ಪರಾವಲಂಬಿ ಫ್ಲವರಿಂಗ್

ಪರಾವಲಂಬಿ ಫ್ಲವರಿಂಗ್

©SVETLANA MONYAKOVA_ISTOCK_GETTY IMAGES PLUS

ಹೆಗಲಿಗೆ ತೂಕದ ಬ್ಯಾಗ್ ಏರಿಸಿ ಸ್ಕೂಲಿಗೆ ಎರಡು ಕಿಲೋ ಮೀಟರ್ ನಡೆದು ಬರುವ ವಯಸ್ಸದು. ನಡೆದು ಬರುವ ದಾರಿ ದಿನಾಲು ಒಂದೇ ಆದರೂ, ಪ್ರತೀ ದಿನದ ಅನ್ವೇಷಣೆಗಳು ಅದರೊಳಗಡಗಿರುವ ಅಚ್ಚರಿಗಳು, ಉತ್ತರ ತಿಳಿಯದ ಪ್ರಶ್ನೆಗಳು ಹೊಸತು. ಮೇಲೆ ಹೇಳಿದ ಹಾಗೆ ನಮ್ಮ ಮನೆಯಿಂದ ಶಾಲೆಗೆ ಎರಡು ಕಿ ಮೀ ದೂರ ಇರುವುದರಿಂದ ಸಾಮಾನ್ಯವಾಗಿ ಎಲ್ಲಾ ಹಳ್ಳಿಯ ಮಕ್ಕಳಂತೆ ನಾವು ಸಹ ನಡೆದೇ ಶಾಲೆಗೆ ಹೋಗಿ ಬರುತ್ತಿದ್ದೆವು. ಒಂಟೇಮಾರನದೊಡ್ಡಿ ಕ್ರಾಸ್ ನಮ್ಮ ಮನೆ ಇರುವ ರಾಗಿಹಳ್ಳಿಯಿಂದ ಶಾಲೆ ಇರುವ ಶಿವನಹಳ್ಳಿಯ ರಸ್ತೆಯ ಮಧ್ಯ ಬಿಂದು. ಆ ಒಂಟೇಮಾರನದೊಡ್ಡಿ ಕ್ರಾಸ್ ದಾಟಿ ಸ್ವಲ್ಪ ಮುಂದೆ ಬಂದರೆ ಸ್ವಲ್ಪ ಇಳಿಜಾರಿದೆ. ಆ ಇಳಿಜಾರಿನ ಎಡಕ್ಕೆ ಒಡೆದು ನಿಲ್ಲಿಸಿದ ಕ್ವಾರಿ ಕಾಣಲು ಸಿಗುತ್ತದೆ. ಅಲ್ಲಿ ಕಲ್ಲಿನ ಗಣಿ ನಿಂತಿರಬಹುದು, ಆದರೆ ಅಲ್ಲಿನ ನಮ್ಮ ನೆನಪಿನ ಗಣಿಗಳು ಮಾತ್ರ ನಮ್ಮಲ್ಲಿ ಹಾಗೇ ಇವೆ. ಅದನ್ನೆಲ್ಲಾ ಹೇಳೋಣವೆಂದರೆ ಇಲ್ಲಿ ಅದು ಪ್ರಸಕ್ತವಲ್ಲ. ಅದೇ ನಿಮ್ಮ ದಿಕ್ಕು ಬದಲಿಸಿ ಬಲಕ್ಕೆ ತಿರುಗಿದರೆ ಕೆಲವು ಫರ್ಲಾಂಗು ದೂರದಲ್ಲಿ ಹೊಲದ ಮಧ್ಯದಲ್ಲಿ, ಬೆಳೆಗೆ ನೆರಳಾಗಬಾರದು ಎಂದು ಕೊಂಬೆಗಳನ್ನು ಕಡಿದ ಅಲದ ಮರವೊಂದು ಕಾಣುತ್ತದೆ. ಎಲ್ಲಾ ಆಲದ ಮರದ ಹಾಗೆ ಆ ಮರವೂ ಆಗಿದ್ದರಿಂದ ಸಾಮಾನ್ಯವಾಗಿ ನೋಡಿ ಹಾಗೇ ಮುಂದೆ ಸಾಗುತ್ತಿದ್ದೆವು. ಆದರೆ ಒಂದು ದಿನ ಹಾಗೆ ಆ ಮರದ ಕಡೆಗೆ ಕಣ್ಣಾಡಿಸಿದಾಗ ಏನೋ ವಿಚಿತ್ರವಿದೆ ಎನಿಸಿತು. ಮತ್ತೇ ಆ ಕಡೆ ತಿರುಗಿ ಗಮನಿಸಿದಾಗ ನನಗಂತೂ ಅಚ್ಚರಿಯೇ ಕಾದಿತ್ತು. ಏನದು ಗೊತ್ತೇ… ಆಲದ ಮರದ ಎಲೆಗಳು ನಾವು ಸಾಮಾನ್ಯವಾಗಿ ನೋಡಿರುತ್ತೇವಲ್ಲವೇ, ಹಾಗೇ ಒಂದು ಮರದಲ್ಲಿನ ಎಲೆಗಳು ಒಂದೇ ರೀತಿಯಲ್ಲಿರುತ್ತವೆ ಅಲ್ಲವೇನು. ಆದರೆ ಆ ಮರದಲ್ಲಿ ಎರಡು ರೀತಿಯ ಎಲೆಗಳಿದ್ದವು! ಹೆಚ್ಚಾಗಿ ಆಲದ ಮರದ ಎಲೆಗಳೇ ಇದ್ದರೂ ಮಧ್ಯದಲ್ಲಿ ಬೇರೆ ಗಿಡದ ಅಥವಾ ಬೇರೆ ಮರದ ಎಲೆಯ ಗುಚ್ಚವಿತ್ತು. ಆ ಅಚ್ಚರಿಯನ್ನು ನಂಬಲಾಗದಿದ್ದರೂ ಕಣ್ಣಲ್ಲಿ ಕಂಡಮೇಲೆ ನಂಬಲೇ ಬೇಕಾಯಿತು. ಜೊತೆಗೆ ಈ ವಿಚಿತ್ರವನ್ನು ಇಡೀ ಪ್ರಪಂಚದಲ್ಲಿ ನಾನೇ ಮೊದಲು ನೋಡಿದೆನೇನೋ ಎಂಬ ಗರ್ವ ಭಾವನೆ ಒಳಗೆ ಹಾರಾಡುತ್ತಿತ್ತು. ಈ ವಿಷಯವನ್ನು ನಮ್ಮ ಆಗಿನ ವಿಜ್ಞಾನ ಶಿಕ್ಷಕರಾಗಿದ್ದ ಮುರಳಿ ಅಣ್ಣನ ಬಳಿ ಹೋಗಿ ಹೇಳಿದಾಗ, ಅದೊಂದು ಸಾಮಾನ್ಯ ವಿಷಯವೆಂದು ತಿಳಿದಿದ್ದರೂ, ಪರಾವಲಂಬಿ ಸಸ್ಯಗಳು ಹಾಗೆ ಇನ್ನೊಂದು ಮರದ ಆಸರೆ ಪಡೆದು ಬೆಳೆಯುತ್ತವೆ ಎಂಬ ಉತ್ತರ ತಿಳಿದಿದ್ದರೂ ಸಹ ನಮ್ಮ ಆ ಅಚ್ಚರಿಯ-ಏನನ್ನೋ ಸಾಧಿಸಿದ ಭಾವದಿಂದ ಕೂಡಿದ್ದ ನಮ್ಮ ಮುಖದಲ್ಲಿ ನಿರಾಶೆ ನೋಡುವ ಹಾಗೆ ಯಾವುದೇ ಉತ್ತರಗಳನ್ನು ನೀಡಲಿಲ್ಲ. ಬದಲಿಗೆ ಅದನ್ನು ಗಮನಿಸಿದ್ದಕ್ಕೆ ಸ್ವಲ್ಪ ಮಟ್ಟಿಗೆ ಪ್ರಶಂಸಿಸಿ ಉತ್ತರ ನಾವೇ ಹುಡುಕಲು ಹೇಳಿದರು. ಅದರ ಪರಿಣಾಮವೋ ಏನೋ ಮುಂದಿನ ದಿನಗಳಲ್ಲಿ ಉತ್ತರ ತಿಳಿದರೂ ಸಹ ಅಂದು ಮೂಡಿದ ಅಚ್ಚರಿಯ ಭಾವನೆಯ ಸವಿ ಈಗಲೂ ನೆನಪಿಗೆ ಬರುತ್ತದೆ. ಆ ದಾರಿಯಲ್ಲಿ ನಡೆದು ಹೋಗುವಾಗ ಈಗಲೂ ಸಹ ಅತ್ತ ಒಮ್ಮೆ ನೋಡಬೇಕೆನ್ನಿಸುತ್ತದೆ.

ಕಸ್ಕುಟ ಎಂಬುದೊಂದು ಪರಾವಲಂಬಿ ಸಸ್ಯವಿದೆ. ಇದು ಕಿತ್ತಳೆ-ಹಳದಿ ಮಿಶ್ರಿತ ಬಣ್ಣದ ಸಣ್ಣ ಸಣ್ಣ ಎಳೆಗಳನ್ನು ಬಿಡುತ್ತವೆ. ಈ ಎಳೆಗಳು ಬೆಳೆದಂತೆ ತನ್ನ ಅತಿಥೇಯ ಗಿಡವನ್ನು (host plant) ಹುಡುಕುತ್ತಾ ಹೋಗುತ್ತದೆ. ಗಿಡ ಸಿಕ್ಕ ತಕ್ಷಣ ಅದಕ್ಕೆ ಸುರುಳಿ ಸುತ್ತಿಕೊಂಡು, ಅತಿಥೇಯ ಗಿಡಕ್ಕೆ ತನ್ನ ಮುಳ್ಳಿನಂತ ಭಾಗದಿಂದ ಚುಚ್ಚಿ ತನಗೆ ಬೇಕಾದ ನೀರು ಲವಣಾಂಶವನ್ನು  ಹೀರಿಕೊಂಡು, ತನ್ನ ಜೀವನವನ್ನು ಅಲ್ಲೇ ಸ್ಥಾಪಿಸಿಬಿಡುತ್ತವೆ. ನಮ್ಮ ಸುತ್ತ ಮುತ್ತಲೂ ಈ ಗಿಡವನ್ನು ನೋಡಬಹುದು. ಹೆಚ್ಚಾಗಿ ಟೊಮಾಟೋ ಗಿಡಕ್ಕೆ ಹಳದಿ ಬಣ್ಣದ ದಾರದ ಹಾಗೆ ಸುತ್ತಿಕೊಂಡಿರುತ್ತವೆ. ಇಷ್ಟಲ್ಲದೆ ಈ ಗಿಡಕ್ಕೆ ಇನ್ನೊಂದು ವಿಶೇಷತೆ ಇದೆ. ಸಾಮಾನ್ಯವಾಗಿ ಗಿಡವೆಂದರೆ ಬೇರು ಮತ್ತು ಎಲೆ ಇದ್ದೇ ಇರುತ್ತದೆ ಅಲ್ಲವೇ? ಆದರೆ, ಈ ಕಸ್ಕುಟಕ್ಕೆ ಬೇರು ಮತ್ತು ಎಲೆಗಳು ಇರುವುದೇ ಇಲ್ಲ. ಅಚ್ಚರಿಯೆನಿಸಿದರೂ ನಿಜವೇ. ಸ್ವಲ್ಪ ಯೋಚಿಸಿದರೆ ಇದಕ್ಕೆ ಬೇರು ಮತ್ತು ಎಲೆಯ ಅವಶ್ಯಕತೆಯೇ ಇಲ್ಲ. ಬೇರಿನ ಮುಖ್ಯ ಕೆಲಸವೆಂದರೆ ನೀರು ಲವಣಾಂಶವನ್ನು ಹೀರುವುದಲ್ಲವೇ…? ಆದರೆ ಈ ಗಿಡ ತಯಾರಿಸಿದ ಊಟವನ್ನೇ ನೇರವಾಗಿ ಅತಿಥೇಯ ಗಿಡದಿಂದ ಹೀರಿಕೊಳ್ಳುವುದರಿಂದ ಇದಕ್ಕೆ ಬೇರು ಹಾಗು ಎಲೆಯ ಅವಶ್ಯಕತೆ ಇರುವುದಿಲ್ಲ. ಆದರೆ ತನ್ನ ಅತಿಥೇಯ ಗಿಡ ಹೂ ಬಿಡುವ ಸಮಯದಲ್ಲೇ ತಾನೂ ಹೂ ಬಿಟ್ಟು ಬೀಜಗಳನ್ನೂ ಬೆಳೆಸುತ್ತವೆ. ಏಕೆಂದರೆ ತನ್ನ ಮುಂದಿನ ಪೀಳಿಗೆ ಮುಂದುವರೆಯಬೇಕಲ್ಲವೇ…

© JINGXIONG ZHANG_KUNMING INSTITUTE OF BOTANY_CHINESE ACADEMY OF SCIENCES

ಅಸಲು ವಿಷಯ ಇರುವುದು ಇಲ್ಲಿಯೇ. ಸಾಮಾನ್ಯವಾಗಿ ಹೂ ಬಿಡುವ ಸಸ್ಯಗಳು ತನ್ನ ಎಲೆಯನ್ನು ಸೆನ್ಸಾರ್ ನಂತೆ ಬಳಸಿಕೊಂಡು ಸುತ್ತಲಿನ ವಾತಾವರಣ ಸೂಕ್ತವಿದೆಯಾ ಎಂದು ಗ್ರಹಿಸಿ ಹೂ ಬಿಡುತ್ತವೆ. ಹಾಗಾದರೆ ಈ ಕಸ್ಕುಟಕ್ಕೆ ಎಲೆಗಳೇ ಇಲ್ಲವಲ್ಲ… ಹೂ ಹೇಗೆ ಬಿಡಬಲ್ಲದು? ಸರಿಯಾದ ಪ್ರಶ್ನೆ. ತನ್ನ ಅತಿಥೇಯ ಸಸ್ಯ ಹೂ ಬಿಡುವ ಸಮಯವನ್ನೇ ಈ ಕಸ್ಕುಟವೂ ರಾಸಾಯನಿಕವಾಗಿ ಹೇಗೋ ಗ್ರಹಿಸಿ ಅದೇ ಸಮಯಕ್ಕೆ ಹೂ ಬಿಡುತ್ತವೆ ಎಂಬುದೇ ಸಂಶೋಧನೆ. ಇನ್ನೂ ಸ್ವಲ್ಪ ಆಳಕ್ಕೆ ಇಳಿದು ವೈಜ್ಞಾನಿಕವಾಗಿ ಹೇಳುವುದಾದರೆ, ಕಸ್ಕುಟವು ತನ್ನ ಅತಿಥೇಯ ಗಿಡ ಹೂ ಬಿಡುವ ಸಮಯದಲ್ಲಿ ಬಿಡುಗಡೆ ಮಾಡುವ ‘ಫ್ಲವರಿಂಗ್ ಲೋಕಸ್ ಟಿ (Flowering Locus T or FT)’ ಎಂಬ ಪ್ರೋಟೀನ್ ಅನ್ನು ತಾನೂ ಹೀರಿಕೊಂಡು ತನ್ನ ಅತಿಥೇಯ ಗಿಡ ಹೂ ಬಿಡುವ ಸಮಯಕ್ಕೆ ಸರಿಯಾಗಿ ತಾನೂ ಹೂ ಬಿಡುತ್ತವಂತೆ. ಆದ್ದರಿಂದಲೇ ಏನೋ 100ಕ್ಕೂ ಹೆಚ್ಚಿನ ಸಂಖ್ಯೆಯ ಇಂತಹ ಪರಾವಲಂಬಿಗಳು ಪ್ರಪಂಚದಾದ್ಯಂತ ತನ್ನ ನೆಲೆಯನ್ನು ಸ್ಥಾಪಿಸಿವೆ. ಹೀಗೆ “ತನ್ನ ಹೂ ಬಿಡುವ ಸಮಯವನ್ನು ತನ್ನ ಅತಿಥೇಯ ಗಿಡಕ್ಕೆ ಸಮನಾಗಿ ಹೊಂದಿಸಿಕೊಂಡು ಹೂ ಬಿಡುವುದು ನಿಜವಾಗಿಯೂ ಕಸ್ಕುಟಕ್ಕೆ ಅತ್ಯವಶ್ಯಕ ಅಂಶ” ಎನ್ನುತ್ತಾರೆ ‘ಜಿಯಾನ್ ಕಿಯಾಂಗ್ ವೂ’ ಚೈನೀಸ್ ಅಕಾಡೆಮಿಯ ಜೀವಶಾಸ್ತ್ರಜ್ಞ. ಏಕೆಂದರೆ, ಕಸ್ಕುಟವು ತನ್ನ ಅತಿಥೇಯ ಗಿಡಕ್ಕಿಂತ ಬೇಗನೆ ಹೂ ಬಿಟ್ಟರೆ ಹೆಚ್ಚು ಬೆಳೆಯಲಾಗದೆ ತನ್ನ ಬೆಳವಣಿಗೆ ಕಡಿಮೆಯಾಗುತ್ತದೆ, ಜೊತೆಗೆ ಬೀಜಗಳ ಸಂಖ್ಯೆಗಳೂ ಕಡಿಮೆಯಾಗುತ್ತವೆ. ಇದರ ವಿರುದ್ಧವಾಗಿ ಅಂದರೆ ತಡವಾಗಿ ಹೂ ಬಿಟ್ಟರೆ ತನ್ನನ್ನು ತಾನು ಪೋಷಿಸಿಕೊಳ್ಳಲು ಅಥವಾ ಬೀಜಗಳನ್ನು ಬಿಡಲು ಸಾಧ್ಯವೇ ಆಗುವುದಿಲ್ಲ. ಏಕೆಂದರೆ ತಾನು ಹೂ ಬಿಟ್ಟು ಬೀಜ ಬಿಡುವಷ್ಟರಲ್ಲಿ ತನ್ನ ಅತಿಥೇಯ ಗಿಡ ಹೂ ಬಿಟ್ಟು ಬೀಜಪ್ರಸಾರ ಮಾಡಿ ಸತ್ತಿರುತ್ತದೆ. ಇವೆರಡರಿಂದಲೂ ಕಸ್ಕುಟಕ್ಕೆ ಅನಾನುಕೂಲವೇ

© Wikimedia_Commons

ಸರಿ. ಕಸ್ಕುಟಗಳು ತನ್ನ ಅತಿಥೇಯ ಗಿಡದ ಜೊತೆಗೆ ಹಲವಾರು ರೀತಿಯ ರಾಸಾಯನಿಕಗಳನ್ನು ವಿನಿಮಯ ಮಾಡಿಕೊಳ್ಳುತ್ತವೆ. ಹಾಗಾದರೆ ಈ ಹೂ ಬಿಡುವ ‘ಎಫ್ ಟಿ’ ಪ್ರೋಟೀನ್ ಅನ್ನು ಸಹ ಗ್ರಹಿಸಿ ಹೂ ಬಿಡುತ್ತಿರಬಹುದು ಎಂದು ಊಹಿಸಿದರು. ಅದನ್ನು ತಿಳಿಯಲು ಜಿಯಾನ್ ರವರು ಮೂರು ಬೇರೆ ಬೇರೆ ಸಮಯದಲ್ಲಿ ಹೂ ಬಿಡುವ ಅತಿಥೇಯ ಸಸ್ಯಗಳ ಜೊತೆಗೆ ಕಸ್ಕುಟವನ್ನು ಬೆಳೆಯಲು ಬಿಟ್ಟರು. ಅವರು ಸರಿಯಾಗಿ ಊಹಿಸಿದ ಹಾಗೆ ಕಸ್ಕುಟವು ಆ ಮೂರೂ ಗಿಡಗಳು  ಹೂ ಬಿಡುವ ಸಮಯಕ್ಕೆ ಸರಿಯಾಗಿ ಹೂ ಬಿಟ್ಟವು. ಇದನ್ನು ಸಾಬೀತುಪಡಿಸಲೆಂದೇ ಅತಿಥೇಯ ಗಿಡದಲ್ಲಿ ‘ಎಫ್ ಟಿ’ ಜೀನ್ ಅನ್ನು ನಿಷ್ಕ್ರಿಯಗೊಳಿಸಿದರು. ಆಗ ಕಸ್ಕುಟವೂ ಸಹ ಹೂವನ್ನು ಬಿಡಲಿಲ್ಲ. ನಂತರದ ಪ್ರಯೋಗ ಭಾಗದಲ್ಲಿ ‘ಎಫ್ ಟಿ’ ಪ್ರೋಟೀನ್ ಗೆ ಹೊಳೆಯುವ ಪದಾರ್ಥವನ್ನು ಲೇಪಿಸಿ ಅತಿಥೇಯ ಗಿಡಕ್ಕೆ ನೀಡಲಾಯಿತು. ಅದರ ಜೊತೆಗೆ ಬೆಳೆದು ಹೂ ಬಿಟ್ಟ ಕಸ್ಕುಟವನ್ನು ಕತ್ತರಿಸಿ ಗಮನಿಸಿದಾಗ ಆ ಹೊಳೆಯುವ ‘ಎಫ್ ಟಿ’ ಪ್ರೋಟೀನ್ ಗೋಚರವಾಯಿತು. ಇದರಿಂದ ಸ್ಪಷ್ಟವಾಗಿ ತಿಳಿಯುತ್ತದೆ, ಕಸ್ಕುಟ ಪರಾವಲಂಬಿ ಸಸ್ಯವು ತನ್ನ ಅತಿಥೇಯ ಗಿಡದ ರಾಸಾಯನಿಕಗಳ ಸಹಾಯದೊಂದಿಗೆ ಅವುಗಳ ಹೂ ಬಿಡುವ ಸಮಯಕ್ಕೇ ಸರಿಯಾಗಿಯೇ ಹೂ ಬಿಡುತ್ತವೆ ಎಂದು. “ಇದರಿಂದಲೇ ಇರಬೇಕು ಕೋಟ್ಯಾನುಕೋಟಿ ವರ್ಷಗಳಿಂದ ಪರಾವಲಂಬಿ ಸಸ್ಯಗಳು ತಮ್ಮ ಪೀಳಿಗೆಯನ್ನು ಮುನ್ನಡೆಸಿಕೊಂಡು ಬಂದಿರುವುದು”. ಎನ್ನುತ್ತಾರೆ ಸಸ್ಯರೋಗ ತಜ್ಞ ಜೇಮ್ಸ್ ವೆಸ್ಟ್ ವುಡ್. ಜೊತೆಗೆ ಅವರು ಹೀಗೆ ಸೇರಿಸುತ್ತಾರೆ, “ಈ ಕಸ್ಕುಟವು ತನ್ನ ಅತಿಥೇಯ ಗಿಡವು ಹೂ ಬಿಡದ ಸಮಯದಲ್ಲೂ ಹೂ ಬಿಟ್ಟಿರುವುದನ್ನು ನಾನು ಕಂಡಿದ್ದೇನೆ. ಈ ಸಂಶೋಧನೆ ಇಷ್ಟು ಸ್ಪಷ್ಟವಾಗಿ ತೋರುತ್ತಿದ್ದರೂ ಇನ್ನೂ ತಿಳಿಯುವುದಿದೆ. ಏಕೆಂದರೆ ಜೀವವಿಜ್ಞಾನ ನಾವು ಅಂದುಕೊಂಡಷ್ಟು ಸುಲಭವಲ್ಲ”..

ಅಷ್ಟೇ ಅಲ್ಲವೇ? ಸಾಮಾನ್ಯಾತಿ ಸಾಮಾನ್ಯವಾದ ಜೀವದಲ್ಲೂ ಅಸಾಧಾರಣ ಅಚ್ಚರಿಗಳು ಅಡಗಿರುತ್ತವೆ. ಅವುಗಳನ್ನು ಆವರಿಸಿರುವ ಪರದೆಗಳ ಸರಿಸುವ ಕೆಲಸವೇ ಸಂಶೋಧನೆ. ಅದರಲ್ಲಿ ಕಾಣುವುದೆಲ್ಲಾ ಹುಬ್ಬೆರಿಸುವಂತವೇ. ಅಂತಹ ಅನುಭವಗಳನ್ನು ಸವಿಯುತ್ತಾ ಮುಂದೆ ಮುಂದೆ ಹೋಗುವುದೊಂದೇ ಜಾಣ್ಮೆಯ ದಾರಿ…

ಮೂಲ ಲೇಖನ: ScienceNewsforStudents

ಲೇಖನ: ಜೈಕುಮಾರ್ ಆರ್.
    ಡಬ್ಲ್ಯೂ
.ಸಿ.ಜಿ, ಬೆಂಗಳೂರು

Spread the love
error: Content is protected.