ಮಲದಲ್ಲಿ ಸುಗಂಧವನ್ನು ಹೊಂದಿರುವ ಪುನುಗು ಬೆಕ್ಕು

©Getty Images
ಮನುಷ್ಯನಿಗೆ ಮತ್ತು ಪ್ರಾಣಿಗಳ ನಡುವೆ ಅವಿನಾಭಾವ ಸಂಬಂಧವಿದ್ದು, ಕೆಲವೊಂದು ಪ್ರಾಣಿಗಳನ್ನು ಮನುಷ್ಯ ಸಾಕುತ್ತಾನೆ. ಅವುಗಳ ಪೈಕಿ ನಾಯಿ, ಬೆಕ್ಕು, ಕೋಳಿ, ದನ ಇತ್ಯಾದಿ ಪ್ರಮುಖವಾದವುಗಳು. ಈ ಪ್ರಾಣಿಗಳ ಪೈಕಿ ಬೆಕ್ಕೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಪಶ್ಚಿಮಘಟ್ಟಗಳ ಕಾಡುಗಳಲ್ಲಿ ಅದರಲ್ಲೂ ಮುಖ್ಯವಾಗಿ ಮರಗಳಲ್ಲಿ ವಾಸಿಸುವ ವಿಚಿತ್ರ ಬೆಕ್ಕೊಂದಿದ್ದು, ಅದರ ಹೆಸರು ‘ಪುನುಗು ಬೆಕ್ಕು’. ಈ ಬೆಕ್ಕುಗಳ ಮೈತುಂಬಾ ನಾಣ್ಯದ ಗಾತ್ರದ ಕಪ್ಪು ಮಚ್ಚೆಗಳಿದ್ದು, ಇವುಗಳು ಕುರುಚಲು ಕಾಡುಗಳು , ನಿತ್ಯಹರಿದ್ವರ್ಣದ ಕಾಡುಗಳು, ಬಿದಿರು ಕಾಡುಗಳು ಮತ್ತು ಹುಲ್ಲುಗಾವಲುಗಳಲ್ಲಿ ವಾಸಿಸುತ್ತವೆ. ಪುನುಗು ಬೆಕ್ಕು ‘ಕಾರ್ನಿವೊರ’ ಪ್ರಬೇಧಕ್ಕೆ ಸೇರಿದ ಮಾಂಸಾಹಾರಿ ಸಸ್ತನಿಯಾಗಿದ್ದು, ಇದು ‘ವೈವರಿಡೀ’ ಕುಟುಂಬಕ್ಕೆ ಸೇರಿದೆ. ಇಂಗ್ಲೀಷ್ ನಲ್ಲಿ ‘ಸಿವೆಟ್ ಕ್ಯಾಟ್’ (civet cat) ಎಂದು ಕರೆಯಲಾಗುತ್ತದೆ.
ಆವಾಸಸ್ಥಾನ

ಪುನುಗು ಬೆಕ್ಕುಗಳು ಆಫ್ರಿಕಾ, ಬರ್ಮಾ, ಶ್ರೀಲಂಕಾ, ಮಲೇಷಿಯಾ ದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಕರ್ನಾಟಕದ ಉತ್ತರ ಕನ್ನಡ, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ. ಭಾರತದಲ್ಲಿ ಕಾಣಸಿಗುವ ಪುನುಗು ಬೆಕ್ಕಿಗೆ ವೈಜ್ಞಾನಿಕವಾಗಿ ‘ವೈವರಿಕ್ಯುಲ ಇಂಡಿಕ’ ಎಂಬ ಹೆಸರಿದೆ. ಇವುಗಳಿಗೆ ದೇಹದ ಎರಡೂ ಬದಿಗಳಲ್ಲಿ ಉದ್ದನೆಯ ಪಟ್ಟೆಗಳಿದ್ದು, ದೇಶದ ಎಲ್ಲೆಡೆ ಕಾಣಸಿಗುತ್ತವೆ. ಆಫ್ರಿಕಾದ ಪುನುಗು ಬೆಕ್ಕು ‘ಸಿವೆಟಿಕ್ಟಸ್ ಸಿಬೆಟ್’ ಪ್ರಬೇಧಕ್ಕೆ ಸೇರಿದ್ದು, ಇವು 67 ರಿಂದ 80 ಸೆಂ.ಮೀ. ಉದ್ದವಿರುತ್ತವೆ. ಇದರ ಮೈ ಬಣ್ಣ ಕಪ್ಪಾಗಿದ್ದು, ಮೈಯಲ್ಲಿ ಅಲ್ಲಲ್ಲಿ ಹಳದಿ ಮತ್ತು ಬಿಳಿ ಬಣ್ಣದ ಮಚ್ಚೆಗಳಿರುತ್ತವೆ. ಇವು ಮಳೆ ಕಾಡುಗಳಲ್ಲಿ ಕುರುಚಲ ಗಿಡಗಳ ಪೊದೆಗಳಲ್ಲಿ ಮತ್ತು ಕಲ್ಲು ಬಂಡೆಗಳ ಕೆಳಗಿನ ಪೊಟರೆಗಳನ್ನು ತನ್ನ ಮನೆಯಾಗಿಸಿಕೊಂಡು ಜೀವನ ಸಾಗಿಸುತ್ತವೆ. ಹೀಗಾಗಿ ಹಿಂದಿ ಭಾಷೆಯಲ್ಲಿ ಇದನ್ನು ‘ಸ್ಮಶಾನಚೇಳು’ ಎಂದು ಕರೆಯಲಾಗುತ್ತದೆ.
ಸ್ವಭಾವ ಮತ್ತು ಗುಣಲಕ್ಷಣಗಳು
ಭಾರತದಲ್ಲಿ ವಾಸಿಸುವ ಪುನುಗು ಬೆಕ್ಕುಗಳು ಸುಮಾರು 80 ಸೆಂ.ಮೀ. ಉದ್ದವಿದ್ದು, ಸುಮಾರು 7 ರಿಂದ 11 ಕಿಲೋ ತೂಕವಿರುತ್ತವೆ. ಉದ್ದವಾದ ಮೂತಿ, ಸಣ್ಣದಾದ ಕಿವಿಗಳು, ಗಿಡ್ಡಗಿನ ಕಾಲುಗಳು, ಕಪ್ಪು ಮಿಶ್ರಿತ ಬೂದು ಮೈಬಣ್ಣ, ಬೆನ್ನಿನ ಉದ್ದಕ್ಕೂ ಕತ್ತಿನಿಂದ ಬಾಲದವರೆಗೂ ಹಬ್ಬಿರುವ ಕಪ್ಪು ಕೂದಲಿನ ರಾಶಿ, ಎದೆ ಹಾಗೂ ಭುಜಗಳ ಮೇಲೆ ಕಪ್ಪು ಬಣ್ಣದ ಪಟ್ಟೆಗಳನ್ನು ಹೊಂದಿರುತ್ತವೆ. ಇದರ ಬಾಲ ಸುಮಾರು 45 ಸೆಂ.ಮೀ. ಉದ್ದವಿದ್ದು, ಬಾಲದ ಮೇಲೂ ಅಡ್ಡ ಪಟ್ಟೆಗಳಿರುತ್ತವೆ. ಇದು ಒಂಟಿಯಾಗಿ ವಾಸಿಸುವ ನಿಶಾಚಾರಿ ಪ್ರಾಣಿಯಾಗಿದ್ದು, ಹಗಲೆಲ್ಲಾ ಯಾವುದಾದರೂ ಕುರುಚಲು ಪೊದೆಗಳಲ್ಲಿ ಅಡಗಿ ಕುಳಿತು ರಾತ್ರಿಯ ವೇಳೆ ವಾಸನೆಯ ಮೂಲಕ ಗ್ರಹಿಸುವ ಮೂಲಕ ಬೇಟೆಯನ್ನು ಹುಡುಕುತ್ತವೆ. ಬೆಳದಿಂಗಳು ಗಾಢವಾಗಿರುವ ರಾತ್ರಿಯಲ್ಲಿ ಇವುಗಳು ಹೆಚ್ಚಾಗಿ ಓಡಾಡುವುದಿಲ್ಲ. ಇವುಗಳು ಆಗಾಗ ನೀರನ್ನು ಕುಡಿಯುತ್ತಿರುತ್ತವೆ.
ಆಹಾರ
ಪುನುಗು ಬೆಕ್ಕು ದುಂಬಿಗಳು, ಹಾವುಗಳು, ಸಣ್ಣ ಪಕ್ಷಿಗಳು, ಸಣ್ಣಪುಟ್ಟ ಪ್ರಾಣಿಗಳು, ಮೀನು, ಏಡಿ, ಮಿಡತೆ, ಇಲಿ, ಹೆಗ್ಗಣ, ಹಾವುಗಳು, ಹಣ್ಣುಗಳು, ಕೆಲವೊಂದು ಗಿಡದ ಬೇರುಗಳು ಹಾಗೂ ಸತ್ತ ಪ್ರಾಣಿಗಳ ಅವಶೇಷಗಳನ್ನು ತಿನ್ನುತ್ತವೆ. ರೈತರ ಕೃಷಿ ಬೆಳೆಗಳಿಗೆ ಹಾನಿ ಮಾಡುವ ಧ್ವಂಸಕಗಳನ್ನು, ಸಣ್ಣಪುಟ್ಟ ಪ್ರಾಣಿ ಕೀಟಗಳನ್ನು ಇವು ತಿನ್ನುವುದರಿಂದ ಕೃಷಿಕರಿಗೂ ಸಹಕಾರಿ ಪ್ರಾಣಿಯಾಗಿದೆ. ಇವುಗಳು ಶೇಂದಿ ಮರದಲ್ಲಿ ಶೇಂದಿ ಇಳಿಸಲು ಕಟ್ಟಿರುವ ಮಡಿಕೆಗಳಿಗೆ ದಾಳಿ ಮಾಡಿ ಅದರಲ್ಲಿರುವ ಹೆಂಡವನ್ನು ಕುಡಿಯುವುದರಿಂದ ಇವುಗಳಿಗೆ ‘ತಾಳೆ ಬೆಕ್ಕು’ ಎಂಬ ಹೆಸರೂ ಇದೆ. ಇವುಗಳು ಸುಮಾರು ಎಂಟರಿಂದ ಒಂಬತ್ತು ವರ್ಷಗಳವರೆಗೆ ಬದುಕುತ್ತವೆ.

ಸಂತಾನೋತ್ಪತ್ತಿ
ಪುನುಗು ಬೆಕ್ಕಿನ ಸಂತಾನೋತ್ಪತ್ತಿಯ ಕಾಲ ಮೇ ಮತ್ತು ಜೂನ್ ತಿಂಗಳು. ದಟ್ಟ ಪೊದೆಗಳಲ್ಲಿ ಅಥವಾ ಬಿಲಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ. ಹೆಣ್ಣು ಪುನುಗು ಬೆಕ್ಕು ಒಮ್ಮೆಗೆ ನಾಲ್ಕರಿಂದ ಐದು ಮರಿಗಳಿಗೆ ಜನ್ಮ ನೀಡುತ್ತದೆ.
ಸುವಾಸನೆ ಸೂಸುತ್ತವೆ ಈ ಬೆಕ್ಕುಗಳು!
ಸುವಾಸನೆ ಸೂಸುವ ಕಸ್ತೂರಿ ಮೃಗದ ಬಗ್ಗೆ ನಮಗೆಲ್ಲಾ ತಿಳಿದಿದೆ. ಅದೇ ರೀತಿ ಪುನುಗು ಬೆಕ್ಕು ಪುನುಗನ್ನು (ಸುಗಂಧ) ಹೊರಸೂಸುತ್ತದೆ. ಈ ಬೆಕ್ಕುಗಳ ಜನನಾಂಗದ ಬಳಿಯಿರುವ ಗ್ರಂಥಿಯಿಂದ ಘಮಘಮ ಸುಗಂಧ ದ್ರವ್ಯ ಬಿಡುಗಡೆಯಾಗಿ ಗುದದ್ವಾರದ ಬಳಿಯಿರುವ ವಿಭಿನ್ನವಾದ ಚರ್ಮದ ಚೀಲಕ್ಕೆ ಸುರಿದು ಸಂಗ್ರಹಗೊಳ್ಳುತ್ತದೆ. ಹಳದಿ ಬಣ್ಣದಿಂದ ಕೂಡಿರುವ ಸುವಾಸನೆ ಯುಕ್ತ ಮೂತ್ರ ನೋಡಲು ಜೇನು ತುಪ್ಪದಂತಿರುತ್ತದೆ. ಇದನ್ನು ಸುವಾಸನೆ (ಸೆಂಟ್) ದ್ರವ್ಯಗಳಲ್ಲಿ ಪರಿಮಳ ಹೆಚ್ಚಿಸುವ ವಸ್ತುವಾಗಿ ಬಳಕೆ ಮಾಡಲಾಗುತ್ತದೆ. ಸುವಾಸನೆಯಿಂದ ಕೂಡಿದ ತನ್ನ ಮೂತ್ರವನ್ನು ಇವುಗಳು ತಾನು ವಾಸಿಸುವ ಪ್ರದೇಶದ ಗಡಿಯನ್ನು ಗುರುತಿಸಲು ಉಪಯೋಗಿಸುತ್ತವೆ. ಇವುಗಳ ಪುನುಗಿನಲ್ಲಿ ಸರಿಸುಮಾರು 64 ವಿಧದ ಹೂವುಗಳ ಸುಗಂಧವಿರುತ್ತದೆ ಎಂದು ಅಧ್ಯಯನಗಳು ಹೇಳಿವೆ.
ಬಿಲದಲ್ಲಿ ವಾಸಿಸುವ ನಿಶಾಚರಿ
ಜನವಸತಿಯಿರುವ ಪ್ರದೇಶಗಳು ಮತ್ತು ಇತರೆ ಪ್ರಾಣಿಗಳ ಸಹವಾಸದಿಂದ ದೂರವಿರಲು ಬಯಸುವ ಈ ಪ್ರಾಣಿ ಅತ್ಯಂತ ಸಂಕೋಚ ಮತ್ತು ನಾಚಿಕೆ ಸ್ವಭಾವದ್ದು. ಹಗಲಿನ ವೇಳೆಯಲ್ಲಿ ತನ್ನ ಚಟುವಟಿಕೆಗಳನ್ನು ನಿಷೇಧಿಸಿರುತ್ತದೆ. ಇವುಗಳಿಗೆ ರಾತ್ರಿ ಮತ್ತು ಹಗಲಿನಲ್ಲಿಯೂ ಕಣ್ಣು ಸ್ಪಷ್ಟವಾಗಿ ಕಾಣಿಸುತ್ತದೆ.

ಅಳಿಯುತ್ತಿರುವ ಸಂತತಿ
ಇವುಗಳನ್ನು ಹಿಡಿದು ತೀವ್ರ ಹಿಂಸೆಗೊಳಪಡಿಸಿ ಮೂತ್ರದ ಸ್ರಾವ ಹೆಚ್ಚುವಂತೆ ಬಾಹ್ಯ ಒತ್ತಡ ಹೇರಲಾಗುತ್ತದೆ. ಇದರ ಉಣ್ಣೆ ಮತ್ತು ಕೂದಲನ್ನು ಪಡೆಯುವ ಸಲುವಾಗಿ ಪುನುಗು ಬೆಕ್ಕನ್ನು ಬೇಟೆಯಾಡಲಾಗುತ್ತದೆ. ಹಣ್ಣನ್ನು ತಿನ್ನುವುದರಿಂದ ಕಾಡಿನಲ್ಲಿ ಹಣ್ಣಿನ ಗಿಡಗಳ ನಿರಂತರವಾದ ನಾಶದಿಂದಾಗಿ ಅಪರೂಪದ ಸಂತತಿಗೆ ಸೇರಿದ ಪುನುಗು ಬೆಕ್ಕು ನಮ್ಮಿಂದ ಕಣ್ಮರೆಯಾಗುವ ಅಪಾಯವಿದೆ.

ಪಶ್ಚಿಮಘಟ್ಟದ ದಟ್ಟಾರಣ್ಯಗಳಲ್ಲಿ ಮಾತ್ರ ಕಾಣಸಿಗುವ ಈ ಹಾಗೂ ವಿನಾಶದ ಅಂಚಿನಲ್ಲಿರುವ ಹಾಗೂ ಲಕ್ಷಾಂತರ ಬೆಲೆಬಾಳುವ ಅಪರೂಪದ ಪುನುಗು ಬೆಕ್ಕನ್ನು ಅಕ್ರಮವಾಗಿ ಸಾಗಾಟ ಮಾಡುವ ಬೃಹತ್ ಜಾಲಗಳು ಕೆಲವೆಡೆ ಕಾರ್ಯ ನಿರ್ವಹಿಸುತ್ತಿರುವುದು ವಿಶಾದದ ಸಂಗತಿ. ಪುನುಗು ಬೆಕ್ಕು ಹೆಚ್ಚಾಗಿ ಹಣ್ಣುಗಳನ್ನೇ ತಿಂದು ಬದುಕುವ ಪ್ರಾಣಿಯಾದ್ದರಿಂದ ಇದು ಹೆಚ್ಚಾಗಿ ಮಲೆನಾಡಿನ ಕಾಫಿ ತೋಟಗಳಲ್ಲಿ ಕಾಣಿಸಿಕೊಳ್ಳುತ್ತದೆ. ಇಲ್ಲಿನ ಕೆಲವರು ಈ ಬೆಕ್ಕನ್ನು ಅಕ್ರಮವಾಗಿ ಮನೆಯಲ್ಲಿ ಪಂಜರದಲ್ಲಿಟ್ಟು ಸಾಕಿಕೊಂಡು ಅದಕ್ಕೆ ಕಾಫಿ ಬೀಜವನ್ನು ತಿನ್ನಲು ಹಾಕುತ್ತಾರೆ. ಅದು ಹಿಕ್ಕೆಯ ರೂಪದಲ್ಲಿ ಹಾಕಿದ ಕಾಫಿ ಬೀಜಕ್ಕೆ ವಿದೇಶದಲ್ಲಿ ಭಾರೀ ಬೇಡಿಕೆ ಇದ್ದು, ಇದನ್ನು ಸಂಗ್ರಹಿಸುವ ಜಾಲವೂ ಮಲೆನಾಡಿನಲ್ಲಿ ಗೌಪ್ಯವಾಗಿ ಕಾರ್ಯನಿರ್ವಹಿಸುತ್ತಿದೆ. ಇಂತಹ ಜೀವಜಗತ್ತಿನ ವಿಚಿತ್ರ ಜೀವಿಗಳನ್ನು ಮನುಷ್ಯನ ಧನದಾಹಿತ್ವಕ್ಕೆ ಬಲಿಯಾಗದಂತೆ ತಡೆದು ಅವುಗಳನ್ನು ಸಂರಕ್ಷಿಸಬೇಕಾದ ಜವಾಬ್ದಾರಿಯು ಪ್ರತಿಯೊಬ್ಬ ಮನುಷ್ಯನದ್ದೂ ಆಗಿದೆ.
ಲೇಖನ: ಸಂತೋಷ್ ರಾವ್ ಪೆರ್ಮುಡ
ದಕ್ಷಿಣ ಕನ್ನಡ ಜಿಲ್ಲೆ

ಉದ್ಯೋಗ: ಖಾಸಗಿ ತರಬೇತಿ ಸಂಸ್ಥೆಯಲ್ಲಿ ಪ್ರಾಂಶುಪಾಲರು ಮತ್ತು ವ್ಯಕ್ತಿತ್ವ ವಿಕಸನ ತರಬೇತುದಾರರು.
ಹವ್ಯಾಸಗಳು: ಚಾರಣ, ಬರವಣಿಗೆ, ಗಾರ್ಡನಿಂಗ್, ಹಾಡು ಮತ್ತು ಚಿತ್ರಕಲೆ, ವೀಡಿಯೋಗ್ರಫಿ ಮತ್ತು ಫೋಟೋಗ್ರಫಿ.
ಬರಹಗಳು: ರಾಜ್ಯಮಟ್ಟದ ದಿನಪತ್ರಿಕೆಗಳು, ವಾರಪತ್ರಿಕೆಗಳು, ಮಾಸಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ಸುಮಾರು 350ಕ್ಕೂ ಹೆಚ್ಚು ಬರವಣಿಗೆಗಳು ಪ್ರಕಟಗೊಂಡಿವೆ.
ಪ್ರಕಟಣೆಗಳು: ಪರ್ಯಟನೆ. ದಿಕ್ಸೂಚಿ ಮತ್ತು ಪರಿಭ್ರಮಣ ಪುಸ್ತಕಗಳ ಪ್ರಕಟಣೆ, ಪರಿವರ್ತನಾ ಎಂಬ ಸ್ವಂತ ಜಾಲತಾಣಪುಟದಲ್ಲಿ 350ಕ್ಕೂ ಮಿಕ್ಕಿದ ಸಂಚಿಕೆಗಳ ಪ್ರಕಟಣೆ.
ಪುನುಗು ಬೆಕ್ಕಿನ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಿತು. It was very very interesting.
ನೀವು ತಿಳಿಸಿದ ಪುನುಗು ಬೆಕ್ಕಿನ ವಿಷಯ ತಿಳಿದು ಮನಸಿಗೆ ಬೇಸರವಾಹಿತು. ಏಕೆಂದರೆ ನಮ್ಮ ನಾಡಲ್ಲಿ ಇಂಥ ವಿಚಿತ್ರವಾದ ರೀತಿಯಲ್ಲಿ ಪ್ರಾಣಿಗಳನ್ನು ನಾಶ ಮಾಡುವುದು ಸರ್ಕಾರಿ ಗಮನಕ್ಕೆ ತರುವುದು ಒಳ್ಳೆಯ ಕೆಲಸ.
ನಿಮ್ಮ ಬರವಣಿಗೆ ನಿಲ್ಲಿಸಬೇಡಿ ಇನ್ನು ಹೆಚ್ಚು ವಿಚಾರ ನಮಗೆ ತಿಳಿಸಿ ಕೊಡಿ ….