ಕಂದು ಬೆಳವ ಅಥವ ಕಂದು ಕಪೋತ

ಕಂದು ಬೆಳವ ಅಥವ ಕಂದು ಕಪೋತ

©  ಶಶಿಧರಸ್ವಾಮಿ. ಹಿರೇಮಠ

ಚಿಕ್ಕ ವಯಸ್ಸಿನಲ್ಲಿ ಶಾಲೆಗೆ ರಜಾ ಇದ್ದಾಗ ಅಮ್ಮ-ಅಜ್ಜಿಯ ಜೊತೆ ಹೊಲಕ್ಕೆ ಹೋದಾಗ ಆ ಜೋಡಿ ಹಕ್ಕಿಗಳು ನನ್ನನ್ನು ತುಂಬಾ ಆಕರ್ಷಿಸುತ್ತಿದ್ದವು. ಅವು ಜೊತೆ ಕೂತು ಹಲುಬುವ ಇಂಚರನಿನಾದ ಈಗಲೂ ನನ್ನ ಕರ್ಣಗಳಲ್ಲಿ ಮಾರ್ಧನಿಸುತ್ತಿದೆ. ಅದಕ್ಕಾಗಿಯೇ ಕನಕದಾಸರು ತಮ್ಮ ಕಾವ್ಯ ಮೋಹನತರಂಗಿಣಿಯಲ್ಲಿ ಹಕ್ಕಿಗಳ ಕೂಗುವ ಇಂಚರವನ್ನು ಹೇಳುವಾಗ ಹಲುಬುವ “ಪೆರ್ಲಬೆಳವ ಮತ್ತು ಕುಪ್ಪರಸೆಟ್ಟಿ” ಎಂದು ಬೆಳವ ಹಕ್ಕಿಯ ಬಗ್ಗೆ ಉಲ್ಲೇಖಿಸಿದ್ದಾರೆ. ಬೆಳವ ಪ್ರಭೇದದ ಹಕ್ಕಿಗಳ ಕೂಗು ಸುಮಧುರವಾಗಿ ಕಿವಿ ತುಂಬಿದನ್ನು ತಮ್ಮ ಕಾವ್ಯದಲ್ಲಿ ಹೇಳಲು ಈ ಹಕ್ಕಿಯನ್ನು ಉಲ್ಲೇಖಿಸಿದ್ದಾರೆ. ಹೀಗೆ ಕವಿಗಳನ್ನು, ಪಕ್ಷಿ ಪ್ರಿಯರನ್ನು, ಪಕ್ಷಿ ತಜ್ಞರನ್ನು, ಮಕ್ಕಳನ್ನು ಆಕರ್ಷಿಸುವ ಆ ಹಕ್ಕಿಗಳೇ “ಕಂದು ಬೆಳವ ಹಕ್ಕಿ”ಗಳು .

©  ಶಶಿಧರಸ್ವಾಮಿ. ಹಿರೇಮಠ

ಕಂದು ಮಿಶ್ರಿತ ಬೂದು ಹಕ್ಕಿ, ದೇಹದ ಮೇಲೆ ಕಂದು, ಕೆಳಭಾಗವು ತಿಳಿಗಂದು ಮಿಶ್ರಿತ ಬಿಳಿ, ಬೂದು ರೆಕ್ಕೆಗಳ ತುದಿಯಲ್ಲಿ ಕಡು ಕಂದು, ರೆಕ್ಕೆಗಳನ್ನು ಬಿಚ್ಚಿದಾಗ ನೀಲಿ ಬಣ್ಣ ಕಾಣುತ್ತದೆ. ಕುತ್ತಿಗೆಯ ಎರಡು ಬದಿಯಲ್ಲಿ ಕಂದು ಮಿಶ್ರಿತ ಕಪ್ಪು ಚುಕ್ಕೆಗಳ ಪಟ್ಟಿಯು ಎದ್ದು ಕಾಣುತ್ತದೆ. ಉದ್ದವಾದ ಬಾಲ, ತೆಳುವಾದ ದೇಹ, ಬೂದು ಮಿಶ್ರಿತ ನೀಲ ಛಾಯೆಯ ತಲೆ ಮತ್ತು ಕುತ್ತಿಗೆ, ಕೆಳಭಾಗದಲ್ಲಿ ಗುಲಾಬಿ ಬಣ್ಣವನ್ನು ಹೊಂದಿರುತ್ತವೆ. ಮೇಲಿನ ಭಾಗವು ರೆಕ್ಕೆಗಳ ಉದ್ದಕ್ಕೂ ನೀಲಿ-ಬೂದು ವರ್ಣದ ಪುಕ್ಕಗಳಿವೆ. ಕಣ್ಣು ಹಾಗೂ ಕೊಕ್ಕು ಕಪ್ಪಾಗಿವೆ. ಕೆಂಪಾದ ಕಾಲುಗಳಿವೆ. ಇವುಗಳ ಕೂಗು ಕೂ…….ರುರು……..ರುರು……… ಎಂದು ನಕ್ಕಂತೆ.

 ಇವು ಶುಷ್ಕ ಕೃಷಿ ಭೂಮಿ ಮತ್ತು ಅದರ ವ್ಯಾಪ್ತಿಯ ಪ್ರದೇಶಗಳಲ್ಲಿ, ಬೆಟ್ಟ, ಬಂಡೆ, ಕುರುಚಲು ಕಾಡುಗಳ ಪೊದೆ ಮರಗಳಲ್ಲಿ ಜೊತೆಯಾಗಿ ವಾಸಿಸುವ ಸಾಧು ಹಕ್ಕಿಗಳಾಗಿವೆ. ಇವುಗಳು ದೊಡ್ಡ ಗುಂಪುಗಳಲ್ಲಿ ವಾಸಿಸುವುದಿಲ್ಲ. ನೀರನ್ನು ಅರಸಿ ಬಂದಾಗ ಹೊಳೆ ಅಥವಾ ಕೆರೆಗಳ ಸನಿಹದಲ್ಲಿ ಸಣ್ಣ ಗುಂಪುಗಳಲ್ಲಿ ನೀರಿನ ಅಂಚಿನಲ್ಲಿ ಕುಳಿತು ನೀರನ್ನು ಗುಟುಕಿಸುತ್ತವೆ. ನೆಲದ ಮೇಲೆ ಬಿದ್ದ ಬೀಜ-ಕಾಳುಗಳನ್ನು

©  ಶಶಿಧರಸ್ವಾಮಿ. ಹಿರೇಮಠ

ಮೇಯುತ್ತವೆ. ಚೆಲ್ಲಿದ ಕಾಳುಗಳನ್ನು ಮಣ್ಣಿನಿಂದ ಕೊಕ್ಕಿನಲ್ಲಿ ಹೆಕ್ಕಿ ಭಕ್ಷಿಸುತ್ತವೆ. ಕತ್ತನ್ನು ಆ ಕಡೆ ಈ ಕಡೆ ಹೊರಳಾಡಿಸುತ್ತಾ, ಅವಸರವಾಗಿ ಅತ್ತಿಂದಿತ್ತ ನಿರ್ಭಯವಾಗಿ ನೆಲದಮೇಲೆ ಅಲೆದಾಡುತ್ತಾ ಆಹಾರ ಮೇಯುವ ಇವು ತೊಂದರೆ ಕಂಡು ಬಂದಾಗ ಪಟಪಟನೆ ರೆಕ್ಕೆಗಳನ್ನು ಬಡಿಯುತ್ತಾ ಹಾರಿ ದೂರ ಹೋಗುತ್ತವೆ. ನೀರಿಗಿಳಿದು ಸ್ನಾನ ಮಾಡಲು ಇಷ್ಟ ಪಡುತ್ತವೆ.

©  ಶಶಿಧರಸ್ವಾಮಿ. ಹಿರೇಮಠ

ಮಿಲನ ಪೂರ್ವದಲ್ಲಿ ಗಂಡು-ಹೆಣ್ಣುಗಳೆರಡು ಪ್ರಣಯಾಚರಣೆಯಲ್ಲಿ ತೊಡಗಿ, ಗಂಡು ಪ್ರಣಯದ ಗುಟುಕನ್ನು ನೀಡುತ್ತಾ ಪ್ರಚೋದಿಸಿದರೆ ಹೆಣ್ಣು ಪ್ರಣಯದ ಗುಟುಕನ್ನು ಸ್ವೀಕರಿಸಲು ಬೇಡಿಕೆಯನ್ನಿಡುತ್ತದೆ. ತಕ್ಷಣ ಗಂಡು ಹಕ್ಕಿಯು ಪ್ರಣಯದ ತುತ್ತನ್ನು ಹೆಣ್ಣು ಹಕ್ಕಿಯ ಕೊಕ್ಕಿನಲ್ಲಿಡುತ್ತದೆ. ಇಲ್ಲವೇ ಗಂಡು ಹಕ್ಕಿಯು ಪ್ರಣಯಕ್ಕೆ ಹೆಣ್ಣನ್ನು ಸಂಮೋಹನಗೊಳಿಸಲು “ಪ್ರಣಯ ಪ್ರದರ್ಶನ” ಅಥವಾ “ಪುಕ್ಕಗಳನ್ನು ಅರಳಿಸುವಿಕೆ” ಯನ್ನು ತೋರ್ಪಡಿಸುತ್ತದೆ. ನಂತರ ಗಂಡು-ಹೆಣ್ಣುಗಳು ಮಿಲನಗೊಳ್ಳುತ್ತವೆ. ಸಂತಾನಾಭಿವೃದ್ಧಿ ಸಮಯವು ನಿರ್ದಿಷ್ಠ ಕಾಲಮಿತಿಯನ್ನು ಹೊಂದಿರುವುದಿಲ್ಲ. ಪೊದೆಗಳಲ್ಲಿ ಕಡ್ಡಿಗಳಿಂದ ಅಡ್ಡಾದಿಡ್ಡಿಯಾದ ವೃತ್ತಾಕಾರದ ಗೂಡನ್ನು ಕಟ್ಟಿ ಎರಡು ಬಿಳಿ ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತವೆ.

©  ಶಶಿಧರಸ್ವಾಮಿ. ಹಿರೇಮಠ

ಕಂದು ಬೆಳವ ಹಕ್ಕಿಯನ್ನು ಸಂಸ್ಕೃತದಲ್ಲಿ ಕಪೋತ ಎಂದು, ಆಂಗ್ಲಭಾಷೆಯಲ್ಲಿ “ಲಿಟಲ್ ಬ್ರೌನ್ ಡೌ” (Little Brown Dove), “ಲಾಫಿಂಗ್ ಡೌ” (Laughing Dove) ಅಥವಾ “ಸೆನೆಗಲ್ ಡೌ“ (Senegal Dove) ಎಂದು ಹೆಸರಿಸಿ  “ಸ್ಪಿಲೊಪೆಲಿಯಾ ಸೆನಗಾಲೆನ್ಸಿಸ್” (Spilopelia senegalensis) ಎಂದು ಹಕ್ಕಿಯನ್ನು ವೈಜ್ಞಾನಿಕವಾಗಿ ಹೆಸರಿಸಿ, “ಕೊಲಂಬಿಫಾರ್ಮಿಸ್” (Columbiformes) ಗಣದ “ಕೊಲಂಬಿಡೇ” (Columbidae) ಕುಟುಂಬಕ್ಕೆ ಸೇರಿಸಲಾಗಿದೆ.

ಕಂದು ಬೆಳವ ಹಕ್ಕಿಗಳ ಉಪ ಪ್ರಬೇಧಗಳು ಆಫ್ರಿಕಾ, ಸೌದಿ ಅರೇಬಿಯಾ, ಇರಾನ್, ಅಫ್ಘಾನಿಸ್ತಾನ, ಪಾಕಿಸ್ತಾನ, ಇಸ್ರೇಲ್, ಲೆಬನಾನ್, ಸಿರಿಯಾ ಮತ್ತು ಟರ್ಕಿಯಲ್ಲಿಯೂ ಕಂಡುಬರುತ್ತವೆ. ಗುಜರಾತ್‌ ನಲ್ಲಿ ಕಂಡ ಕೆಲ ಕಂದು ಬೆಳವ ಹಕ್ಕಿಗಳು ಪಾಕಿಸ್ತಾನದ 200 ಕಿ.ಮೀ ಉತ್ತರಕ್ಕಿರುವ ಸಮುದ್ರದಲ್ಲಿ ದಣಿವಾರಿಸಿಕೊಳ್ಳಲು ಹಡಗಿನಲ್ಲಿ ಇಳಿದು ದಣಿವಾರಿಸಿಕೊಂಡು ಮತ್ತೆ ಹಾರಿಹೋದ ಬಗ್ಗೆ ದಾಖಲಿಸಲಾಗಿದೆ.

©  ಶಶಿಧರಸ್ವಾಮಿ. ಹಿರೇಮಠ


ಲೇಖನ ಮತ್ತು ಛಾಯಾಚಿತ್ರ : ಶಶಿಧರಸ್ವಾಮಿ. ಹಿರೇಮಠ
ಕದರಮಂಡಲಗಿ, ಹಾವೇರಿಜಿಲ್ಲೆ.

Print Friendly, PDF & Email
Spread the love
error: Content is protected.