೆರೆದಡಗಳಲ್ಲಿ ಹೊಂಚುಹಾಕಿ ಕಪ್ಪೆ, ಮೀನುಗಳನ್ನು, ನೀರಿನಲ್ಲಿರುವ ಹುಳ-ಹುಪ್ಪಟೆಗಳನ್ನು ತಿಂದು ಬದುಕುತ್ತವೆ. ಕೆಲವು ಬಾರಿ ಮೀನುಗಳನ್ನು ಹಿಡಿಯಲು ಇವು ಪುಕ್ಕವನ್ನೋ ಅಥವಾ ಎಲೆಯನ್ನೋ ನೀರಿನ ಮೇಲೆ ಹಾಕಿ, ಅದೇನೆಂದು ನೋಡಲು ಬರುವ ಮೀನುಗಳನ್ನು ಕಬಳಿಸಿಬಿಡುತ್ತವೆ.
ಬಕವೆಂದರೆ ನನ್ನ ತಲೆಯಲ್ಲಿ ಬರುವುದು ಪಂಚತಂತ್ರ ಕತೆಯಲ್ಲಿನ ವಂಚಕ ಬಕದ ಕತೆ. ಆ ಪಂಚತಂತ್ರ ಕತೆ ಹೀಗೆ ಸಾಗುತ್ತದೆ. ಒಂದು ಕೆರೆಯಲ್ಲಿ ಬಕಪಕ್ಷಿ ವಾಸಿಸುತ್ತಿತ್ತು. ಅದು ಒಮ್ಮೆ ಸುಲಭವಾಗಿ ಬೇಟೆಯಾಡಲು ಒಂದು ರಣತಂತ್ರವನ್ನು ಹೂಡಿತು. ಅದೇನೆಂದರೆ ಯಾರು ಹತ್ತಿರ ಬಂದರೂ ಲೆಕ್ಕಿಸದೆ ಗಾಢಾಲೋಚನೆಯಲ್ಲಿ ಮುಳುಗಿರುವ ಹಾಗೆ ನಟಿಸುವುದು. ಹೀಗೆ ನಟಿಸುತ್ತಿದ್ದ ಬಕವನ್ನು ಕಂಡು ಆ ಕೆರೆಯ ಮೀನುಗಳು ಬಕಕ್ಕೇನೊ ಆಗಿದೆ ಎಂದು ಆರೋಗ್ಯ ವಿಚಾರಿಸಲು ಬಂದವು. ವಿಚಾರಿಸಲು ಬಂದ ಮೀನುಗಳಿಗೆ ಆ ಬಕ ಪಕ್ಷಿಯು, ನಾನು ಒಬ್ಬ ಜ್ಯೋತಿಷ್ಯ ಈ ಕೆರೆ ಸ್ವಲ್ಪದಿನಗಳಲ್ಲೇ ಬತ್ತಿಹೋಗುತ್ತದೆ ಎಂದು ಹೇಳುವುದನ್ನು ಕೇಳಿಸಿಕೊಂಡೆನೆಂದೂ, ಅಂದಿನಿಂದ ನನಗೆ ನಿಮ್ಮೆಲ್ಲರದ್ದೇ ಚಿಂತೆಯಾಗಿದೆ, ನಾನೇನೊ ಇನ್ನೊಂದು ಕೆರೆ ನೋಡಿಕೊಳ್ಳುವೆ, ಆದರೆ ನಿಮ್ಮ ಗತಿ ಏನಾಗುವುದೋ ಎಂದು ಬೇಸರವಾಗುತ್ತಿದೆ ಎಂದು ಹೇಳಿತು. ಎಲ್ಲ ಮೀನುಗಳು ಬಕದ ಮಾತು ಕೇಳಿ ಗಾಬರಿಯಾದವು ಹಾಗೂ ತಮ್ಮ ತಮ್ಮಲ್ಲೆ ಚರ್ಚಿಸಿಕೊಂಡು ಈ ಸಂಕಷ್ಟಕ್ಕೆ ಬಕವನ್ನೇ ಪರಿಹಾರ ಸೂಚಿಸುವಂತೆ ಕೇಳಿದವು. ಬಕವು, ಹತ್ತಿರದಲ್ಲೇ ಇನ್ನೊಂದು ದೊಡ್ಡ ಕೆರೆಯಿದೆ, ಅದು ಎಂಥಾ ಬರಗಾಲ ಬಂದರೂ ಬತ್ತುವುದಿಲ್ಲ, ನೀವು ಇಚ್ಛಿಸಿದರೆ ದಿನಕ್ಕೊಬ್ಬರನ್ನು ಆ ಕೆರೆಗೆ ಹೊತ್ತುಕೊಂಡು ಹಾರಿ ಸಾಗಿಸುವೆ ಎಂದಿತು. ಎಲ್ಲಾ ಮೀನುಗಳು ನಮ್ಮ ಜೀವ ಉಳಿಯುತ್ತದೆ ಎಂದು ಸಂತೋಷಗೊಂಡು, ನಾ ಮುಂದು ತಾ ಮುಂದು ಎಂದು ಬಕದೊಂದಿಗೆ ಹೊರಡಲು ತಯಾರಾದವು. ದಿನವೂ ಬಕ ಮೀನನ್ನು ಹೊತ್ತುಕೊಂಡು ಹೋಗಿ, ದೂರದಲ್ಲಿದ್ದ ಬಂಡೆಯ ಮೇಲೆ ಕುಳಿತು ದಿನಕ್ಕೆ ಒಂದೊಂದಂತೆ ತಿನ್ನತೊಡಗಿತು. ಒಂದು ಏಡಿಗೆ ಈ ಬಕದ ಬಗ್ಗೆ ಸಂಶಯವಿತ್ತು ಹಾಗೂ ಒಂದು ದಿನ ಬಕ ಬಂದಾಗ ಇಂದು ನಿನ್ನೊಂದಿಗೆ ನಾನು ಬರುವೆನು ನನ್ನನ್ನು ಹೊಸ ಕೆರೆಗೆ ಕರೆದುಕೊಂಡು ಹೋಗು ಎಂದು ವಿನಂತಿಸಿತು. ಪ್ರತೀ ದಿನ ಮೀನನ್ನೇ ತಿಂದು ಬೇಸರಗೊಂಡಿದ್ದ ಬಕವು, ಇವತ್ತು ಹೊಸ ರುಚಿಯ ಊಟ ಸಿಗುತ್ತದೆ ಎಂದು ಸಂತೋಷದಿಂದ ಏಡಿಯ ಮಾತಿಗೆ ಒಪ್ಪಿ, ಏಡಿಯನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಬಂಡೆಯತ್ತ ಹಾರಿತು. ಏಡಿ ಕೆರೆ ಎಲ್ಲೆಂದು ಕೇಳಿದಾಗ ಆ ದೊಡ್ಡ ಬಂಡೆಯ ಹಿಂದಿದೆ ಎಂದು ನಕ್ಕಿತು. ಬಂಡೆಯ ಮೇಲಿರುವ ಮೀನಿನ ಮೂಳೆಗಳನ್ನು ಕಂಡ ಏಡಿಗೆ ಬಕದ ಕಪಟ ತಿಳಿಯಿತು. ಮೆಲ್ಲಗೆ ಅದರ ಕೊಕ್ಕಿನಿಂದ ನುಣುಚಿಕೊಂಡು ಬಕದ ಕತ್ತನ್ನು ತನ್ನ ಮೊನಚು ಕೈಗಳಿಂದ ಬಿಗಿಯಾಗಿ ಹಿಡಿದು ಬಕವನ್ನು ಕೊಂದಿತು. ಕೆರೆಗೆ ಹಿಂತಿರುಗಿ ಎಲ್ಲ ಮೀನುಗಳಿಗೆ ವಿಷಯ ತಿಳಿಸಿತು. ಇದು ಪಂಚತಂತ್ರದಲ್ಲಿ ಶತ್ರುಗಳನ್ನು ನಂಬಬಾರದು ಎಂಬ ನೀತಿಯನ್ನು ತಿಳಿಸಲು ಬರೆದಿರುವ ಕಥೆ.
ಬಕ ಜಪಿಸಿ ಹಿಡಿಯುವುದನ್ನು ನೋಡಿ ಅದನ್ನು ಸಾಹಿತ್ಯ ಪ್ರಾಕಾರಗಳಲ್ಲಿ ಹೋಲಿಸಿ ಬಕಧ್ಯಾನ ಎಂಬ ಉಪಮೆಯೂ ಬಳಕೆಯಲ್ಲಿದೆ. ನಾವು ನೋಡುತ್ತಿದ್ದ ಬಕವು ಬೆಳಗಿನ ಆಹಾರ ಸೇವನೆ ಮುಗಿಸಿತ್ತೋ ಅಥವಾ ತನ್ನ ಧ್ಯಾನ ಆರಂಭಿಸಿತ್ತೋ ತಿಳಿಯದು. ನಮ್ಮ ಕಣ್ಣಿಗೆ ಅದು ಒಂದೇ ಸ್ಥಳದಲ್ಲಿ ವಿಶ್ರಮಿಸುತ್ತಿರುವಂತೆ ಕಂಡಿತು.
ಬಕವಲ್ಲದೆ ನಾಮಗೋಳಿಗಳು, ಹೆಜ್ಜಾರ್ಲೆ (ಪೆಲಿಕನ್)ಗಳು ಹೇರಳವಾಗಿ ಸುತ್ತಾಮುತ್ತಾ ವಿಹರಿಸುತ್ತಿದ್ದವು. ನಾನು ಮರದ ನೆರಳಿನಲ್ಲಿ ನಿಂತಿದ್ದೆ. ತಲೆ ಎತ್ತಿದರೆ ಅಲ್ಲೊಂದು ಗರುಡವು (ಬ್ರಾಹ್ಮಿನಿ ಕೈಟ್) ಕುಳಿತಿತ್ತು. ಅದನ್ನು ಹತ್ತಿರದಿಂದ ಚಿತ್ರಿಸುವುದಕ್ಕೆ ತುಂಬಾ ಸಂತೋಷವಾಯಿತು. ಈಗ ಗರುಡಗಳು ಹಾಗೂ ಹದ್ದುಗಳು ಹೆಚ್ಚು ಕೆರೆ ನದಿಗಳ ಸಮೀಪದಲ್ಲಿ ನೋಡಲು ಸಿಗುತ್ತವೆ. ನಾನು ಸಣ್ಣವನಿದ್ದಾಗ ಇವು ಎಲ್ಲೆಲ್ಲೂ ನೋಡಲು ಸಿಗುತ್ತಿದ್ದವು. ಕೋಳಿಮರಿಗಳನ್ನು ಹದ್ದಿನ ಕಣ್ಣಿನಿಂದ ರಕ್ಷಿಸಲು ಹೆಣಗಾಡುವವರನ್ನು ನೋಡಿದ್ದೆ. ಈಗ ಹದ್ದುಗಳು ಕೊಳಚೆಪ್ರದೇಶ, ಕೆರೆನದಿಗಳಿಗೆ ಸೀಮಿತವಾಗಿವೆ ಎನಿಸುತ್ತಿದೆ ನನಗೆ. ಇವು ಸತ್ತ ಪ್ರಾಣಿಗಳನ್ನು ತಿಂದು ಬದುಕುತ್ತವೆ. ಎತ್ತರದಲ್ಲಿ ಗೂಡುಗಳನ್ನು ಕಟ್ಟಿ ಮೊಟ್ಟೆ ಇಡುತ್ತವೆ. ಕೆಲವು ಬಾರಿ ನೆಲದ ಮೇಲೂ ಗೂಡು ಕಟ್ಟುತ್ತವೆ.
ದಂಡೆಯಲ್ಲಿ ಒಂದು ಸಣ್ಣ ಗದ್ದೆ ಗೊರವ (ಸ್ಯಾಂಡ್ ಪೈಪರ್) ಆಹಾರ ಹುಡುಕುತ್ತಿತ್ತು. ಗದ್ದೆ ಗೊರವ ಪಕ್ಷಿಯು ದಡದ ಹಕ್ಕಿಗಳು (ವೇಡರ್ಸ್) ಕುಟುಂಬಕ್ಕೆ ಸೇರುತ್ತವೆ. ಈ ಪಕ್ಷಿ ತನ್ನ ಉದ್ದ ಕೊಕ್ಕಿನಿಂದ ಮಣ್ಣು, ಮರಳಿನಲ್ಲಿರುವ ಹುಳ-ಹುಪ್ಪಟೆಗಳನ್ನು ಹೆಕ್ಕಿ ತಿನ್ನುತ್ತವೆ. ಈ ಪ್ರಭೇದದ ಪಕ್ಷಿಗಳ ಕೊಕ್ಕಿನ ಉದ್ದ ಬೇರೆ ಬೇರೆಯಾಗಿದ್ದು, ಆಹಾರಕ್ಕೆ ಸ್ಪರ್ಧೆ ಏರ್ಪಡುವುದನ್ನು ತಗ್ಗಿಸುತ್ತದೆ. ಈ ಕುಟುಂಬದ ಹಕ್ಕಿಗಳ ಕೊಕ್ಕು ತುಂಬಾ ಸೂಕ್ಷ್ಮವಾಗಿರುತ್ತವೆ. ಇವು ನೆಲದ ಮೇಲೆ ಗೂಡು ಕಟ್ಟಿ 3 ರಿಂದ 4 ಮೊಟ್ಟೆಗಳನ್ನು ಇಡುತ್ತವೆ.
ಗದ್ದೆ ಗೊರವವನ್ನು ನಾನು ಕ್ಯಾಮೇರಾದಲ್ಲಿ ಸೆರೆ ಹಿಡಿಯುತ್ತಿದ್ದೆ, ಅಷ್ಟರಲ್ಲಿ ಇಬ್ಬರು ಹಳ್ಳಿ ಹೆಂಗಸರು ಬಟ್ಟೆಗಳನ್ನು ತಂದು ಒಗೆಯಲಾರಂಭಿಸಿದರು. ಇವರ ಈ ಕಾರ್ಯದಿಂದ ನೀರು ಕಲುಷಿತವಾಗುವುದು, ಹಕ್ಕಿಗಳು ಹಾರಿಹೋಗುವವು, ಮುಂತಾದ ಯೋಚನೆಗಳು ತಲೆಯಲ್ಲಿ ಸುಳಿದವು. ನಾವು ಇಲ್ಲೇ ಇದ್ದರೆ ಪಕ್ಷಿವೀಕ್ಷಣೆಗೆ ಬಂಗವಾಗುತ್ತದೆ ಎಂದೆಣಿಸಿ, ಕೆರೆ ದಂಡೆಯ ಕಡೆ ನಡೆದು ಹೋದೆವು.
ಒಂದು ಗಿಳಿ, ಹಳದಿ ಸಿಪಿಲೆ (Yellow wagtail), ಉಲಿಯಕ್ಕಿ (Plain prinia) ಗಳು ಕಂಡವು. ಗಿಳಿಯನ್ನು ಒಂದು ಮುದ್ದಿನ ಪಕ್ಷಿ ಎಂದು ಸಣ್ಣವನಿದ್ದಾಗ ಕಲಿತ ಪದ್ಯದಿಂದ ಅರಿತಿದ್ದೆ (ಬಾ ಬಾ ಗಿಳಿಯೇ, ಬಣ್ಣದ ಗಿಳಿಯೇ, ಹಣ್ಣನು ಕೊಡುವೆನು ಬಾ ಬಾ). ನಮ್ಮ ದೇಶದಲ್ಲಿರುವ ಗಿಳಿಗಳ ಬಗ್ಗೆ ಓದಿದಾಗ ಇವು ಗಲಾಟೆ ಮಾಡುವ ಸಸ್ಯಾಹಾರಿ ಪಕ್ಷಿಗಳೆಂದು ತಿಳಿಯಿತು. ನಮ್ಮ ದೇಶದಲ್ಲಿ ಕಾಣುವ ಗುಲಾಬಿ ಕೊರಳಿನ ಗಿಳಿಗಳು (ರೋಸ್ ರಿಂಗ್ಡ್ ಪ್ಯಾರಾಕೀಟ್), ಗಿಳಿ ಕುಟುಂಬದಲ್ಲೇ ಮಾನವನ ಗಲಾಟೆಗಳಿಗೆ ಒಗ್ಗಿ ವೃದ್ಧಿಯಾಗಿರುವ ಪಕ್ಷಿಗಳು. ಎಲ್ಲವನ್ನೂ ಕ್ಲಿಕ್ಕಿಸಿಕೊಂಡು ನೀರಿನತ್ತ ತಿರುಗಿದಾಗ ಮೀಸೆ ರೀವ (ವಿಸ್ಕರ್ಡ್ ಟರ್ನ್) ನೀರಿನತ್ತ ಧುಮುಕಿತು. ನನ್ನ ಲೆನ್ಸಿಗೆ ಸ್ವಲ್ಪ ದೂರವಿದ್ದದ್ದನ್ನು ಕ್ಲಿಕ್ಕಿಸಿದೆ. ಅದರ ಬಾಯಲ್ಲೊಂದು ಮೀನು! ಅಷ್ಟರಲ್ಲಿ ಪಟ್ಟೆತಲೆ ಹೆಬ್ಬಾತು (ಬಾರ್ ಹೆಡೆಡ್ ಗೂಸ್)ನ ಪರಿಚಿತ ದನಿ ಕೇಳಿಸಿತು.
ನೀರಿಗಿಳಿಯುವಾಗ ಆಧಾರ ತಪ್ಪಿ ಬೀಳುವ ರೀತಿಯಲ್ಲಿ ಕೆಲವು ಪಟ್ಟೆತಲೆ ಹೆಬ್ಬಾತುಗಳು ನೀರಿಗೆ ಬಿದ್ದರೆ, ಇನ್ನೂ ಕೆಲವು ಸರಾಗವಾಗಿ ನೀರಿನ ಮೇಲಿಳಿದವು. ಒಂದಿಷ್ಟು ಕ್ಲಿಕ್ಕಿಸಿ ಎಣಿಸಿದಾಗ 13 ಹಕ್ಕಿಗಳಿದ್ದವು. ಮತ್ತೊಂದು ಗುಂಪು ಬರುತ್ತಿರುವ ಸದ್ದಾಯಿತು ಓ… ಎಂದು ಹರ್ಷೋದ್ಗಾರ ಮಾಡುವಾಗ ಎದುರುಗಡೆ ದಡದಲ್ಲಿ ಒಂದು ಕಪ್ಪು ಮೋಡ ಕವಿದಂತಾಯಿತು. ಮರುಕ್ಷಣವೇ ಅದು ಬಿಳಿ ಮೋಡದಂತಾಯಿತು. ಅವೆಲ್ಲವೂ ಹಾರುತ್ತಿದ್ದ ಪಟ್ಟೆತಲೆ ಹೆಬ್ಬಾತುಗಳು. ಇವು ಮಧ್ಯ ಏಷ್ಯಾ ಪ್ರದೇಶದ ಹಕ್ಕಿಯಾಗಿದ್ದು, ಚಳಿಗಾಲದಲ್ಲಿ ಆಶ್ರಯಕ್ಕೆ ನಮ್ಮ ಮೈಸೂರಿಗೆ ಬರುತ್ತವೆ ಎಂಬುದು ನನಗೆ ಪ್ರಾಂತೀಯ ಒಣಜಂಭವನ್ನು ಸ್ವಲ್ಪಕಾಲ ಉಂಟುಮಾಡಿತು. ಅಸಂಖ್ಯಾತ ಪಟ್ಟೆತಲೆ ಹೆಬ್ಬಾತುಗಳ ನಡುವೆ ಗುಲಾಬಿ ಮೂತಿಯ ಬೂದು ಹೆಬ್ಬಾತು (ಗ್ರೆ ಲಾಗ್ ಗೂಸ್) ಕಂಡಿತು. ಹಿಂದಿನ ಕಾಲದಲ್ಲಿ ಮಾನವ ಪ್ರಾಣಿಸಾಕಣೆ ಶುರುಮಾಡಿದಾಗ, ಬೂದು ಹೆಬ್ಬಾತುಗಳನ್ನು ಮೊದಲು ಸಾಕಿದ ಎಂದು ಅಂತರ್ಜಾಲದಲ್ಲಿದೆ. ಈ ಪಟ್ಟೆತಲೆ ಹೆಬ್ಬಾತುಗಳನ್ನೇ ಪ್ರಾಚೀನ ಭಾರತದಲ್ಲಿ ಹಂಸವೆಂದು ನಂತರದಲ್ಲಿ ಕದಂಬವೆಂದು ಕರೆಯುತ್ತಿದ್ದರು. ಹೆಬ್ಬಾತುಗಳು ನಳ ದಮಯಂತಿಯರ ಕತೆಯನ್ನು ಜ್ಞಾಪಿಸುತ್ತದೆ. ಹಂಸಗಳೇ ನಳ ಮಹಾರಾಜನಿಗೆ ದಮಯಂತಿಯ ಸೌಂದರ್ಯವನ್ನು, ದಮಯಂತಿಗೆ ನಳಮಹಾರಾಜನ ಶೌರ್ಯದ ಬಗ್ಗೆ ತಿಳಿಸಿದವು ಎಂಬ ವದಂತಿಯಿದೆ. ಅಲ್ಲಿ ಬರೆದಿರುವ ಹಂಸಪಕ್ಷಿ ಇದೋ, ಅಲ್ಲವೋ? ತಿಳಿಯದು (ಸ್ವರ್ಣ ಹಂಸಪಕ್ಷಿಗಳು ಎಂದಿದೆ ಕತೆಯಲ್ಲಿ) ಬಹುಶಃ ಹೆಬ್ಬಾತು ಪ್ರಭೇದದ ಪಕ್ಷಿಗಳ ಪ್ರಾಚೀನತೆ ಅರಿಯಲಂತೂ ಸಹಕಾರಿಯಾಗಿದೆ.
ಇದೆಲ್ಲವನ್ನು ಯೋಚಿಸುತ್ತಿರಬೇಕಾದರೆ ನೀರು ಕಾಗೆ (ಕಾರ್ಮೊರೆಂಟ್) ಮೀನನ್ನು ಹಿಡಿದು ಗಾಳಿಯಲ್ಲಿ ತೂರಿ ಅದನ್ನು ಮತ್ತೆ ಹಿಡಿದು ನುಂಗುತ್ತಿತ್ತು. ಈ ದೃಶ್ಯ ನಮ್ಮ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಯಿತು. ಅಲ್ಲಿ ಸುಮಾರು 20-25 ಜನ ಕ್ಯಾಮರ ಹಿಡಿದವರಿದ್ದರೂ, ಮೀನನ್ನು ಮೇಲಕ್ಕೆ ತೂರಿದಾಗ ಕ್ಲಿಕ್ಕಿಸಿದ್ದು ನನ್ನ ಜೊತೆಯಲ್ಲಿದ್ದ ಫೋಟೋಗ್ರಾಫರ್ ಒಬ್ಬರು ಮಾತ್ರ. ನೀರು ಕಾಗೆ ಕತ್ತನ್ನು ಮಾತ್ರ ಹೊರಹಾಕಿ ನೀರಿನೊಳಗೆ ಈಜುತ್ತದೆ. ಇದರ ಪುಕ್ಕಗಳು ನೀರಿನಲ್ಲಿ ಒದ್ದೆಯಾಗುವ ಕಾರಣ ಇವು ರೆಕ್ಕೆ ಒಣಗಿಸಿಕೊಳ್ಳಲು ಬಂಡೆ, ಮರದ ಕೊರಡುಗಳ ಮೇಲೆ ರೆಕ್ಕೆ ಬಿಚ್ಚಿ ಕೂರುತ್ತವೆ. ನೋಡಲು ಚಿತ್ರಿಸಲು ತುಂಬಾ ಅಕರ್ಷಕ ಭಂಗಿಯದು. ಈ ದೃಶ್ಯವು ಮುಗಿಯುವಷ್ಟರಲ್ಲೇ ನಾನ್ಯಾರಿಗೆ ಕಮ್ಮಿ ಎಂದು ಒಂದು ಹೆಜ್ಜಾರ್ಲೆ (ಪೆಲಿಕನ್) ಹಾರಿಬಂದು ನೀರಿಗಿಳಿಯಿತು, ಉದ್ದ ಕೊಕ್ಕಿನ ಈ ಪಕ್ಷಿಗಳ ಗಂಟಲಿನಲ್ಲಿ ಒಂದು ಚೀಲವಿರುತ್ತದೆ. ನೀರಿನಲ್ಲಿ ಮೀನನ್ನು ಹಿಡಿದ ಮೇಲೆ ನೀರನ್ನು ಹೊರಹಾಕಿ ಹಿಡಿದ ಮೀನನ್ನು ತಿನ್ನುತ್ತದೆ. ನಾವು ನೀರಿನ ಪಕ್ಷಿಗಳ ಕಡೆ ಗಮನ ಹರಿಸುತ್ತಿದ್ದರೆ ನನ್ನನ್ನು ಮರೆತಿರಾ? ಎಂದು ಕಾಗೆಯು ನಮ್ಮ ಮುಂದೆಯೇ ಕೂಗಿ ಹಾರಿತು. ದೂರದಲ್ಲಿ ಒಂದು ಮಿಂಚುಳ್ಳಿಯೂ ಸಹ ಹಾರಿಹೋಯಿತು. ದೊಡ್ಡ ತಲೆ ಉದ್ದ ಕೊಕ್ಕಿನ ಮಿಂಚುಳ್ಳಿಗೆ ಸಣ್ಣ ಕಾಲುಗಳಿವೆ. ಇವು ಕ್ರಿಮಿ ಕೀಟಗಳನ್ನು ಮೀನುಗಳನ್ನು ತಿನ್ನುತ್ತವೆ.
ಗಡಿಯಾರ 11 ಗಂಟೆ ದಾಟಿತ್ತು, ಹಸಿವು ಹಾಗು ಕಾಯುತ್ತಿರುವ ಇತರೆ ಕಾಯಕಗಳನ್ನು ನೆನೆದು ಪಕ್ಷಿ ವೀಕ್ಷಣೆಗೆ ಅಲ್ಪವಿರಾಮವನ್ನಿತ್ತು ಮೈಸೂರಿಗೆ ಹಿಂತಿರುಗಿದೆವು.
ಲೇಖನ – ಛಾಯಾಚಿತ್ರ : ಡಾ.ದೀಪಕ್ ಭ
ಮೈಸೂರು ಜಿಲ್ಲೆ
ಮೈಸೂರಿನ ನಿವಾಸಿ, ವೃತ್ತಿಯಲ್ಲಿ ದಂತವೈದ್ಯ ಹವ್ಯಾಸಿ ಬರಹಗಾರ ಹವ್ಯಾಸಿ ಛಾಯಾಚಿತ್ರಗಾರ