ಮಾಸ ವಿಶೇಷ – ಬಿಳಿ ಚಳ್ಳೆ

ಮಾಸ ವಿಶೇಷ – ಬಿಳಿ ಚಳ್ಳೆ

         © ನಾಗೇಶ್ ಓ. ಎಸ್. , ಬಿಳಿ ಚಳ್ಳೆ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಸಾಮಾನ್ಯ ಹೆಸರು: Dahipalas Tree
ವೈಜ್ಞಾನಿಕ ಹೆಸರು : Cordia macleodii

ಭಾರತ ಮೂಲದ ಈ ಬಿಳಿ ಚಳ್ಳೆ ಮರಗಳು, ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳಲ್ಲಿನ ಒಣ ಎಲೆ ಉದುರುವ ಕಾಡುಗಳಲ್ಲಿ ಕಾಣಸಿಗುತ್ತವೆ. ವಿರಳವಾಗಿ ಕಾಣಸಿಗುವ ಇವು ಸುಮಾರು 15 ಮೀಟರ್ ಎತ್ತರದವರೆಗೆ ಬೆಳೆಯಬಲ್ಲವು. ಈ ಮರಗಳ ತೊಗಟೆಯು ಮಂದವಾಗಿದ್ದು, ತಿಳಿಕಂದು ಅಥವಾ ಹಸಿರು ಬಣ್ಣದ್ದಾಗಿರುತ್ತವೆ. ಫೆಬ್ರವರಿಯಿಂದ ಆಗಸ್ಟ್ ತಿಂಗಳವರೆಗೆ ಹೂವು ಮತ್ತು ಹಣ್ಣುಗಳನ್ನು ಬಿಡುತ್ತವೆ. ಹೂವುಗಳು ನೋಡಲು ಮಾಸಲು ಬಣ್ಣದ್ದಾಗಿದ್ದು, ಸಮೂಹವಾಗಿರುತ್ತವೆ. ಇದರಲ್ಲಿ ಗಂಡು ಹೂವುಗಳು ಬೇರೆಯಾಗಿಯೂ ಹಾಗೂ ಗಂಡು-ಹೆಣ್ಣು ಹೂವುಗಳು ಪರಸ್ಪರ ಒಟ್ಟಿಗೆ ಸಮಾವೇಶಗೊಂಡಿರುವುದನ್ನೂ ಕಾಣಬಹುದು. ಹೂವುಗಳ ದಳಗಳು ಹಿಂದಕ್ಕೆ ಮಡಿಚಿರುತ್ತವೆ. ಪುಷ್ಪಪಾತ್ರಗಳಲ್ಲಿ ನಯವಾದ ಉಣ್ಣೆಯಂತಹ ರೋಮಗಳಂತಹ ರಚನೆಯಿದೆ. ಕೇಸರಗಳು ಉದ್ದವಾಗಿದ್ದು, ಸಾಮಾನ್ಯವಾಗಿ ಸಂಖ್ಯೆಯಲ್ಲಿ  6 ಇರುತ್ತವೆ. ಹಣ್ಣುಗಳು ಹೆಚ್ಚು ಕಡಿಮೆ 12-20 ಮಿ.ಮೀ ಉದ್ದವಿರುತ್ತವೆ. ಹಣ್ಣು ಕಿತ್ತಳೆ ಬಣ್ಣವಿರುತ್ತದೆ ಹಾಗೂ ಇದರಲ್ಲೂ ಸಹ ಉಣ್ಣೆಯಂತಹ ನಯವಾದ ರೋಮದ ಹೊದಿಕೆಯಿರುತ್ತದೆ. ಹಣ್ಣು, ಪುಷ್ಪಪಾತ್ರದ ಮೇಲಿದ್ದು, ಇದರ ತುದಿಯಲ್ಲಿ ಸಣ್ಣ ಬಿಂದುವಿರುತ್ತದೆ. ಎಲೆಗಳು ಅಗಲವಾಗಿದ್ದು, ಸುಮಾರು 18 ಸೆಂಟಿಮೀಟರ್ ಉದ್ದವಿರುತ್ತದೆ. ಬಣ್ಣ ಕಡು ಹಸಿರಾಗಿದ್ದು, ಇವುಗಳ ಮೇಲ್ಮೈ ಸ್ವಲ್ಪ ಒರಟಾಗಿರುತ್ತವೆ. ಎಲೆಯ ಹಿಂಭಾಗದಲ್ಲಿ ಮುಸುಕು ಉಣ್ಣೆಯಂತಹ ದಟ್ಟ ರಚನೆಯಿದೆ ಹಾಗೂ ಎಲೆಯ ಸೀಳುಗಳು ಗಟ್ಟಿಯಾಗಿದ್ದು,  ಎದ್ದು ಕಾಣುವಂತೆ ಹರಡಿಕೊಂಡಿವೆ. ಈ ಮರದ ತೊಗಟೆಗೆ ಗಾಯ ವಾಸಿಮಾಡುವ ಗುಣವಿದ್ದು, ಇದನ್ನು ಕಾಮಾಲೆ ರೋಗಕ್ಕೂ ಸಹ ಔಷಧಿಯಾಗಿ ಬಳಸುತ್ತಾರೆ. ಇದರ ಎಲೆಯನ್ನೂ ಸಹ ಬಾಯಿ ಹುಣ್ಣು ಚಿಕಿತ್ಸೆಗೆ ಬಳಸಲಾಗುತ್ತದೆ.

Spread the love
error: Content is protected.