ಹೂಕುಂಡ ಹಾವು
ನಿಂತ ಮಧ್ಯಾಹ್ನ ಅಂದು
ಮಳೆ ಬಂದು ನಿಂತಿರಲು
“ನೆಲವಾಸನೆ” ಮೂಗಿಗೆ
ಬಡಿಯುತ್ತಿತ್ತು.
ನಾ ಕೂತ ಸ್ವಲ್ಪ ದೂರದಲ್ಲಿ
ಮಿರಿಮಿರಿ ಮಿನುಗುತ
ಹುಳವೊಂದು ಬಂದಿರೆ
‘ಎರೆಹುಳ’ ಎಂದು ಭಾವಿಸಿದೆ.
ತಲೆ-ಬಾಲ ಒಂದೇ ತರ.
ಕಡು ಕಂದು ಬಣ್ಣ.
ದಿಕ್ಕು ತೋಚದ ಚಲನೆ.
ನೇರ ಕಿರಣಗಳಿಂದ ತಪ್ಪಿಸಿಕೊಳ್ಳಲು
ಹಾತೊರೆಯುವುದ ಕಂಡು
ಹತ್ತಿರ ಹೋದರೆ,
ಅರೆ,ಇದು ಎರೆಹುಳುವಲ್ಲ!
“ಬ್ರಾಹ್ಮಿಣೀ ಕುರುಡು ಹಾವು”.
ಹದಿನಾಲ್ಕು ಬೆಂಗಡೆ ಪೊರುಕು,
ಎರಡು ಕುರುಡು ಕಂಗಳು,
‘ತಿವಿಮೊನೆ’ಯ ಬಾಲವ ಹೊಂದಿ,
ಇರುವೆ ಮತ್ತದರ ಮೊಟ್ಟೆ, ಲಾರ್ವಾ,
ಗೆದ್ದಲುಳುಗಳ ತಿನ್ನುತ್ತಾ
ಆಫ್ರಿಕಾ ಮೂಲದವು
ಭಾರತಕ್ಕೆ ನಮ್ಮೂರಿಗೆ
ಬಂದದ್ದು ಹೂಕುಂಡದ ಮಣ್ಣಿಂದ
ಅದಕ್ಕೇ ಇದು “ಹೂಕುಂಡ ಹಾವು”.
ಸಾಮಾನ್ಯ ಕಚ್ಚುವುದಿಲ್ಲ.
ಕಚ್ಚಿದರೂ ಸಾಯೆವು.
ಮೂರ್ನಾಲ್ಕು ಇಂಚಿನ ಇದು
ನಮಗೆ ತಿಳಿಯದೆ
ನಮ್ಮೊಡನೆ ಜೀವಿಸುವ
ಶಾಂತತೆ ಹಾವು.
ಗೆದ್ದಲು ಕಟ್ಟುವುದ ತಡೆದು
ಮಣ್ಣಲ್ಲಿ ಬದುಕುವ ಇವು
ಅಕ್ಕಿ ಕಾಳಿನಂತ ಮೊಟ್ಟೆ ಇಟ್ಟು
ಬರೀ ಹೆಣ್ಣು ಮರಿ ಹಾಕುವ
ಅಲೈಂಗಿಕ ಜೀವಿ.
ಕಂಡಿದ್ದು ಮುಂಗಾರಿನ
“ನೆಲವಾಸನೆ”ಯ ಹೊತ್ತಿನಲ್ಲಿ.
–ರಾಮಾಂಜಿನಯ್ಯ ವಿ.
ಕೋಲಾರ ಜಿಲ್ಲೆ