ಪ್ರಕೃತಿ ಬಿಂಬ
© ಕೃಷ್ಣ ದೇವಾಂಗಮಠ , ಕರಿ ತಲೆ ಕಬ್ಬಕ್ಕಿ
ಕರಿ ತಲೆ ಕಬ್ಬಕ್ಕಿಯು ಮೈನಾ ಪ್ರಭೇದದ ಪಕ್ಷಿಯಾಗಿದ್ದು, ಭಾರತ ಮತ್ತು ನೇಪಾಳ ದೇಶಗಳಲ್ಲಿನ ಶುಷ್ಕ ಹಾಗೂ ಎಲೆ ಉದುರುವ ಕಾಡು ಮತ್ತು ಕುರುಚಲು ಕಾಡುಗಳಲ್ಲಿ ಕಂಡುಬರುತ್ತವೆ. ಚಳಿಗಾಲದಲ್ಲಿ ಶ್ರೀಲಂಕಾ ದೇಶಕ್ಕೆ ವಲಸೆ ಹೋಗುವ ಇವು ಮಿಶ್ರಾಹಾರಿಗಳಾಗಿದ್ದು, ಹಣ್ಣು ಹಾಗೂ ಕೀಟಗಳನ್ನು ತಿನ್ನುತ್ತವೆ. ಸಂಘಜೀವಿಗಳಾಗಿರುವ ಇವುಗಳು ಕೆಲವೊಮ್ಮೆ ತನ್ನದೇ ಪ್ರಭೇದಕ್ಕೆ ಸೇರಿರುವ ಮೈನಾ ಹಕ್ಕಿಗಳೊಟ್ಟಿಗೆ ಬದುಕುತ್ತವೆ. ಸಾಮಾನ್ಯವಾಗಿ ಮಾರ್ಚ್- ಸೆಪ್ಟೆಂಬರ್ ತಿಂಗಳುಗಳಲ್ಲಿ ಮರದ ಪೊಟರೆಗಳಲ್ಲಿ ಗೂಡನ್ನು ಮಾಡಿ, ಸುಮಾರು ಎರಡರಿಂದ ಮೂರು ತಿಳಿ ನೀಲಿ ಹಸಿರು ಬಣ್ಣದ ಮೊಟ್ಟೆಗಳನ್ನಿಟ್ಟು ಮರಿಮಾಡುತ್ತವೆ.
© ಕೃಷ್ಣ ದೇವಾಂಗಮಠ, ಬೂದು ಉಲಿಯಕ್ಕಿ
ಬೂದು ಉಲಿಯಕ್ಕಿಯು ಸಿಸ್ಟಿಕೋಲಿಡೆ (Cisticolidae) ಕುಟುಂಬಕ್ಕೆ ಸೇರಿದೆ. ಈ ಹಕ್ಕಿಯು ಭಾರತ, ಭೂತಾನ್ ಹಾಗೂ ನೇಪಾಳ ದೇಶಗಳಲ್ಲಿ ಕಾಣಸಿಗುವ ಪಕ್ಷಿಯಾಗಿದೆ, ಇವುಗಳನ್ನು ಜನನಿಬಿಡ ನಗರಗಳಲ್ಲೂ ಹಾಗೆಯೇ ವ್ಯವಸಾಯ ಮಾಡುವ ತೋಟಗಳಲ್ಲೂ ಕಾಣಬಹುದು. ಸಾಮಾನ್ಯವಾಗಿ ಒಂದು ಅಥವಾ ಎರಡು ಜೋಡಿಗಳಲ್ಲಿ ಕಂಡುಬರುವ ಇವುಗಳ ಸಂತಾನೋತ್ಪತಿಯ ಕಾಲ ಏಪ್ರಿಲ್ ನಿಂದ ಸೆಪ್ಟೆಂಬರ್ ತಿಂಗಳು. ಪೊದೆಗಳಲ್ಲಿ, ಎತ್ತರದ ಹುಲ್ಲುಗಳಲ್ಲಿ, ನೆಲಕ್ಕೆ ಹತ್ತಿರವಿರುವ ಹಾಗೆ ಗೂಡನ್ನು ಕಟ್ಟಿಕೊಂಡು ಸುಮಾರು 3 ರಿಂದ 5 ಕಡು ಕೆಂಪು ಬಣ್ಣದ ಮೊಟ್ಟೆಗಳನ್ನಿಡುತ್ತವೆ. ಗಂಡು ಮತ್ತು ಹೆಣ್ಣು ಎರಡು ಪಕ್ಷಿಗಳು ಸಹ ಮೊಟ್ಟೆಗಳಿಗೆ ಕಾವು ಕೊಡುತ್ತವೆ ಮತ್ತು ಮರಿಗಳಿಗೆ ಆಹಾರ ಕೊಡುವಲ್ಲಿ ಜೊತೆಯಲ್ಲಿರುತ್ತವೆ.
©ಕೃಷ್ಣ ದೇವಾಂಗಮಠ , ಕಪ್ಪು ಬಿಳಿ ಬೇಲಿಚಟಕ
ಕಪ್ಪು ಬಿಳಿ ಬೇಲಿಚಟಕ ಪಕ್ಷಿಯು ಮಧ್ಯ ಏಷ್ಯಾದಿಂದ ಭಾರತದವರೆಗೂ ಕಂಡುಬರುವ ಸಣ್ಣಗಾತ್ರದ ಪಕ್ಷಿಯಾಗಿದೆ. ಗಂಡು ಪಕ್ಷಿಯು ಕಪ್ಪು ಬಣ್ಣದಲ್ಲಿದ್ದು, ಬಾಲದ ಕೆಳಭಾಗದಲ್ಲಿ ಬಿಳಿಬಣ್ಣವನ್ನು ಕಾಣಬಹುದು ಹಾಗೂ ಹೆಣ್ಣು ಪಕ್ಷಿಯು ಕಡು ಬೂದುಬಣ್ಣದಲ್ಲಿದ್ದು ಬಾಲದ ಕೆಳಗೆ ಕೆಂಪು ಮಿಶ್ರಿತ ಬೂದು ಬಣ್ಣವಿರುತ್ತದೆ. ಇವು ಕೀಟಾಹಾರಿಗಳಾಗಿದ್ದು. ಸಂತಾನೋತ್ಪತ್ತಿಯ ಕಾಲ ಏಪ್ರಿಲ್ ನಿಂದ ಸೆಪ್ಟೆಂಬರ್ ತಿಂಗಳಾಗಿರುತ್ತದೆ. ಇವು ಸಣ್ಣ ಪೊಟರೆಗಳಲ್ಲಿ ಗೂಡುಗಳನ್ನು ಮಾಡಿಕೊಂಡು ತಿಳಿ ನೀಲಿ ಮಿಶ್ರಿತ ಬಿಳಿ ಬಣ್ಣದ ಸುಮಾರು ಎರಡರಿಂದ ಐದು ಮೊಟ್ಟಗಳನ್ನಿಡುತ್ತವೆ. ಕೇವಲ ಹೆಣ್ಣು ಪಕ್ಷಿ ಮೊಟ್ಟೆಗಳಿಗೆ ಸುಮಾರು 12 ರಿಂದ 15 ದಿನಗಳವರೆಗೆ ಕಾವು ಕೊಟ್ಟು ಮರಿಮಾಡುತ್ತವೆ.
© ಕೃಷ್ಣ ದೇವಾಂಗಮಠ, ಭಾರತದ ನರೆ ಮುಂಗುಸಿ
ಈ ಮುಂಗುಸಿಯು ಸಣ್ಣ ಗಾತ್ರದ ಮಾಂಸಾಹಾರಿ ಸಸ್ತನಿಯಾಗಿದ್ದು, ಭಾರತ ಹಾಗೂ ದಕ್ಷಿಣ ಏಷ್ಯಾದ ಕುರುಚಲು ಕಾಡು, ಶುಷ್ಕ ಕಾಡು, ಬೇಸಾಯದ ಜಮೀನುಗಳಲ್ಲಿ, ಹಳ್ಳಿಗಾಡುಗಳಲ್ಲಿ ಹಾಗೂ ಮನುಷ್ಯನ ಇರುವಿಕೆಯ ಕಡೆ ಸಾಮಾನ್ಯವಾಗಿ ಕಾಣಸಿಗುತ್ತವೆ. ಇವು ಇಲಿ, ಹಾವು, ಹಲ್ಲಿ, ಪಕ್ಷಿಗಳ ಮೊಟ್ಟೆ, ಪಕ್ಷಿಗಳ ಮರಿ, ಸಣ್ಣ ಸಣ್ಣ ಕೀಟ ಮತ್ತು ಮೊಟ್ಟೆಗಳನ್ನು ತಿನ್ನುತ್ತವೆ. ಇವುಗಳ ಸಂತಾನೋತ್ಪತ್ತಿಗೆ ನಿರ್ದಿಷ್ಟ ಸಮಯವೇನು ಇರುವುದಿಲ್ಲ.
ಚಿತ್ರಗಳು: ಕೃಷ್ಣ ದೇವಾಂಗಮಠ
ವಿವರಣೆ: ಮಹದೇವ ಕೆ ಸಿ
ತುಂಬಾ ಚೆನ್ನಾಗಿದೆ?
Wow!!